ಹಚ್ಚಿಟ್ಟ ಕರ್ಪೂರ ಮಿನುಗುತಾರೆಯೊಂದಿಗೆ ಮುಖಾಮುಖಿ

ನಾಟಕ: ಮಿನುಗುತಾರೆ
ತಂಡ: ರೂಪಾಂತರ, ಬೆಂಗಳೂರು
ರಚನೆ: ಜಯಲಕ್ಷ್ಮಿ ಪಾಟೀಲ
ರಂಗವಿನ್ಯಾಸ: ರಾಜು ರೂಪಾಂತರ
ಧ್ವನಿ ನಿರ್ವಹಣೆ: ಶ್ರೀವತ್ಸ
ಬೆಳಕು ಮತ್ತು ನಿರ್ದೇಶನ: ಕೆಎಸ್‌ಡಿಎಲ್ ಚಂದ್ರು
ರಂಗದ ಮೇಲೆ: ರಂಜಿತಾ ಸೂರ್ಯವಂಶಿ
ಅದು ಅಪರೂಪ.
ಕಲಾವಿದೆಯ ಕುರಿತು ಕಲಾವಿದೆ ಬರೆದ ನಾಟಕವನ್ನು ಕಲಾವಿದೆಯೆದುರು ಕಲಾವಿದೆ ಅಭಿನಯಿಸಿದರು. ಮುಖ್ಯವಾಗಿ ತನ್ನ ರಚನೆಯ ನಾಟಕವು ರಂಗದ ಮೇಲಾಗುವುದನ್ನು ತನ್ಮಯರಾಗಿ, ಭಾವುಕರಾಗಿ ನೋಡಿದರು. ಅವರು ಜಯಲಕ್ಷ್ಮಿ ಪಾಟೀಲ. ಮಿನುಗುತಾರೆ ಕಲ್ಪನಾ ಅವರ ಕುರಿತ ನಾಟಕವನ್ನು ಬರೆದ ರಂಗಭೂಮಿಯ ಹಿರಿಯ ಕಲಾವಿದೆ ಜಯಲಕ್ಷ್ಮಿ ಪಾಟೀಲ ಅವರ ಏಕವ್ಯಕ್ತಿ ನಾಟಕವನ್ನು ಪ್ರಸ್ತುತಪಡಿಸಿದವರು ಬೆಂಗಳೂರಿನ ರಂಜಿತಾ ಸೂರ್ಯವಂಶಿ. ಹೀಗಾಗಿ ಇದು ಮೂರು ತಲೆಮಾರಿನ ಮುಖಾಮುಖಿಯ ನಾಟಕ ಎನ್ನಬಹುದು. ಇದರಿಂದ ಅನೇಕ ಹಿರಿಯ ಪ್ರೇಕ್ಷಕರು ಕಲ್ಪನಾ ಅವರ ಬದುಕನ್ನು ಮತ್ತಷ್ಟು ಅರ್ಥೈಸಿಕೊಂಡರು. ಯುವ ತಲೆಮಾರಿನ ಪ್ರೇಕ್ಷಕರು ಕಲ್ಪನಾ ಅವರ ಕುರಿತು ತಿಳಿದುಕೊಂಡರು.
ಇದು ಸಾಧ್ಯವಾಗಿದ್ದು ಕಳೆದ ಶನಿವಾರ (ಆಗಸ್ಟ್ 8) ಧಾರವಾಡದ ರಂಗಾಯಣದಲ್ಲಿ.
ನಟಿ ಕಲ್ಪನಾ ಕುರಿತು ತಾವೇ ರಚಿಸಿದ ನಾಟಕದಲ್ಲಿ ತಾವೇ ಅಭಿನಯಿಸಬೇಕೆನ್ನುವ ತುಡಿತ ಜಯಲಕ್ಷ್ಮಿ ಪಾಟೀಲ ಅವರದಾಗಿತ್ತು. ಇದು ಅವರ ಕನಸಾಗಿತ್ತು ಕೂಡಾ. ಆದರೆ ಎರಡು ವರ್ಷಗಳಿಂದ ಅನಾರೋಗ್ಯಕ್ಕೀಡಾಗಿರುವ ಅವರಿಗೆ ಸಾಧ್ಯವಾಗಲಿಲ್ಲ. ಹಿಂದೊಮ್ಮೆ ರಂಗಕರ್ಮಿ ಕಪ್ಪಣ್ಣ ಅವರು ಈ ನಾಟಕವನ್ನು ರಂಗಕ್ಕೆ ತರಲು ಪ್ರಯತ್ನಿಸಿದ್ದರು. ಆದರೆ ನೆರವೇರಲಿಲ್ಲ. ಆದರೆ ಎರಡು ವರ್ಷಗಳ ಹಿಂದೆ (ಸೆಪ್ಟಂಬರ್ 24, 2024) ಜಯಲಕ್ಷ್ಮಿ ಪಾಟೀಲ ಅವರ ಬಣ್ಣದ ಬದುಕಿನ ಕುರಿತು ನಾನು ನಿರೂಪಿಸಿದ ‘ರಂಗ ಬಾನಾಡಿ’ ಕೃತಿ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನಲ್ಲಿ ಕಪ್ಪಣ್ಣ ಅವರು ಆಯೋಜಿಸಿದರು. ಆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಜೊತೆಗೆ ತಾವು ರಚಿಸಿದ ‘ಮಿನುಗುತಾರೆ’ ನಾಟಕವೂ ಪ್ರಯೋಗಗೊಳ್ಳಲಿ ಎನ್ನುವ ಆಸೆ ವ್ಯಕ್ತಪಡಿಸಿದರು ಜಯಲಕ್ಷ್ಮಿ ಪಾಟೀಲ. ಆಗ ಹಿರಿಯ ರಂಗಕರ್ಮಿ ಕೆಎಸ್‌ಡಿಎಲ್ ಚಂದ್ರು ಅವರು ರಂಜಿತಾ ಸೂರ್ಯವಂಶಿ ಅವರ ಮೂಲಕ ಈ ನಾಟಕವನ್ನು ರಂಗಕ್ಕೆ ತಂದರು. ಅಲ್ಲಲ್ಲಿ ಪ್ರದರ್ಶನಗೊಂಡಿದ್ದ ಈ ನಾಟಕವು ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು.
ಇಂಥ ಸಂದರ್ಭದಲ್ಲಿ ‘ರಂಗ ಬಾನಾಡಿ’ ಕೃತಿಯ ಎರಡನೆಯ ಮುದ್ರಣದ ಬಿಡುಗಡೆ ಕುರಿತು ಮಾತನಾಡಲು ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ಜಯಲಕ್ಷ್ಮಿ ಪಾಟೀಲ ಅವರನ್ನು ಕಂಡಾಗ ಕೃಶರಾಗಿದ್ದರು. ಎರಡೂ ಕಿಡ್ನಿಗಳ ಕಾರ್ಯಚಟುವಟಿಕೆ ಕ್ಷೀಣಿಸಿದ ಪರಿಣಾಮ ವಾರಕ್ಕೆ ಎರಡು ಬಾರಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ಅವರ ದೇಹ ದಣಿದಿದೆ. ಆದರೆ ಧ್ವನಿ ಉಡುಗಿಲ್ಲ. ಪುಸ್ತಕ ಬಿಡುಗಡೆಯ ಜೊತೆಗೆ ‘ಮಿನುಗುತಾರೆ’ ನಾಟಕವೂ ಪ್ರದರ್ಶನವಾಗಲಿ ಎಂದು ಇಚ್ಛೆ ವ್ಯಕ್ತಪಡಿಸಿದರು. ಆಮೇಲೆ ಧಾರವಾಡ ರಂಗಾಯಣದ ನಿರ್ದೇಶಕ ಝಕೀರ್ ನದಾಫ್ ಹಾಗೂ ಆಡಳಿತಾಧಿಕಾರಿ ಶಶಿಕಲಾ ಹುಡೇದ ಅವರನ್ನು ಭೇಟಿಯಾಗಿ ಕೋರಿಕೊಂಡೆ. ಅದರ ಪರಿಣಾಮ; ಇದೇ ಆಗಸ್ಟ್ 8ರಂದು ಧಾರವಾಡದಲ್ಲಿ ಈ ನಾಟಕ ರಂಗಕ್ಕೇರಿತು. ಅಂದು ಬಂದವರು; 84ರ ಹರೆಯದ ಹಿರಿಯ ಲೇಖಕಿ ಮಾಲತಿ ಪಟ್ಟಣಶೆಟ್ಟಿ, ಎಂಭತ್ತರ ಹರೆಯದ ಹಿರಿಯ ಲೇಖಕ ಶಾಮಸುಂದರ್ ಬಿದರಕುಂದಿ, ಹಿರಿಯ ಲೇಖಕರಾದ ಆನಂದ ಪಾಟೀಲ, ದುರ್ಗಾದಾಸ್ ಇತರರು. ಮುಖ್ಯವಾಗಿ ಜಯಲಕ್ಷ್ಮಿ ಪಾಟೀಲ ಅವರು ವೃತ್ತಿ ರಂಗಭೂಮಿಯಲ್ಲಿ ದುಡಿದ ಹಿರಿಯ ಕಲಾವಿದೆಯರನ್ನು ತಮ್ಮೊಂದಿಗೆ ಹುಬ್ಬಳ್ಳಿಯಿಂದ ಕರೆದುಕೊಂಡು ಬಂದರು.
ಮತ್ತೆ ನಾಟಕದತ್ತ ಹೊರಳುವೆ; ರಂಗಭೂಮಿಯು ತನ್ನನ್ನೇ ಉರಿಸಿಕೊಂಡು ಬೆಳಕೆಂಬ ಜ್ಞಾನ ಕೊಡುತ್ತದೆ. ಹೀಗಾಗಿ ರಂಗಭೂಮಿ ಎನ್ನುವುದು ಹಚ್ಚಿಟ್ಟ ಕರ್ಪೂರದಂತೆ. ಅದರಲ್ಲಿ ಇದ್ದಿಲು ಹುಡುಕಬಾರದು ಎಂದು ರಂಗಕರ್ಮಿ ಎಚ್.ಕೆ.ಯೋಗಾನರಸಿಂಹ ಹೇಳುತ್ತಿದ್ದರು. ಇದನ್ನೇ ರಂಗಭೂಮಿ ಕಲಾವಿದೆಯರಿಗೆ ಹೇಳಬಹುದು. ರಂಗದ ಮೇಲೆ ಮಿಂಚಿದರೂ ಮರೆಯಾಗುವ ರಂಗಭೂಮಿ ಕಲಾವಿದೆಯರು ಹಚ್ಚಿಟ್ಟ ಕರ್ಪೂರದಂತೆ. ಇದನ್ನು ಕಲ್ಪನಾ ಅವರಿಗೆ ಹೇಳಬಹುದು ಜೊತೆಗೆ ರಂಗಭೂಮಿಯ ಎಲ್ಲ ಕಲಾವಿದೆಯರಿಗೂ ಅನ್ವಯಿಸಬಹುದು.
ತಮ್ಮ ಮಾತಿನ ಧಾಟಿ, ವಿಶಿಷ್ಟ ಹಾವಭಾವದ ಮೂಲಕ ಗಮನ ಸೆಳೆದಿದ್ದ, ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದ್ದ ಕಲ್ಪನಾ ಅವರ ಕುರಿತ ನಾಟಕವನ್ನು ರಂಜಿತಾ ಸೂರ್ಯವಂಶಿ ಅವರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟರು.
ಮಂಗಳೂರಿನ ಕಲ್ಪನಾ ಮೂಲ ಹೆಸರು ಶರತ್‌ಕುಮಾರಿ. ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಪಿಯು ಓದುವಾಗಲೇ ಅವರಿಗೆ ಸಿನೆಮಾದಲ್ಲಿ ನಟಿಸಬೇಕೆಂದು ಕನಸು. ಸಿನೆಮಾಕ್ಕೆ ಪ್ರವೇಶಿಸಿದ ಮೇಲೆ ಕಲ್ಪನಾ ಎಂದಾದರು. ಅವರ ಬಾಲ್ಯದ ಬದುಕಿನ ಮೂಲಕ ನಾಟಕವು ಆರಂಭವಾಗುತ್ತದೆ. ಗಾಯಕ ಮುಕೇಶ್ ಅವರ ಹಾಡು ಕೇಳಿ, ಗೋಪಿಕೃಷ್ಣ ಅವರ ನೃತ್ಯ ನೋಡಿ ಹಾಗೂ ಬಿ.ಸರೋಜಾದೇವಿ ಅವರ ‘ಕಿತ್ತೂರು ಚೆನ್ನಮ್ಮ’ ಸಿನೆಮಾ ನೋಡಿದ ನಂತರ ಸಿನೆಮಾದ ಸಂಭಾಷಣೆಯನ್ನು ಅವರ ಹಾಗೆಯೇ ಅನುಕರಿಸಿ ಮನೆಯಲ್ಲಿ ತಾಲೀಮು ಮಾಡುತ್ತಿದ್ದರು. ನಂತರ ತೆಲುಗಿನ ನಿರ್ದೇಶಕಿ, ನಿರ್ಮಾಪಕಿ ಪಿ.ಭಾನುಮತಿ ಅವರಿಗೆ ಪತ್ರ ಬರೆದು ಸಿನೆಮಾನಟಿಯಾಗುವ ಕುರಿತು ಹೇಳಿಕೊಂಡರು. ಇದಕ್ಕೆ ಪ್ರತಿಯಾಗಿ ಪತ್ರ ಬರೆದ ಭಾನುಮತಿ ಅವರು ಶುಭ ಕೋರಿದರು. ಹೀಗೆ ಬಂದ ಪತ್ರಕ್ಕೆ ಅನೇಕ ಬಾರಿ ಮುತ್ತಿಟ್ಟಿದ್ದರು ಕಲ್ಪನಾ. ಅಲ್ಲಿಂದ ಹೆತ್ತವರ ವಿರೋಧ ಕಟ್ಟಿಕೊಂಡು ನಾಟಕದ ಗುತ್ತಿಗೆದಾರ ಶಿವಕುಮಾರ್ ದಾವಣಗೆರೆ ಅವರ ಮೂಲಕ ಬಳ್ಳಾರಿ ಲಲಿತಮ್ಮನವರ ನಾಟಕ ಕಂಪನಿಗೆ ದಿನಕ್ಕೆ ಹತ್ತು ರೂಪಾಯಿ ಸಂಬಳಕ್ಕೆ ಸೇರುತ್ತಾರೆ. ಆದರೆ ಊರಲ್ಲಿರುವ ಅಮ್ಮನ ನೆನಪಾಗಿ ಮರಳಿ ಮಂಗಳೂರು ಸೇರುತ್ತಾರೆ. ಆದರೂ ಸಿನೆಮಾ ನಟಿಯಾಗಬೇಕೆಂಬ ಕನಸಿಗೆ ಶಿವಕುಮಾರ್ ದಾವಣಗೆರೆ ಅವರು ನೆರವಾಗುತ್ತಾರೆ. ಆಗಿನ ಮದರಾಸಿಗೆ ಹೋಗಿ ಹಾಸ್ಯನಟ ನರಸಿಂಹರಾಜು ಅವರನ್ನು ಭೇಟಿಯಾಗುತ್ತಾರೆ. ಅವರು ಬಿ.ಆರ್. ಪಂತುಲು ಅವರನ್ನು ಪರಿಚಯಿಸುತ್ತಾರೆ. ನಂತರ ‘ಸಾಕುಮಗಳು’ ಸಿನೆಮಾದ ನಾಯಕಿಯಾದರು. ಆದರೆ ಉಚ್ಚಾರಣೆ ಸರಿಯಿಲ್ಲವೆಂದು ತಮ್ಮ ಧ್ವನಿಯ ಬದಲು ಬೇರೊಬ್ಬರಿಂದ ಡಬ್ ಮಾಡಿಸಿದಾಗ ಹಟ ತೊಟ್ಟು ಉಚ್ಚಾರಣೆಗೆ ಸಾಣೆ ಹಿಡಿದರು. ಜೊತೆಗೆ ತಮ್ಮದು ವಿಶಿಷ್ಟ ಧ್ವನಿಯೆಂದು ಸಾಬೀತುಪಡಿಸಿದರು.
ಬಳಿಕ ಬಿ.ಆರ್. ಪಂತುಲು ಅವರ ಗರಡಿಯಲ್ಲಿ ಪಳಗಿದ ಪುಟ್ಟಣ್ಣ ಕಣಗಾಲ್ ಅವರ ಪರಿಚಯವಾದ ಪರಿಣಾಮ ‘ಬೆಳ್ಳಿಮೋಡ’ ಸಿನೆಮಾದ ನಾಯಕಿಯಾದರು. ಆದರೆ ನಿಧಾನವಾಗಿ ಪುಟ್ಟಣ್ಣ ಕಣಗಾಲ್ ಅವರು ದೂರ ಮಾಡಿದರು. ಜೊತೆಗೆ ಡಾ.ರಾಜಕುಮಾರ್ ಅವರೊಂದಿಗೆ ನಟಿಸುವಾಗ ನಡೆದ ಘಟನೆ ಗಮನಾರ್ಹ. ಅದೊಂದು ದಿನ ‘‘ಶಾಟ್ ರೆಡಿ. ಡಾ.ರಾಜ್‌ಕುಮಾರ್ ಕಾಯುತ್ತಿದ್ದಾರೆ’’ ಎಂದು ಸಹಾಯಕ ನಿರ್ದೇಶಕ ಬಂದು ಹೇಳಿದಾಗ ‘‘ಕಾಯಲಿಬಿಡಿ, ಕಾಯಲೇಬೇಕಾದವರು’’ ಎಂಬ ಮಾತು ಮುಳುವಾಯಿತು. ಮುಂದೆ ಸಿನೆಮಾದಲ್ಲಿ ಅವಕಾಶಗಳು ಕಡಿಮೆಯಾದಾಗ ಉತ್ತರ ಕರ್ನಾಟಕದತ್ತ ಮುಖ ಮಾಡಿದರು. ಅಷ್ಟೊತ್ತಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮನೆಯನ್ನು ನವೀಕರಿಸಿದ್ದರು. ಇದಕ್ಕಾಗಿ ಸಾಲದ ಹೊರೆ ಹೊತ್ತರು. ಸಾಲ ತೀರಿಸಲು ಕಂಪನಿ ನಾಟಕಗಳಿಗೆ ಬಣ್ಣ ಹಚ್ಚಿದರು. ಹಾಗೆ ಬಣ್ಣ ಹಚ್ಚಿದ್ದು ಗುಡಗೇರಿ ಬಸವರಾಜ ಅವರ ಕಂಪನಿಗೆ. ಆಮೇಲೆ ಗುಡಗೇರಿ ಬಸವರಾಜ ಅವರ ಒಡನಾಟ ಸಿಕ್ಕಿತು. ಆದರೆ ನಾಟಕವೊಂದರಲ್ಲಿ ಕಲ್ಪನಾ ಅವರು ತಪ್ಪಾಗಿ ಹೇಳಿದ ಸಂಭಾಷಣೆಯಿಂದ ಜಗಳವಾಯಿತು. ಬಳಿಕ ದುರಂತ ಅಂತ್ಯ ಕಂಡರೆಂಬುದನ್ನು ನಾಟಕ ಅನಾವರಣಗೊಳಿಸುತ್ತದೆ.
ಆದರೆ ನಾಟಕದಲ್ಲಿ ಗುಡಗೇರಿ ಬಸವರಾಜ ಅವರ ಹೆಸರನ್ನು ಹೇಳಬೇಕಿತ್ತು. ಅಲ್ಲದೆ ಕಲ್ಪನಾ ಅವರು ನಿಧನರಾಗಿದ್ದು ನಿದ್ದೆಮಾತ್ರೆಗಳನ್ನು ಹೆಚ್ಚು ಸೇವಿಸಿದ ಪರಿಣಾಮ. ಆದರೆ ನಾಟಕದಲ್ಲಿ ಕೈ ಬೆರಳಲ್ಲಿದ್ದ ವಜ್ರದ ಉಂಗುರವನ್ನು ಕುಟ್ಟಿ ಪುಡಿ ಮಾಡಿ ನೀರಿನೊಂದಿಗೆ ಸೇವಿಸುವ ಮೂಲಕ ಸಾವನ್ನಪ್ಪಿದರು ಎನ್ನುವ ದೃಶ್ಯವಿದೆ. ಈ ಕುರಿತು ಗುಡಗೇರಿ ಬಸವರಾಜ ಅವರನ್ನು ಕೇಳಿದ್ದೆ. ‘‘ಆಕೆ ಸತ್ತಿದ್ದು ವಜ್ರದ ಉಂಗುರದಿಂದ ಅಲ್ಲ; ನಿದ್ದಿಯ ಗುಳಿಗೆಯಿಂದ’’ ಎಂದು ಸ್ಪಷ್ಟಪಡಿಸಿದ್ದರು.
ಇದರಾಚೆಗೆ ರಂಜಿತಾ ಸೂರ್ಯವಂಶಿ ಅವರು ಕಲ್ಪನಾ ಅವರ ಬದುಕನ್ನು ನೆನಪಿನ ಬುತ್ತಿಯಾಗಿ ಪ್ರೇಕ್ಷಕರಿಗೆ ಸರಿಯಾಗಿ ಉಣಬಡಿಸುತ್ತಾರೆ. ಕಲಾವಿದೆಯರ ನೋವು-ನಲಿವು ಕುರಿತ ನಾಟಕ ಚೆನ್ನಾಗಿ ಬಿಂಬಿಸುತ್ತದೆ ಜೊತೆಗೆ ಹಳೆಯ ಹಾಡುಗಳನ್ನು ಅಲ್ಲಲ್ಲಿಗೆ ಬಳಸಿದ್ದೂ ಚೆನ್ನಾಗಿದೆ. ದುರಂತ ನಾಯಕಿಯ ದುರಂತ ಬದುಕನ್ನು ಒದ್ದೆಕಣ್ಣುಗಳಿಂದ ಪ್ರೇಕ್ಷಕರು ನೋಡಿದರು. ಮರೆಯಾದ ಮರೆಯದ ಕಲ್ಪನಾ ಸಲುವಾಗಿ ಪ್ರೇಕ್ಷಕರು ಮರುಗಿದರು.






