Channapattana | ತಹಶೀಲ್ದಾರ್ರನ್ನು ವಿವಸ್ತ್ರಗೊಳಿಸಿ ಹಣಕ್ಕೆ ಬೇಡಿಕೆ ಇಟ್ಟ ರೌಡಿಶೀಟರ್ನ ಬಂಧನ

ಸಾಂದರ್ಭಿಕ ಚಿತ್ರ | PC : AI
ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರನ್ನು ಪ್ರಜ್ಞೆ ತಪ್ಪಿಸಿ, ಬೆತ್ತಲೆ ವಿಡಿಯೋ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ ರೌಡಿಶೀಟರ್ ಒಬ್ಬನನ್ನು ಚನ್ನಪಟ್ಟಣ ಟೌನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರಿನ ಅನುಷ್ ಶಿವಪ್ಪ ಎಂದು ಗುರುತಿಸಲಾಗಿದೆ. ಜೂ.28ರಂದು ತಹಶೀಲ್ದಾರ್ ಗಿರೀಶ್ ಅವರನ್ನು ನೋಡಲು ಬೆಂಗಳೂರಿನ ಅನುಷ್ ಹಾಗೂ ಆತನ ಸಹಚರರಾದ ಶೋಭರಾಜ್ ಹಾಗೂ ನವೀನ್ ಬಂದಿದ್ದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಅವರಿಗೆ ಕುಡಿಯಲು ಹಣ್ಣಿನ ರಸವನ್ನು ನೀಡಿದ್ದಾರೆ. ಸ್ವಲ್ಪ ಹೊತ್ತಲ್ಲೇ ತಹಶೀಲ್ದಾರ್ ಪ್ರಜ್ಞೆ ಕಳೆದುಕೊಂಡಿದ್ದಾರೆ. ಈ ವೇಳೆ ಆರೋಪಿಗಳು ಗಿರೀಶ್ ಅವರನ್ನು ವಿವಸ್ತ್ರಗೊಳಿಸಿ ವಿಡಿಯೋ ಸೆರೆಹಿಡಿದುಕೊಂಡಿದ್ದಾರೆ.
ಅಲ್ಲದೆ ಆರೋಪಿಗಳು ಚಿನ್ನದ ಉಂಗುರ, ಚಿನ್ನದ ಸರ, ಬೆಳ್ಳಿಯ ಉಡುದಾರ ಕಿತ್ತುಕೊಂಡಿದ್ದಾರೆ. ಇದಾದ ಬಳಿಕ ವಿಡಿಯೋ ಇಟ್ಟುಕೊಂಡು 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇಡೀ ರಾತ್ರಿ ಗೃಹ ಬಂಧನದಲ್ಲಿಟ್ಟು ದೈಹಿಕ ಹಿಂಸೆ ಹಾಗೂ ಹಲ್ಲೆ ನಡೆಸಲಾಗಿದೆ ಎಂದು ಗಿರೀಶ್ ಅವರು ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
ಈ ಸಂಬಂಧ ಬೆಂಗಳೂರಿನ ಅನುಷ್ ಹಾಗೂ ಆತನ ಸಹಚರರಾದ ಶೋಭರಾಜ್ ಹಾಗೂ ನವೀನ್ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಅನುಷ್ ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.






