ಕಳೆದುಕೊಂಡವರ ಒಡಲ ಬೆಂಕಿಯ ಕಥೆಗಳ ಹಾಡು...

ನಾಟಕ: ಕಳೆದುಹೋದ ಹಾಡು
ವಿನ್ಯಾಸ, ನಿರ್ದೇಶನ: ಮಂಗಳಾ ಎನ್.
ಡ್ರಮಟರ್ಜಿ: ದಾದಾಪೀರ್ ಜೈಮನ್
ಕಲೆ: ಶಶಿಧರ್ ಅಡಪ
ಸಂಗೀತ: ರೂಮಿ ಹರೀಶ್
ನಿರ್ವಹಣೆ: ಗಜಾನನ್ ಟಿ. ನಾಯ್ಕ್
ಸಾಹಿತ್ಯ: ಚಾಂದಿನಿ, ದಾದಾಪೀರ್ ಜೈಮನ್, ಮಂಗಳಾ ಎನ್.
ಬೆಳಕು: ಮಂಜು ನಾರಾಯಣ್
ವಸ್ತ್ರವಿನ್ಯಾಸ: ದೀಪಕ್ ಬಿ., ತ್ರಿಮೂರ್ತಿ ಕೆ., ಬಾನು, ಸವಿತಾ ಎಸ್.
ಪ್ರಸಾಧನ: ರವಿಶಂಕರ್
ತಂಡ: ಪಯಣ ರಂಗ ತಂಡ
ರಂಗದ ಮೇಲೆ: ಶಾಂತಿ, ಲಕ್ಷ್ಮೀ, ಭಾನು, ಕೃಷ್ಟಿರಾಜ್, ದೀಪಕ್, ಶರವನ್, ಸವಿತಾ ಎಸ್. ತ್ರಿಮೂರ್ತಿ ಕೆ., ದೇವಿ ವಿ., ನದಿಯ, ಶೋಭನಾ ಕುಮಾರಿ, ಚಾಂದಿನಿ, ಪ್ರಮೋದಿನಿ ಡ್ಯಾನಿಯಲ್.
ಕಳೆದುಹೋಗಿರುವಾಗ
ಸಾವು ಮುಂದಿರುವಾಗ
ಬೆರಳ ಸಂದೀಲಿ ಬದುಕು
ಜಾರುತಿರುವಾಗ
ಒಪ್ಪಿಗೆಯ ಅಪ್ಪುಗೆಯು ನಮಗೆ ಬೇಕು
ಕಳೆದ ಹಾಡುಗಳನ್ನು
ಮತ್ತೆ ನೆನೆಯಲು
ಮತ್ತೆ ನೆನೆಯಲು
ಮತ್ತೆ ನೆನೆಯಲು
ಹೀಗೆ ಚಾಂದಿನಿ ಅವರು ಹಾಡಲು ಆರಂಭಿಸಿದಾಗ ಉಳಿದವರೂ ಹಾಡುತ್ತಾರೆ. ಇದು ‘ಕಳೆದುಹೋದ ಹಾಡು’ ನಾಟಕದ ಹಾಡು. ಕಳೆದ ವಾರ ಮೈಸೂರಿನಲ್ಲಿ ಮೈಸೂರು ರಂಗಾಯಣ ಆಯೋಜಿಸಿದ್ದ ’ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ಈ ನಾಟಕದಲ್ಲಿ ಮಂಗಳಮುಖಿಯರೇ ಅಭಿನಯಿಸಿದ್ದು ವಿಶೇಷ. ಇದನ್ನು ಪಯಣ ರಂಗ ತಂಡ ಪ್ರಸ್ತುತಪಡಿಸಿತು. ಪಯಣ ಸಂಸ್ಥೆಯು 2009ರಲ್ಲಿ ಆರಂಭಗೊಂಡಿದ್ದು, ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕು ಹಾಗೂ ಆರೋಗ್ಯದ ವಿಷಯವಾಗಿ ಕರ್ನಾಟಕ ರಾಜ್ಯದಲ್ಲಿ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಇದರೊಂದಿಗೆ ರಂಗ ತಂಡವಾಗಿ ನಾಟಕಗಳನ್ನೂ ಪ್ರದರ್ಶಿಸುತ್ತಿದೆ.
ತಮ್ಮ ಬದುಕಿನ ಬವಣೆಯನ್ನು ‘ಕಳೆದುಹೋದ ಹಾಡು’ ನಾಟಕದ ಮೂಲಕ ಪ್ರಸ್ತುತಪಡಿಸಿದ್ದು ಗಮನಾರ್ಹ. ಆದರೆ ಇನ್ನಷ್ಟು ಚೆಂದವಾಗಿರಬೇಕಿತ್ತು, ಬಂಧವಿರಬೇಕಿತ್ತು. ಇದನ್ನು ಈ ನಾಟಕದ ನಿರ್ದೇಶಕರಾದ ಮಂಗಳಾ ಅವರು ನೆರ್ಪುಗೊಳಿಸಬಲ್ಲರು.
ನಾಟಕ ಕುರಿತು; ಸಂಗ, ಛಕ್ಕಾ, ಒಂಭತ್ತು... ಹೀಗೆ ಗ್ರಾಮಾಂತರ ಪ್ರದೇಶಗಳಲ್ಲಿ ಬೈಸಿಕೊಳ್ಳುವಾಗ, ಕಲ್ಲು ಹೊಡೆಯುವಾಗ ಚಾಂದಿನಿ ಎದ್ದು ನೋಡುತ್ತಾರೆ. ಸುತ್ತ ಕಲ್ಲು ಬಿದ್ದಿರುತ್ತವೆ. ಒಂದೊಂದು ಕಲ್ಲಲ್ಲೂ ನಿಮ್ಮಂಥವರಿಗೆ ಮನೆ ಕೊಡಲ್ಲ, ನಿಮ್ಮಂಥವರಿಂದಲೇ ಎಚ್‌ಐವಿ ಬರುತ್ತದೆ, ನಿಮ್ಮಂಥವರಿಂದಲೇ ಅವಮಾನ ಆಗೋದು... ಎಂದು ಬರೆದಿರುತ್ತಾರೆ. ಇಂಥ ನಾಲ್ಕು ಕಲ್ಲುಗಳನ್ನು ಎತ್ತಿಕೊಂಡು ತನ್ನ ಬ್ಯಾಗಲ್ಲಿ ಇಟ್ಟುಕೊಳ್ಳುತ್ತಾರೆ. ಆಮೇಲೆ ‘‘ಯಾಕೆ ನಮ್ಮನ್ನು ತುಚ್ಛವಾಗಿ ಕಾಣುತ್ತೀರಿ? ನಾವು ಮನುಷ್ಯರಲ್ಲವಾ?’’ ಎಂದು ಕೇಳುತ್ತಾರೆ. ನಂತರದ ದೃಶ್ಯದಲ್ಲಿ ಅವರನ್ನು ಅಟ್ಟಿಸಿಕೊಂಡು ಜನರು ಬರುತ್ತಾರೆ. ಅವರಿಂದ ತಪ್ಪಿಸಿಕೊಳ್ಳುತ್ತಾರೆ.
ಅವರಿಗೆ ಸಿನೆಮಾ ನಟ ಅಂಬರೀಷ್ ಅವರೆಂದರೆ ಬಹಳ ಪ್ರೀತಿ. ‘‘ಅಂಬರೀಷ್ ಅವರ ಮೊದಲ ಹೆಸರು ಅಮರ್. ನಾನು ಆಶಾ. ಅವರನ್ನು ನಿಜಜೀವನದಲ್ಲಿ ಭೇಟಿಯಾಗಿದ್ದರೆ ಅಪ್ಪಿಕೊಂಡು, ಅವರ ಕೆನ್ನೆಗೆ ಮುತ್ತು ಕೊಡಬೇಕೆಂಬ ಆಸೆಯಿತ್ತು. ಆದರೆ ಅಂಬರೀಷ್ ಸಿಗಲಿಲ್ಲ. ಆದರೆ ಪಿಯುನಲ್ಲಿ ವಸಂತ್ ಸಿಕ್ಕ. ಅಪ್ಪಅಮ್ಮನೇ ಬೇಡ. ಇವನೊಬ್ಬನೇ ಸಾಕು ಎನ್ನುವ ಸ್ಥಿತಿಯಲ್ಲಿದ್ದೆ. ನಾನು ಎತ್ತರ. ಅವನು ಕುಳ್ಳ. ಫೋಟೊ ತೆಗೆಸಿಕೊಳ್ಳುವ ಸಲುವಾಗಿ ಮರದ ಸ್ಟೂಲಿಟ್ಟು ಅದರ ಮೇಲೆ ಅವನು ನಿಲ್ಲುತ್ತಾನೆ. ಅಲ್ಲಿಗೆ ಇಬ್ಬರೂ ಸಮನಾಗಿ ಕಾಣುತ್ತೇವೆ. ಆದರೆ ಕೊರೋನ ಸಂದರ್ಭದಲ್ಲಿ ನಮ್ಮ ಸಮುದಾಯದ ಅನೇಕರನ್ನು ಕಳೆದುಕೊಂಡೆವು. ಅವರನ್ನು ನೋಡಲೂ ಸಾಧ್ಯವಾಗಲಿಲ್ಲ, ಅವರನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಗಲಿಲ್ಲ’’ ಎಂದು ದುಃಖ ತೋಡಿಕೊಳ್ಳುತ್ತಾರೆ.
ನಂತರ ಮಗು ಎತ್ತಿಕೊಂಡು ಸಂತೈಸುವ ಸನ್ನಿವೇಶ. ‘‘ಬೆಳಗ್ಗೆಯಿಂದ ಮಗುವಿಗೆ ಭೇದಿ ಆಗುತ್ತಿದೆ. ಎಷ್ಟಂತ ಸುಧಾರಿಸಲಿ?’’ ಎಂದು ಚಾಂದಿನಿ ತನ್ನ ತಾಯಿಯನ್ನು ಕೇಳಿದಾಗ ‘‘ನೀನು ಮೊಟ್ಟೆ ತಿನ್ನಬೇಡಂತ ಹೇಳಿದ್ದೆ. ಮೊಟ್ಟೆ ತಿಂದ್ರೆ ಮಗುವಿಗೆ ಭೇದಿ ಆಗ್ತಿದೆಯೆಂದು ಹೇಳಿದ್ದೆ’’ ಎಂದಾಗ ‘‘ನನ್ನನ್ನು ಹೆಂಗಸೆಂದು ಪರಿಗಣಿಸಿದಳು’’ ಎಂದು ಚಾಂದಿನಿ ಖುಷಿಪಡುತ್ತಾರೆ. ‘‘ನನ್ನ ಎದೆಯಲ್ಲಿ ಹಾಲಿಲ್ಲ. ಅದೆಂಗೆ ನಾನು ಮೊಟ್ಟೆ ತಿಂದಿದ್ದಕ್ಕೆ ಮಗುವಿಗೆ ಭೇದಿಯಾಯ್ತು? ಒಳ್ಳೆ ಬಾಣಂತಿಯರಿಗೆ ಬುದ್ಧಿ ಹೇಳೋರಂಗೆ ನನಗೂ ಬುದ್ಧಿ ಹೇಳಿದ್ಲು. ಅಂದ್ರೆ ನನ್ನನ್ನು ಹೆಂಗಸಂತ ಒಪ್ಪಿಕೊಂಡಿದ್ದಾಳೆ. ಅದೇ ನಮ್ಮವ್ವ ಹತ್ತು ವರ್ಷದ ಕೆಳಗೆ ಊರಿಗೆ ಯುಗಾದಿ ಹಬ್ಬಕ್ಕೆ ಬರ್ತೀನಂತ ಕೇಳಿದೆ. ‘ಹಬ್ಬಕ್ಕೆ ಮಾತ್ರ ಬರಬ್ಯಾಡಂತ’ ಹೇಳಿದ್ಲು. ‘ಇಷ್ಟವಾದ ಸೀರೆ ಉಟ್ಕೊಂಡು ಊರ ತುಂಬಾ ಸುತ್ತಬೇಕು’ ಎಂದು ಆಸೆ ಹೇಳಿದಾಗ ‘ನೆಂಟರು ಕೇಳಿದರೆ ಏನು ಹೇಳಲಿ? ಮರ್ಯಾದೆ ಹೋಗ್ತದೆ. ಬರಬೇಡ’’ ಎಂದು ಅವ್ವ ಹೇಳಿದ್ದನ್ನು ಚಾಂದಿನಿ ನೆನಪಿಸಿಕೊಳ್ಳುತ್ತಾರೆ.
‘‘ತಾಯಾಗಬೇಕು ಅಂದ್ರೆ ಮಗುವಿಗೆ ಜನ್ಮ ಕೊಡಬೇಕೆಂದಿಲ್ಲ. ಯಶೋದೆ ತಾಯಿ ಅಲ್ವಾ? ಕೃಷ್ಣನನ್ನು ಆಡಿಸಿದ್ಲು, ಕುಣಿಸಿದ್ಲು, ತಿನ್ನಿಸಿದ್ಲು. ನನ್ನಮ್ಮ ರಾಜಪ್ಪ ಎಂದೇ ಕರೆಯುತ್ತಾಳೆ. ಅವಳ ಮಗು ನಾನು. ಆದ್ರೆ ನನ್ನನ್ನು ಹೆಂಗೆಸೆಂದು ಒಪ್ಪಿಕೊಂಡ ಮೇಲೆ ನಿಮಗೇನು ಸಮಸ್ಯೆ? ನಮ್ಮ ಆಶೀರ್ವಾದ ಬೇಕು ನಿಮಗೆ. ನಾವು ಹರಸಿ ಕೊಡುವ ಒಂದು ರೂಪಾಯಿಯ ಲಕ್ಕಿ ಕಾಯಿನ್ ಬೇಕು. ನಿಮ್ಮ ಮುಂದೆ ಬಂದ್ರೆ ಶುಭ ಎಂದು ಹೇಳ್ತೀರಾ? ಆದ್ರೆ ಸಮಾಜದಲ್ಲಿ ಇರೋಕೆ ಬೇಡ್ವಾ?’’ ಎಂದು ಪ್ರಶ್ನಿಸುತ್ತಾರೆ.
ಇನ್ನೊಂದು ದೃಶ್ಯದಲ್ಲಿ; ‘‘ತಪ್ಪಿಸಿಕೊಳ್ಳೋದು? ಮನೆಯಿಂದನಾ? ಸಮಾಜದಿಂದನಾ? ಮದುವೆ ಎನ್ನುವುದು ನೇಣಿನ ಹಗ್ಗ ಥರಾ. ಇದ್ರಿಂದ ತಪ್ಪಿಸಿಕೊಳ್ಳಬೇಕಂತ ಎಷ್ಟೇ ಪ್ರಯತ್ನಪಟ್ರೂ ಮನೆಯವರ ಬಲವಂತದಿಂದ ಮದುವೆ ಆಗೇ ಹೋಯ್ತು. ನಾನು ಒಬ್ಬ ಮಗನಾಗಿ, ಗಂಡನಾಗಿ, ಅಪ್ಪನಾಗಿ, ತಾತನಾಗಿ ನನ್ನ ಪಾತ್ರವನ್ನು ನಿಭಾಯಿಸುತ್ತಿದ್ದೀನಿ. ಆದ್ರೆ ಕೆಲವೊಂದು ಸಾರಿ ನಾನು ಒಂಟಿ ಅನ್ನಿಸುತ್ತೆ. ನಾನು ಖುಷಿಯಾಗಿರೋದು ನನ್ನ ಸಮುದಾಯದವರ ಜೊತೆ ಇದ್ದಾಗ. ಕೆಲವು ಸಲ ಅವ್ರ ಹೇಳ್ತಾರೆ ‘ಇವಳಿಗೇನು? ಮನೇಲಿ ಅಪ್ಪ, ಅಮ್ಮ, ಮಕ್ಕಳು ಇದ್ದಾರೆ. ಏನಾದ್ರೂ ಹೆಚ್ಚುಕಡಿಮೆಯಾದ್ರೆ ಕೇರ್ ಮಾಡ್ತಾರೆ’ ಹೀಗೆ ಹೇಳುವಾಗ ಒಮ್ಮೊಮ್ಮೆ ನನ್ನನ್ನೂ ದೂರ ತಳ್ಳಿಬಿಡ್ತಾರೇನೋ ಅನ್ನಿಸುತ್ತೆ. ಮನೆ ಮೆಟ್ಟಿಲಿರುವಾಗ ನನ್ನ ಭಾವನೆ, ನನ್ನ ಹೆಣ್ತನ, ನನ್ನ ಆಸೆ, ನನ್ನ ನಡವಳಿಕೆ ಇವೆಲ್ಲವೂ ಒಂದೊಂದಾಗಿ ಕಳಚಿಕೊಂಡು ಹೋಗ್ತಾ ಇರುತ್ತೆ. ಹೊಸಿಲು ದಾಟಿದ ತಕ್ಷಣ ಬಲವಂತದ ಗಂಡಸಾಗಿ ಮನೆಯೊಳಗೆ ಹೋಗ್ತೀನಿ’’ ಎಂದು ಸರವನ್ ವ್ಯಥೆ ತೋಡಿಕೊಳ್ಳುವ ಮೂಲಕ ತಮ್ಮ ಕಥೆ ಬಿಚ್ಚಿಟ್ಟರು.
ಹೀಗೆ ಕಳೆದುಹೋದ ನೆನಪುಗಳ ನಾಟಕವಿದು. ಇದು ಜೀವಂತವಿರುವವರ ನಾಟಕ ಮತ್ತು ಜೀವಂತಿಕೆಯ ನಾಟಕ. ಇದರ ನಿರ್ದೇಶಕರಾದ ಮಂಗಳಾ ಅವರು ‘‘ಕಳೆದುಹೋದ ಹಾಡು- ಬದುಕಬಹುದಾದ ಬಹಳಷ್ಟು ಕ್ಷಣಗಳನ್ನು, ಸಂಬಂಧಗಳನ್ನು, ಸಂಭ್ರಮಗಳನ್ನು, ಪರಿಸರವನ್ನು, ಗುರುತುಗಳನ್ನು ಕಳೆದುಕೊಂಡವರ ಹಾಡು. ಈ ಕಳೆದುಕೊಂಡವರ ಒಡಲಲ್ಲಿ ಹುದುಗಿಹೋಗಿರುವ ಹಲವು ಕಥೆಗಳಲ್ಲಿ ಕೆಲವು ಕಥೆಗಳು ಇಲ್ಲಿವೆ. ಅವರ ಕಥೆಗಳನ್ನು ಕೇಳಿಸಿಕೊಳ್ಳುತ್ತ, ಅರಗಿಸಿಕೊಳ್ಳುತ್ತ, ಅವರ ಒಡಲ ಬೆಂಕಿಯ ಕಾವಲ್ಲಿ ಬೇರೆಯದೇ ಪ್ರಪಂಚವನ್ನು ನೋಡುತ್ತ ಅರ್ಥ ಮಾಡಿಕೊಳ್ಳುತ್ತ, ಕಣ್ಣೀರಾಗುತ್ತ ಅವರೊಡನೆ ಚಲಿಸಿದ್ದೇನೆ, ತಳಮಳಗೊಂಡಿದ್ದೇನೆ, ಕಂಗಾಲಾಗಿದ್ದೇನೆ. ಅವರ ಸಂಕೀರ್ಣ ಪರಿಸ್ಥಿತಿ, ಸಮಸ್ಯೆಗಳನ್ನು ಹೃದಯವಂತಿಕೆಯಿಂದ ಕಾಣುವ ಅಗತ್ಯವಿದೆ. ಅವರ ಘನತೆಯ ಬದುಕಿಗೆ ದಾರಿ ಬಿಡಬೇಕಾಗಿದೆ. ಒಂದು ಹಿಡಿಪ್ರೀತಿಯೊಂದಿಗೆ ಜೊತೆಯಾಗಬೇಕಿದೆ. ಒಳಗಣ್ಣನ್ನು ತೆರೆದರಷ್ಟೇ ಕಾಣಬಹುದಾದ ಹಲವು ಬದುಕಿನ ಸತ್ಯಗಳಿಗೆ ಎದುರಾಗುವ ಕಳೆದುಕೊಂಡವರ ಹಾಡು ಅರ್ಥ ಆಗುವುದಿಲ್ಲ. ಅರ್ಥ ಮಾಡಿಕೊಳ್ಳಬೇಕಾಗುತ್ತದೆ’’
ಹೀಗೆಯೇ ಕಳೆದ ವರ್ಷದ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವದಲ್ಲಿ ಇದೇ ಪಯಣ ತಂಡವು, ಚಾಂದಿನಿ ಅವರ ನೇತೃತ್ವದಲ್ಲಿ ‘ತಲ್ಕಿ’ ನಾಟಕವನ್ನು ಪ್ರಸ್ತುತಪಡಿಸಿತ್ತು. ಮಂಗಳಮುಖಿಯರು ಅತಿ ಹೆಚ್ಚು ಪ್ರೀತಿಸುವ, ಮಾಂಸದಿಂದ ತಯಾರಿಸುವ ಆಹಾರದ ಹೆಸರು ‘ತಲ್ಕಿ’. ಆಹಾರವಲ್ಲದೆ ಲೈಂಗಿಕ ಅಲ್ಪಸಂಖ್ಯಾತರು ಬಳಸುವ ಭಾಷೆಯೂ ವಿಶೇಷವಾದುದು. ಇದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಈ ಮೂಲಕ ಆತ್ಮಹತ್ಯೆಗೆ ಮುಂದಾಗುತ್ತಿರುವ ಯುವಮಂಗಳಮುಖಿಯರಿಗೆ ಧೈರ್ಯ ತುಂಬಲು ಈ ನಾಟಕವನ್ನು ಪ್ರದರ್ಶಿಸಿದರು. ಲಿಂಗ, ಲಿಂಗತ್ವ ಹಾಗೂ ಲೈಂಗಿಕತೆಯ ಕುರಿತು ಅರ್ಥೈಸಿಕೊಳ್ಳುತ್ತಿರುವ ಯುವಮಂಗಳಮುಖಿಯರೊಂದಿಗೆ ಚರ್ಚಿಸುತ್ತ ಬದುಕುವ ಭರವಸೆಯನ್ನು ನೀಡಲಾಯಿತು. ಇದನ್ನು ಶ್ರೀಜಿತ್ ಸುಂದರಂ ನಿರ್ದೇಶಿಸಿದ್ದರು. ಅವರ ಮಾತು ಗಮನಾರ್ಹ: ‘‘ಐವತ್ತು ವರ್ಷ ದಾಟಿರುವ ಮಂಗಳಮುಖಿಯರು ತಮ್ಮ ಈಡೇರದ ಕನಸುಗಳನ್ನು ನನಸು ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ವಿಶಿಷ್ಟ ಯತ್ನವೇ ತಲ್ಕಿ ನಾಟಕ. ಇವರೆಲ್ಲರಿಗೂ ಇರುವ ಸಾಮ್ಯತೆ ಎಂದರೆ; ಸಮಯ ಹಾಗೂ ಸಮಾಜ ನೀಡಿರುವ ಗಾಯದ ಗುರುತುಗಳು. ಬೆಂಗಳೂರಿನ ವಿವಿಧ ಪ್ರದೇಶಗಳ ಜೊತೆಗೆ ಅವಿನಾಭಾವ ಸಂಬಂಧವಿರುವ ಅವರ ದೇಹದ ಮೇಲಿನ ಗುರುತುಗಳು, ಆ ಪ್ರದೇಶಗಳ ಗುರುತುಗಳಾಗಿ ಮಾರ್ಪಟ್ಟಿವೆ ಎನ್ನಬಹುದು. ಇವೆಲ್ಲ ಹಿಂಸೆ, ನೋವಿನ ನಡುವೆಯು ಹೋರಾಡಿ ಬದುಕುವ ಅವರ ಛಲವನ್ನು, ಆತ್ಮಸ್ಥೈರ್ಯವನ್ನು ಈ ನಾಟಕ ಕೊಡುತ್ತದೆ. ಈ ನಾಟಕದ ಮೂಲಕ ಮಂಗಳಮುಖಿಯರು ತಮ್ಮ ಮೆಚ್ಚುಗೆಯ ಅಡುಗೆ ಮಾಡುತ್ತ, ಹಾಡುತ್ತ, ಕಥೆಗಳನ್ನು ಹಂಚಿಕೊಳ್ಳುತ್ತ, ತಮ್ಮ ಜೀವನದ ಒಂದು ತುಣುಕನ್ನು ನಮಗೆ ಉಣಬಡಿಸಿದರು. ಇದರ ಮೂಲಕ ಅವರ ಸಮುದಾಯದ ವಿಶಿಷ್ಟ ಆಚರಣೆಗಳು, ಜೀವನಶೈಲಿ, ಸಂಸ್ಕೃತಿ, ಪರಿವಾರ, ಅವುಗಳಲ್ಲಿ ತುಂಬಿರುವ ಪ್ರೀತಿ, ಮಮತೆ ಹಾಗೂ ಕರುಣೆಯ ಭಾವಗಳನ್ನು ರಂಗದ ಮೇಲೆ ತರುವ ಅಪರೂಪದ ಪ್ರಯೋಗವಾಗಿತ್ತು’’.
ಈ ನಾಟಕದಲ್ಲಿ ಶಾಂತಮ್ಮ, ಲಕ್ಷ್ಮೀಯಮ್ಮ, ಎ.ರೇವತಿ, ಭಾನಮ್ಮ, ಶೋಭನಾಕುಮಾರಿ, ಸರವನ ಹಾಗೂ ಚಾಂದಿನಿ ನಟಿಸಿದ್ದರು.
ಇಂಥ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನಗಳನ್ನು ಕಂಡರೆ ಸಮಾಜ ಅವರನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.







