ಅಮರ ಪ್ರೇಮದ ಆಖ್ಯಾನಕ್ಕೆ ಮಧುರ ವ್ಯಾಖ್ಯಾನ ‘ಚಾರುವಸಂತ’
‘‘ಸಜ್ಜನರ ಹೆಂಡತಿಯ ಒಡವೆಯಾಗಲಿ
ದೇಹದ ಒಡವೆಯಾಗಲಿ
ದೇವರ ಒಡವೆಯಾಗಲಿ
ವೀರರ ಆಯುಧವಾಗಲಿ
ಒತ್ತೆ ನೀಡುವುದು, ಪಡೆಯುವುದು
ವೇಶ್ಯಾಶಾಸ್ತ್ರದಲ್ಲಿ ಇಲ್ಲ. ಹಾಗಾಗಿ ಅವುಗಳನ್ನು ನಾವು ಮುಟ್ಟುವುದಿಲ್ಲ.’’
-ಹೀಗೆ ವಸಂತತಿಲಕೆ ತಾಯಿ ಅನಾಮಿಕೆ ಹೇಳುವ ಮಾತು ಗಮನಾರ್ಹ. ಇದು ಈ ನಾಟಕದ ಮಹತ್ವದ ಮಾತು ಕೂಡಾ. ಗೌರವಾನ್ವಿತ ವೈಶ್ಯ ಮನೆತನದ ಚಾರುದತ್ತನು ಮದುವೆಯಾದರೂ ಕಾವ್ಯ ರಚನೆಯಲ್ಲಿ ತೊಡಗಿಕೊಂಡಿರುವಾಗ ಚಾರುದತ್ತನ ತಾಯಿ ದೇವಿಲೆ ಕಳವಳಗೊಂಡು ತನ್ನ ತಮ್ಮನೊಂದಿಗೆ ಮಾತನಾಡುತ್ತಾಳೆ. ಆಗ ಆತ ಚಾರುದತ್ತನನ್ನು ಕರೆದುಕೊಂಡು ಹೋಗಿದ್ದು
ವೇಶ್ಯೆ ವಸಂತತಿಲಕೆಯ ಮನೆಗೆ. ಮೊದಲಿಗೆ ಒಲಿಯದ ಚಾರುದತ್ತ ನಂತರ ಒಲಿಯುತ್ತಾನೆ. ತನ್ನ ಮನೆಯನ್ನು ಮರೆತು ವಸಂತತಿಲಕೆ ಮನೆಯಲ್ಲಿಯೇ ಉಳಿಯುತ್ತಾನೆ. ಆಗ ಆತನ ಗೆಳೆಯರು ಕರೆಯಲು ಬಂದಾಗ ಅನಾಮಿಕೆ ‘‘ಬರಲೊಲ್ಲನು ಚಾರುದತ್ತ, ಅಂವ ಬರುಹರೆ ನಾನೇ ಕಳುಹುವೆ’’ ಎಂದು ಹೇಳುತ್ತಾಳೆ. ಕೊನೆಗೆ ಚಾರುದತ್ತನ ತಾಯಿ ಹಾಗೂ ಹೆಂಡತಿ ತಮ್ಮ ತಾಳಿಯನ್ನೂ ತೆಗೆದುಕೊಟ್ಟು ಕಳುಹಿಸುತ್ತಾರೆ. ಇದನ್ನು ಕಂಡಾಗ ಅನಾಮಿಕೆ ಮೇಲಿನ ಮಾತನ್ನು ಹೇಳುತ್ತಾಳೆ. ಕಾಣಿಕೆ ಬರುವುದು ನಿಂತಾಗ ಅನಾಮಿಕೆಯು ಚಾರುದತ್ತನನ್ನು ಮನೆಯಿಂದ ಹೊರಗೆ ಹಾಕಿರೆಂದು ಸಹಾಯಕರಿಗೆ ತಿಳಿಸುತ್ತಾಳೆ. ಹೇಗೆಂದರೆ ಚಾರುದತ್ತ ಹಾಗೂ ವಸಂತತಿಲಕೆ ಒಟ್ಟಿಗೇ ಇರುವಾಗ ಅವರಿಗೆ ಎಳನೀರಲ್ಲಿ ಮತ್ತು ಬರಿಸುವ ಔಷಧಿ ಸೇರಿಸುವ ಮೂಲಕ. ಕುಡಿದ ನಂತರ ಪ್ರಜ್ಞೆ ಕಳೆದುಕೊಂಡ ಚಾರುದತ್ತನನ್ನು ಮನೆಯಿಂದ ಹೊರಗಲ್ಲದೆ ತಿಪ್ಪೆಯಲ್ಲಿ ಬಿಸಾಡಿ ಹೋಗುತ್ತಾರೆ. ಎಚ್ಚರವಾದಾಗ ನಿಜಾಂಶವನ್ನು ಅರಿಯುತ್ತಾನೆ. ಅತ್ತ ವಸಂತತಿಲಕೆಗೆ ಪ್ರಜ್ಞೆ ಬಂದ ಕೂಡಲೇ ಚಾರುದತ್ತನನ್ನು ಹುಡುಕುತ್ತಾಳೆ. ಸಿಗದಾಗ ತನ್ನ ತಾಯಿ ಅನಾಮಿಕೆಯನ್ನು ಕೇಳುತ್ತಾಳೆ. ‘‘ಚಾರುದತ್ತನ ಮನೆಯಿಂದ ಕಾಣಿಕೆ ಬರುವುದು ನಿಂತಿದೆ, ಹೀಗಿದ್ದಾಗ ಮನೆಯಿಂದ ಹೊರಗೆ ಹಾಕಿದ್ದೇವೆ’’ ಎನ್ನುತ್ತಾಳೆ. ಆಗ ವಸಂತತಿಲಕೆ ಅಳುತ್ತ ‘‘ಅವರನ್ನು ಪ್ರೀತಿಸಿದೆ, ಒಲವರಳಿದ ಪರಿಣಾಮ ಹೊಟ್ಟೆಯಲ್ಲಿ ಕೂಸು ಬೆಳೆಯುತ್ತಿದೆ’’ ಎನ್ನುತ್ತಾಳೆ. ಇದಕ್ಕೆ ಅನಾಮಿಕೆ ‘‘ನಾವು ವೇಶ್ಯೆಯರು. ದುಡ್ಡು ಬಂದರೆ ಮಾತ್ರ ಇಲ್ಲಿ ಅವಕಾಶ ಇಲ್ಲದಿದ್ದರೆ ಇಲ್ಲ’’ ಎಂದು ಖಡಕ್ ಆಗಿ ಹೇಳಿದಾಗ ವಸಂತತಿಲಕೆ ಅಳುತ್ತಾಳೆ, ಹಟ ಹಿಡಿಯುತ್ತಾಳೆ. ಅವಳ ಒತ್ತಾಯಕ್ಕೆ ಮಣಿದು ಅನಾಮಿಕೆ ಹೇಳುತ್ತಾಳೆ;
‘‘ತಾಯಿ ಮಗಳ ಸಂಬಂಧ ಅನವರತ
ಹೊಕ್ಕುಳಬಳ್ಳಿ ನಂಟು ಶಾಶ್ವತ
ತಾಯ್ತನದ ಹೊಸ್ತಿಲಲ್ಲಿರುವವಳು
ಹೆಮ್ಮೆ ನನಗೆ ಹೆತ್ತವ್ವಗೆ
ಮನೆಗೆ ಜೀವ ತುಂಬಿದ ಮಗಳು
ಕಂದಾ, ಮರೆತುಬಿಡು ನಡೆದ ತಪ್ಪುಗಳನು
ಚಾರುದತ್ತನೇ ಈ ಮನೆ ಅಳಿಯನು
ಮರಳಿಸುವೆ ನಾ ಪಡೆದ ಎಲ್ಲ ಆಸ್ತಿಯನು’’
ಎಂದು ಭರವಸೆ ನೀಡುತ್ತಾಳೆ. ಅತ್ತ ಚಾರುದತ್ತನಿಗೆ ತನ್ನ ತಂದೆ ಮುನಿಯಾಗಿದ್ದು, ತಾಯಿ ಹಾಗೂ ಹೆಂಡತಿಯು ಮನೆಯಿಂದ ಹೊರಗೆ ಹೋಗಿ ಗುಡಿಸಲಲ್ಲಿದ್ದು ಪರದಾಡುವುದನ್ನು ಅರಿಯುತ್ತಾನೆ. ಕೊನೆಗೆ ಅವರನ್ನು ಭೇಟಿಯಾದಾಗ ವಸಂತತಿಲಕೆಯನ್ನು ಪ್ರೀತಿಸುವುದನ್ನು ತಿಳಿಸುತ್ತಾನೆ. ಆಗ ಸಾಧ್ವಿಯಾದ ಆತನ ಹೆಂಡತಿ ಮಿತ್ರಾವತಿಯ ಹೃದಯ ವೈಶಾಲ್ಯದಿಂದ ವಸಂತತಿಲಕೆಯನ್ನು ಚಾರುದತ್ತ ಹೆಂಡತಿಯಾಗಿ ಸ್ವೀಕರಿಸುತ್ತಾನೆ. ಅಲ್ಲದೆ ವಸಂತತಿಲಕೆಯು ಮಗಳನ್ನು ಪಡೆಯುತ್ತಾಳೆ. ಆಮೇಲೆ ಚಾರುದತ್ತನು ಶ್ರಮ, ಸಾಹಸ, ನಿಷ್ಠೆಯಿಂದ ದೇಶವಿದೇಶ ಸುತ್ತಾಡಿ ಮತ್ತೆ ವಣಿಕಶ್ರೇಷ್ಠನಾಗುತ್ತಾನೆ. ಆಮೇಲೆ ವೈರಾಗ್ಯ ತಾಳಿ ಮುನಿಯಾಗುತ್ತಾನೆ.
ಹೀಗೆ ಈ ನಾಟಕ ಮೂರು ಗಂಟೆಯವರೆಗೆ ಪ್ರದರ್ಶನಗೊಳ್ಳುತ್ತಿದೆ. ಮಹಾಕಾವ್ಯವನ್ನು ನಾಟಕವಾಗಿಸುವುದು ಸವಾಲು. ಈ ಸವಾಲನ್ನು ನಿರ್ದೇಶಕ ಜೀವನ್‌ರಾಂ ಸುಳ್ಯ ಗೆದ್ದಿದ್ದಾರೆ. ಇದು ಅವರ ಎರಡು ವರ್ಷಗಳ ಶ್ರಮದ ಸಾರ್ಥಕ್ಯ. ಈ ನಾಟಕವನ್ನು ರಂಗಕ್ಕೇರಿಸುವ ಮೊದಲು ಕಲಾವಿದರಿಗೆ ಮಹಾಕಾವ್ಯವನ್ನು ಓದಿ ಹೇಳಿದ್ದಾರೆ ಮತ್ತು ಓದಿಸಿದ್ದಾರೆ.
* * *
ಈ ಮಹಾಕಾವ್ಯ ರಚಿಸಿದ ಹಂಪನಾ ಅವರ ಮಾತುಗಳು ಗಮನಾರ್ಹ: ‘‘ಚಾರುದತ್ತನ ಮೋಹಕ ಕಥಾನಕಕ್ಕೆ ಮುಖಾಮುಖಿಯಾದ ಅಪೂರ್ವ ಕ್ಷಣವೊಂದು ರಸಗಳಿಗೆ. ಆ ಅನುಸಂಧಾನ ನಿಧಾನವಾಗಿ ಹರಳುಗೊಳ್ಳುತ್ತ ನನ್ನನ್ನು ಆವರಿಸಿದ ಗತ್ತಿಗೆ ನನಗೇ ಬೆರಗು. ಎದೆಯ ಮೂಸೆಯಲ್ಲಿ ಅಡಗಿ ಕುಳಿತು ಚಾರುದತ್ತಾಖ್ಯಾನ ಮರುಜೇವಣಿಯುಂಡು ಪುಟಿದು ಆಕಾರ ಪಡೆಯಿತು. ಮೈಮನಗಳ ಸುಳಿಯಲ್ಲಿ ಸುಳಿಯುತ್ತ ಸುಪ್ತನದಿಯಾಗಿದ್ದುದು ಅವಕಾಶ ಸಿಕ್ಕೊಡನೆ ಒಂದು ತಿಂಗಳಲ್ಲಿ ರೂಪಪಡೆಯಿತು. ಈ ಕಥೆಯ ಬೇರುಗಳು ಪಾತಾಳದಲ್ಲಿ, ಟಿಸಿಲುಗಳು ನಭದಲ್ಲಿ. ಬಹುಮುಖಿ ಸಾಧ್ಯತೆಗಳಿಗೆ ತನ್ನನ್ನು ತೆರೆಯಬಲ್ಲ ಈ ಚೆಲುವ ಚೆನ್ನಿಗ ಕಥೆಯ ಹಾಸುಬೀಸು ಆಯಸ್ಕಾಂತ. ಇದರ ತೆಕ್ಕೆಗೆ ಸಿಕ್ಕಿ ತಿರುಗುಣಿಯಿಂದ ಮೇಲೇರಿ ಬರುವಾಗ ಈ ಕಾವ್ಯವೂ ನನ್ನೊಡನೆ ಕವಚಕುಂಡಲವಾಗಿ ಬೆರೆತು ಬಂದಿದೆ.
ಪೈಶಾಚಿ ಭಾಷೆಯಲ್ಲಿ ಗುಣಾಢ್ಯ ಬರೆದ ಬೃಹತ್ಕಥೆಯಲ್ಲಿ ಇದರ ಬೇರುಗಳು ಸೇರಿರಬೇಕು. ಎಂಟನೆಯ ಶತಮಾನದ ಪುನ್ನಾಟ ಸಂಘದ (ಇದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಪ್ರದೇಶದಲ್ಲಿ ಆಗಿಹೋದ ಒಂದು ಮುನಿಸಮುದಾಯ) ಜಿನಸೇನಾಚಾರ್ಯರು ಸಂಸ್ಕೃತದಲ್ಲಿ ಬರೆದಿರುವ ‘ಹರಿವಂಶ’ ಕಾವ್ಯದಲ್ಲಿ ಈ ಆಖ್ಯಾನ ಸ್ಪಷ್ಟ ಆಕಾರದಲ್ಲಿ ಸಿಗುತ್ತದೆ. ಈ ಸುರಮ್ಯ ಕಥಾನಕ ಕನ್ನಡದಲ್ಲಿ ಆದಿಗುಣವರ್ಮ, ಕರ್ಣಪಾರ‌್ಯ, ಬಂಧುವರ್ಮ, ನಾಗರಾಜ, ಮಹಾಬಲ, ಸಾಳ್ವ, ಮಂಗರಸ ಮೊದಲಾದ ಕವಿಗಳ ಮೂಲಕ ದಾಂಗುಡಿಯಿಟ್ಟು ಪಲ್ಲವಿಸಿದೆ.
ಹಳೆಯ ಕಥನ ಭವನವನ್ನು ಮುರಿದು ಕರಗಿಸಿ ಹೊಸ ಜೀವಭಾವಗಳ ಧಾತುದ್ರವ್ಯ ಪಾತ್ರ ತುಡಿತ ಸಹಿತ ಮರು ಸಂಕಥನೀಕರಿಸುವಾಗ ಇದನ್ನು ಸಂಕೀರ್ಣ ಸಾಂಸ್ಕೃತಿಕ ಸಂಕಥನವೂ ಆಗಿಸಲು ಪ್ರಯತ್ನಿಸಿದ್ದೇನೆ. ಇದು ರಾಜರಾಣಿ ಅರಮನೆ ಕುರಿತ ಕಾವ್ಯವಲ್ಲ. ಯುದ್ಧಮುಖಿ ಕಥನವೂ ಅಲ್ಲ. ಮನುಷ್ಯ ಸ್ವಭಾವದ ವಿನ್ಯಾಸದ ನಿರಿಗೆಗಳಲ್ಲಿ ಅನಾವರಣಗೊಳುತ್ತ ಮತಾತೀತವಾಗಿ, ಮಹೋನ್ನತ ಮಾನವೀಯ ಮೌಲ್ಯಗಳಿಂದ ಕೂಡಿದ ಜನಮುಖಿ ಹಾಗೂ ಸಮಾಜಮುಖಿ ಕಾವ್ಯ. ಈ ಅಮರ ಪ್ರೇಮದ ಆಖ್ಯಾನವನ್ನು ಆಡುಮಾತಿನ ಲಯದಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದೇನೆ’’ ಎಂದು ವಿವರಿಸಿದ್ದಾರೆ.
* * *
ನಾಟಕವನ್ನು ಭಾಗವತರು ಕಥೆಯ ಮೂಲಕ ಹೇಳುತ್ತಾ, ಪಾತ್ರವಾಗುತ್ತ ಹೋಗುತ್ತಾರೆ. ಚಾರುದತ್ತನ ಬಾಲ್ಯ, ಯುವಕನಾಗುವ, ಮದುವೆಯಾಗುವ ಮೊದಲಾದ ದೃಶ್ಯಗಳು ಸುಂದರ. ಕಲಾವಿದರು ಗುಂಪಾಗಿ ನರ್ತಿಸುತ್ತ, ಅಭಿನಯಿಸುತ್ತ ಗಮನ ಸೆಳೆಯುತ್ತಾರೆ. ಈಮೂಲಕ ನಾಟಕದ ಓಘ ಸಾಂಗವಾಗಿ ಸಾಗುತ್ತದೆ. ಆದರೆ ವಿರಾಮದ ನಂತರ ನಾಟಕವನ್ನು ಹಿಗ್ಗಿಸಲಾಗಿದೆ ಎನ್ನಿಸುತ್ತದೆ ಅಂದರೆ ಚಾರುದತ್ತ ಮತ್ತೆ ವ್ಯಾಪಾರಕ್ಕೆ ತೆರಳುವ, ಅಲ್ಲಿ ಅನುಭವಿಸುವ ಕಷ್ಟಗಳನ್ನು ನಾಟಕ ಕಟ್ಟಿಕೊಡುತ್ತದೆ. ಇದರೊಂದಿಗೆ ತಾಂತ್ರಿಕತೆಯು ಮೆಚ್ಚುಗೆ ಗಳಿಸುತ್ತದೆ. ಆದರೆ ಮೂರು ಗಂಟೆಗಳನ್ನು ಪ್ರೇಕ್ಷಕರು ಹಿಡಿದಿಡುವುದೇ ಸವಾಲಿನದು. ಏಕೆಂದರೆ ಹೊಸ ತಲೆಮಾರಿನ ಪ್ರೇಕ್ಷಕರು ಪದೇ ಪದೇ ಮೊಬೈಲ್ ಫೋನಿನತ್ತ ಲಕ್ಷ್ಯ ವಹಿಸುವುದನ್ನು ತಪ್ಪಿಸುವುದು ಸವಾಲು. ಆದರೂ ಜೀವನ್‌ರಾಂ ವಿನ್ಯಾಸದಿಂದ, ನಿರ್ದೇಶನದಿಂದ ಪ್ರೇಕ್ಷಕರ ಮನಗೆಲ್ಲುತ್ತಾರೆ. ಜೊತೆಗೆ ಸಂಗೀತ, ಅವರು ಹಿನ್ನೆಲೆಯಾಗಿ ಹಾಡಿದ್ದು ಚೆಂದ. ಕಲಾವಿದರಾದ ನವೀನ್ ಕಾಂಚನ ಪುತ್ತೂರು, ಸುಮನಾ ಪ್ರಸಾದ್ ಮೂಡುಬಿದಿರೆ, ಹಾರಂಬಿ ಯತೀನ್ ಮಡಿಕೇರಿ, ತೃಷಾ ಶೆಟ್ಟಿ ಮಂಗಳೂರು, ರಾಜೇಂದ್ರಪ್ರಸಾದ್ ವಿ.ಜೆ. ಮಂಡ್ಯ, ರಕ್ಷಿತಾ ಟಿ.ಎಲ್.ರಾಮನಗರ, ನಾಗರಾಜ ಜೆ.ಕಾಸಂಗಿ ಹಾವೇರಿ, ಚೈತ್ರ ಖುಷಿ ಚನ್ನಪಟ್ಟಣ, ಜೋಶಿತ್ ಶೆಟ್ಟಿ ಮೂಡುಬಿದಿರೆ, ವಸಂತಲಕ್ಷ್ಮೀ ಪುತ್ತೂರು, ಪ್ರಮೋದ್ ಅತ್ರಾಡಿ ಉಡುಪಿ, ಮನೀಷ್ ಎಂ.ಬಜ್ಪೆ, ರೋನಿತ್ ರಾಯ್ ಉಡುಪಿ, ರಾಹುಲ್ ಶೆಟ್ಟಿ ಹಾಸನ, ವಿ.ಸಂತೋಷ್ ರೆಡ್ಡಿ ಚಿತ್ರದುರ್ಗ, ವನ್ಯ ಹೊಸೊಳಿಕೆ ಸುಳ್ಯ, ಶ್ರೀವಲ್ಲಿ ಸೈದೂರು ಸಾಗರ, ತೇಜಸ್ವಿನಿ ತರೀಕೆರೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆದರೆ ಸಂಭಾಷಣೆ ಒಪ್ಪಿಸುವ ಭರದಲ್ಲಿ ಪಾತ್ರಗಳಲ್ಲಿ ತನ್ಮಯತೆ ಸಾಧ್ಯವಾಗುವುದು ಕಷ್ಟವಾಗುತ್ತಿತ್ತು. ಆದರೂ ದೇವಿಲೆ ಪಾತ್ರಧಾರಿ ಸುಮನಾ ಪ್ರಸಾದ್, ಅನಾಮಿಕೆಯಾಗಿ ವಸಂತಲಕ್ಷ್ಮ್ಮಿ ಪುತ್ತೂರು, ವಸಂತತಿಲಕೆಯಾಗಿ ತೃಷಾ ಶೆಟ್ಟಿ ನೆನಪಲ್ಲಿ ಉಳಿಯುತ್ತಾರೆ. ಸುಮನಾ ಅವರು ತಮ್ಮ ತ್ರಿವಳಿ ಮಕ್ಕಳನ್ನೂ ರಂಗದ ಮೇಲೆ ತಂದಾಗ ಪ್ರೇಕ್ಷಕರ ಚಪ್ಪಾಳೆ ಸಿಗುತ್ತವೆ. ಆದರೆ ಬಾಲಕನಾಗಿದ್ದ ಚಾರುದತ್ತನು ದೊಡ್ಡವನಾದ ಮೇಲೂ ಅವರ ತಂದೆತಾಯಿಯಾದ ದೇವಿಲೆ ಹಾಗೂ ಭಾಮದತ್ತ ಅವರಿಗೆ ವಯಸ್ಸಾದ ಹಾಗೆ ತೋರಿಸಬೇಕಿತ್ತು. ಇದನ್ನು ದೇವಿಲೆ ಅವರು ಕೊಂಚ ಬಿಳಿಗೂದಲು ಕಾಣುವ ಹಾಗೆ ಬಣ್ಣ ಬಳಿದುಕೊಂಡಿದ್ದು ಸರಿಯಿತ್ತು. ಇದೆಲ್ಲದರಾಚೆಗೆ ಜೀವನ್‌ರಾಂ ಸುಳ್ಯ ಅವರ ಶ್ರಮವಂತೂ ಎದ್ದು ಕಾಣುತ್ತದೆ ಜೊತೆಗೆ ನಾಟಕವು ಪ್ರೇಕ್ಷಕರನ್ನು ಹಿಡಿದಿಡುತ್ತದೆ.