ಕೆರೆಗಳಿಗೆ ನೀರು ತುಂಬಿಸಿ : ಛಲವಾದಿ ನಾರಾಯಣಸ್ವಾಮಿ

ರಾಮನಗರ : ರಾಜ್ಯ ಸರಕಾರವು ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಬೇಕಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಬಿಜೆಪಿ ಬರಗಾಲ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಅವರು ಪ್ರವಾಸದ ವೇಳೆ ರೈತರಿಂದ ಮಾಹಿತಿ ಪಡೆದುಕೊಂಡರು. ಅಲ್ಲದೇ ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ಸರಕಾರದ ವೈಫಲ್ಯತೆ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಕೆಂಪಯ್ಯನದೊಡ್ಡಿ ಬಳಿ ಕಾಮಗಾರಿ ನಿಂತಿದ್ದು, ಅದನ್ನು ಸರಿ ಮಾಡುವಂತೆ ಸಂಬಂಧಿತರಿಗೆ ತಿಳಿಸುವುದಾಗಿ ಹೇಳಿದರು.
ಜಿಲ್ಲೆಯಾದ್ಯಂತ ಮಳೆಯೂ ಇಲ್ಲ; ಬರಗಾಲ ತೀವ್ರಗೊಂಡಿದೆ ಎಂದು ರೈತರು ಕಳವಳವನ್ನು ತೋಡಿಕೊಂಡರು. ಬೋರ್‌ವೆಲ್‍ಗಳಲ್ಲಿ ನೀರಿಲ್ಲ. ಕೆರೆಗಳಿಗೆ ನೀರು ತುಂಬಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಮಸ್ಯೆ ಬಗೆಹರಿಸಲು ಮನವಿ ಮಾಡಿದರು.
ಮಾಜಿ ಸಚಿವ ಮತ್ತು ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ವಿಧಾನಪರಿಷತ್ ಸದಸ್ಯ ಗೋಪಿನಾಥ ರೆಡ್ಡಿ, ರಾಮನಗರದ ರೈತ ಮೋರ್ಚಾ ಅಧ್ಯಕ್ಷರು, ಕನಕಪುರ ಜೆಡಿಎಸ್ ರೈತರ ಘಟಕದ ಅಧ್ಯಕ್ಷರು, ರೈತ ಮುಖಂಡರು ಭಾಗವಹಿಸಿದ್ದರು.




