ಹೃದಯ ಹೊನ್ನ ಬಟ್ಟಲು ಕೊಂಡು...

ಮಹಾದೇವ ಹೊಸೂರ ಸೇರಿದಂತೆ ಜಗದೀಶ್ ಮಾಂಬಳ್ಳಿ, ಕುಮಾರ ಗರಗ ಅವರು ಸ್ತ್ರೀಯರ ನಯನಾಜೂಕು, ವಯ್ಯಾರ, ಬಡಿವಾರ ಹಾಗೂ ನೃತ್ಯಗಳನ್ನು ರಂಗದ ಮೇಲೆ ತೋರಿಸುವುದಕ್ಕೆ ಪ್ರೇಕ್ಷಕರಿಂದ ಜೋರಾದ ಚಪ್ಪಾಳೆ ಗಿಟ್ಟಿಸುತ್ತಾರೆ. ಅದರಲ್ಲೂ ಮಹಿಳಾ ಪ್ರೇಕ್ಷಕರು ಬೆರಗಾಗುತ್ತಾರೆ. ಇದೇ ಈ ಕಂಪನಿಯ ವಿಶೇಷ ಮತ್ತು ವಿಶಿಷ್ಟ.
‘‘ನಾಕವೇ ಕಡಿದು ಬಿದ್ದಿಹುದು
ನೋಡಬನ್ನಿರೊ ನಿಮ್ಮ
ಹೃದಯ ಹೊನ್ನ ಬಟ್ಟಲು ಕೊಂಡು’’
ಎಂದು ಕುವೆಂಪು ಅವರ ಸಾಲುಗಳನ್ನು ಉದಾಹರಿಸಿದವರು ಚಿಂದೋಡಿ ಬಂಗಾರೇಶ. ಅವರು ಕೆಬಿಆರ್ ಡ್ರಾಮಾ ಕಂಪನಿಯ ಪ್ರಧಾನ ಸಂಚಾಲಕರು. ಹಾಗೆ ಅವರು ಹೇಳಿದ್ದು ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿಯಲ್ಲಿ ಮೊಕ್ಕಾಂ ಮಾಡಿರುವ ಗದಗದ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಶ್ರೀ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘದ ‘ಅಕ್ಕ ಅಂಗಾರ ತಂಗಿ ಬಂಗಾರ’ ನಾಟಕವನ್ನು ನೋಡಿದ ನಂತರ. ಹೀಗೆಂದಾಗ ಪೂರ್ತಿ ನಾಟಕ ಮುಗಿದಿರಲಿಲ್ಲ. ಕೊನೆಯ ದೃಶ್ಯ ಬಾಕಿಯಿರುವಾಗ ಆಯೋಜಿಸಿದ ಪುಟ್ಟ ಸಮಾರಂಭದಲ್ಲಿ ಅವರು ಮಾತನಾಡಿದ್ದು ಗಮನಾರ್ಹ. ಕಂಪನಿ ನಾಟಕಗಳಲ್ಲಿ ಇನ್ನೊಂದು ದೃಶ್ಯ ಬಾಕಿಯಿರುವಾಗ ವ್ಯವಸ್ಥಾಪಕರೊ ಇಲ್ಲವೆ ಹಿರಿಯ ಕಲಾವಿದರೊಬ್ಬರು ಬಂದು ಪ್ರೇಕ್ಷಕರು ಪ್ರೋತ್ಸಾಹಿಸಿದ್ದಕ್ಕೆ ಕೃತಜ್ಞತೆ ಹೇಳುವುದು ಲಾಗಾಯ್ತಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಏಣಗಿ ಬಾಳಪ್ಪನವರು ‘‘ಹೋಗಿ ಬರ್ತೇನ್ರಯ್ಯ ನಮ್ಮೂರಿಗೆ ಎಲ್ಲರಿಗೂ ಶರಣಾರ್ಥಿ’’ ಎಂದು ಜೋಳದರಾಶಿ ದೊಡ್ಡನಗೌಡರು ತಮ್ಮ ಕುರಿತು ತಾವೇ ಬರೆದುಕೊಂಡ ಚರಮಗೀತೆಯನ್ನು ಹಾಡುತ್ತಿದ್ದರು. ಹೀಗೆಯೇ ಚಿತ್ತರಗಿ ಗಂಗಾಧರ ಶಾಸ್ತ್ರಿಗಳು ಪ್ರವಚನ ಹೇಳುತ್ತಿದ್ದರು. ಈ ಪರಂಪರೆಯನ್ನು ಕಂಪನಿ ನಾಟಕಗಳು ಮುಂದುವರಿಸಿಕೊಂಡು ಬಂದಿವೆ. ಹೀಗೆಯೇ ಗದಗಿನ ಅಜ್ಜಾವರ ಕಂಪನಿಯೆಂದೇ ಪ್ರಸಿದ್ಧವಾದ ಶ್ರೀ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘವೂ ಮುಂದುವರಿಸಿಕೊಂಡು ಬಂದಿದೆ.
ಕಳೆದ ರವಿವಾರ ಹಿರೇಸಿಂದೋಗಿಯಲ್ಲಿ ಅಜ್ಜಾವರ ಕಂಪನಿಯ ‘ಅಕ್ಕ ಅಂಗಾರ ತಂಗಿ ಬಂಗಾರ’ ಎನ್ನುವ ನಾಟಕ ಮುಗಿಯುವ ಮುನ್ನ ಅಂದರೆ ಕೊನೆಯ ದೃಶ್ಯ ಬಾಕಿಯಿರುವಾಗ ಚಿಂದೋಡಿ ಬಂಗಾರೇಶ್ ಅವರು ಮಾತನಾಡಿದ್ದು ಮುಖ್ಯವಾಗಿತ್ತು. ‘‘ರಂಗಭೂಮಿಯಲ್ಲಿ ಕಲಾವಿದರಿಂದ ಕಲೆಯೆಂಬ ಅಮೃತ ಸಿಂಚನವಾಗುತ್ತಿದೆ. ಪ್ರೇಕ್ಷಕರು ಹೊನ್ನಬಟ್ಟಲು ತಂದು ತುಂಬಿಕೊಳ್ಳಿ; ಜೀವನ ಉದ್ಧಾರಕ್ಕೆ’’ ಎಂದು ಅವರು ಸಲಹೆ ನೀಡಿದ್ದಕ್ಕೆ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿದರು. ಅವರು ಮಾತು ಮುಂದುವರಿಸಿ ‘‘ನಮ್ಮ ಹೃದಯದಲ್ಲಿ ಎರಡು ಕೋಣೆಗಳಿರುತ್ತವೆ. ಒಂದು ರಮಿಸು; ಇನ್ನೊಂದು ವಿರಮಿಸು. ರಮಿಸು ಎಂದರೆ ಕಲೆಯನ್ನು ಆರಾಧಿಸು, ಪ್ರೀತಿಸು. ಹೀಗೆ ಆರಾಧಿಸುತ್ತ ವಿರಮಿಸುವುದು ಅಂದರೆ ದೈವತ್ವಕ್ಕೆ ಹೋಗುವುದು ಎಂದರ್ಥ. ಇದರೊಂದಿಗೆ ಬಣ್ಣದ ಬದುಕಿನಿಂದ ಕಲಾವಿದರು ಸಮಾಜದ ಓರೆಕೋರೆಗಳನ್ನು ತಿದ್ದುತ್ತಾರೆ. ಅದರಲ್ಲೂ ನಾಟಕದ ಸಾಹಿತ್ಯದ ಮೂಲಕ ಜ್ಯೋತಿ ಪ್ರಜ್ವಲಿಸುತ್ತದೆ. ಇಂಥ ಬೆಳಕನ್ನು ಕಲಾವಿದರು ತಮ್ಮ ಅಭಿನಯದ ಮೂಲಕ, ನಾಟಕದ ಮೂಲಕ ನೀಡುತ್ತಾರೆ. ಹೀಗೆಂದಾಗ ಕಲಾವಿದರು ಮತ್ತು ಪ್ರೇಕ್ಷಕರು ಹಾಲು-ಸಕ್ಕರೆಯಂತೆ. ಅವೆರಡೂ ಹದವಾಗಿ ಬೆರೆಯಬೇಕು. ಹಾಗೆ ಬೆರೆತಾಗಲೇ ಚೆಂದ. ಆದರೆ ಕಲಾವಿದರಿಗೆ ಅಹಂಕಾರ ಬರಬಾರದು. ನಾನು ಎಂಬುದು ಅಳಿಯಬೇಕು’’ ಎನ್ನುವ ತಿಳಿವಳಿಕೆಯನ್ನೂ ನೀಡಿದರು. ಅವರ ಸಂಬಂಧಿ ಚಿಂದೋಡಿ ಮಧುಕೇಶ್ವರ ಅವರು ‘‘ಬೆಳ್ಳಿಯ ದಾರದಲ್ಲಿ ಬಂಗಾರದ ಮಣಿಗಳನ್ನು ಪೋಣಿಸಿ, ವಜ್ರದ ಕವಚವಿಟ್ಟ ಹಾಗೆ ಈ ನಾಟಕ’’ ಎಂದು ಹೊಗಳಿದರು.
ಮಹಾದೇವ ಹೊಸೂರ ರಚನೆ ಹಾಗೂ ನಿರ್ದೇಶನದ ‘ಅಕ್ಕ ಅಂಗಾರ ತಂಗಿ ಬಂಗಾರ’ ನಾಟಕದ ತಿರುಳು ಸರಳ. ಪಂಚತಂತ್ರದ ಕಥೆಯಲ್ಲಿ ಬರುವ ಎರಡು ಗಿಣಿಗಳ ಕಥೆ ನಿಮಗೆ ಗೊತ್ತಿರಬಹುದು. ಹಾಗೆಯೇ ಈ ನಾಟಕದಲ್ಲಿ ಅಕ್ಕ ಯಾರ ಮನೆ ಸೇರುತ್ತಾಳೆ? ತಂಗಿ ಯಾರನ್ನು ಮದುವೆಯಾಗುತ್ತಾಳೆ ಎನ್ನುವ ಈ ನಾಟಕ ಹೃದಯಸ್ಪರ್ಶಿಯಾಗಿದೆ. ಅನೇಕ ಮನಮಿಡಿಯುವ, ಜೊತೆಗೆ ಗಮನ ಸೆಳೆಯುವ ದೃಶ್ಯಗಳಿವೆ. ಎಲ್ಲಕ್ಕೂ ಮುಖ್ಯವಾಗಿ ನಾಯಕಿ ಪಾತ್ರದಲ್ಲಿ ಮಹಾದೇವ ಹೊಸೂರ, ಹಾಸ್ಯಪಾತ್ರಗಳಲ್ಲಿ ಜಗದೀಶ ಮಾಂಬಳ್ಳಿ ಹಾಗೂ ಕುಮಾರ ಗರಗ ಸೋದರಿಯರಾಗಿ ಮಿಂಚುತ್ತಾರೆ. ಈ ಸೋದರಿಯರ ಗಂಡನಾಗಿ ಸಾಥಿಯಾಗಿದ್ದಾರೆ ಸುಮಂತ್ ಶಿಗ್ಗಾವಿ. ಸೋದರಿಯರ ತಂದೆಯ ಪಾತ್ರ ಕುಮಾರಸ್ವಾಮಿ ಹೊಸೂರಮಠ ಅವರದು. ರತನ್‌ಲಾಲ್ ಪಾತ್ರಧಾರಿಯಾಗಿ ಮಹೇಶ ಗದಗಿನಮಠ ಮನದಲ್ಲಿ ಉಳಿಯುತ್ತಾರೆ. ಶೇಡಜಿಯಾಗಿ ಮಹಾಂತಯ್ಯ ಶಶಿಮಠ ಚಪ್ಪಾಳೆ ಗಿಟ್ಟಿಸುತ್ತಾರೆ. ಶೀಲಾ ಪಾತ್ರಧಾರಿಯಾಗಿ ಮಹಾಂತೇಶ ಚಿಕ್ಕೋಡಿ ಉಳಿದಂತೆ ರಾಚಯಸ್ವಾಮಿ ಬಡ್ನಿ, ನೂರುದ್ದಿನ್ ವಣಗೇರಿ, ಶಿವಕುಮಾರ ಐಹೊಳೆ, ಲಿಂಗನಗೌಡ ಕದಂಬನಹಳ್ಳಿ, ಪ್ರಭುಸ್ವಾಮಿ ಬರದೂರ, ಮಾರುತಿ ಬೆಂಗೇರಿ ಹಾಗೂ ಶ್ರೀಧರ ಹೆಗಡೆ ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ಸಂಗೀತದಲ್ಲಿ ರಿದಂ ಪ್ಯಾಡ್ ಫ್ರಾನ್ಸಿಸ್ ಕೌಜಗೇರಿ ಹಾಗೂ ಕ್ಯಾಶಿಯೊ ಪ್ರಮೋದ್ ಸಾಗರ ಅವರದು. ಧ್ವನಿ ಹಾಗೂ ಬೆಳಕು ನಿರ್ವಹಣೆ ಪವನರಡ್ಡಿ ಸಿಂಗಟಾಲೂರ ಮತ್ತು ಯಲ್ಲಪ್ಪ ಅಳವಂಡಿ.
ಮೂರು ತಾಸಿನ ಈ ನಾಟಕವನ್ನು ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆ ಮೂಲಕ ಪ್ರೋತ್ಸಾಹಿಸುತ್ತಾರೆ. ಹಿರೇಸಿಂದೋಗಿಯಲ್ಲದೆ ಸುತ್ತಲಿನ ಗ್ರಾಮಸ್ಥರು ತಪ್ಪದೇ ಈ ನಾಟಕ ನೋಡಿದವರಿದ್ದಾರೆ ಮತ್ತು ನೋಡುತ್ತಾರೆ. ಎಂಟು-ಹತ್ತು ಸಾವಿರ ಜನಸಂಖ್ಯೆಯಿರುವ, ಹೋಬಳಿಯಾಗಿರುವ ಹಿರೇಸಿಂದೋಗಿಯಲ್ಲಿಯೇ ಮೊಕ್ಕಾಂ ಮಾಡಲು ಮುಖ್ಯ ಕಾರಣ; ಪುಟ್ಟರಾಜ ಗವಾಯಿಗಳ ಕಾಲದಲ್ಲಿ ಎರಡು ಬಾರಿ, ನಲವತ್ತು ವರ್ಷಗಳ ನಂತರ ಮೂರನೆಯ ಬಾರಿಗೆ ಈ ಊರಲ್ಲಿ ಕ್ಯಾಂಪು ಹಾಕಲಾಗಿದೆ. ಇದಕ್ಕೆ ಈ ಕಂಪನಿ ಮೇಲಿನ ಜನರ ಪ್ರೀತಿ ಕಾರಣ. ‘‘ನಮ್ಮ ಗ್ರಾಮದ ಹಿರಿಯರು ಅಜ್ಜಾವರ ಕಂಪನಿಗೆ ಆಹ್ವಾನ ನೀಡಿದರು. ಇದರೊಂದಿಗೆ ಕಲಾವಿದರ ಸಂಬಳ ಕಡಿಮೆ ಜೊತೆಗೆ ಸಣ್ಣ ಊರಲ್ಲಿ ಖರ್ಚು ಕಡಿಮೆ. ಹೀಗಾಗಿ ನಗರಗಳಲ್ಲಿ ಮೊಕ್ಕಾಂ ಮಾಡಿ ನಾಟಕದ ಉತ್ಪನ್ನಕ್ಕಿಂತ ಖರ್ಚುವೆಚ್ಚಗಳೇ ಹೆಚ್ಚಾಗುವಾಗ ಹಿರೇಸಿಂದೋಗಿಯಲ್ಲಿ ಕಳೆದ ಎಂಟು ತಿಂಗಳಿಂದ ಅಜ್ಜಾವರ ಕಂಪನಿ ಇದೆ. ಇದು ಇದೆ ಎಂಬುದೇ ನಮಗೆಲ್ಲ ಹೆಮ್ಮೆ’’ ಎನ್ನುವ ಖುಷಿ ಯುವ ಉದ್ಯಮಿ ಅಶೋಕ ಗದ್ದಿ ಅವರದು.
ಪ್ರತೀ ರವಿವಾರ ಸಂಜೆ ಆರೂವರೆಗೆ ಹಾಗೂ ರಾತ್ರಿ ಹತ್ತೂವರೆಗೆ ಎರಡು ನಾಟಕದ ಪ್ರದರ್ಶನಗಳಿರುತ್ತವೆ. ಉಳಿದ ದಿನಗಳಲ್ಲಿ ರಾತ್ರಿ ಹತ್ತೂವರೆಗೆ ಮಾತ್ರ ಪ್ರದರ್ಶನವಿರುತ್ತದೆ. ಮುಖ್ಯವಾಗಿ ಮಹಾದೇವ ಹೊಸೂರ ಸೇರಿದಂತೆ ಜಗದೀಶ್ ಮಾಂಬಳ್ಳಿ, ಕುಮಾರ ಗರಗ ಅವರು ಸ್ತ್ರೀಯರ ನಯನಾಜೂಕು, ವಯ್ಯಾರ, ಬಡಿವಾರ ಹಾಗೂ ನೃತ್ಯಗಳನ್ನು ರಂಗದ ಮೇಲೆ ತೋರಿಸುವುದಕ್ಕೆ ಪ್ರೇಕ್ಷಕರಿಂದ ಜೋರಾದ ಚಪ್ಪಾಳೆ ಗಿಟ್ಟಿಸುತ್ತಾರೆ. ಅದರಲ್ಲೂ ಮಹಿಳಾ ಪ್ರೇಕ್ಷಕರು ಬೆರಗಾಗುತ್ತಾರೆ. ಇದೇ ಈ ಕಂಪನಿಯ ವಿಶೇಷ ಮತ್ತು ವಿಶಿಷ್ಟ. ಸದ್ಯಕ್ಕೆ ಮಹಾದೇವ ಹೊಸೂರ ಅವರ ರಚನೆ ಹಾಗೂ ನಿರ್ದೇಶನದ ಮೂರನೇ ನಾಟಕ ‘ಸುಪಾರಿ ಸರೋಜ ಅರ್ಥಾತ್ ಮಗು ನಿನ್ನದು ಮಡದಿ ನನ್ನವಳು’ ತಾಲೀಮು ನಡೆದಿದ್ದು, ಡಿಸೆಂಬರ್ 14ರಿಂದ ರಂಗಕ್ಕೇರಲಿದೆ. ನಂತರ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಜನವರಿ 3ರಿಂದ ಒಂದು ತಿಂಗಳವರೆಗೆ ಇದೇ ನಾಟಕ ಪ್ರದರ್ಶನಗೊಳ್ಳಲಿದೆ. ಅಲ್ಲಿಂದ ಹಿರೇಸಿಂದೋಗಿಗೆ ಮರಳಿ ‘ಮತ್ತೊಮ್ಮೆ ಬಾ ಮುತ್ತೈದೆಯಾಗಿ’ ನಾಟಕವನ್ನು (ಇದು ಮಹಾದೇವ ಹೊಸೂರ ರಚನೆಯ ಮೊದಲ ನಾಟಕ) ಪ್ರದರ್ಶಿಸಲಿದ್ದಾರೆ.
ಆದರೆ ಈ ಬಗೆಯ ಸಾಮಾಜಿಕ ನಾಟಕಗಳಿಗಿಂತ ಈ ಕಂಪನಿಯ ಹೆಸರಾಂತ ‘ಹೇಮರಡ್ಡಿ ಮಲ್ಲಮ್ಮ’ ನಾಟಕ ಸೇರಿದಂತೆ ಪೌರಾಣಿಕ ನಾಟಕಗಳನ್ನು ಈ ಕಂಪನಿಯು ಪ್ರದರ್ಶಿಸಲಿ. ಈಮೂಲಕ ಪೌರಾಣಿಕ ನಾಟಕ ಮತ್ತೆ ರಂಗದ ಮೇಲೆ ಬರಲೆಂದು ಒತ್ತಾಯಿಸುವೆ.







