20.96 ಕೋಟಿ ರೂ.ಅಂದಾಜು ವೆಚ್ಚದಲ್ಲಿ ರಾಮನಗರ ರೈಲು ನಿಲ್ದಾಣ ಆಧುನೀಕರಣ : ವಿ.ಸೋಮಣ್ಣ

ಬೆಂಗಳೂರು : ಅಮೃತ ಭಾರತ ನಿಲ್ದಾಣ ಯೋಜನೆ ಅಡಿ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ರೈಲು ನಿಲ್ದಾಣದ ಆಧುನೀಕರಣವನ್ನು 20.96 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಶುಕ್ರವಾರ ರಾಮನಗರ ಮತ್ತು ಬಿಡದಿ ರೈಲು ನಿಲ್ದಾಣಗಳನ್ನು ಪರಿಶೀಲಿಸಿದ ಅವರು, ಬೆಂಗಳೂರು-ರಾಮನಗರ ಪ್ರದೇಶವು ತ್ವರಿತ ಬೆಳವಣಿಗೆಯನ್ನು ಕಾಣುತ್ತಿದೆ. ಭವಿಷ್ಯದ ಅಗತ್ಯತೆಗಳಿಗೆ ಅನುಗುಣವಾಗಿ ರೈಲ್ವೆ ಮೂಲಸೌಕರ್ಯವನ್ನು ನವೀಕರಿಸಲಾಗುತ್ತಿದೆ ಎಂದರು.
ಈ ಅಭಿವೃದ್ಧಿ ಕಾರ್ಯದಲ್ಲಿ ನಿಲ್ದಾಣದ ಸಂಚಾರ ಪ್ರದೇಶದ ನವೀಕರಣ, ಹೊಸ ಪಾದಚಾರಿ ಮೇಲ್ಸೇತುವೆ, ಹೊಸ ಪ್ಲಾಟ್‍ಫಾರ್ಮ್ ಶೆಲ್ಟರ್‍ಗಳು ಮತ್ತು ನಿರೀಕ್ಷಣಾ ಕೊಠಡಿ, ಹೆಚ್ಚುವರಿ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ನಿಲುಗಡೆ ಸ್ಥಳ, ಮೂರು ಲಿಫ್ಟ್ ಗಳು ಮತ್ತು ಒಂದು ಎಸ್ಕಲೇಟರ್ ಮತ್ತು ಹೊಸ ಶೌಚಾಲಯ ನಿರ್ಮಾಣ ಆಗಲಿದ್ದು, ಇದು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿವೆ ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯು ಅಪಾರ ಅಭಿವೃದ್ಧಿ ಸಾಮರ್ಥ್ಯವನ್ನು ಹೊಂದಿದೆ. ಈ ಪ್ರದೇಶದ ಒಟ್ಟಾರೆ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ನಿಕಟ ಸಮನ್ವಯದಿಂದ ಕೆಲಸ ಮಾಡುವಂತೆ ಕರೆ ನೀಡಿದ ಸೋಮಣ್ಣ, ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಮು ರೈಲು ಸೇವೆಗಳು ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತಿವೆ ಎಂದರು.
ದೇಶಾದ್ಯಂತ ಎಲ್ಲ ರಸ್ತೆ ಕೆಳ ಸೇತುವೆಗಳು ಮತ್ತು ರಸ್ತೆ ಮೇಲ್ಸೇತುವೆಗಳ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರಕಾರ ಭರಿಸಲಿದೆ. ದೇಶದೆಲ್ಲೆಡೆ ಸುಮಾರು ಶೇ.98ರಷ್ಟು ರೈಲ್ವೆ ಮಾರ್ಗ ವಿದ್ಯುದ್ದೀಕರಣ ಪೂರ್ಣಗೊಂಡಿದೆ ಮತ್ತು ಕರ್ನಾಟಕ ಸೇರಿದಂತೆ ರಾಷ್ಟ್ರವ್ಯಾಪಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ವೇಗವಾಗಿ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಪರಿಶೀಲನೆ ವೇಳೆ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಮತ್ತು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಉಪಸ್ಥಿತರಿದ್ದರು. ನಿಲ್ದಾಣದಲ್ಲಿ, ಸಚಿವರು ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಕುಂದುಕೊರತೆಗಳನ್ನು ಪರಿಹರಿಸಲು ಮನವಿಗಳನ್ನು ಸ್ವೀಕರಿಸಿದರು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್‍ಪುರಿಯಾ, ಹಿರಿಯ ವಿಭಾಗೀಯ ಎಂಜಿನಿಯರ್ (ಸಮನ್ವಯ) ರಾಜೀವ್ ಶರ್ಮಾ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೃಷ್ಣ ಚೈತನ್ಯ, ಉಪಮುಖ್ಯ ಯೋಜನಾ ವ್ಯವಸ್ಥಾಪಕ (ಗತಿ ಶಕ್ತಿ) ಶುಭಂ ಶರ್ಮಾ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸೇರಿದಂತೆ ಹಿರಿಯ ರೈಲ್ವೆ ಮತ್ತು ಜಿಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಇದಕ್ಕೂ ಮೊದಲು, ಸೋಮಣ್ಣ ಬಿಡದಿ ರೈಲು ನಿಲ್ದಾಣವನ್ನು ಪರಿಶೀಲಿಸಿದರು. ಅಲ್ಲಿ ನಡೆಯುತ್ತಿರುವ ಪಾದಚಾರಿ ಸೇತುವೆ ವಿಸ್ತರಣೆ ಮತ್ತು ಪ್ಲಾಟ್‍ಫಾರ್ಮ್ ವಿಸ್ತರಣೆ ಕಾಮಗಾರಿಗಳನ್ನು ಪರಿಶೀಲಿಸಿದರು. ಬಿಡದಿಯಲ್ಲಿರುವ ಟೊಯೋಟಾ ಉತ್ಪಾದನಾ ಘಟಕಕ್ಕೂ ಭೇಟಿ ನೀಡಿ ರೈಲ್ವೆ ಮೂಲಕ ವಾಹನಗಳ ಸಾಗಣೆಯ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಮತ್ತು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಉಪಸ್ಥಿತರಿದ್ದರು.







