Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಯುಗದ ಉತ್ಸಾಹವ ನೋಡಿರೆ...

ಯುಗದ ಉತ್ಸಾಹವ ನೋಡಿರೆ...

ಗಣೇಶ ಅಮೀನಗಡಗಣೇಶ ಅಮೀನಗಡ7 Nov 2025 11:40 AM IST
share
ಯುಗದ ಉತ್ಸಾಹವ ನೋಡಿರೆ...

ನಾಟಕ: ಜಂಗಮದೆಡೆಗೆ

ರಚನೆ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ನಿರ್ದೇಶನ-ವಿನ್ಯಾಸ-ಸಂಗೀತ: ಆರ್.ಜಗದೀಶ್

ಸಂಗೀತ ಸಹಕಾರ: ಎಚ್.ಎಸ್.ನಾಗರಾಜ್, ದಾಕ್ಷಾಯಿಣಿ ಕೆ.

ಬೆಳಕಿನ ವಿನ್ಯಾಸ: ರಾಜು ಲಕ್ಕಮುತ್ತೇನಹಳ್ಳಿ

ರಂಗದ ಮೇಲೆ:

ಬಸವರಾಜ ಪೂಜಾರಿ, ವಿಶ್ವಾಸ್ ರೆಡ್ಡಿ, ಪ್ರವೀಣ ಕೊಪ್ಪಳ, ಸುನೀಲ ಕಲಬುರಗಿ, ಉದಯಕುಮಾರ್, ದಿನೇಶ ಯರನಾಳೆ, ಎನ್. ವಿಶ್ವಜ್ಯೋತಿ, ಪ್ರಶಾಂತ್, ಜಿ. ಯಲ್ಲಪ್ಪ, ಎಸ್.ಎಸ್. ಸುಹಾಸ್, ಬಿ.ಎಸ್.ರಾಜೇಶ್, ಜೆ.ಜನಾರ್ದನ್, ಚಂದ್ರಮ್ಮ, ಮುತ್ತುರತ್ನ ಹಿರೇಮಠ.

ಬಸವ ಸಂಸ್ಕೃತಿ ಅಭಿಯಾನದಲ್ಲಿ ಗಮನ ಸೆಳೆದಿದ್ದ ‘ಜಂಗಮದೆಡೆಗೆ’ ನಾಟಕ ಸಾಣೇಹಳ್ಳಿಯ ಈ ಬಾರಿಯ (2025) ಶಿವಸಂಚಾರದ ಮಹತ್ವದ ನಾಟಕ. ಇದಕ್ಕೂ ಮೊದಲು 2003ರಲ್ಲಿ ಶಿವಸಂಚಾರದ ನಾಟಕವಾಗಿ 60ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತ್ತು. ಅಲ್ಲದೆ ಈ ನಾಟಕ ‘ಜಂಗಮ್ ಕೀ ಔರ್’ ಎಂದು ಅನುವಾದಗೊಂಡು 2007ರಲ್ಲಿ ದೇಶದ 21 ನಗರಗಳಲ್ಲಿ ಪ್ರದರ್ಶನಗೊಂಡಿತು. ಜೊತೆಗೆ 2008ರಲ್ಲಿ ಅಮೆರಿಕದ ‘ಅಕ್ಕ’ ಸಮ್ಮೇಳನದಲ್ಲೂ ಈ ನಾಟಕ ಪ್ರದರ್ಶನಗೊಂಡಿತ್ತು.

ಮತ್ತೆ ಈ ನಾಟಕ ಈ ವರ್ಷದ ಶಿವಸಂಚಾರದ ಮೂಲಕ ಸುತ್ತಾಟ ನಡೆಸಲಿದೆ. ಬಸವಣ್ಣನವರ ಕುರಿತ ಈ ನಾಟಕದ ಮಹತ್ವ ಹಾಗೂ ಪ್ರಸ್ತುತತೆ ಕುರಿತು ಅಲ್ಲದೆ ನಾಟಕೋತ್ಸವ ಉದ್ದೇಶ ಕುರಿತೂ ಈ ನಾಟಕದ ರಚನೆಕಾರರಾದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೀಗೆ ಹೇಳುತ್ತಾರೆ: ‘‘ಅಲ್ಲಮಪ್ರಭು ದೇವರ ದೀರ್ಘ ವಚನದ ಆಧಾರದ ಮೇಲೆ ಯುಗದ ಉತ್ಸಾಹವ ನೋಡಿರೆ... ಈ ವರ್ಷದ ನಮ್ಮ ನಾಟಕೋತ್ಸವದ ಧ್ಯೇಯವಾಕ್ಯ.

ಅಲ್ಲಮಪ್ರಭು ಜ್ಞಾನಿಗಳು. ಅಂಥವರು ಬಸವಣ್ಣನವರ ಬದುಕನ್ನು ಸಮಗ್ರವಾಗಿ ಗಮನಿಸಿ 12ನೇ ಶತಮಾನಕ್ಕೆ ಮಾತ್ರವಲ್ಲ; ಯುಗ ಯುಗಗಳಿಗೂ ಉತ್ಸಾಹ ತುಂಬಿದವರು ಎನ್ನುವ ಭಾವ ವಚನದಲ್ಲಿ ಅಡಕವಾಗಿದೆ. ಈ ಭಾವಕ್ಕೆ ಕಾರಣವೂ ಇದೆ; ಮಹಾತ್ಮಾ ಗಾಂಧೀಜಿ ಅವರು ದಲಿತ ಚಿಂತನೆ ಮಾಡಿದಂಥವರು. ಮುಂದಿನ ಜನ್ಮವಿದ್ದರೆ ನಾನು ಹರಿಜನರ ಮಗುವಾಗಿ ಜನಿಸಲು ಇಷ್ಟಪಡುವೆ ಎಂದಿದ್ದರು. ಬಸವಣ್ಣನವರು ಅಲ್ಲಿಯವರೆಗೂ ಕಾಯಲಿಲ್ಲ. ಬದಲಾಗಿ ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ ಇವರ ಮನೆಯ ದಾಸ-ದಾಸಿಯರಿಗೆ ಹುಟ್ಟಿದ ಮಗ ನಾನು ಎಂದು ಹೇಳಿಕೊಳ್ಳುವ ಮೂಲಕ ಕಕ್ಕಯ್ಯ, ಚೆನ್ನಯ್ಯ, ದಾಸಯ್ಯ ಇಂಥವರನ್ನೆಲ್ಲ ತಮ್ಮ ಮಹಾಮನೆಗೆ ಬರಮಾಡಿಕೊಂಡರು. ಕರುಳಿನ ಸಂಬಂಧವನ್ನು ಮುಂದುವರಿಸಿದರು. ಇದು ಬಸವಣ್ಣನವರ ವ್ಯಕ್ತಿತ್ವ. ಹಾಗಾಗಿ ಅಂಥವರನ್ನು ಯುಗದ ಉತ್ಸಾಹವ ನೋಡಿರೆ ಎಂದೆನ್ನದೆ ಬೇರೆಯವರಿಗೆ ಹೇಳಲು ಸಾಧ್ಯವಿಲ್ಲ. ಈ ನೆಲೆಯಲ್ಲಿ ಬಸವಾದಿ ಶರಣರ ತತ್ವಸಿದ್ಧಾಂತಗಳ ಚಿಂತನ ಮಂಥನ ಮಾಡುವುದರ ಮೂಲಕ ಜನರನ್ನು ಜಾಗೃತಗೊಳಿಸುವುದು ನಮ್ಮ ನಾಟಕೋತ್ಸವದ ಆಶಯ’’

ಈ ನಾಟಕದ ಇನ್ನೊಂದು ವಿಶೇಷವೆಂದರೆ; ಅಳಕು ಮತ್ತು ಬೆಳಕು ಎಂಬ ಅವಳಿ ಪಾತ್ರಗಳ ಮೂಲಕ ಬಸವಣ್ಣನವರ ಅಂತರಾಳವನ್ನು ಕೆದಕುತ್ತವೆ, ಪ್ರಶ್ನಿಸುತ್ತವೆ. ‘ನಾವು ಅದೃಶ್ಯ ಶಕ್ತಿಗಳಾದರೂ ಬಸವಣ್ಣನವರ ಆಂತರಿಕ ತೊಳಲಾಟದ ಧ್ವನಿಗಳು’ ಎನ್ನುತ್ತವೆ. ಎಂಟು ವರ್ಷದ ಬಸವಣ್ಣ, ತನ್ನ ಉಪನಯನ ಸಂದರ್ಭದಲ್ಲಿ ಪುರೋಹಿತರನ್ನೇ ಕೆಣಕುತ್ತಾನೆ. ತನ್ನ ತಂದೆಯನ್ನು ‘‘ಅಪ್ಪಾಜಿ, ತುಪ್ಪ, ಬಟ್ಟೆ, ದವಸಗಳನ್ನೇಕೆ ಬೆಂಕಿಗೆ ಹಾಕುವರು?’’ ಎಂದು ಪ್ರಶ್ನಿಸುತ್ತಾನೆ. ‘‘ಅಗ್ನಿದೇವರ ತೃಪ್ತಿಗಾಗಿ ಮಗು’’ ಎನ್ನುತ್ತಾರೆ ಅವನ ತಂದೆ ಮಾದರಸ. ‘‘ಹಾಗಾದರೆ ಅಂದು ಈ ಪುರೋಹಿತರ ಮನೆಗೆ ಬೆಂಕಿ ಬಿದ್ದಾಗ ಬೀದಿಯ ಧೂಳು, ಬಚ್ಚಲ ನೀರು ಬಳಸಿ ಅದನ್ನು ಆರಿಸಿದ್ದೇಕೆ?’’ ಎಂದು ಕೇಳಿದಾಗ ಪುರೋಹಿತರೊಬ್ಬರು ‘‘ಬಾಯಿಮುಚ್ಚಿಕೊಂಡು ಕೂರು’’ ಎನ್ನುತ್ತಾರೆ. ನಂತರ ತೋಟದ ಕೆಲಸ ಮಾಡುವ ದುರುಗ ಮಾವಿನಮರದಿಂದ ಕೆಳಗೆ ಬಿದ್ದುದನ್ನು ಕೇಳಿದಾಗ ‘‘ಬಂದೆ ನಿಲ್ಲು’’ ಎನ್ನುತ್ತಾನೆ ಬಸವಣ್ಣ. ‘‘ಹೋಮ, ಹವನ ಇನ್ನೂ ಮುಗಿದಿಲ್ಲ. ಅಕ್ಷತೆ ಕೂಡ ಆಗಿಲ್ಲ’’ ಎಂದು ಇನ್ನೊಬ್ಬ ಪುರೋಹಿತರು ಹೇಳುತ್ತಾರೆ. ಆದರೆ ಬಸವಣ್ಣ, ದುರುಗಪ್ಪನ ಸ್ಥಿತಿ ಕಂಡು ಮರುಗಿ ‘‘ಎಷ್ಟೊಂದು ರಕ್ತ? ನೋಯ್ತಾ ಇದೆಯಾ?’’ ಎಂದು ತನ್ನ ಉತ್ತರೀಯದಿಂದಲೇ ರಕ್ತ ಒರೆಸಿ, ಅದನ್ನೇ ಹರಿದು ಗಾಯಕ್ಕೆ ಕಟ್ಟುವನು. ಆಗ ಪುರೋಹಿತರು ‘‘ಹೋಗಿ ಹೋಗಿ ಹೊಲೆಯನ್ನ ಅದೂ ಇಂಥ ಗಳಿಗೆಯಲ್ಲಿ ಮುಟ್ಟೋದೆ?’’ ಎಂದಾಗ ಬಸವಣ್ಣ ‘‘ನಾನು ಇವನನ್ನು ಮುಟ್ಟಬಾರದೆ?’’ ಎಂದು ಕೇಳುತ್ತಾನೆ. ‘‘ಮುಟ್ಟಬಾರದು’’ ಎನ್ನುವ ಪುರೋಹಿತರಿಗೆ ಏಕೆಂದು ಪ್ರಶ್ನಿಸುತ್ತಾನೆ. ‘‘ನಿನಗೀಗ ಯಜ್ಞೋಪವೀತ ಸಂಸ್ಕಾರವಾಗಿದೆ’’ ಎನ್ನುತ್ತಾರೆ. ‘‘ಅಪ್ಪಾಜಿ, ದುರುಗಪ್ಪನಿಗೇಕೆ ಈ ಸಂಸ್ಕಾರ ಆಗಿಲ್ಲ?’’ ಎಂದು ಬಸವಣ್ಣ ಪ್ರಶ್ನಿಸುತ್ತಾನೆ. ‘‘ಅಯ್ಯೋ ಹುಚ್ಚಪ್ಪ, ಯಜ್ಞೋಪವೀತ ಧರಿಸಲು ಅವನು ನಿನ್ನಂತೆ ಬ್ರಾಹ್ಮಣ ಅಲ್ಲವಲ್ಲ?’’ ಎನ್ನುತ್ತಾರೆ. ‘‘ಹಾಗೊ! ಅವ್ವ, ಅಕ್ಕನಿಗೂ ಈ ಸಂಸ್ಕಾರ ಆಗಿಲ್ಲವಲ್ಲ?’’ ಎಂದು ಪ್ರಶ್ನಿಸುತ್ತಾನೆ. ಉದ್ಧಟ ಪ್ರಶ್ನೆಯೆಂದು ಪುರೋಹಿತರು ಮಾದರಸರಿಗೆ ದೂರುತ್ತಾರೆ. ಆಗ ಬಸವಣ್ಣ ‘‘ಮನುಷ್ಯ ಮನುಷ್ಯರ ನಡುವೆ ಅಡ್ಡಗೋಡೆಯಾಗಿರುವ ಈ ಯಜ್ಞೋಪವೀತ ನನಗಾದರೂ ಏಕೆ ಬೇಕು?’’ ಎಂದು ತನ್ನ ಕೊರಳಲ್ಲಿದ್ದ ಜನಿವಾರವನ್ನು ಕಿತ್ತು ಯಜ್ಞಕುಂಡಕ್ಕೆ ಬಸವಣ್ಣ ಹಾಕುವನು. ಆಗ ಮಾದರಸ ಹೊಡೆಯಲು ಹೋಗುವರು. ಪುರೋಹಿತರು ‘ಕುಲಕಂಟಕನಾಗುವನು’ ಎಂದು ಹೆದರಿಸುವರು. ಆಗ ‘‘ಜಂಗಮವಲ್ಲದ ಈ ಅಗ್ರಹಾರಕ್ಕೆ ಕಾಲಿಡಲಾರೆ’’ ಎಂದು ಬಸವಣ್ಣ ಹೊರಡುವನು. ಮುಂದೆ ಬಸವಣ್ಣ ತನ್ನ ತಾಯಿಯ ಅಣ್ಣ ಅಂದರೆ ಸೋದರಮಾವ ಬಲದೇವರಸ ಇರುವ ಮಂಗಳವೇಡೆಯ ಬಿಜ್ಜಳ ಪ್ರಭುವಿನ ಆಸ್ಥಾನದ ಮಂತ್ರಿಗಳಿದ್ದಲ್ಲಿಗೆ ತೆರಳುವನು.

ಮಂಗಳವೇಡೆಯಲ್ಲಿ ಭಂಡಾರದ ಕೋಣೆಯಲ್ಲಿ ಕರಣಿಕರು ಎಷ್ಟೇ ಲೆಕ್ಕ ಹಾಕಿದರೂ ತಾಳೆಯಾಗದ ಕುರಿತು ಆತಂಕಪಡುವಾಗ ಬಸವಣ್ಣನವರು ಬಂದು ಲೆಕ್ಕ ಸರಿಪಡಿಸಿದಾಗ ಬಿಜ್ಜಳ ‘‘ಯಾರೀ ಯುವಕ?’’ ಎಂದು ಪ್ರಶ್ನಿಸಿ, ಚರ್ಚಿಸಿ ಭಂಡಾರದ ಕರಣಿಕರನ್ನಾಗಿ ನೇಮಿಸುತ್ತಾರೆ. ಆಗ ನಡೆದ ಚರ್ಚೆಯಲ್ಲಿ ‘‘ಅರ್ಹತೆಯುಳ್ಳವರು ರಾಜ್ಯಾಧಿಕಾರ ಪಡೆಯಬಹುದು’’ ಎಂದು ಬಸವಣ್ಣನವರು ಹೇಳಿದಾಗ ಬಿಜ್ಜಳ ವಿವರ ಕೇಳುತ್ತಾರೆ. ‘‘ಅಧಿಕಾರ ಯಾರೊಬ್ಬರ ಸೊತ್ತಲ್ಲ. ಅರ್ಹತೆಯಿಲ್ಲದಿದ್ದರೂ ರಾಜನ ಮಗನೆಂಬ ಒಂದೇ ಕಾರಣಕ್ಕೆ ಅವನಿಗೆ ರಾಜ್ಯಾಧಿಕಾರ ಮನ್ನಿಸಿದರೆ ನಾಡಿನ ಹಿತವಾಗದು. ಜಾತಿ, ವಂಶ ಅಥವಾ ಪರಂಪರೆಯ ಆಧಾರದ ಮೇಲೆ ಅಧಿಕಾರಕ್ಕೆ ಬಂದರೆ ಜನರ ಕ್ಷೇಮವಾಗದು. ದುರ್ವ್ಯಸನಗಳಲ್ಲಿ ಮುಳುಗಿ ಪ್ರಜಾಹಿತವನ್ನು ಕಡೆಗಣಿಸುವ ರಾಜನನ್ನು ಸಿಂಹಾಸನದಿಂದ ಕೆಳಗಿಳಿಸಿ ಅರ್ಹರು ಆ ಸ್ಥಾನವನ್ನು ತುಂಬಬೇಕು’’ ಎಂದು ಪ್ರತಿಪಾದಿಸುತ್ತಾರೆ. ಆಗ ಬಿಜ್ಜಳ ‘‘ಸಂಪ್ರದಾಯವೊಂದಿದೆಯಲ್ಲ?’’ ಎಂದಾಗ ‘‘ಸಂಪ್ರದಾಯವನ್ನು ಪ್ರಶ್ನಿಸಬೇಕು ಪ್ರಭು. ಯಾರು ಏನು ಹೇಳುತ್ತಾರೆ ಎನ್ನುವುದು ಮುಖ್ಯವಲ್ಲ. ವಿವೇಕ ಹೇಳಿದಂತೆ ನಡೆಯಬೇಕು. ಆತ್ಮವಂಚನೆ ಮಾಡಿಕೊಳ್ಳಬಾರದು’’ ಎಂದು ಸ್ಪಷ್ಟಪಡಿಸುತ್ತಾರೆ ಬಸವಣ್ಣ. ಹೀಗೆ ಶಕ್ತಿಯುತವಾದ ಮಾತುಗಳು ನಾಟಕದುದ್ದಕ್ಕೂ ಇವೆ.

ಹೀಗಿರುವಾಗ ಮಹಾಮಂತ್ರಿ ಬಲದೇವರಸರು ಅಕಾಲ ಮರಣಕ್ಕೆ ತುತ್ತಾಗುತ್ತಾರೆ. ಬರಗಾಲದ ಜೊತೆಗೆ ಭಂಡಾರದ ಹಣವೂ ದುರುಪಯೋಗವಾಗಿರುವ ಕುರಿತು ಬಿಜ್ಜಳ ಚಿಂತಿಸುವಾಗ ಬಸವಣ್ಣ ‘‘ಬಂಗಾರದ ನಾಣ್ಯಗಳನ್ನು ಚಲಾವಣೆಗೆ ತಂದರೆ ಬೇರೆ ಬೇರೆ ದೇಶಗಳಿಂದ ವ್ಯಾಪಾರಿಗಳು ಕಲ್ಯಾಣಕ್ಕೆ ಬರಲು ಮತ್ತು ನಮ್ಮವರು ಹೊರಗೆ ಹೋಗಲು ಅವಕಾಶವಾಗುವುದು’’ ಎನ್ನುವ ಸಲಹೆ ನೀಡುತ್ತಾರೆ. ಇಂಥ ಸಂದರ್ಭದಲ್ಲಿ ಬಸವಣ್ಣನವರನ್ನು ಮಹಾಮಂತ್ರಿ ಮಾಡಲು ಬಿಜ್ಜಳ ಮುಂದಾದಾಗ ಆಸ್ಥಾನದಲ್ಲಿದ್ದವರು ವಿರೋಧಿಸುತ್ತಾರೆ ಜೊತೆಗೆ ಬಸವಣ್ಣನವರು ನಿರಾಕರಿಸುತ್ತಾರೆ.

ನಂತರದ ದೃಶ್ಯವೆಂದರೆ ಅರಮನೆಯ ಪಕ್ಕದಲ್ಲಿ ಭೂಮಿ ಅಗೆಯುವಾಗ ಸಿಕ್ಕ ತಾಮ್ರಪತ್ರದಲ್ಲಿ ಬಿಜ್ಜಳನ ಸಿಂಹಾಸನದ ಕೆಳಗೆ ಅಪಾರ ನಿಧಿಯಿದೆ ಎಂದು ಬಸವಣ್ಣನವರು ಹೇಳುತ್ತಾರೆ. ಬಳಿಕ ಹರಳಯ್ಯನ ಮಗ ಶೀಲವಂತ ಹಾಗೂ ಮಧುವರಸನ ಮಗಳು ನೀಲಾ ತಾವು ಪ್ರೀತಿಸುತ್ತಿರುವ ಕುರಿತು ತಿಳಿಸುತ್ತಾರೆ. ಬಳಿಕ ‘‘ಮದುವೆಯಾಗಲು ಅನುಭವ ಮಂಟಪ ಅನುಮತಿ ನೀಡಬೇಕು’’ ಎಂದು ಶೀಲವಂತ ಕೇಳುತ್ತಾನೆ. ಈ ಕುರಿತು ಬಿಜ್ಜಳನ ಆಸ್ಥಾನದಲ್ಲಿ ಚರ್ಚೆ ನಡೆಯುತ್ತದೆ. ‘‘ಹೊಲೆಯರ ಹುಡುಗನೊಂದಿಗೆ ಬ್ರಾಹ್ಮಣ ಕನ್ಯೆಯ ಮದುವೆ?’’ ಎಂದು ಪಂಡಿತ, ಮಂಚಣ್ಣ ಚರ್ಚಿಸುತ್ತಾರೆ. ಆಗ ಬಸವಣ್ಣ ‘‘ಲಿಂಗದೀಕ್ಷೆಯ ಮೂಲಕ ಪೂರ್ವಜನ್ಮ ಕಳೆದುಕೊಂಡು ಶರಣತ್ವ ಪಡೆದಿರುವರು. ಶರಣರಿಗೆ ಜಾತಿಯಿಲ್ಲ. ನೀತಿಯೊಂದೇ ಮುಖ್ಯ. ನೀತಿಯ ಆಧಾರದ ಮೇಲೆ ಅವರ ಮದುವೆ ನಡೆಯುವುದು’’ ಎಂದು ಸ್ಪಷ್ಟಪಡಿಸುತ್ತಾರೆ. ಹೀಗೆ ಚರ್ಚೆ ನಡೆಯುವಾಗ ಬಸವಣ್ಣ ‘‘ನನ್ನ ಆದರ್ಶಗಳಿಗೆ ಅಡ್ಡಿಯಾಗುವ ಅಧಿಕಾರ ನನಗೆ ಬೇಕಿಲ್ಲ’’ ಎಂದು ಕಿರೀಟ ಕೆಳಗಿಡುವರು. ಆಮೇಲಿನ ದೃಶ್ಯಗಳಲ್ಲಿ ಬಿಜ್ಜಳನ ಮಗ ಸೋವಿದೇವ ಅಧಿಕಾರಕ್ಕೆ ಬರುವುದು, ಕಾಡುವ ಬರಗಾಲದ ನಡುವೆ ಬಿಜ್ಜಳ ಪಶ್ಚಾತ್ತಾಪ ಪಡುವುದು... ಕೊನೆಗೆ ಬಸವಣ್ಣ ‘‘ಅನುಭವ ಮಂಟಪ ಮತ್ತು ಮಹಾಮನೆಯ ಕನಸು ಕಂಡದ್ದು; ಕಂಡ ಕನಸು ನನಸಾಗಲು ದುಡಿದದ್ದು ನನಗಾಗಿಯೂ ಅಲ್ಲ, ಬಿಜ್ಜಳ ಪ್ರಭುಗಳಿಗಾಗಿಯೂ ಅಲ್ಲ. ನಾಡಿನಲ್ಲಿ ಬೆಳಕು ತರಬೇಕು, ಆ ಬೆಳಕು ಜಂಗಮವಾಗಬೇಕು’’ ಎನ್ನುವ ಆಶಯ ಹೇಳುತ್ತಾರೆ.

ಒಟ್ಟು ಎರಡೂವರೆ ಗಂಟೆ ಅವಧಿಯ ಈ ನಾಟಕವನ್ನು ಕಡಿತಗೊಳಿಸಿ ಒಂದೂವರೆ ಗಂಟೆಗೆ ಇಳಿಸಲಾಗಿದೆ. ಮುಖ್ಯವಾಗಿ ಶಿವಸಂಚಾರದ ಕಲಾವಿದರು ಸಂಯಮದಿಂದ ಹಾಗೂ ಸ್ವಲ್ಪ ನಿಧಾನವಾಗಿ ಸಂಭಾಷಣೆಗಳನ್ನು ಹೇಳುವ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ಅಭಿನಯಿಸಬಹುದು. ಹೀಗೆಂದಾಗ ನಾಟಕವನ್ನು ಎಳೆಯಬೇಕೆಂದಲ್ಲ. ಜಗದೀಶ್ ಅವರ ಸಮರ್ಥ ನಿರ್ದೇಶನ ಹಾಗೂ ಸಂಗೀತದಿಂದಲೂ ನಾಟಕ ಯಶಸ್ವಿಯಾಗುತ್ತದೆ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X