‘ಕೌದಿ’ ನಾಟಕದೊಂದಿಗೆ ಪಯಣ...

‘‘ಮುಸುಕಿರಲಿ-ನಸುಕಿರಲಿ
ಸುಖವಿರಲಿ-ದುಃಖವಿರಲಿ
ಸೋಲಿರಲಿ-ಗೆಲುವಿರಲಿ
ನಿಮ್ಮೆಲ್ಲರ ಮನೆಯಲಿ ಕೌದಿ ಸದಾ ನೆಲೆಸಿರಲಿ’’
ಹೀಗೆಂದು ಹಾವೇರಿ ವಿಶ್ವವಿದ್ಯಾನಿಲಯದಲ್ಲಿ ಅಲ್ಲಿನ ಅಂತಿಮ ವರ್ಷದ ಎಂ.ಎ. ಕನ್ನಡ ವಿದ್ಯಾರ್ಥಿನಿ ವಾಣಿ ಅಗಡಿ ಅವರು ಹನಿಗವನ ಓದಿದಾಗ ಅಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಜೋರಾದ ಚಪ್ಪಾಳೆ ತಟ್ಟಿದರು. ಅದು ನಮ್ಮ ಕವಿತಾ ಕಲಾ ತಂಡ ಪ್ರಸ್ತುತಪಡಿಸುವ, ನನ್ನದೇ ರಚನೆಯ, ಜಗದೀಶ್ ಆರ್.ಜಾಣಿ ನಿರ್ದೇಶನದ ಹಾಗೂ ಕಲಬುರಗಿ ರಂಗಾಯಣ ಕಲಾವಿದೆ ಭಾಗ್ಯ ಪಾಳಾ ಅಭಿನಯಿಸಿರುವ ಮತ್ತು ಪದ್ಮಾ ರಾಯಚೂರು ಬೆಳಕು ಹಾಗೂ ಸಂಗೀತ ನಿರ್ವಹಿಸಿರುವ ‘ಕೌದಿ’ ನಾಟಕ ಪ್ರದರ್ಶನಗೊಂಡ ನಂತರ ಮಾತಾಡಿದ ವಾಣಿ ಅಗಡಿ ಈ ಮೇಲಿನ ಹನಿಗವನ ಓದಿ ಗಮನ ಸೆಳೆದರು.
ಕಳೆದ ಶನಿವಾರ (ಸೆಪ್ಟಂಬರ್ ೨೦) ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಶ್ರೀಮತಿ ರುದ್ರಾಂಬ ಎಂ.ಪಿ. ಪ್ರಕಾಶ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಕೌದಿ’ ನಾಟಕ ಪ್ರದರ್ಶನಗೊಂಡ ನಂತರ ಆ ಕಾಲೇಜಿನ ಬಿ.ಎ. ಅಂತಿಮ ವರ್ಷದ, ಐಚ್ಛಿಕ ಕನ್ನಡ ವಿದ್ಯಾರ್ಥಿನಿ ಎನ್.ಅಶ್ವಿನಿ ಮಾತಾಡುತ್ತ ‘‘ನನ್ನವ್ವ ಸತ್ತು ೧೫ ವರ್ಷಗಳಾಯಿತು. ಆಕೆ ಉಡುತ್ತಿದ್ದ ಸೀರೆಯಿಂದಲೇ ಕೌದಿಯನ್ನು ನನ್ನಜ್ಜಿ ಹೊಲಿಸಿದ್ಲು. ಆ ಕೌದಿಯನ್ನು ನಾನು ಮಾತ್ರ ಉಪಯೋಗಿಸ್ತೀನಿ. ಇದ್ರಿಂದ ನನ್ನವ್ವನ ಮಡಿಲಲ್ಲಿ ಮಲಗೀನಿ ಅನ್ನಸ್ತದ’’ ಎಂದು ಕಣ್ಣೊರೆಸಿಕೊಂಡರು. ನಂತರ ಇಂಗ್ಲಿಷ್ ಪ್ರಾಧ್ಯಾಪಕಿ ಸುನೀತಾದೇವಿ ‘‘ನಾವು ಹೊಲಿದ ಕೌದಿ ಅವರ ಮನೆಯೊಳಗ ಹೋಗ್ತಾವು. ನಾವು ಒಳಗ ಹೋಗೂವಂಗಿಲ್ಲ. ಬಾಗಿಲ ಹತ್ರ, ಕಟ್ಟಿ ಕೆಳಗ ಕುಂದ್ರತೀವಿ ಎನ್ನುವ ನಾಟಕದ ಮಾತು ಹಾರ್ಟ್ ಟಚ್ ಮಾಡಿತು ಜೊತೆಗೆ ಜಾತಿ ವ್ಯವಸ್ಥೆಯ ಜೀವಂತಿಕೆಯನ್ನು ತೋರಿಸಿತು’’ ಎಂದು ವಾಸ್ತವ ಬಿಚ್ಚಿಟ್ಟರು. ಸಮಾಜಶಾಸ್ತ್ರ ಪ್ರಾಧ್ಯಾಪಕ ಪಿ. ಕೊಟ್ರೇಶ್ ‘‘ರಾಜ್ಯ ಸರಕಾರ ಗುರುತಿಸಿದ ಡಿ.ನೋಟಿಫೈಡ್ ಟ್ರೈಬ್‌ಗಳಿಗೆ ಯಾವುದೇ ಸೌಲಭ್ಯಗಳಿಲ್ಲ. ಇಂಥವರಲ್ಲಿ ಕೌದಿ ಹೊಲಿಯುವವರೂ ಇದ್ದಾರೆ’’ ಎಂದರೆ ಕನ್ನಡ ಪ್ರಾಧ್ಯಾಪಕಿ ಜಿ.ಟಿ. ಉಮಾದೇವಿ ‘‘ಇವು ಕೇವಲ ಕೌದಿ ಹೊಲಿಯುವ ಗೊಂದಲಿಗರ ಬದುಕು-ಬವಣೆ ಮಾತ್ರವಲ್ಲ. ಹೊಟ್ಟೆಪಾಡಿಗಾಗಿ ಊರಿಂದ ಊರಿಗೆ ಅಲೆಯುವ, ಹಚ್ಚೆ ಹಾಕುವವರ, ಕರಡಿ ಆಡಿಸುವವರ, ಹುಲಿವೇಷದವರ, ಬುಡಬುಡಿಕೆಯವರ, ಚವರಿಗೂದಲು ಮಾಡುವ... ಇಂಥ ಹಲವರ ಪಾಡನ್ನು ತೋರಿಸುವಂತಹ ಅತ್ಯುತ್ತಮವಾದ ಪ್ರಯತ್ನ’’ ಎಂದು ಮೆಚ್ಚಿದರು. ಅತಿಥಿ ಉಪನ್ಯಾಸಕಿ ಸಂಗೀತಾ ಪುರಾಣಿಕ ‘‘ನನ್ನವ್ವ ಹೊಲಿದುಕೊಟ್ಟ ಏಳೆಂಟು ಕೌದಿಗಳಿವೆ’’ ಎಂದು ಸ್ಮರಿಸಿದರು. ಮುಖ್ಯವಾಗಿ ಅಂಧ ಗಾಯಕಿ ನವ್ಯಾ ಅವರು ಮೈಯೆಲ್ಲಾ ಕಣ್ಣಾಗಿ ನಾಟಕ ನೋಡಿದರು! ಆದರೆ ಕೆಲ ಹುಡುಗರು ತಮ್ಮ ಮೊಬೈಲ್ ಫೋನುಗಳಲ್ಲಿ ಗೇಮ್ ಆಡುವುದನ್ನು ನಾನು ಗಮನಿಸಿದಾಗ ಸುಮ್ಮನಾಗುತ್ತಿದ್ದರು. ಇದನ್ನೆಲ್ಲ ಸಾಧ್ಯವಾಗಿಸಿದವರು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಸತೀಶ ಪಾಟೀಲ ಹಾಗೂ ಪ್ರೊ. ಎಚ್.ವೆಂಕಟೇಶ. ಅವರ ಕಾಲೇಜಿನ ಸುಸಜ್ಜಿತ ರಂಗಮಂದಿರವಿರುವ ಹೂವಿನಹಡಗಲಿಯಲ್ಲಿ ಯಶಸ್ವಿ ಕಂಡ ನಾಟಕವು ಮರುದಿನ (ಸೆಪ್ಟಂಬರ್ ೨೧) ಮರಿಯಮ್ಮನಹಳ್ಳಿಯಲ್ಲಿತ್ತು. ಅಲ್ಲಿ ಹಿರಿಯ ರಂಗ ಕಲಾವಿದರಾದ ಕೆ.ನಾಗರತ್ನಮ್ಮ ಅವರನ್ನು ಸಂಪರ್ಕಿಸಿದಾಗ ರಂಗಕರ್ಮಿ ಸರದಾರ ಅವರು ನಾಟಕೋತ್ಸವ ಹಮ್ಮಿಕೊಂಡಿರುವುದನ್ನು ತಿಳಿಸಿ, ನಮ್ಮ ಕೌದಿ ನಾಟಕಕ್ಕೂ ಅವಕಾಶ ನೀಡಿದರು. ನಾಟಕದ ಹಿಂದಿನ ದಿನವೇ ತಮ್ಮ ಮನೆಯಲ್ಲಿ ಉಳಿಯಲು ಅವಕಾಶ ನೀಡಿದ ನಾಗರತ್ನಮ್ಮ ಅವರು ಹಾಸಿಕೊಳ್ಳಲು ಕೌದಿಯನ್ನೇ ಕೊಟ್ಟರು. ಆದರೆ ಮರುದಿನ ಅರ್ಧ ನಾಟಕವಾದಾಗ ಮಳೆ ಜೋರಾಯಿತು. ಎಲ್ಲ ಪ್ರೇಕ್ಷಕರು ನಾಟಕ ನಡೆಯುವ ಸ್ಥಳದ ಸುತ್ತ ಕುಳಿತರು. ನಾಟಕ ಮುಗಿದ ಮೇಲೆ ಮಂಜಮ್ಮ ಜೋಗತಿ ಅವರು ೨೦೦ ರೂಪಾಯಿ ನೋಟನ್ನು ನಮ್ಮ ಕಲಾವಿದೆ ಭಾಗ್ಯ ಅವರಿಗೆ ಸಹಿ ಮಾಡಿ ಕಾಣಿಕೆಯಾಗಿ ನೀಡಿದರೆ, ಕೆ.ನಾಗರತ್ನಮ್ಮ ಅವರು ಭಾಗ್ಯ ಅವರನ್ನು ತಬ್ಬಿಕೊಂಡು ಮೆಚ್ಚುಗೆ ಸೂಚಿಸಿದರು.
ಹೀಗೆ ಕೌದಿ ನಾಟಕ ಪಯಣ ಶುರುವಾಗಿದ್ದು ಕಳೆದ ವರ್ಷ ಫೆಬ್ರವರಿ ೪ರಂದು ಕಲಬುರಗಿ ರಂಗಾಯಣದಲ್ಲಿ ಮೊದಲ ಪ್ರದರ್ಶನ ಕಾಣುವ ಮೂಲಕ. ಅಲ್ಲಿ ನಮ್ಮ ನಾಟಕದ ನಿರ್ದೇಶಕ ಜಗದೀಶ್ ಆರ್. ಜಾಣಿ, ಭಾಗ್ಯ ಅವರೊಂದಿಗೆ ಒಂದು ವಾರದಲ್ಲಿ ಕೌದಿ ನಾಟಕ ಸಿದ್ಧಗೊಂಡಿತು. ಡಾ. ಸ.ಜ. ನಾಗಲೋಟಿಮಠ ಅವರ ಆತ್ಮಕಥೆ ಆಧರಿಸಿದ ‘ಬಿಚ್ಚಿದ ಜೋಳಿಗೆ’ ಎಂಬ ನನ್ನದೇ ನಾಟಕದಲ್ಲಿ ಭಾಗ್ಯ ಅವರು ಪ್ರಮುಖ ಪಾತ್ರ ನಿರ್ವಹಿಸಿ ಗಮನ ಸೆಳೆದಿದ್ದರು. ಹೀಗಾಗಿ ಕೌದಿ ನಾಟಕಕ್ಕೆ ಅವರನ್ನೇ ಆಯ್ಕೆ ಮಾಡಿಕೊಂಡೆ. ಇದಕ್ಕೂ ಮೊದಲು ಕೌದಿ ನಾಟಕ ರಚನೆ ಸಲುವಾಗಿ ಹುಬ್ಬಳ್ಳಿ, ಕೊಪ್ಪಳದ ಭಾಗ್ಯನಗರ ತಿರುಗಾಡಿದ್ದೆ. ಹುಬ್ಬಳ್ಳಿಯ ಲಿಂಗಾರಾಜನಗರ ಹತ್ತಿರ ಈಗಲೂ ಅಲೆಮಾರಿ ಸಮುದಾಯವಾದ ಗೊಂದಲಿಗರು ಹಳ್ಳಿಹಳ್ಳಿಗೆ ತಿರುಗಾಡಿ ಹಳೆಯ ಬಟ್ಟೆಗಳನ್ನು ಸಂಗ್ರಹಿಸಿ ಕೌದಿ ಹೊಲಿದುಕೊಡುತ್ತಾರೆ. ಹಾಗೆ ಹೊಲಿದುಕೊಟ್ಟಾಗ ಅವರಿಗೆ ಸಿಗುವುದು ೩೦೦-೪೦೦ ರೂಪಾಯಿ ಮಾತ್ರ. ಅವರ ಹಾಗೆ ಕೊಪ್ಪಳದ ಭಾಗ್ಯನಗರದಲ್ಲಿ ದಲಿತ ಮಹಿಳೆಯರು ಕೌದಿ ಹೊಲಿಯುತ್ತಾರೆ. ಅವರಿಗೆ ಸಿಗುವುದು ಗರಿಷ್ಠ ೪೦೦ ರೂಪಾಯಿ ಮಾತ್ರ. ಅವರು ಎದುರಿಸುವ ಸಮಸ್ಯೆಗಳೇನು? ಸವಾಲುಗಳೇನು? ಆತಂಕಗಳೇನು ಎಂಬುದನ್ನು ಹಿಡಿದಿಡಬೇಕಿತ್ತು. ಹಾಗೆಯೇ ಕೌದಿ ಮಹತ್ವ ತಿಳಿಸುತ್ತಲೇ ಅದು ಆಧ್ಯಾತ್ಮಿಕವಾಗಿ ಹೇಗೆ ಸಂಕೇತಿಸುತ್ತದೆ ಎಂಬುದನ್ನೂ ನಾಟಕ ಕಟ್ಟಿಕೊಟ್ಟಿದೆ. ಹಾಗೆಯೇ ಕೌದಿಯೂ ಪಾತ್ರವಾಗುತ್ತದೆ.
ಕಲಬುರಗಿ ರಂಗಾಯಣದ ಪ್ರಥಮ ಪ್ರದರ್ಶನದ ನಂತರ ಅದರ ಹಿಂದಿರುವ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಾಡಾಯಿತು. ಅಲ್ಲಿನ ಅತಿಥಿ ಉಪನ್ಯಾಸಕರು, ಪ್ರಾಧ್ಯಾಪಕರಲ್ಲದೆ ಇತರ ಸಿಬ್ಬಂದಿ ಸೇರಿ ೭,೫೦೦ ರೂಪಾಯಿ ಕೂಡಿಸಿ ಕೊಟ್ಟಾಗ ರೋಮಾಂಚನಗೊಂಡಿದ್ದೆ. ಅದು ನಮ್ಮ ನಾಟಕಕ್ಕೆ ಪಡೆದ ಮೊದಲ ಸಂಭಾವನೆ. ಆಮೇಲೆ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಅಧೀಕ್ಷಕರಾಗಿದ್ದ ರಂಗನಾಥ ಅವರು ತಮ್ಮ ಜೈಲಲ್ಲಿ ನಾಟಕವಾಡಿಸಿದರು. ಅಲ್ಲಿಂದ ಭಾಲ್ಕಿಯ ಡಾ.ಬಸವಲಿಂಗಪಟ್ಟದೇವರು ಕರಡ್ಯಾಳದ ತಮ್ಮ ಪಿಯು ಕಾಲೇಜಿನಲ್ಲಿ ಕೌದಿ ನಾಟಕವಾಡಲು ಅವಕಾಶ ನೀಡಿದರು. ನಂತರ ಭಾಲ್ಕಿಯಲ್ಲಿ ಅವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕೌದಿ ನಾಟಕವಾಡುವಾಗ ಶಿಕ್ಷಕಿಯೊಬ್ಬರು ಕೌದಿಯ ರಂಗೋಲಿ ಹಾಕಿ ಗಮನ ಸೆಳೆದರು. ಆಗ ಗುರುಬಸವ ಪಟ್ಟದೇವರು ನಾಟಕವನ್ನು ಬಹಳ ಇಷ್ಟಪಟ್ಟು ಜೌರಾದ್ ತಾಲೂಕು ಹೊರತುಪಡಿಸಿ ಬೀದರ್ ಜಿಲ್ಲೆಯ ಉಳಿದ ತಾಲೂಕು ಕೇಂದ್ರಗಳಲ್ಲಿ ಪ್ರದರ್ಶಿಸಲು ನೆರವಾದರು. ಈಗಲೂ ಭೇಟಿಯಾದಾಗ ‘‘ಕೌಂದಿ ನಾಟಕದವರು’’ ಎಂದೇ ಮಾತನಾಡಿಸುತ್ತಾರೆ. ಕಲಬುರಗಿ, ಬೀದರ ಜಿಲ್ಲೆಗಳಲ್ಲಿ ಕೌದಿಗೆ ಕೌಂದಿ ಎಂದೂ ಹೇಳುತ್ತಾರೆ.
ಬೀದರ್‌ನಿಂದ ಹೈದರಾಬಾದ್‌ನಲ್ಲಿ ಕನ್ನಡ ನಾಟ್ಯ ರಂಗದ ಅಧ್ಯಕ್ಷರಾದ ಮಾರಣಕಟ್ಟೆ ಕೃಷ್ಣಮೂರ್ತಿ ಹಾಗೂ ಕರ್ನಾಟಕ ಸಾಹಿತ್ಯ ಮಂದಿರ ಅಧ್ಯಕ್ಷ ವಿಠಲ ಜೋಶಿ ಸಹಯೋಗದಲ್ಲಿ, ಲೇಖಕಿ ಸುಮತಿ ನಿರಂಜನ ನೇತೃತ್ವದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಅದುವರೆಗೆ ಬಸ್ಸಿನಲ್ಲಿಯೇ ನಾಟಕದ ಪರಿಕರಗಳ ಸಮೇತ ತಿರುಗಾಡುತ್ತಿದ್ದೆವು.
ಎರಡನೇ ಸುತ್ತಾಟ ಶುರುವಾಗಿದ್ದು ವಿಜಾಪುರದಲ್ಲಿ. ಅಲ್ಲಿನ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಪ್ರದರ್ಶನವಾದ ಮೇಲೆ ಗೆಳೆಯರಾದ ಶಂಕರ ಬೈಚಬಾಳ ಅವರು ತಮ್ಮ ಅನೇಕ ಗೆಳೆಯರಿಗೆ ಹೇಳಿ ನಾಟಕವಾಡಿಸಿದರು. ಛಲೋ ನಾಟಕವೆಂದು ಬಾಯಿಂದ ಬಾಯಿಗೆ ಪ್ರಚಾರವೂ ಸಿಕ್ಕಿತು. ಅಲ್ಲಿಂದ ಬಾಗಲಕೋಟೆಯ ಜಿಲ್ಲೆಯಲ್ಲಿ ತಿರುಗಾಟವಾಯಿತು. ಜಮಖಂಡಿಯಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ದಾನೇಶ್ವರಿ ಮಹಿಳಾ ಮಂಡಳ ಹಾಗೂ ಬಸವ ಸಮಿತಿಯವರು ಏರ್ಪಡಿಸಿದ್ದ ಕೌದಿ ನಾಟಕದ ೨೫ನೇ ಪ್ರದರ್ಶನದಲ್ಲಿ ೫೦ಕ್ಕೂ ಹೆಚ್ಚು ಕೌದಿಗಳನ್ನು ಹೊಲಿದ, ೮೫ ವರ್ಷ ವಯಸ್ಸಿನ ಶಾಂತಾ ಕಡ್ಡಿ ಅವರನ್ನು ನಂದಿನ ಬಾಂಗಿ ಹಾಗೂ ಅವರ ತಂಡದವರು ಸನ್ಮಾನಿಸಿದರು. ಅಲ್ಲಿಂದ ವಿಜಯನಗರ, ಬಳ್ಳಾರಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಆಗಾಗ ನಾಟಕ ಪ್ರದರ್ಶನ ಕಂಡು ಕಳೆದ ವಾರ ಮರಿಯಮ್ಮನಹಳ್ಳಿಯಲ್ಲಿ ೪೮ನೇ ಪ್ರಯೋಗವಾಗಿದೆ.
ಈ ಪಯಣದಲ್ಲಿ ಅನೇಕ ಅನುಭವಗಳಾಗಿವೆ. ಅದರಲ್ಲೂ ಧಾರವಾಡದ ಸಿದ್ಧರಾಮೇಶ್ವರ ಬಿ.ಇಡಿ. ಕಾಲೇಜಿನಲ್ಲಿ ನಾಟಕ ಪ್ರದರ್ಶನವಾದ ನಂತರ ಮಾತನಾಡಿದ ಅಲ್ಲಿನ ವಿದ್ಯಾರ್ಥಿ ವಿಕಾಸ್ ಬೋಗೂರು ‘‘ಕಂಪೆನಿಯ ಬೆಡ್ ಬಳಸುತ್ತಿದ್ದೆ. ಬೆನ್ನುನೋವು ಬಂತು. ಅಪ್ಪನಿಗೆ ಫೋನ್ ಮಾಡಿ ಹೇಳಿದಾಗ ಕೌದಿ ಕಳಿಸಿಕೊಟ್ಟ. ಕೌದಿ ಬಳಸಿದ ಮ್ಯಾಲ ಬೆನ್ನುನೋವು ಕಡಿಮಿ ಆತು’’ ಎಂದರು. ಮುಖ್ಯವಾಗಿ ಕೊಪ್ಪಳದ ಭಾಗ್ಯನಗರದಲ್ಲಿ ನಾಟಕ ಆಯೋಜಿಸಿದವರು ಶಕ್ತಿ ಶಾರದೆ ಮೇಳದವರು. ಅದರಲ್ಲೂ ಈಶ್ವರ ಹತ್ತಿ, ರಮೇಶ ಹ್ಯಾಟಿ ಹಾಗೂ ಲೇಖಕರಾದ ಎ.ಎಂ.ಮದರಿ. ಈ ಮದರಿ ಅವರು ಭಾಗ್ಯನಗರದಲ್ಲಿ ಕೌದಿ ಹೊಲಿಯುವ ಮಹಿಳೆಯರನ್ನು ಮಾತನಾಡಿಸಲು ನೆರವಾದರು. ನಾಟಕದ ದಿನ ಕೌದಿ ಹೊಲಿಯುವ ಮಹಿಳೆಯರೂ ಬಂದು ‘‘ನಮ್ಮದೇ ಕಥಿ ನಮ್ಮ ಮುಂದ ಹೇಳಿದ್ರಿ’’ ಎಂದು ಸೆರಗಿನಿಂದ ಕಣ್ಣೀರು ಒರೆಸಿಕೊಂಡರು. ಮೊನ್ನೆ ಹೂವಿನಹಡಗಲಿಯಲ್ಲಿ ನಾಟಕವಾದ ನಂತರ ವಿದ್ಯಾರ್ಥಿಯೊಬ್ಬ ಬಂದು ‘‘ಭಾಗ್ಯನಗರದಾಗ ನಮ್ಮಜ್ಜಿ ದೊಡ್ಡಮನಿ ಕೌದಿ ಹೊಲಿತಾಳ್ರಿ. ಆಕಿ ಮಗ ಡಾಕ್ಟರ್ ಆಗ್ಯಾನ್ರಿ’’ ಎಂದು ಖುಷಿ ಹಂಚಿಕೊಂಡ.
ಹೀಗೆ ಸಾಗಿದ ನಮ್ಮ ಕೌದಿಯ ನಾಟಕದ ಪಯಣವು ಧಾರವಾಡದ ಕಲ್ಯಾಣನಗರದ ಮಹಿಮಾಲೋಕ ಪ್ರತೀಕ ಮನೆಯ ಮೇಲ್ಗಡೆ ಪ್ರದರ್ಶನಗೊಂಡಿತು. ಇದಕ್ಕೆ ಕಾರಣರಾದವರು ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ರಾಜೇಶ್ವರಿ ಮಹೇಶ್ವರಯ್ಯ ಅವರು. ನಾನು ಎಂ.ಎ. ಓದುವಾಗ ಭಾಷಾಶಾಸ್ತ್ರ ಕಲಿಸುತ್ತಿದ್ದ ಡಾ.ಎಚ್.ಎಂ. ಮಹೇಶ್ವರಯ್ಯ ಅವರ ಮನೆ ಮೇಲ್ಗಡೆ ಮಹಿಮಾಲೋಕ ಎಂಬ ಕೇಂದ್ರ ಆರಂಭಿಸಿದವರು ಡಾ.ರಾಜೇಶ್ವರಿ. ನಮ್ಮ ಗುರುಗಳ ನೆನಪಿಗೆ ಅಲ್ಲಿ ನಾಟಕವಾಡಿದೆವು. ಆ ದಿನ ನಾಟಕ ಉದ್ಘಾಟಿಸಿದ ಹಿರಿಯ ಲೇಖಕಿ ಮಾಲತಿ ಪಟ್ಟಣಶೆಟ್ಟಿ ‘‘ಈ ಕೌದಿ ನಾಟಕ ಮಾಡಬೇಕಂತ ಹೆಂಗ ಅನ್ನಿಸ್ತು?’’ ಎಂದು ಕೇಳಿದಾಗ ‘‘ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಕಾಡುವುದು ಕೌದಿ. ಚಿಕ್ಕವರಿದ್ದಾಗ ನಾವು ಉಂಡುಟ್ಟು ಬೆಳೆದುದೇ ಪ್ರಭಾವ ಆಗಿರುತ್ತದೆ. ನಮ್ಮವ್ವ ಗೌರಮ್ಮ ಹೊಲಿದುಕೊಟ್ಟ ಕೌದಿಗಳನ್ನೇ ಈಗಲೂ ಬಳಸುವೆ’’ ಎಂದಾಗ ಜೋರಾಗಿ ಚಪ್ಪಾಳೆ ತಟ್ಟಿದರು. ಮರುದಿನ ಧಾರವಾಡದ ಜೈಲಿನಲ್ಲಿ ಆಮೇಲೆ ಹಾವೇರಿ ಜೈಲಿನಲ್ಲೂ ನಾಟಕವಾಡಿದ ನಂತರ ಕೌದಿ ಬಳಸುತ್ತೇವೆಂದ ಕೈದಿಗಳು ಅನೇಕರು. ಯಾವುದೋ ಊರಲ್ಲಿ ನಾಟಕದ ನಂತರ ‘‘ಕೌದಿಗಳನ್ನು ಮಾರಾಟ ಮಾಡ್ತೀರಿ?’’ ಎಂದು ಕೇಳಿದರು. ‘‘ಇಲ್ರಿ’’ ಎಂದೆ. ‘‘ಮಾರಾಟ ಮಾಡ್ರಿ’’ ಎಂದು ಸಲಹೆ ನೀಡಿದರು. ‘‘ಹಂಗ ಮಾಡೂದಿಲ್ರಿ. ನಾಟಕದ ಮೂಲಕ ಕೌದಿ ಮಹತ್ವ ಹೇಳಿದ್ದೀವಿ. ಕೌದಿ ಮಾರಾಟ ಮಾಡುವ ಉದ್ದೇಶ ಇಲ್ರಿ. ನಿಮಗ ನಾಟಕದ ಪರಿಣಾಮ ಆಗ್ಯದಲ್ರಿ. ಕೌದಿ ಹೊಲಸ್ರಿ, ಬಳಸ್ರಿ’’ ಎಂದು ಕೈ ಮುಗಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳದ ಖ್ಯಾತ ವೈದ್ಯರೂ ಲೇಖಕರೂ ಆದ ಡಾ.ಶಿವಾನಂದ ಕುಬಸದ ಅವರು ತಮ್ಮ ಪರ್ಣಕುಟಿ ತೋಟದ ಮನೆಯಲ್ಲಿ ನಮ್ಮ ನಾಟಕ ಪ್ರದರ್ಶಿಸಲು ಅವಕಾಶ ನೀಡಿದರು. ಅದುವರೆಗೆ ಅಲ್ಲಿ ಸಭೆ, ಸಮಾರಂಭಗಳು ಮಾತ್ರ ನಡೆದಿದ್ದವು. ನಾಟಕವಾಗಿದ್ದು ನಮ್ಮದೇ ಮೊದಲು. ೨೫ ಎಕರೆ ಜಮೀನಿನ ಮಾಲಕರಾದ ಅವರು, ಮೂರು ಎಕರೆಯಲ್ಲಿ ತಮಗಿಷ್ಟವಾದ ಲಿಂಬೆ, ಮಾವು, ಪೇರಲ... ಹೀಗೆ ಬೆಳೆಯುತ್ತಿದ್ದಾರೆ ಜೊತೆಗೆ ಪುಟ್ಟ ಸಭಾಂಗಣ ಕಟ್ಟಿಸಿ ಸಾಂಸ್ಕೃತಿಕ ಚಟುವಟಿಕೆಗಳಿಗೂ ಅವಕಾಶ ನೀಡುತ್ತಿದ್ದಾರೆ. ಈ ಮೂರು ಎಕರೆಯಲ್ಲೂ ಕಬ್ಬು ಬೆಳೆಯಿರಿ ಎಂದವರಿಗೆ ‘‘ಎಷ್ಟು ರೊಕ್ಕ ಗಳಿಸಿದರೇನು? ನೆಮ್ಮದಿ ಮುಖ್ಯ’’ ಎಂದು ಹೇಳುತ್ತಾರೆ. ಹಾಗೆಯೇ ಅಲ್ಲಿ ಕಟ್ಟಿಸಿದ ವಿಶಿಷ್ಟ ಮನೆಯಲ್ಲಿ ಕೌದಿಗಳನ್ನೇ ಹೊದಿಯಲು ಕೊಡುತ್ತಾರೆ. ಕೌದಿಗಳನ್ನು ಗೋಡೆಗೆ ನೇತು ಹಾಕಿದ್ದಾರೆ. ನಾಟಕದ ನಂತರ ಅವರು ಕೌದಿ ಕುರಿತೇ ಕವನ ಓದಿದರು.
‘‘ಅಪ್ಪನ ಧೋತರ ಅವ್ವನ ಸೀರಿ
ಅಜ್ಜಿಯ ಕುಬುಸದ ಪ್ಯಾರಿ
ಅತ್ತೆಯ ಚಮಕಾ ಸೀರಿ
ಎಲ್ಲವೂ ಸೊಗಸಾಗಿ ಸೇರಿ
ಒಂದಾದವು ಚೆಂದಾದವು ದಾರದಿಂದ
ಸಿದ್ಧವಾಯಿತಲ್ಲ ಹೊಸದೊಂದು ಕೌದಿ’’
ಹೀಗೆ ಸಾಗುವ ಅವರ ಕವನ ಚೆನ್ನಾಗಿತ್ತು. ‘‘ಇವು ಬದುಕು ಕರುಣಿಸುವ ಅನುಭವಗಳು. ಎಲ್ಲಿಯ ನೀವು? ಎಲ್ಲಿಯ ನಾನು? ನಮ್ಮ ಸಂಬಂಧಿಗಳಂತೆ ನಮ್ಮ ಮನೆಯಲ್ಲಿದ್ದು ಹೋದಿರಲ್ಲ, ಅದು ಎಂಟನೆಯ ಬಣ್ಣ. ಸುಂದರವಾದ ಒಂದು ಸಂಜೆಯನ್ನು ನಿಮ್ಮ ಕೌದಿ ಆವರಿಸಿತಲ್ಲ, ಅದು ಎಂಟನೆಯ ಬಣ್ಣ. ಇಂಥ ಬಣ್ಣ ಬಣ್ಣದ ಕೌದಿಗಳು ಇನ್ನಷ್ಟು ದೊರಕುತ್ತಿರಲಿ’’ ಎಂದು ಹಾರೈಸಿದರು. ಇಂಥ ಹಾರೈಕೆಗಳು ನಡುವೆ ಕೌದಿ ನಾಟಕವು ೪೮ ಪ್ರಯೋಗಗಳನ್ನು ಕಂಡಿದ್ದು, ಐವತ್ತರ ಹೊಸ್ತಿಲಲ್ಲಿ ನಿಂತಿದೆ.







