ಮಾದಪಟ್ಟಣ | ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 8 ಕಾರ್ಮಿಕರು ಮೃತ್ಯು: ನಾಲ್ವರ ಸ್ಥಿತಿ ಗಂಭೀರ

Screengrab: X/@PTI_News
ಬೆಂಗಳೂರು : ನಗರದ ಹೊರವಲಯದಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆಯ ಮಾದಾಪಟ್ಟಣದ ಸಮೀಪದಲ್ಲಿನ ಕಲ್ಲು ಕ್ವಾರಿಯಲ್ಲಿ ಬೃಹತ್ ಬಂಡೆಯೊಂದು ಹಠಾತ್ತನೆ ಉರುಳಿಬಿದ್ದ ಪರಿಣಾಮ ಎಂಟು ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಗುರುವಾರ ಸಂಭವಿಸಿದೆ.
ಮೃತರನ್ನು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಡಿಯಾಳ್ ಗ್ರಾಮದ ರಾಮನಾಯ್ಕ್(46), ಬಿಹಾರ ಮೂಲದ ಭುವನೇಶ್ವರ್ ಸಿಂಗ್ (37), ಛತ್ತೀಸ್ಗಡದ ಧರ್ಮೇಶ್ ಸಿಂಗ್ (28), ಮಧ್ಯಪ್ರದೇಶದ ರಾಜೇಶ್ ಪ್ರಸಾದ್ (28), ರಾಮಾವತಾರ್ ಸಿಂಗ್ (32), ಮಧ್ಯಪ್ರದೇಶದ ಸತ್ಯನಾರಾಯಣ ಗೌಂಡ್ (32), ಮಧ್ಯಪ್ರದೇಶದ ಶಿವರಾಜ್ ಸಿಂಗ್(26) ಎಂದು ಗುರುತಿಸಲಾಗಿದೆ.
ಚೋಟು, ಗುಲಾಬ್ ಸಿಂಗ್, ಆನಂದ್, ನೋಹರ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿನ ಕೆಂಗೇರಿ ಸಮೀಪದಲ್ಲಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿದ್ದು, ಗಾಯಾಳುಗಳಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ(ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೆಳಗ್ಗೆ 7ಗಂಟೆಯ ಸುಮಾರಿಗೆ ಅವಘಡ ಸಂಭವಿಸಿದ್ದು, ಈ ವೇಳೆ ಕಲ್ಲು ಕ್ವಾರಿಯಲ್ಲಿ 15 ರಿಂದ 20 ಮಂದಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸುಮಾರು 100 ಅಡಿ ಎತ್ತರದಲ್ಲಿನ ಕಲ್ಲು ಕ್ವಾರಿಯಲ್ಲಿ ಹಿಟಾಚಿ ಯಂತ್ರದ ಮೂಲಕ ಹೊಸ ಕ್ರಷರ್ ಗೆ ಸ್ಥಳವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಕೆಳಭಾಗದಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕರನ್ನು ಹಿಟಾಚಿ ಚಾಲಕ ಗಮನಿಸದೆ ಕಾರ್ಯಾಚರಣೆ ನಡೆಸಿದ್ದರಿಂದ ಬೃಹತ್ ಕಲ್ಲು ಬಂಡೆ ಉರುಳಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆನಂದಸ್ವಾಮಿ ಎಂಬವರಿಗೆ ಸೇರಿದ ಕಾವೇರಿ ಜಲ್ಲಿ ಕ್ರಷರ್ ನ 3.20 ಎಕರೆ ಪ್ರದೇಶದಲ್ಲಿನ ಕಲ್ಲು ಕ್ವಾರಿಯಲ್ಲಿ ಈ ಘಟನೆ ಸಂಭವಿಸಿದ್ದು, 30 ವರ್ಷಕ್ಕೆ ಈ ಕ್ವಾರಿಯನ್ನು ಗುತ್ತಿಗೆ ಆಧಾರದಲ್ಲಿ ಪರವಾನಗೆ(ಲೈಸೆನ್ಸ್)ಪಡೆದು ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.
ಘಟನಾ ಸ್ಥಳಕ್ಕೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶ್ರೀನಿವಾಸ್ ಗೌಡ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಖುದ್ದು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಘಟನೆ ನಡೆದ ತಕ್ಷಣ ತಾವರೆಕೆರೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕ್ರಷರ್ ಮಾಲಕ ಆನಂದಸ್ವಾಮಿ ಎಂಬವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಘಟನೆಯ ಕುರಿತು ಬೆಂಗಳೂರು ಕೇಂದ್ರ ವಲಯದ ಪೊಲೀಸ್ ಮಹಾನಿರೀಕ್ಷಕ(ಐಜಿಪಿ) ಎಸ್.ಗಿರೀಶ್ ಪ್ರತಿಕ್ರಿಯಿಸಿದ್ದು, ‘ಗುರುವಾರ ಬೆಳಗ್ಗೆ 7ಗಂಟೆ ಸುಮಾರಿಗೆ ಕಾವೇರಿ ಕ್ರಷರ್ ಕಲ್ಲು ಕ್ವಾರಿಯಲ್ಲಿ ಈ ಅವಘಡ ನಡೆದಿದೆ. ಎರಡು ಕ್ರಷರ್ಗಳಿದ್ದು, ಎರಡು ಕ್ರಷರ್ಗಳಲ್ಲಿಯೂ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಹಠಾತ್ತನೆ ಬಂಡೆಗಳು ಉರುಳಿ ಬಿದ್ದ ಪರಿಣಾಮ 8 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ರಷರ್ ಮಾಲಕರು ಯಾರು, ಪರವಾನಿಗೆ ಇದೆಯೇ?, ಅಥವಾ ಇಲ್ಲವೇ? ಎನ್ನುವ ಮಾಹಿತಿ ಪಡೆಯುತ್ತೇವೆ. ಮೇಲುನೋಟಕ್ಕೆ ಕ್ರಷರ್ ಮಾಲಕರ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ’ ಎಂದು ಹೇಳಿದ್ದಾರೆ.






