ರೇವ್ ಪಾರ್ಟಿ ಮೇಲೆ ಪೊಲೀಸರ ದಾಳಿ: 35 ಯುವತಿಯರು ಸಹಿತ 150ಕ್ಕೂ ಅಧಿಕ ಮಂದಿ ವಶಕ್ಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಇಲ್ಲಿನ ಕನಕಪುರ ರಸ್ತೆಯ ತಗಚಗೆರೆ ಬಳಿಯಿರುವ ಖಾಸಗಿ ರೆಸಾರ್ಟ್ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ಬೆಂಗಳೂರಿನ ದಕ್ಷಿಣ ಜಿಲ್ಲೆಯ ಎಸ್ಪಿ ಶ್ರೀನಿವಾಸ್ಗೌಡ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಪಾರ್ಟಿಯಲ್ಲಿದ್ದ 150ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಆಯಾನ್ ಹೋಂ ಸ್ಟೇ ಎಂಬ ಹೆಸರಿನ ರೆಸಾರ್ಟ್ನಲ್ಲಿ ಅವಧಿಗೂ ಮೀರಿ ಪಾರ್ಟಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಎಸ್ಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಪೊಲೀಸರು ನ.1ರ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ರೆಸಾರ್ಟ್ ಮೇಲೆ ದಾಳಿ ಮಾಡಿ 35 ಯುವತಿಯರು ಸೇರಿದಂತೆ ಒಟ್ಟು 150ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದು, ಪಾರ್ಟಿಯಲ್ಲಿದ್ದ ಬಹುತೇಕರು 19ರಿಂದ 23 ವರ್ಷದೊಳಗಿನವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾರ್ಟಿಯಲ್ಲಿ ಮಾದಕವಸ್ತುಗಳನ್ನು ಸೇವಿಸಿರುವ ಅನುಮಾನ ಕಂಡುಬಂದಿರುವುದರಿಂದ ಎಲ್ಲರನ್ನೂ ರಾಮನಗರದ ಜಿಲ್ಲಾಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಜೆನ್ಜೀ’ ಎಂಬ ವಾಟ್ಸ್ ಆ್ಯಪ್ ಗ್ರೂಪ್ ರಚಿಸಿಕೊಂಡು ಪಾರ್ಟಿ ಆಯೋಜಿಸಲಾಗಿದೆ. ಭಾಗಿಯಾಗಿರುವವರಲ್ಲಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಅಲ್ಲದೆ, ಬಹುತೇಕರು ಬೆಂಗಳೂರು ಮೂಲದವರೆಂದು ತಿಳಿದು ಬಂದಿದೆ. ಈ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







