ರಾಮನಗರಕ್ಕೆ ಕಾಂಗ್ರೆಸ್ ಏನು ಕೊಟ್ಟಿದೆ? ಶ್ವೇತಪತ್ರ ಹೊರಡಿಸಲಿ: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು : ರಾಮನಗರಕ್ಕೆ ಕಾಂಗ್ರೆಸ್ ಏನು ಕೊಟ್ಟಿದೆ ಶ್ವೇತಪತ್ರ ಹೊರಡಿಸಲಿ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಮನಗರದ ದೊಡ್ಡಕುರಬರಹಳ್ಳಿ ಗ್ರಾಮದಲ್ಲಿ ಬಿಸಿಲು ಮಾರಮ್ಮ ದೇವಿಯ ದರ್ಶನದ ಬಳಿಕ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯ ಜನರ ಋಣ ತೀರಿಸಿಲ್ಲ ಎಂಬ ವಿಚಾರಕ್ಕೆ, ರಾಮನಗರ ಜಿಲ್ಲೆಯ ಜನರೇ ಉತ್ತರ ಕೊಡುತ್ತಾರೆ. ದೇವೇಗೌಡರು, ಕುಮಾರಸ್ವಾಮಿ ಅವರ ಕೊಡುಗೆ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಸರಕಾರ ಬಂದು ನಾಲ್ಕು ವರ್ಷ ಕಳೆಯುತ್ತಿದೆ. ರಾಮನಗರ ಜಿಲ್ಲೆಗೆ ಕಾಂಗ್ರೆಸ್ ಸರಕಾರ ಏನು ಕೊಟ್ಟಿದೆ ಎಂದು ಶ್ವೇತ ಪತ್ರ ಹೊರಡಿಸಲಿ ಎಂದರು.
ನಾನು ರಾಮನಗರ ಬಿಟ್ಟು ಹೋಗಿರುವುದಾದರೂ ಎಲ್ಲಿಗೆ? ನಾನು ನಿರಂತರವಾಗಿ ರಾಮನಗರದಲ್ಲೇ ಇದ್ದೇನೆ. ಜೆಡಿಎಸ್ ಪಕ್ಷಕ್ಕೋಸ್ಕರ ಚನ್ನಪಟ್ಟಣದಲ್ಲಿ ಸ್ಪರ್ಧಿಸಿದೆ. ಕುಮಾರಸ್ವಾಮಿ ಅವರು ಸಂಸದರಾಗಿ, ಕೇಂದ್ರ ಸಚಿವರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ದೇವೇಗೌಡರ 64 ವರ್ಷಗಳ ರಾಜಕೀಯ ಹಾಗೂ ಈ ಜಿಲ್ಲೆಯೊಂದಿಗಿನ 30-40 ವರ್ಷಗಳ ಬಾಂಧವ್ಯವನ್ನು ಪ್ರಾಮಾಣಿಕವಾಗಿ ಮುಂದುವರಿಸುತ್ತೇನೆ ಎಂದು ತಿಳಿಸಿದರು.
ಚಳಿಗಾಲದ ಅಧಿವೇಶನದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಮಂಡನೆಗೆ ಸಿದ್ಧತೆ ಮಾಡಲಾಗಿದೆ. ಡಿಲಿಮಿಟೇಶನ್ ಜೊತೆಗೆ ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸಲು ಬಹುತೇಕ ಪಕ್ಷಗಳ ಸಹಮತ ಇದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗದಂತೆ ತಡೆಯಲು ಕೇಂದ್ರದಿಂದ ಮಹತ್ವದ ಸೂತ್ರ ತಯಾರು ಮಾಡಲಾಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಸರಿ ಸಮಾನವಾಗಿ ಶೇ.50ರಷ್ಟು ಕ್ಷೇತ್ರಗಳ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಈ ಅಧಿವೇಶನದಲ್ಲೇ ಮಸೂದೆ ಅಂಗೀಕಾರ ಆಗುವ ಸಂಪೂರ್ಣ ಆತ್ಮವಿಶ್ವಾಸವಿದೆ ಎಂದರು.






