Magadi | ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಆತ್ಯಾಚಾರ ಆರೋಪ: ಮೂವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಇಲ್ಲಿನ ಕಾಲೇಜುವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಆತ್ಯಾಚಾರ ನಡೆದಿದೆ ಎಂಬ ದೂರಿನ ಅನ್ವಯ ಮಾಗಡಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಕಾಸ್, ಪ್ರಶಾಂತ್ ಹಾಗೂ ಚೇತನ್ ಬಂಧಿತ ಆರೋಪಿಗಳಾಗಿದ್ದಾರೆ.
ವಿಕಾಸ್ ಹಾಗೂ ಪ್ರಶಾಂತ್ ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚೇತನ್ ಮಾಗಡಿ ಪಟ್ಟಣದಲ್ಲಿ ಎಲೆಕ್ಟ್ರಿಕ್ ಕೆಲಸ ಮಾಡುತ್ತಾನೆ. ಇನ್ನು ಚೇತನ್ ಪತ್ನಿ ಹೆರಿಗೆಗೆ ಹೋಗಿದ್ದ ವೇಳೆ ಮನೆಯಲ್ಲಿಯೇ ಯುವತಿಯ ಮೇಲೆ ಆತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ.
ಕಾಲೇಜು ವಿದ್ಯಾರ್ಥಿನಿಯನ್ನು ಪ್ರೀತಿಯ ನೆಪದಲ್ಲಿ ವಿಕಾಸ್ ಪರಿಚಯ ಮಾಡಿಕೊಂಡಿದ್ದನು. ಆನಂತರ ವಿದ್ಯಾರ್ಥಿನಿಯ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದು, ಅದನ್ನು ವಿಡಿಯೋ ಮಾಡಿಕೊಂಡು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದನು. ಮೂರು ತಿಂಗಳ ಹಿಂದೆ ವಿಡಿಯೋ ಮಾಡಿಕೊಂಡಿದ್ದ ವಿಕಾಸ್ ‘ನಾನು ಕರೆದಾಗಲೆಲ್ಲ ಬರಬೇಕು’ ಎಂದು ಹೇಳಿದ್ದನು ಎನ್ನಲಾಗಿದೆ. ನಂತರ ಪ್ರಶಾಂತ್, ಚೇತನ್ ಜೊತೆಗೆ ಸೇರಿಸಿಕೊಂಡು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಡಿ.17ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ವಿದ್ಯಾರ್ಥಿನಿಯ ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 64 (ಅತ್ಯಾಚಾರ), 70 (ಸಾಮೂಹಿಕ ಅತ್ಯಾಚಾರ) ಮತ್ತು 71 (ಪುನರಾವರ್ತಿತ ಅಪರಾಧಿಗಳಿಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.







