ಲೂಟಿ ಮಾಡಿಲ್ಲವೆಂದು ಯಾವ ನಾಲಿಗೆಯಿಂದ ಹೇಳ್ತಾರೆ : ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಅಬಕಾರಿ ಇಲಾಖೆಯ ಹಗರಣದ ಬಗ್ಗೆ ದೂರು ಸಲ್ಲಿಕೆಯಾಗಿದೆ. ಆದರೂ ಲೂಟಿ ಮಾಡಿಲ್ಲವೆಂದು ಕಾಂಗ್ರೆಸ್ ನಾಯಕರು ಯಾವ ನಾಲಿಗೆಯಿಂದ ಹೇಳುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ರವಿವಾರ ಇಲ್ಲಿನ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ಸುಳ್ಳು ಆರೋಪವೆಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಇದರ ವಿರುದ್ಧ ಮದ್ಯ ಮಾರಾಟಗಾರರ ಸಂಘದವರು ಹೇಳಿದ್ದು, ಮಾಧ್ಯಮಗಳಲ್ಲಿಯೂ ವರದಿ ಮಾಡಲಾಗಿದೆ ಎಂದು ಹೇಳಿದರು.
ಮೋದಿಯವರು ಹೇಳಿದಂತೆ ಮಹಾರಾಷ್ಟ್ರಕ್ಕೆ 700ಕೋಟಿ ರೂ. ಹೋಗಿದೆ. 200ಕೋಟಿ ರೂ. ಮೂರು ಕ್ಷೇತ್ರಗಳ ಉಪಚುನಾವಣೆಗೆ ಬಳಸಲಾಗುತ್ತಿದೆ. ಇದು ಸುಳ್ಳು ಎನ್ನುವುದಾದರೆ ದೂರು ನೀಡಿದವರ ವಿರುದ್ಧ ಕಾಂಗ್ರೆಸ್ ಸರಕಾರ ದೂರು ದಾಖಲಿಸಲಿ. ಕಾಂಗ್ರೆಸ್ ಬಳಿ ಓಡಾಡುತ್ತಿರುವ ಹಣ ಅಬಕಾರಿ ಇಲಾಖೆಯಿಂದಲೇ ಬಂದಿದ್ದು, ರಾಜ್ಯ ಸರಕಾರ ಚುನಾವಣೆಯ ಎಟಿಎಂ ಆಗಿದೆ ಎಂದು ಅಶೋಕ್ ದೂರಿದರು.
ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ, ಸರಕಾರಿ ಹಣದಲ್ಲಿ ಜಾಹೀರಾತು ನೀಡಲಾಗುತ್ತಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ.ಕೊಳ್ಳೆ ಹೊಡೆದಿರುವುದು ಸಾಬೀತಾಗಿದೆ. ಇದನ್ನು ಸ್ವತಃ ಸಿಎಂ ಒಪ್ಪಿಕೊಂಡಿದ್ದಾರೆ. ಶಾಲಾ ಮಕ್ಕಳಿಗೆ ಅಜೀಂ ಪ್ರೇಮ್ ಜಿ ಕಂಪೆನಿ ಮೊಟ್ಟೆ ಕೊಟ್ಟರೆ, ಅದನ್ನು ಸರಕಾರ ಮಕ್ಕಳಿಗೆ ತಲುಪಿಸಿಲ್ಲ. ಈ ಸರಕಾರದ ಯೋಗ್ಯತೆಯೇ ಇಷ್ಟು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಐದೂ ಗ್ಯಾರಂಟಿ ಯೋಜನೆಗಳು ನಡೆಯುತ್ತಿಲ್ಲ. ಮೂರು, ನಾಲ್ಕು ತಿಂಗಳಿಗೆ ಒಮ್ಮೆ ಫಲಾನುಭವಿಗಳಿಗೆ ಹಣ ದೊರೆಯುತ್ತಿದೆ. ಆದರೂ ಇಲ್ಲಿಗೆ ಬಂದು ನೋಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಮೊದಲು ಇಲ್ಲಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡಲಿ ಎಂದು ಅಶೋಕ್ ಸಲಹೆ ನೀಡಿದರು.







