ಕೋಲಾಜ್‌ನಲ್ಲಿ ಕಳೆದುಹೋದ ಅಂಬೇಡ್ಕರ್

ನಾಟಕ: ಅಂಬೇಡ್ಕರ್ ಕೋಲಾಜ್
ರಚನೆ: ಕೋಟಿಗಾನಹಳ್ಳಿ ರಾಮಯ್ಯ
ನಿರ್ದೇಶನ: ಚಿದಂಬರರಾವ್ ಜಂಬೆ
ಸಹನಿರ್ದೇಶನ: ಅನಿಲ್ ರೇವೂರ
ರಂಗ ವಿನ್ಯಾಸ: ಎಚ್.ಕೆ. ದ್ವಾರಕಾನಾಥ್
ವಸ್ತ್ರವಿನ್ಯಾಸ: ಪ್ರಮೋದ್ ಶಿಗ್ಗಾಂವ
ಸಂಗೀತ: ಶ್ರೀನಿವಾಸ್ ಭಟ್ (ಚೀನಿ), ಚಂದ್ರಶೇಖರಾಚಾರ್ ಹೆಗ್ಗೋಠಾರ, ಕೃಷ್ಣ ಚೈತನ್ಯ, ಪ್ರಕಾಶ್ ಪೂಜಾರಿ, ಸಿಂಚನಾ
ರಂಗಸಜ್ಜಿಕೆ: ಜನಾರ್ದನ್
ಪರಿಕರ: ಕೆ.ಆರ್.ನಂದಿನಿ, ಪ್ರಶಾಂತ್ ಹೆಬಸೂರ
ಬೆಳಕಿನ ವಿನ್ಯಾಸ: ಮಹೇಶ್ ಕಲ್ಲತ್ತಿ
ಪ್ರಸ್ತುತಿ: ರಂಗಾಯಣ, ಮೈಸೂರು
ಪಾತ್ರಧಾರಿಗಳು: ರಘು ರಾಜಕುಮಾರ್, ನಿತಿನ್ ಸುಳ್ಯ, ಮೋಹಿತ್ ರವಿಕುಮಾರ್, ಕಾರ್ತಿಕ್ ಕಲ್ಲುಕುಟಿಕರ, ಮೃತ್ಯುಂಜಯ ಹಿರೇಮಠ, ಸಿಂಚನಾ, ಸ್ವಪ್ನಾ, ಕೌಶಿಕ್ ಕೆ.ಆರ್. ಪೇಟೆ, ಕಮಲಾಕರ, ಅಮೋಘ ಭಾರ್ಗವ, ರಕ್ಷಿತಾ, ಮೇಘರಾಜ್, ಭಾಸ್ಕರ್ ಪುಟ್ಟಣ್ಣ, ಕವಿತಾ ಎ.ಎಂ., ಚಾಂದಿನಿ ಪಿ.
‘‘ನನ್ನ ಅಕ್ಷರಗಳನ್ನು ನಿರ್ಲಕ್ಷಿಸಿ ಕೇವಲ ಭಾವಚಿತ್ರಕ್ಕಷ್ಟೇ ಬೆಲೆ ಕೊಡುವಷ್ಟು ಅವಿವೇಕಿಗಳಾದ್ರು ಈ ನನ್ನ ಜನ! ‘ನನ್ನ ಬುದ್ಧ ಮತ್ತು ದಮ್ಮ’ ಬೆಳಕು ಕಾಣಲಿ ಅಂತ ಪ್ರಧಾನಿ ನೆಹರೂ ಅವರಿಗೆ ಪತ್ರ ಬರೆದೆ ಧನಸಹಾಯ ಮಾಡಿ ಅಂತ. ದಮ್ಮಡಿ ದುಡ್ಡೂ ಇಲ್ಲ ಅಂದ್ರು. ಆದ್ರೂ ನಾನು ಬದುಕಿರುವಾಗಲೇ ಅದು ಬೆಳಕು ಕಾಣಲೇ ಇಲ್ಲ’’
‘‘ದತ್ತು, ನನ್ನ ಜನರಿಗೆ ಕೂಗಿ ಹೇಳು. ಅದೆಷ್ಟೇ ಅಡ್ಡಿ ಆತಂಕಗಳು ಬಂದರೂ ಎಷ್ಟೇ ಕಷ್ಟಕೋಟಲೆಗಳು ಎದುರಾದರೂ ನನ್ನ ವಿರುದ್ಧ ಹಲ್ಲೆ, ನಿಂದನೆಗಳೇ ನಡೆದರೂ ಕೋಮುವಾದಿಗಳು ಎಷ್ಟೇ ಅಪ್ರಪ್ರಚಾರ ನಡೆಸಿದರೂ ಅಷ್ಟೇ ಏಕೆ? ನನ್ನ ಒಡನಾಡಿಗಳೇ ದ್ರೋಹ ಎಸಗಿದರೂ ಕೊನೆ ಉಸಿರಿರುವವರೆಗೂ ದೇಶಕ್ಕಾಗಿ ಮತ್ತು ದಮನಿತ, ಪೀಡಿತ ಜನರ ವಿಮೋಚನೆಗಾಗಿ ಹೋರಾಡುತ್ತ, ಹೋರಾಟದ ರಥವನ್ನು ಇಲ್ಲಿಯವರೆಗೆ ಎಳೆದು ತಂದಿದ್ದೇನೆ. ಅದೇನೇ ಏಳುಬೀಳುಗಳಿರಲಿ ರಥ ಮುನ್ನಡೆಯಬೇಕು, ಮುನ್ನಡೆಯಲೇಬೇಕು. ರಥವನ್ನು ಮುನ್ನಡೆಸಲು ಸಾಧ್ಯವಾಗದಿದ್ದರೆ ಅದನ್ನು ಇದ್ದಲ್ಲಿಯೇ ಬಿಡಲಿ. ಏನೇ ಆದರೂ ಹಿಂದಕ್ಕೆ ಮಾತ್ರ ಎಳೆಯದಿರಲಿ’’
‘‘ಇಕ್ಬಾಲ್ (ಲಗೇಜು ಇಡುವ ಹುಡುಗ), ಈ ದೇಶ ಯಾವತ್ತೂ ಮರೆಯಲಾಗದಂತಹ ಕವಿಯೊಬ್ಬನ ಹೆಸರು ಇಟ್ಕೊಂಡಿದಿಯಾ! ಸಾರೇ ಜಹಾಂಸೆ ಅಚ್ಛಾ ಯೇ ಪ್ಯಾರೆ ಹಿಂದೂಸ್ತಾನ್ ಹಮಾರಾ. ಇಕ್ಬಾಲ್, ನಾನು ಐದು ವರ್ಷ ಯುರೋಪ್ ಮತ್ತು ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿದೆ. ಅಲ್ಲಿ ಯಾರೂ ನೀನು ಯಾವ ಜಾತಿ ಅಂತ ಕೇಳಲಿಲ್ಲ. ಆದ್ರೆ ಇಲ್ಲಿ ಜಾತಿ ಬಿಟ್ರೆ ಬೇರೆ ಇನ್ನೇನೂ ಕೇಳಲ್ಲ. ಆದ್ರೆ ಈ ಜಾತಿ ಅನ್ನೋ ಶಬ್ದಾನೇ ಮನುಷ್ಯ ಮನುಷ್ಯರನ್ನು ಎಷ್ಟು ದೂರ ಮಾಡುತ್ತೆ? ಅದರಲ್ಲೂ ಅಸ್ಪಶ್ಯನಾಗಿದ್ದರಂತೂ ಅವನಿಗೆ ಅವನೇ ಅಸ್ಪಶ್ಯ. ಅವನಿಗೆ ಅವನೇ ಒಂದು ಸಮಸ್ಯೆ. ಹಾಗೆಯೇ ಬೇರೆಯವರಿಗೂ ಸಮಸ್ಯೆ. ಈ ಜಾತಿ ಪದ್ಧತಿಗೆ ಭದ್ರ ಬುನಾದಿಯೇ ಈ ಧಾರ್ಮಿಕ ಪರಿಕಲ್ಪನೆ. ಅದು ನಾಶ ಆದಾಗ ಮಾತ್ರ ಈ ಜಾತೀಯತೆ ನಾಮಾವಶೇಷ ಆಗುತ್ತೆ’’
ಇಂಥ ಗಮನಾರ್ಹ ಮಾತುಗಳು ‘ಅಂಬೇಡ್ಕರ್ ಕೋಲಾಜ್’ ನಾಟಕದಲ್ಲಿವೆ. ಕಳೆದ ರವಿವಾರ (ಮಾರ್ಚ್ 1) ಮೈಸೂರಿನ ರಂಗಾಯಣದಲ್ಲಿ ಪ್ರದರ್ಶನಗೊಂಡಿತು. ಈ ಮೊದಲು ಅಂದರೆ ಮೈಸೂರು ರಂಗಾಯಣವು ಜನವರಿ 11ರಿಂದ 18ರ ವರೆಗೆ ಆಯೋಜಿಸಿದ್ದ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವದಲ್ಲೂ ಈ ನಾಟಕ ಪ್ರದರ್ಶನಗೊಂಡಿತ್ತು. ಇದಕ್ಕೂ ಮೊದಲು ಅಂದರೆ ನಾಲ್ಕು ವರ್ಷಗಳ ಹಿಂದೆ ಕೋಟಗಾನಹಳ್ಳಿ ರಾಮಯ್ಯ ಅವರು ತಮ್ಮ ಬುಡ್ಡಿದೀಪ ತಂಡದ ಮೂಲಕ ಈ ನಾಟಕವನ್ನು ಪ್ರದರ್ಶಿಸಿದ್ದರು. ಆಗಲೂ ಚಿದಂಬರರಾವ್ ಜಂಬೆ ಅವರೇ ನಿರ್ದೇಶಿಸಿದ್ದರು. ಇಂಥದೊಂದು ನಾಟಕ ಮತ್ತೆ ಮತ್ತೆ ಪ್ರದರ್ಶನಗೊಳ್ಳಬೇಕಾದ ಅಗತ್ಯವಿದೆ.
ನಾಟಕ ಆರಂಭವಾಗುವುದೇ ಕೋಟಿಗಾನಹಳ್ಳಿ ರಾಮಯ್ಯ ಅವರ ಪಾತ್ರಧಾರಿ ಪ್ರವೇಶದಿಂದ. ಕೋಲಾರದ ಗ್ರಾಮದೇವತೆ ಪಾಲುಕಮ್ಮ ಅಂದರೆ ಹಾಲು ಉಣಿಸುವ ಅಮ್ಮನ ಭೇಟಿಯಿಂದ. ರಾಮಯ್ಯ ಅವರ ಮನೆ ಸುಟ್ಟ ಸಂಗತಿಯ ಚರ್ಚೆ ನಡೆಯುವಾಗ ಪಾಲುಕಮ್ಮ ‘‘ಅವನು ಬಲು ದಲಿತ ನಾಟಕಕಾರನ ಮಗ’’ ಎಂದು ಬಯ್ಯುತ್ತಾಳೆ. ಆಗ ಅಂಬೇಡ್ಕರ್ ‘‘ಶಟ್ ಅಪ್ ಲೇಡಿ ವಿತ್ ಲ್ಯಾಂಪ್. ದಲಿತರು ಅಂದ್ರೆ ಮನುಷ್ಯರಲ್ವಾ? ಕವಿ, ನಾಟಕಕಾರ, ಲೇಖಕರು ಅಂದ್ರೆ ಅಷ್ಟೊಂದು ಹಗರವಾಗಿ ಕಾಣಬಾರದು. ಸಮಾಜದಲ್ಲಿ ಅವರಿಗೂ ಒಂದು ಕಿಮ್ಮತ್ತಿದೆ. ಸರಕಾರ ಮಾಡಿದ ಹಾಗೆ ಕಲಾವಿದರನ್ನು ಭಿಕ್ಷುಕರನ್ನಾಗಿ ಮಾಡಬೇಡಿ. ನಿನ್ನ ಕೈಯಲ್ಲಿರುವ ದೀಪಾನೂ ಒಂದೆ, ಇವ್ರೂ ಒಂದೇ ಸಮಾಜಕ್ಕೆ’’ ಎಂದು ತಿಳುವಳಿಕೆ ಹೇಳುತ್ತಾರೆ. ಆಮೇಲಿನ ದೃಶ್ಯ; ಬಾಲಕ ಅಂಬೇಡ್ಕರ್ ಶಾಲೆಯ ಹೊರಗೆ ಕುಳಿತು ಕಲಿಯುವುದು. ಕುಡಿಯಲು ನೀರು ಕೊಡದಿರುವುದು, ಸಂಸ್ಕೃತ ಕಲಿಯುತ್ತೇನೆಂದಾಗ ‘‘ನಿಮ್ಮಂಥ ಪಾಯಖಾನೆ ತೊಳೆಯುವವರಿಗೆ ಸಂಸ್ಕೃತ ಬೇರೆ ಕೇಡು’’ ಎಂದು ಅವಮಾನಿತರಾಗುತ್ತಾರೆ.
ನಂತರ ಸೈಕಲ್ ಶಾಪ್ ದೃಶ್ಯದಲ್ಲಿ ಅಂಬೇಡ್ಕರ್ ಹಾಗೂ ಬಸವಣ್ಣನವರ ಭೇಟಿಯಿದೆ. ಬಸವಣ್ಣನಿಗೆ ಅಂಬೇಡ್ಕರ್ ‘‘ಹಲೋ ಮಿಸ್ಟರ್, ಏನು ವಿಚಾರ ಮಾಡಾಕ ಹತ್ತೀರಿ?’’ ಎಂದು ಕೇಳುತ್ತಾರೆ.
ಬಸವಣ್ಣ ‘‘ನಿಮ್ಮ ಸೈಕಲಿಗೆ ಸ್ಟ್ಯಾಂಡ್ ಯಾಕಿಲ್ಲ?’’ ಎಂದು ಕೇಳುತ್ತಾರೆ.
ಅಂಬೇಡ್ಕರ್: ‘‘ಇತ್ರಿ. ಪೂನಾ ಫ್ಯಾಕ್ಟಿನೊಳಗೆ ಮಿಸ್ಟರ್ ಗಾಂಧಿ ಕಸಗೊಂಡ್ರು. ಡೋಂಟ್ ಬಾದರ್ ಟೂ ಮಚ್ ಆಫ್ ಅದರ್ಸ್. ಹಿರೀಕರೆ ನ್ಯೂಸೆನ್ಸ್ ಕ್ರಿಯೇಟ್ ಮಾಡಿಬಿಡ್ತಾರೆ’’ ಎನ್ನುತ್ತಾರೆ. ಹೀಗೆ ಸಾಗುವ ನಾಟಕದಲ್ಲಿ ಕೊನೆಗೆ ಕಾರ್ಲ್ ಮಾರ್ಕ್ಸ್ ಬರುತ್ತಾರೆ. ಅಂಬೇಡ್ಕರ್ ಮನೆ ಹರಾಜು ಹಾಕಿದ್ದನ್ನು ನೆನಪಿಸುವ ಹಾಗೆ ಕಾರ್ಲ್ ಮಾರ್ಕ್ಸ್ ಮನೆ ಹರಾಜಾಗುವುದನ್ನು ತೋರಿಸಲಾಗುವುದು.
ಎರಡು ಗಂಟೆಯ ಈ ನಾಟಕದಲ್ಲಿ ನೆನಪಲ್ಲಿ ಉಳಿಯುವ ದೃಶ್ಯವೆಂದರೆ; ಅಂಬೇಡ್ಕರ್-ಮಾಯಿಸ್ವಾಮಿ ಹಾಗೂ ರಮಾಬಾಯಿ ದೃಶ್ಯ. ಅವರ ಪ್ರೀತಿಯ ಮಗ ರಾಜರತ್ನಂ ತೀರಿಕೊಂಡಿರುತ್ತಾನೆ ಹಾಗೆಯೇ ರಮಾಬಾಯಿ ಕೂಡಾ. ಅವರ ಆತ್ಮಗಳನ್ನು ಅಂಬೇಡ್ಕರ್ ಭೇಟಿಯಾಗಿ ಮಾತುಕತೆಯಾಡುವ ದೃಶ್ಯವನ್ನು ಕಟ್ಟಲಾಗಿದೆ. ಇದಕ್ಕೂ ಮೊದಲು ಕುಬ್ಜ ಆಲದಮರವೊಂದರ ಎದುರು ಅಂಬೇಡ್ಕರ್ ‘‘ಆಲದಮರ ಎಂಥಾ ಭವ್ಯತೆ, ವಿಶಾಲತೆ! ಆದರೆ ಇದು ಕುಬ್ಜ ಆಲದಮರ. ಓ ನನ್ನ ಕರುಣಾಜನಕ ಕುಬ್ಜ ಆಲದಮರವೆ? ನಿನ್ನ ರೆಂಬೆಕೊಂಬೆ, ಬೊಡ್ಡೆಬೇರುಗಳಲ್ಲಿ ಸಿಂಬೆ ಸುತ್ತಿ ಗುದಮುರಗಿ ಹಾಕಿಕೊಂಡ ಆ ನಿನ್ನ ಗಂಟು ಪ್ರಾಚೀನ ರೋಗಾಣುಗಳ ಗೂಡು. ಮೊದಮೊದಲು ನಿನ್ನ ಈ ಕುರೂಪವನ್ನು ಕಿಂಚಿತ್ತಾದರೂ ಕುಂದುಗೊಳಿಸಬೇಕೆಂಬ ಉಮೇದು ಇದ್ದುದು ನಿಜ. ಆದರೆ ಅದು ಈಗ ನೀನೇ ಸೃಷ್ಟಿಸಿಕೊಂಡ ನನ್ನದೇ ರೋಗ. ನಿನ್ನ ಈ ರೋಗಕ್ಕೂ ನನಗೂ ಯಾವುದೇ ಬಾದರಾಯಣ ಸಂಬಂಧವಿಲ್ಲ. ನೀನೇ ಬೇರೆ. ನಾನೇ ಬೇರೆ. ನನ್ನವರ ಅಸ್ತಿತ್ವವನ್ನು ಕ್ಷುಲ್ಲಕಗೊಳಿಸುವ, ಕುಟಿಲ ತಂತ್ರಗಳ ಸೋಂಕು ನನಗೆ ಬೇಕಿಲ್ಲ. ರೂಪಾಂತರಗೊಳ್ಳಲು ಅರಿಯದ ಕುಬ್ಜತೆಯ ಮೇರು ಮೆರೆಯುತ್ತಿರುವ ಓ ರೋಗಗ್ರಸ್ತ ನಿಂತ ನೀರಿನಂತಿರುವ ಮರವೇ ಇನ್ನು ನಾನು ವ್ಯರ್ಥ ವೈದ್ಯನಾಗಲಾರೆ. ರೋಗ ಉಲ್ಬಣವಾಗಿ, ವ್ಯಾಪಕವಾಗಿ ಹರಡಿದ ಮೇಲೆ ಅದಕ್ಕೆ ನೀಡುವ ಮದ್ದು ಕೂಡಾ ಅದಕ್ಕೆ ಆಹಾರವಾಗಿಬಿಡುವ ಅಪಾಯವಿದೆ. ಆದರೂ ಮತ್ತೆ ಬಂದು ನಿಂತಿದ್ದೆಯಲ್ಲ? ಅದೇ ರೋಗವನ್ನು ಗೂಡಾಗಿ ಹೊತ್ತು. ನಿನ್ನ ಬೇರುಗಳು ನೆಲದಿಂದ ಹೀರುವುದು ನೀರು ಗೊಬ್ಬರವನ್ನಲ್ಲ. ನತದೃಷ್ಟ ಪೀಳಿಗೆಗಳ ಪ್ರಾಣವನ್ನು. ನಿನ್ನ ದೇಹದ ಮೇಲೆ ಅಂಟಿರುವ ರಕ್ತದ ಕಲೆಗಳನ್ನು ನಾನೆಂದೂ ಕ್ಷಮಿಸುವುದಿಲ್ಲ. ನಾನೆಂದೂ ನಿನ್ನ ನೆರಳನ್ನು ಆಶ್ರಯಿಸುವುದಿಲ್ಲ. ನಾನು ಮಾತ್ರ ಅಲ್ಲ; ನನ್ನವರಾರೂ ನಿನ್ನ ನೆರಳನ್ನು ಆಶ್ರಯಿಸುವುದಿಲ್ಲ’’ ಎನ್ನುವುದು ಮಹತ್ವದ ಮಾತು.
ಅಂಬೇಡ್ಕರ್ ಪಾತ್ರಕ್ಕೆ ರಘು ರಾಜಕುಮಾರ್ ಒಪ್ಪಿದ್ದಾರೆ. ಆದರೆ ಅವರು ಕೊಂಚ ತಾಳ್ಮೆಯಿಂದ, ನಿಧಾನವಾಗಿ ಸಂಭಾಷಣೆ ಹೇಳಿದರೆ ಪರಿಣಾಮ ಹೆಚ್ಚೀತು. ಉಳಿದ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆದರೆ ಕೋಲಾಜ್ ಆರ್ಭಟದಲ್ಲಿ ಬಾಬಾಸಾಹೇಬರು ಎಲ್ಲಿ ಎಂದು ಹುಡುಕಬೇಕು. ಇದರಿಂದ ಕೋಲಾಜ್ ಎನ್ನುವುದೇ ಈ ನಾಟಕದ ತೊಡಕು. ಇದು ಕಲಾವಿದರಿಗೂ ಅನುಭವವಾಗಿರಬಹುದು. ಹೀಗಾಗಿ ಕೋಲಾಜ್‌ಗಳಲ್ಲಿ ಬಾಬಾಸಾಹೇಬರು ಮಿಸ್ ಆಗದ ಹಾಗೆ ನೋಡಿಕೊಳ್ಳಬೇಕಿದೆ. ಅಲ್ಲದೆ ಅಬ್ಬರದ ಸಂಗೀತ, ಹಾಡು, ನೃತ್ಯ ಬೇಕಿಲ್ಲವೇನೋ?







