ಮುಖ್ಯಮಂತ್ರಿ ಸ್ಥಾನ | ಈ ಅವಧಿಯಲ್ಲೆ ಡಿ.ಕೆ.ಶಿವಕುಮಾರ್ಗೆ ಅವಕಾಶ ಸಿಗುತ್ತದೆ : ಎಚ್.ಸಿ.ಬಾಲಕೃಷ್ಣ

ಎಚ್.ಸಿ.ಬಾಲಕೃಷ್ಣ/ಡಿ.ಕೆ.ಶಿವಕುಮಾರ್
ರಾಮನಗರ : ಸಿದ್ದರಾಮಯ್ಯ ಅವರ ನಂತರ ಮುಖ್ಯಮಂತ್ರಿ ಸ್ಥಾನದ ರೇಸ್ನಲ್ಲಿರೋದು ಡಿ.ಕೆ.ಶಿವಕುಮಾರ್ ಮಾತ್ರ. ಅವರಿಗೆ ಈ ಅವಧಿಯಲ್ಲೆ ಅವಕಾಶ ಸಿಗುತ್ತದೆ. ನಮ್ಮ ಹೈ ಕಮಾಂಡ್ ಈ ಬಗ್ಗೆ ಸೂಕ್ತ ತೀರ್ಮಾನ ಮಾಡುತ್ತದೆ ಎಂದು ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಬೇರೆಯವರು ಇದ್ದಾರೆ. ಆದರೆ, ಅವರ ಬಗ್ಗೆ ಕಾಲಕ್ಕೆ ತಕ್ಕಂತೆ ತೀರ್ಮಾನ ಆಗುತ್ತದೆ. ಆದರೆ, ಈಗ ಡಿ.ಕೆ.ಶಿವಕುಮಾರ್ ಮಾತ್ರ ಆ ಸ್ಥಾನದ ರೇಸ್ನಲ್ಲಿ ಇರೋದು ಎಂದು ಹೇಳಿದರು.
ಹೈಕಮಾಂಡ್ ಶೀಘ್ರದಲ್ಲೆ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ಹೈಕಮಾಂಡ್ ಯಾಕೆ ವಿಳಂಬ ಮಾಡುತ್ತಿದೆ ಎಂದು ಗೊತ್ತಿಲ್ಲ. ನಾಳೆಯೆ ಸಚಿವ ಸಂಪುಟ ವಿಸ್ತರಣೆ ಮಾಡಿದರೂ ನಮಗೆ ಸಂತೋಷ. ನಮ್ಮ ಹೈಕಮಾಂಡ್ ವೀಕ್ ಇಲ್ಲ, ಸ್ಟ್ರಾಂಗ್ ಇದೆ ಎಂದು ಬಾಲಕೃಷ್ಣ ತಿಳಿಸಿದರು.
ಸಚಿವ ಡಿ.ಸುಧಾಕರ್ ಅನಾರೋಗ್ಯ ವಿಚಾರದ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಇದೊಂದು ಬಾಲಿಷವಾದ ಹೇಳಿಕೆ. ಯಾವ ಆಧಾರದಲ್ಲಿ ಈ ರೀತಿ ಹೇಳಿಕೆಯನ್ನು ನೀಡಿದ್ದಾರೊ ಗೊತ್ತಿಲ್ಲ ಎಂದು ಹೇಳಿದರು.
ಯಾರು ಹೆಬ್ಬೆಟ್ಟು ಹಾಕಿಸಿಕೊಳ್ಳಲು ಹೋಗಿದ್ದಾರೆ? ಡಿ.ಕೆ.ಶಿವಕುಮಾರ್ ಹಾಗೂ ಸುಧಾಕರ್ ಹಳೆಯ ಸ್ನೇಹ. ಅವರ ಆರೋಗ್ಯದ ವಿಚಾರ ನೋಡಿಕೊಳ್ಳಲು ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ಗೆ ತಿಳಿಸಿದ್ದಾರೆ. ಅವರ ಆರೋಗ್ಯದ ಕಡೆ ಮೊದಲು ಗಮನ ಹರಿಸೋಣ ಎಂದು ಬಾಲಕೃಷ್ಣ ತಿಳಿಸಿದರು.






