Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ವಚನ ಸಾಹಿತ್ಯ ಹಬ್ಬಿಸಿ ಹಂದರವೇರಿಸಿದ...

ವಚನ ಸಾಹಿತ್ಯ ಹಬ್ಬಿಸಿ ಹಂದರವೇರಿಸಿದ ಹಳಕಟ್ಟಿ

ಗಣೇಶ ಅಮೀನಗಡಗಣೇಶ ಅಮೀನಗಡ16 Oct 2026 12:22 PM IST
share
ವಚನ ಸಾಹಿತ್ಯ ಹಬ್ಬಿಸಿ ಹಂದರವೇರಿಸಿದ ಹಳಕಟ್ಟಿ

ಹಳಕಟ್ಟಿಯವರ ಕುರಿತು ಚೆನ್ನವೀರ ಕಣವಿ ಅವರು ಬರೆದ ಕವಿತೆಯ ಕೊನೆಯ ಸಾಲುಗಳು ಹೀಗಿವೆ;

ರುಮಾಲದ ಕಟ್ಟು ಬಿಚ್ಚಿಲ್ಲ. ತೆಗೆದಿಲ್ಲ ಇಟ್ಟ ಕನ್ನಡಕ

ಉಡುಗಿಲ್ಲ ಉಟ್ಟ ಧೋತರ ಮಡಿಯು

ಮೆಲುದನಿ-ಮಾತು ಭಕುತಿ ಬಳ್ಳಿಗೆ ಬಿಟ್ಟ ಕುಡಿಯು

ಗೋಳ-ಗುಮ್ಮಟ ತಾನೆ ತಲೆ ಬಾಗಿಸಿತು ನಿಮಗೆ.

ಏಳು ಸಲ ಕರೆದರೂ ಎಚ್ಚರಾಗದು ನಮಗೆ.

ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಕಾಡುವುದು ಕೌದಿ. ಅವ್ವ ಹೊಲಿದುಕೊಟ್ಟ ಕೌದಿಯನ್ನೇ ನಿತ್ಯ ಹಾಸಿ, ಹೊದೆಯುವುದು. ಅದ್ದೂರಿ ಮದುವೆಯಲ್ಲಿ ಅದ್ಭುತ ಊಟ ಮಾಡಿದರೂ ಜೋಳದ ರೊಟ್ಟಿ, ಹೆಸರುಕಾಳು ಪಲ್ಯ ಮೇಲೊಂದಿಷ್ಟು ಉಳ್ಳಾಗಡ್ಡಿ... ಇಂಥ ಜವಾರಿ ಊಟವೇ ಸಾಕೆನಿಸುತ್ತದೆ. ನಾವು ಬಾಲ್ಯದಲ್ಲಿ ಉಂಡದ್ದೇ ನಾಲಿಗೆ ಮೇಲೆ ಉಳಿಯುತ್ತದೆ. ಊರು ಬಿಟ್ಟ ಮೇಲೆ ಜವಾರಿ ಊಟ, ಜವಾರಿ ಮಾತು, ಜವಾರಿ ಮಂದಿ ಅಪರೂಪವಾಗುವಾಗ ಮತ್ತೆ ಮತ್ತೆ ಕಾಡುವುದು ಹುಟ್ಟಿ, ಬೆಳೆದ ಅವಿಭಜಿತ ವಿಜಾಪುರ ಜಿಲ್ಲೆ. ಮಾತು ಒರಟು, ಹೃದಯ ಶ್ರೀಮಂತಿಕೆ ದೊಡ್ಡದು ನಮ್ಮ ವಿಜಾಪುರ ಮಂದಿಯದು. ಇಂಥ ನೆಲದಲ್ಲಿ ನಡೆದಾಡಿ ವಚನಗಳನ್ನು ಸಂಗ್ರಹಿಸಿ, ಅಪೂರ್ವ ಕೊಡುಗೆ ನೀಡಿದವರು ಡಾ.ಫ.ಗು.ಹಳಕಟ್ಟಿ. ಅವರು ವಚನಗಳನ್ನು ಸಂಗ್ರಹಿಸಲು ಪಟ್ಟ ಕಷ್ಟ, ಈ ಮೂಲಕ ವಚನ ಸಾಹಿತ್ಯಕ್ಕೆ ಅವರು ಕೊಟ್ಟ ಕೊಡುಗೆಯನ್ನು ಮನಗಾಣಿಸಲು ನಾಟಕದ ಮೂಲಕ ಪ್ರಯತ್ನಿಸಿರುವೆ. ಅವರು ವಚನ ಪಿತಾಮಹ ಎನ್ನುವುದು ಜನಜನಿತ.

ಒಮ್ಮೆ ಕನ್ನಡದ ಕಣ್ವ ಆಚಾರ್ಯ ಬಿ.ಎಂ.ಶ್ರೀಕಂಠಯ್ಯ ಅವರು ವಿಜಾಪುರಕ್ಕೆ ಹೋದಾಗ ‘‘ಇತಿಹಾಸ ಪ್ರಸಿದ್ಧವಾದ ಗೋಳಗುಮ್ಮಟ ನೋಡ್ತೀರಾ?’’ ಎಂದು ಯಾರೋ ಕೇಳಿದಾಗ ‘‘ಮೊದಲು ನಾನು ವಚನ ಗುಮ್ಮಟ ನೋಡಬೇಕಾಗಿದೆ’’ ಎಂದರು ಬಿ.ಎಂ.ಶ್ರೀಕಂಠಯ್ಯ. ಅವರು ಹೇಳಿದ ವಚನ ಗುಮ್ಮಟ ಹಳಕಟ್ಟಿಯವರು.

ನನ್ನ ನಾಟಕಕ್ಕೂ ‘ವಚನ ಗುಮ್ಮಟ’ ಎಂದು ಹೆಸರಿಟ್ಟಿರುವೆ. ಗುಮ್ಮಟ ಎಂದರೆ ಎತ್ತರದ, ಎದ್ದು ಕಾಣುವಂಥದ್ದು. ಗುಮ್ಮಟದ ಹಾಗೆ ವಚನ ಸಾಹಿತ್ಯದಲ್ಲಿ ಹಳಕಟ್ಟಿಯವರದು ಎತ್ತರದ, ಮಹತ್ವದ ಕಾರ್ಯ.

ಅವರ ಕುರಿತು ನಾಟಕ ರಚಿಸಬೇಕೆಂದು ಕಳೆದ ಎರಡು ವರ್ಷಗಳಿಂದ ವಿಜಾಪುರ ಬಿಎಲ್‌ಡಿಇ ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರಕ್ಕೆ ಅನೇಕ ಸಲ ಭೇಟಿ ನೀಡಿದೆ. ಅಲ್ಲಿ ಹಳಕಟ್ಟಿಯವರ ಹಸ್ತಪ್ರತಿ, ಅವರ ಸಮಗ್ರ ಸಾಹಿತ್ಯ, ಅವರು ಬಳಸಿದ ವಸ್ತುಗಳ ಜೊತೆಗೆ ಅವರ ಜೀವನ-ಸಾಧನೆ ಅರಿಯಲು ಯತ್ನಿಸಿದೆ. ಇದರ ಫಲ ಈ ನಾಟಕ. ಇದು ಹಳಕಟ್ಟಿಯವರ ಕೃತಿಗಳನ್ನು ಆಧರಿಸಿದ ನಾಟಕ. ಹೀಗಾಗಿ ಅವರು ಬಳಸಿದ ಜವಾರಿ ಭಾಷೆಯನ್ನೇ ಬಳಸಿರುವೆ.

ಈ ನಾಟಕ ರಚಿಸಲು ನೆರವಾದವರು ಹಳಕಟ್ಟಿ ಸಂಶೋಧನಾ ಕೇಂದ್ರದ ಸಹ ಕಾರ್ಯದರ್ಶಿ ಡಾ.ಮಹಾಂತೇಶ ಬಿರಾದಾರ, ಕಾರ್ಯದರ್ಶಿ ಡಾ.ಎಂ.ಎಸ್.ಮದಭಾವಿ, ಸಂಯೋಜಕ ಡಾ.ವಿ.ಡಿ.ಐಹೊಳ್ಳಿ, ಈ ನಾಟಕ ಓದಿದಾಗ ಮೆಚ್ಚಿದ ಧಾರವಾಡದ ಲೇಖಕ ಡಾ.ಶ್ರೀಧರ ಹೆಗಡೆ ಭದ್ರನ್, ಎಂ.ಎ. ಓದುವಾಗಿನಿಂದ ಗುರುಗಳಾದ ಡಾ.ವೀರಣ್ಣ ರಾಜೂರ, ಚಿತ್ರದುರ್ಗದ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಅವರಿಗೆ ಶರಣು.

ಮುಖ್ಯವಾಗಿ ಮಸಗಿ ಮರಿಶಾಂತಪ್ಪ ಅವರು ಹಳಕಟ್ಟಿಯವರನ್ನು ಕಾಣಲು ಕಾರಣರಾದುದಲ್ಲದೆ, ಹಣಕಾಸಿನ ನೆರವನ್ನು ನೀಡಲು ಪ್ರೇರಣೆಯಿತ್ತವರು ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಜಯದೇವ ಸ್ವಾಮೀಜಿ. ಇದರಿಂದ ಬಸವೇಶ್ವರ ವಚನಗಳ ಎರಡನೆಯ ಆವೃತ್ತಿ ಪ್ರಕಟಿಸಲು ಹಳಕಟ್ಟಿಯವರಿಗೆ ಸಾಧ್ಯವಾಯಿತು. ಈ ಮಾಹಿತಿಯನ್ನು ಹಳಕಟ್ಟಿಯವರು ಶಿವಾನುಭವ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನು ಪ್ರಕಾಶಕರೂ ಮುದ್ರಕರೂ ಆದ ಸ್ವ್ಯಾನ್ ಕೃಷ್ಣಮೂರ್ತಿ ಹಾಗೂ ಲೇಖಕಮಿತ್ರರಾದ ಪ್ರಕಾಶ ಗಿರಿಮಲ್ಲನವರ ರಚಿಸಿದ ‘ಮುದ್ರಣ ಗುಮ್ಮಟ’ ಕೃತಿಯಲ್ಲಿದೆ. ಈ ಕೃತಿಯಿಂದ ನನ್ನ ನಾಟಕದಲ್ಲಿ ದೃಶ್ಯವೊಂದನ್ನು ಕಟ್ಟಲು ಸಾಧ್ಯವಾಯಿತು.

ಈ ನಾಟಕವನ್ನು ತಮ್ಮ ಮುರುಘರಾಜೇಂದ್ರ ಬೃಹನ್ಮಠದ ಶ್ರೀ ಜಗದ್ಗರು ಮುರುಘರಾಜೇಂದ್ರ ಗ್ರಂಥಮಾಲೆಯ ಮೂಲಕ ಪ್ರಕಟಿಸಿದವರು ಡಾ.ಬಸವಕುಮಾರ ಸ್ವಾಮೀಜಿ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷರಾದ ಶಿವಾನಂದ ಕಳಸದ ಅವರು.

***

ಬಂಥನಾಳ ಸಂಗನಬಸವ ಶಿವಯೋಗಿಗಳ ದಿವ್ಯ ಪ್ರೇರಣೆ, ಹಳಕಟ್ಟಿ ಅವರ ಕ್ರಿಯಾಶೀಲ ಚಿಂತನೆಗಳಿಂದ ಆರಂಭವಾದ ವಿಜಾಪುರ ಲಿಂಗಾಯತ ಶಿಕ್ಷಣ ಸಂಸ್ಥೆ (ಬಿಎಲ್‌ಡಿಇ) ಇಂದು ಬೃಹದಾಕಾರವಾಗಿ ಬೆಳೆದು, ಉತ್ತರ ಕರ್ನಾಟಕದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯಾಗಿದೆ. ಇಂಥ ಹೆಮ್ಮೆಯ ಸಂಸ್ಥೆ ಕಟ್ಟಿ ಬೆಳೆಸಿದವರಲ್ಲಿ ಡಾ.ಫ.ಗು.ಹಳಕಟ್ಟಿ, ಬಂಥನಾಳ ಶಿವಯೋಗಿಗಳು ಪ್ರಮುಖರು. ಇಂಥ ಮಹನೀಯರನ್ನು ಸ್ಮರಿಸಲು 770 ಅಮರ ಗಣಾಧೀಶ್ವರರ ಲಿಂಗದ ಗುಡಿ, ಫ.ಗು.ಹಳಕಟ್ಟಿ ಅವರ ಸಮಾಧಿ ಈ ಸಂಸ್ಥೆಯ ಆವರಣದಲ್ಲಿವೆ ಎನ್ನುವುದು ಹೆಗ್ಗಳಿಕೆಯ ಸಂಗತಿ. ಅಲ್ಲದೆ ಈ ಸಂಸ್ಥೆ ಬೆಳೆಸಲು 54 ಎಕರೆ 16 ಗುಂಟೆ ಜಾಗವನ್ನು ಕೇಳಿದವರು ಬಂಥನಾಳ ಶಿವಯೋಗಿಗಳು. ಇದನ್ನು ದಾನವಾಗಿ ನೀಡಿದವರು ಬಂಗಾರಮ್ಮ ಸಜ್ಜನ. ಹೀಗೆ ಸಂಸ್ಥೆಯ ಉನ್ನತಿಗೆ ಕಾರಣರಾದ ಡಾ.ಫ.ಗು.ಹಳಕಟ್ಟಿ, ಬಂಥನಾಳ ಶಿವಯೋಗಿಗಳು ಹಾಗೂ ಬಂಗಾರಮ್ಮ ಸಜ್ಜನ ಅವರ ಪ್ರತಿಮೆಗಳನ್ನು ಬಿಎಲ್‌ಡಿ ಸಂಸ್ಥೆಯ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದರೊಂದಿಗೆ ಈ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿಗೆ ಫ.ಗು.ಹಳಕಟ್ಟಿ ಅವರ ಹೆಸರನ್ನು ಇಡಲಾಗಿದೆ.

ಹಳಕಟ್ಟಿ ಅವರ ಸಮಾಧಿ ಪಕ್ಕದಲ್ಲೇ 2003ರಲ್ಲಿ ಹಳಕಟ್ಟಿ ಅವರ ಸ್ಮಾರಕ ಭವನ ನಿರ್ಮಿಸಲಾಯಿತು. ಇದರಲ್ಲಿ ಹಳಕಟ್ಟಿಯವರ ಹಸ್ತಪ್ರತಿ, ಅವರು ಬಳಸುತ್ತಿದ್ದ ವಸ್ತುಗಳು, ಅವರ ಹಿತಚಿಂತಕ ಪ್ರೆಸ್ಸಿನ ಯಂತ್ರ ಮೊದಲಾದವು ಇವೆ. 2005ರಲ್ಲಿ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಆರಂಭಿಸಲಾಯಿತು. ಇದರ ಮೂಲಕ ಹಳಕಟ್ಟಿಯವರ ಸಮಗ್ರ ಸಾಹಿತ್ಯವನ್ನು 15 ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಈ ಮೂಲಕ ವಚನ ಸಾಹಿತ್ಯಕ್ಕೆ ಅವರು ಕೊಟ್ಟ ಕೊಡುಗೆಯನ್ನು ಸದಾ ಸ್ಮರಿಸಲು ಹಳಕಟ್ಟಿ ಸಂಶೋಧನಾ ಕೇಂದ್ರ ಕಾರ್ಯೋನ್ಮುಖವಾಗಿದೆ.

ಇದರೊಂದಿಗೆ ನಾಡಿನಾದ್ಯಂತ ಅನೇಕ ಲೇಖಕರು ಡಾ.ಫ.ಗು.ಹಳಕಟ್ಟಿ ಅವರ ಬದುಕು-ಸಾಧನೆಗಳನ್ನು ದಾಖಲಿಸುವ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಆದರೆ ಅವರ ಜೀವನ-ಸಾಧನೆ ಕುರಿತ ನಾಟಕ ಬಂದಿರುವುದು ಅಪರೂಪ. ಈ ಹಿನ್ನೆಲೆಯಲ್ಲಿ ‘ವಚನ ಗುಮ್ಮಟ’ ನಾಟಕ ರಚಿಸಿದೆ.

ಜಗುಲಿಯ ಮೇಲೆ, ಮಠದೊಳಗೆ ಬಟ್ಟೆಯಲ್ಲಿ ಸುತ್ತಿಟ್ಟು ಪೂಜೆಗೊಳ್ಳುತ್ತಿದ್ದ ವಚನಗಳನ್ನು ಸಂಗ್ರಹಿಸಿ, ಪ್ರಕಟಿಸುವ ಒಲವು ಬೆಳೆಸಿಕೊಂಡು ನಂತರ ನಿಲುವು ಆದುದು ಹಳಕಟ್ಟಿ ಅವರ ಮಹತ್ವದ ಕಾರ್ಯ. ವೇದದ ಸಾರ, ಉಪನಿಷತ್ತುಗಳ ಸತ್ವ, ಅನುಭವ ತುಂಬಿದ ಕೊಡಗಳಾದ ವಚನಗಳನ್ನು ಪ್ರಕಟಿಸಿದರು. ಇದಕ್ಕಾಗಿ ಹಳೆಯ ಶೋಧಕ್ಕೆ ಹೊಸ ಸೃಷ್ಟಿಗಾಗಿ ದೃಷ್ಟಿ ಚೆಲ್ಲಿದರು.

ಇದರ ಸಲುವಾಗಿ ಶಿವಾನುಭವ ಪತ್ರಿಕೆ ಆರಂಭಿಸಿದರು. ಇದಕ್ಕಾಗಿ ಹಿತಚಿಂತಕ ಮುದ್ರಣಾಲಯ ಆರಂಭಿಸಿದರು. ಈ ಮೂಲಕ ಶರಣರ ಉದಾತ್ತ ತತ್ವಗಳನ್ನು ನಾಡಿನ ಜನರ ಮನದಲ್ಲಿ ಬಿತ್ತಿದರು. ಜನರಿಗೆ ಆದರ್ಶವಾಗಲೆಂದು ಶಿವಶರಣರ ಕುರಿತ ಕೃತಿಗಳನ್ನು ಪ್ರಕಟಿಸಿದರು. ಹೃದಯ ಅರಳುವ, ಮನ ನಿಷ್ಕಲಂಕವಾಗುವ, ವಿಶ್ವವ್ಯಾಪಿ ಪಡೆಯುವ ಭಾವ ತುಂಬಿದ ವಚನಗಳ ಮಹತ್ವವನ್ನು ಮನಗಾಣಿಸಿದರು. ಅಲ್ಲದೆ ಜನರು ಕಾಯಕಜೀವಿಗಳಾಲೆಂದು ಪ್ರೋತ್ಸಾಹಿಸಿದರು.

ಇದರೊಂದಿಗೆ ಫಕೀರ ಬಸ್ತಿಯಾಗಿದ್ದ ಅಖಂಡ ವಿಜಾಪುರ ಜಿಲ್ಲೆಯನ್ನು ಶಿಕ್ಷಣವಂತರ ಜಿಲ್ಲೆಯನ್ನಾಗಿ ರೂಪಿಸಿದ ಹೆಗ್ಗಳಿಕೆ ಅವರದು. ಕೇವಲ ವಚನ ಸಾಹಿತ್ಯಕ್ಕೆ ಕೊಡುಗೆ ಕೊಡದೆ ಶಿಕ್ಷಣ, ಹಣಕಾಸು, ಒಕ್ಕಲುತನ ಹಾಗೂ ಸಹಕಾರ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಅನನ್ಯ. ಅವರ ಜೀವನ-ಸಾಧನೆ ಕುರಿತು ಹಿಡಿದಿಡುವ ಪುಟ್ಟ ಪ್ರಯತ್ನದ ನಾಟಕವಿದು.

ಅಂದಹಾಗೆ ನಾಳೆ (ಅಕ್ಟೋಬರ್ 17) ಸಂಜೆ ಆರು ಗಂಟೆಗೆ ಚಿತ್ರದುರ್ಗದ ಮುರುಘಾ ಮಠದಲ್ಲಿ ಶರಣ ಸಾಹಿತ್ಯ ಉತ್ಸವದಲ್ಲಿ ‘ವಚನ ಗುಮ್ಮಟ’ ಕೃತಿ ಬಿಡುಗಡೆಗೊಳ್ಳಲಿದೆ.

***

ಹಳಕಟ್ಟಿಯವರಿಗೆ ಸಂಬಂಧಿಸಿದ ‘ಮುದ್ರಣ ಗುಮ್ಮಟ’ ಕೃತಿ ಮಹತ್ವವಾದುದು. ಇದನ್ನು ಸ್ವ್ಯಾನ್ ಕೃಷ್ಣಮೂರ್ತಿ ಹಾಗೂ ಪ್ರಕಾಶ ಗಿರಿಮಲ್ಲನವರ ರಚಿಸಿದ್ದಾರೆ. ಇದನ್ನು ಕನ್ನಡ ಮುದ್ರಣಾಲಯಗಳ ಇತಿಹಾಸ ಸಂಶೋಧನಾ ಕೇಂದ್ರ ಪ್ರಕಟಿಸಿದೆ.

ಹಳಕಟ್ಟಿಯವರ ವಚನಶಾಸ್ತ್ರಸಾರ ಕೃತಿಯನ್ನು ಮುದ್ರಣಾಲಯದಲ್ಲಿ ಮುದ್ರಿಸಲು ಸಾಧ್ಯವಿಲ್ಲವೆಂದು ಹಸ್ತಪ್ರತಿ ಹಾಗೂ ಮುಂಗಡ ಹಣವನ್ನು ಹಿಂದಿರುಗಿಸಿ ಮುದ್ರಣಾಲಯ ಸ್ಥಾಪಿಸುವ ಕಿಚ್ಚು ಹಚ್ಚಿದ ಮಂಗಳೂರು ಬಾಸೆಲ್ ಮಿಶನ್ ಮುದ್ರಣಾಲಯಕ್ಕೆ ಈ ಕೃತಿಯನ್ನು ಅರ್ಪಿಸಿದ್ದು ವಿಶೇಷ. ಈ ಕೃತಿಗೆ ಬೆಂಗಳೂರಿನ ಪ್ರಿಂಟೆಕ್ ಪಾರ್ಕ್ ಕ್ಲಸ್ಟರ್ ಛೇರ್ಮನ್ ಸಿ.ಆರ್.ಜನಾರ್ದನ ಅವರು ನಲ್ನುಡಿ ಬರೆದಿದ್ದಾರೆ. ಅದರಲ್ಲಿ ‘ಡಾ.ಹಳಕಟ್ಟಿಯವರಿಗೆ ಮುದ್ರಣವೆಂದರೆ ಕೇವಲ ಪುಸ್ತಕ ಪ್ರಕಟಿಸುವ ಸಾಧನವಾಗಿರಲಿಲ್ಲ. ಅದು ಜ್ಞಾನಪ್ರಸಾರದ ಮಹಾಯಜ್ಞವಾಗಿತ್ತು. ಕನ್ನಡ ಸಾಹಿತ್ಯದ ಅಮೂಲ್ಯ ಸಂಪತ್ತನ್ನು ಜನಸಾಮಾನ್ಯರ ಬಳಿಗೆ ತಲುಪಿಸುವ ಸೇತುವೆಯಾಗಿ ಅವರು ಮುದ್ರಣವನ್ನು ಕಂಡರು. ಆ ಕಾಲದಲ್ಲಿಯೇ ವಿಜಾಪುರದಲ್ಲಿ ಜಿಲ್ಲಾ ಮುದ್ರಣಕಾರರ ಸಂಘವನ್ನು ಸ್ಥಾಪಿಸುವ ಮೂಲಕ ಹಳಕಟ್ಟಿಯವರು ಮುದ್ರಣ ಕ್ಷೇತ್ರದ ಮಹತ್ವವನ್ನು ಎಷ್ಟು ಆಳವಾಗಿ ಅರಿತಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಅವರ ಈ ದೂರದೃಷ್ಟಿ ಮತ್ತು ಸಂಘಟನಾ ಸಾಮರ್ಥ್ಯ ಮುದ್ರಣಲೋಕಕ್ಕೆ ಹೊಸ ಚೈತನ್ಯ ನೀಡಿತು. ಸ್ಥಳೀಯ ಮಿತಿಗಳನ್ನು ಮೀರಿ ರಾಷ್ಟ್ರಮಟ್ಟದಲ್ಲಿ ಮುದ್ರಣ ಚಟುವಟಿಕೆಗಳೊಂದಿಗೆ ತೊಡಗಿಸಿಕೊಂಡಿದ್ದ ಅವರು, ಕನ್ನಡ ಮುದ್ರಣ ಸಂಸ್ಕೃತಿಯನ್ನು ವಿಶಾಲ ಪರಿಧಿಯಲ್ಲಿ ನೋಡಿದ ದೂರದೃಷ್ಟಿಯವರಾಗಿದ್ದರು’ ಎಂದಿದ್ದಾರೆ.

ಇದರೊಂದಿಗೆ ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ ಬಿ.ಆರ್. ಅಶೋಕಕುಮಾರ್ ಮೌಲಿಕ ಮುನ್ನುಡಿ ಬರೆದಿದ್ದಾರೆ. ‘1826ರ ಮೊದಲು ಕನ್ನಡದ ಕೆಲವು ಕೃತಿಗಳನ್ನು ಮುದ್ರಿಸಲು ಮದ್ರಾಸ್, ಶ್ರೀರಾಂಪುರ ಮೊದಲಾದ ಕಡೆ ಹೋಗಬೇಕಾದ ಅನಿವಾರ್ಯತೆ ಇತ್ತು. ಇಂಗ್ಲೆಂಡ್‌ನಿಂದ ಮೊತ್ತ ಮೊದಲು ಮುದ್ರಣಯಂತ್ರವನ್ನು ಕನ್ನಡದ ನೆಲದಲ್ಲಿ ತಂದ ಕೀರ್ತಿ ಜಾನ್ ಹ್ಯಾಂಡ್ಸ್ ಎಂಬ ಅಧಿಕಾರಿಯದು. ಅಧಿಕೃತವಾಗಿ 1827ರಲ್ಲಿ ಈ ಮುದ್ರಣಯಂತ್ರ ಕನ್ನಡ ಪುಸ್ತಕಗಳ ಮುದ್ರಣಕ್ಕೆ ನಾಂದಿ ಹಾಡಿತು. ಇಂದಿಗೆ ಎರಡು ನೂರು ವರ್ಷಗಳ ಹಿಂದೆ ಈ ಕ್ರಾಂತಿಯು ಜರುಗಿತು. ಹೀಗಾಗಿ ಕನ್ನಡ ಮುದ್ರಣಯಂತ್ರದ ದ್ವಿತಶಮಾನೋತ್ಸವ ಸಂಭ್ರಮವನ್ನು ಆಚರಿಸುವುದು ನಮ್ಮೆಲ್ಲರ ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ’ ಎಂದಿದ್ದು ಗಮನಾರ್ಹ.

ಕನ್ನಡ ಮುದ್ರಣೋದ್ಯಮದ ದ್ವಿಶತಮಾನೋತ್ಸವ ಸಂದರ್ಭದಲ್ಲಿ ಈ ಕೃತಿ ಪ್ರಕಟವಾಗಿದ್ದು ಮತ್ತು ಮುದ್ರಣೋದ್ಯಮಕ್ಕೆ ಅವರ ಕೊಡುಗೆಯನ್ನು ಸ್ಮರಿಸುವ ಈ ಕೃತಿಯು ಮಹತ್ವಪೂರ್ಣವಾದುದು.

ಇದರೊಂದಿಗೆ ಮೈಸೂರಿನ ಗುರುಪ್ರಸಾದ್ ನಿರ್ಮಾಣದ, ವಿಶಾಲ್ ರಾಜ್ ನಿರ್ದೇಶನದ ‘ಅಳಿಯದೆ ಉಳಿದವರು’ ಸಿನೆಮಾದ ಚಿತ್ರೀಕರಣವೂ ಶುರುವಾಗಿದೆ. ಒಟ್ಟಾರೆ ಹಳಕಟ್ಟಿಯವರ ಕಾರ್ಯವನ್ನು ಸದಾ ನೆನಪಿಸುವ ಕಾರ್ಯಗಳು ನಿತ್ಯ ನಡೆಯುತ್ತಿವೆ, ನಡೆಯುತ್ತಲೇ ಇರಲಿ.

(ಅಂಕಣಕಾರರು ಹಿರಿಯ ಪತ್ರಕರ್ತ, ರಂಗಕರ್ಮಿ)

Tags

Halakatti
share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X