ಮೊಗಳ್ಳಿ ಗಣೇಶ್‌ಗೆ ಸರಿಯಾದ ಮನ್ನಣೆ ಸಿಕ್ಕಿಲ್ಲ : ಡಾ.ಬಂಜಗೆರೆ ಜಯಪ್ರಕಾಶ್

ರಾಮನಗರ, ಅ. 17: ಮೊಗಳ್ಳಿ ನಮ್ಮ ನಡುವೆ ಇನ್ನೂ ಇದ್ದಾನೆ, ಆ ಭಾವನೆಯೇ ನಮ್ಮ ಮನಸ್ಸಿನಲ್ಲಿ ಇದೆ. ನಮ್ಮ ಮಣ್ಣಿನ ಪ್ರತಿಭೆಗಳನ್ನು ಬೇಗ ಗುರುತಿಸಿ ಅವರಿಗೆ ಸೂಕ್ತ ಅವಕಾಶ ನೀಡುವಂತಾಗಬೇಕು ಎಂದು ಹಿರಿಯ ಚಿಂತಕ, ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.
ನಮ್ಮವರು ರಾಮನಗರ ಇದರ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಖ್ಯಾತ ಸಾಹಿತಿ ಮೊಗಳ್ಳಿ ಗಣೇಶ್ ಅವರಿಗೆ ನುಡಿ ನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊಗಳ್ಳಿ ಕಥೆಗಾರನಾಗಿ ಸೃಜನಾಶೀಲ ಪ್ರತಿಭೆ ಎಂದರೆ ತಪ್ಪಾಗಲಾರದು. ಆದರೆ ರಾಮನಗರ ಜಿಲ್ಲೆಯಲ್ಲಿ ಮೊಗಳ್ಳಿ ಸಾಹಿತ್ಯಕ್ಕೆ ಸರಿಯಾದ ಮನ್ನಣೆ ಸಿಗದಿರುವುದು ಖೇದವಿದೆ. ಕನ್ನಡ ಹಲವು ಶ್ರೇಷ್ಠ ಕಥೆಗಾರರ ಸಾಲಿನಲ್ಲಿ ಮೊಗಳ್ಳಿ ಗಣೇಶ್ ಅಮರರಾಗಿರುತ್ತಾರೆ ಎಂದು ಅವರು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮನಗರ ಪುರಸಭಾಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆ ವಹಿಸಿದ್ದರು.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಎನ್.ಕೆ ಲೋಲಾಕ್ಷಿ, ಶೋಭಾ ಮೊಗಳ್ಳಿ ಗಣೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದರು.
ಒಂದು ಕಾಲ ಸೃಷ್ಟಿಸಿದ ಪ್ರತಿಭಾವಂತ ಕಥೆಗಾರ ಮೊಗಳ್ಳಿ. ಜಾತಿ ಪದ್ಧತಿಯೊಳಗಿನ ಹಿಂಸೆಯ ಬಗ್ಗೆ ಸಾಹಿತ್ಯದಲ್ಲಿ ಬರೆದಿದ್ದಾರೆೆ. ದಲಿತ ಸಾಹಿತ್ಯ ಎಂದು ಅಲ್ಲಿಗೆ ಸೀಮಿತವಾಗಿ ಬಿಡುತ್ತಾರೆ. ಲಂಕೇಶ್ ಕರೆದು ಪುಸ್ತಕ ಮಾಡಲು ಹೇಳುತ್ತಾರೆ. ಸಾಹಿತಿಗಳು ಯಾವುದೇ ಸಾಹಿತ್ಯ ಬರೆಯಬೇಕಾದರೂ ಪ್ರಮಾಣಿಕತೆ ಇರಬೇಕು. ಮೊಗಳ್ಳಿ ಗಣ್ಯತಾಪೆಕ್ಷೆಯಿಲ್ಲದೇ ಬರೆಯಲು ಆರಂಭಿಸಿದ್ದರು.
ಡಾ. ನಟರಾಜ ಹುಳಿಯಾರ್, ವಿಮರ್ಶಕ







