ರಾಜಸ್ಥಾನ: ಉದ್ಘಾಟನೆಗೆ ಮುನ್ನವೇ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಹೊಸ ರಸ್ತೆ

PC: x.com/gauravkrdwivedi
ಜೈಪುರ: ಹೊಸದಾಗಿ ನಿರ್ಮಾಣಗೊಂಡು ಉದ್ಘಾಟನೆಗಾಗಿ ಕಾಯುತ್ತಿದ್ದ ರಾಜ್ಯ ಹೆದ್ದಾರಿಯೊಂದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಪ್ರಕರಣ ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ವರದಿಯಾಗಿದೆ.
ಕತಿ ನದಿಯ ನೀರು ಜಿಲ್ಲೆಯ ಬಘೂಲಿ ಮೂಲಕ ಹರಿಯುತ್ತಿದ್ದು, ಈ ಪ್ರದೇಶದಲ್ಲಿ ಭಾನುವಾರ ಬಿದ್ದ ವ್ಯಾಪಕ ಮಳೆ ಮತ್ತು ಪ್ರವಾಹದಿಂದಾಗಿ ರಸ್ತೆ ಸಂಪೂರ್ಣ ನಾಶವಾಗಿದೆ. ಈ ಪ್ರದೇಶದಲ್ಲಿ ಒಂದೇ ದಿನ 86 ಮಿಲಿಮೀಟರ್ ಮಳೆ ಬಿದ್ದಿತ್ತು.
ಭೀಕರ ಪ್ರವಾಹ ಹೊಸದಾಗಿ ನಿರ್ಮಾಣಗೊಂಡ ರಸ್ತೆಯನ್ನು ತಳ್ಳಿಕೊಂಡು ಹೋಗಿದ್ದು, ರಸ್ತೆ ಬಹುಪಾಲು ನಾಶವಾಗಿದೆ.
ಕತ್ಲಿ ನದಿ ಸಿಕರ್ ಜುಂಜುನು ಮತ್ತು ಚುರು ಜಿಲ್ಲೆಗಳ ಮೂಲಕ ಹರಿಯುತ್ತದೆ. ನದಿದಂಡೆಯ ಒತ್ತುವರಿ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿದೆ. ಇದನ್ನು ತೆರವುಗೊಳಿಸುವ ಮತ್ತು ಅಕ್ರಮವಾಗಿ ಮರಳು ತೆಗೆಯುವ ದಂಧೆಗೆ ಕಡಿವಾಣ ಹಾಕಲು ಸರ್ಕಾರ ವಿಶೇಷ ಅಭಿಯಾನವನ್ನೇ ನಡೆಸಿತ್ತು.
ಹೊಸ ರಸ್ತೆ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯವನ್ನು ಸೆರೆಹಿಡಿಯಲು ಅಕ್ಕಪಕ್ಕದ ಬಘೂಲಿ ಮತ್ತು ಜಹಾಜ್ ಗ್ರಾಮಸ್ಥರು ಧಾವಿಸಿದರು. ಈ ವಿಡಿಯೊಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ರಸ್ತೆ ಕೊಚ್ಚಿಕೊಂಡು ಹೋಗುವ ಸಂದರ್ಭದಲ್ಲಿ ಒಂದು ವಿದ್ಯುತ್ ಕಂಬ ಕೂಡಾ ನೀರುಪಾಲಾಗಿರುವ ದೃಶ್ಯ ಒಂದು ವಿಡಿಯೊದಲ್ಲಿ ಕಾಣಿಸುತ್ತಿದೆ.
ಬಘೂಲಿ ಮತ್ತು ಜಹಾಜ್ ಗ್ರಾಮಗಳನ್ನು ರಾಷ್ಟ್ರೀಯ ಹೆದ್ದಾರಿ-52ರ ಜತೆ ಸಂಪರ್ಕಿಸುವ ಈ ರಾಜ್ಯ ಹೆದ್ದಾರಿಯನ್ನು ಆರು ತಿಂಗಳ ಹಿಂದೆ ನಿರ್ಮಿಸಲಾಗಿತ್ತು.
ಭಾನುವಾರದ ಘಟನೆ, ರಸ್ತೆ ನಿರ್ಮಾಣಕ್ಕೆ ಬಳಸಿದ ವಸ್ತುಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸಲಿದೆ.







