ಬೆಂಗಳೂರು ದಕ್ಷಿಣ ಎಸ್ಪಿ ಕಚೇರಿಯ 3ನೇ ಮಹಡಿಯಿಂದ ಜಿಗಿದು ಶಿಕ್ಷಕ ಆತ್ಮಹತ್ಯೆ!

ಸಾಂದರ್ಭಿಕ ಚಿತ್ರ | PC : Image by jcomp on Magnific
ಬೆಂಗಳೂರು : ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದ ದೈಹಿಕ ಶಿಕ್ಷಕನೊಬ್ಬ ಬೆಂಗಳೂರು ದಕ್ಷಿಣ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ 3ನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ನಡೆದಿದೆ.
ವಿಜಯನಗರ ಮೂಲದ ಶಶಿಧರ್(49) ಮೃತ ದೈಹಿಕ ಶಿಕ್ಷಕ ಎಂದು ಗುರುತಿಸಲಾಗಿದೆ. ಈತ 15 ವರ್ಷಗಳಿಂದ ಚನ್ನಪಟ್ಟಣ ತಾಲೂಕಿನ ಅನುದಾನಿತ ಪ್ರೌಢಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.
ಶಶಿಧರ್ ವಿರುದ್ಧ ಶಾಲೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಶನಿವಾರ(ಸೆ.19) ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಶುಕ್ರವಾರವೇ ಪೊಲೀಸರು ಇವರನ್ನು ಬಂಧಿಸಿದ್ದರು.
ರಾಮನಗರ ಮಹಿಳಾ ಠಾಣೆಯ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದರು. ರವಿವಾರ(ಸೆ.20) ಮುಂಜಾನೆ ಆರೋಪಿಗೆ ವೈದ್ಯಕೀಯ ತಪಾಸಣೆ ಮಾಡಿಸಿದ ಬಳಿಕ, ಮುಂದಿನ ಕಾನೂನು ಪ್ರಕ್ರಿಯೆಯಾಗಿ ಬೆರಳಚ್ಚು (ಫಿಂಗರ್ ಪ್ರಿಂಟ್) ನೋಂದಣಿ ಮಾಡಿಸಲು ಬೆಂಗಳೂರು ದಕ್ಷಿಣ ಜಿಲ್ಲೆಯ ಎಸ್ಪಿ ಕಚೇರಿಗೆ ಕರೆದುಕೊಂಡು ಬಂದಿದ್ದರು.
ಎಸ್ಪಿ ಕಚೇರಿಯ ಮೂರನೇ ಮಹಡಿಯಲ್ಲಿ ಪೊಲೀಸರು ಶಶಿಧರ್ ಅವರ ಬೆರಳಚ್ಚು ಪಡೆಯಲು ಸಿದ್ಧತೆ ನಡೆಸುತ್ತಿದ್ದಾಗ, ತಕ್ಷಣವೇ ಶಶಿಧರ್ ಅಲ್ಲಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾದರೂ ಮಾರ್ಗಮಧ್ಯದಲ್ಲೇ ಶಶಿಧರ್ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್, ಮುಖ್ಯೋಪಾಧ್ಯಾಯರ ವಿರುದ್ಧ ಕುಟುಂಬಸ್ಥರು ಆರೋಪ: ಇನ್ನು, ದೈಹಿಕ ಶಿಕ್ಷಕ ಶಶಿಧರ್ ಅವರ ಆತ್ಮಹತ್ಯೆಗೆ ಪೊಲೀಸರು ಮತ್ತು ಶಾಲೆಯ ಮುಖ್ಯೋಪಾಧ್ಯಾಯರೇ ನೇರ ಕಾರಣ ಎಂದು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಶಿಕ್ಷಕನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ಪೊಲೀಸರು ಹಾಗೂ ಶಾಲಾ ಆಡಳಿತ ಮಂಡಳಿ ಮಾನಸಿಕ ಒತ್ತಡ ಹೇರಿದ್ದರಿಂದಲೇ ಶಶಿಧರ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.






