ಮರಿಯಮ್ಮನಹಳ್ಳಿ ರಂಗಚೌಕಿಯ ಸರದಾರ

‘ಏಕಲವ್ಯ’ ನಾಟಕದ ದೃಶ್ಯ
‘‘ರಂಗಭೂಮಿಯಿಂದ ಶಿಕ್ಷಣ ಪಡೆದೆ. ಲೋಕಜ್ಞಾನ ಬಂತು. ಉತ್ತಮ ನಾಗರಿಕನಾಗಿ ಬದುಕಲು ರಂಗಭೂಮಿಯಿಂದ ಸಾಧ್ಯವಾಯಿತು. ಮೂರೊಪ್ಪತ್ತು ಊಟ ಕೊಟ್ಟ ರಂಗಭೂಮಿಯ ಮೂಲಕ ರಂಗ ತರಬೇತಿ ಶಿಬಿರ ಏರ್ಪಡಿಸುವೆ. ನಮ್ಮೂರಲ್ಲಿ ದೇವದಾಸಿ ಮಕ್ಕಳಿದ್ದಾರೆ, ಒಂಟಿ ತಾಯಿಮಕ್ಕಳಿದ್ದಾರೆ. ನಮ್ಮೂರು ಕೈಗಾರಿಕೆ ಪ್ರದೇಶ. ಬಹಳ ಬೇಗ ದುಶ್ಚಟಗಳಿಗೆ ಬಲಿಯಾಗುತ್ತಾರೆ. ಅವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾಳಜಿಯಿಂದ ರಂಗಚಟುವಟಿಕೆಗಳಿಂದ ಮಕ್ಕಳು ಬದಲಾಗುತ್ತಾರೆಂಬ ಭರವಸೆ ಹೊತ್ತೆ. ಈಗ ಆ ಮಕ್ಕಳೆಲ್ಲ ಹೆತ್ತವರ ಮಾತು ಕೇಳುತ್ತಾರೆ. ಒಳ್ಳೆಯ ಅಂಕಗಳನ್ನು ಪಡೆಯುತ್ತಿದ್ದಾರೆ. ಹೀಗೆ ರಂಗಭೂಮಿಯಿಂದ ಬದಲಾಗುತ್ತಿದ್ದಾರೆ ಎನ್ನುವುದೇ ಖುಷಿ’’ ಎನ್ನುತ್ತಾರೆ ಸರದಾರ
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಎಂದರೆ ರಂಗಭೂಮಿ ಕಲಾವಿದರ ತವರೂರು ಎಂದೇ ಪ್ರಸಿದ್ಧ. ಇಲ್ಲಿನ ಹಿರಿಯ ಕಲಾವಿದೆ ಡಾ. ಕೆ. ನಾಗರತ್ನಮ್ಮ ಪ್ರಸಿದ್ಧರು. ಅವರಿಗಿಂತ ಮೊದಲು ಡಿ. ದುರ್ಗಾದಾಸ್ ಅವರು ಹೆಸರು ಮಾಡಿದ್ದರು. ಇವರ ಮಗಳು ಹನುಮಕ್ಕ ಕೂಡಾ ರಂಗಭೂಮಿ ಕಲಾವಿದರು. ನಾಗರತ್ನಮ್ಮ ಅವರ ಸಮಕಾಲೀನರು ಎಸ್.ರೇಣುಕಾ, ಕೆ.ಸರ್ವಮಂಗಳಾ, ಬಿ.ಶಾರದಮ್ಮ, ಬಿಎಂಎಸ್ ಪ್ರಭು, ಕೆ.ಮಲ್ಲಣ್ಣಗೌಡ, ಮಾಬಾ ಸೋಮಣ್ಣ, ಬಿ.ಎಂ.ಯೋಗೇಶ್ ಮೊದಲಾದವರು. ಇವರ ನಂತರದ ತಲೆಮಾರಿನವರು ಬಿ. ಸರದಾರ, ನವೀನ್, ಕೊಟ್ರೇಶ್, ರವಿಕುಮಾರ್, ಬಸವರಾಜು, ಪ್ರಶಾಂತ್, ಶಾರದಾ, ಚಂದ್ರಶೇಖರ, ಷಣ್ಮುಖ, ಹ್ಯಾಟಿ ಮಂಜುನಾಥ್, ಅನಿಲ್ಕುಮಾರ್, ರಾಜೇಶ್, ಜಯಕುಮಾರ್, ಹನುಮಂತ, ದಿವ್ಯಾ, ಸೃಷ್ಟಿಲೀಲಾ, ಕೊಟ್ರಮ್ಮ ಕಲಾವಿದರಿದ್ದಾರೆ. ಇವರಲ್ಲಿ ಸರದಾರ ಅವರು ರಂಗಚೌಕಿ ಕಲಾಟ್ರಸ್ಟ್ ಕಟ್ಟಿಕೊಂಡು ಕಳೆದ ಆರು ವರ್ಷಗಳಿಂದ ರಂಗಚಟುವಟಿಕೆಗಳಲ್ಲಿ ನಿರಂತರವಾಗಿ ನಿರತರಾಗಿದ್ದಾರೆ.
34ವರ್ಷ ವಯಸ್ಸಿನ ಸರದಾರ ಅವರು, ನೀನಾಸಂನಲ್ಲಿ ಡಿಪ್ಲೊಮಾ ಪದವಿ ಪಡೆದ ಮೇಲೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಡ್ರಾಮಾ ಪದವಿ ಜೊತೆಗೆ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಡ್ರಾಮಾ ಪದವಿ ಪಡೆದಿದ್ದಾರೆ. ಈಗ ಪೂರ್ಣಾವಧಿ ರಂಗ ಸಂಘಟಕನಾಗುವುದರ ಜೊತೆಗೆ ರಾಜ್ಯದಲ್ಲಿರುವ ಬೇರೆ ಬೇರೆ ತಂಡಗಳನ್ನು ಆಹ್ವಾನಿಸಿ ತಮ್ಮ ಊರಲ್ಲಿ ನಾಟಕ ಪ್ರದರ್ಶಿಸುತ್ತಾರೆ. ಮುಖ್ಯವಾಗಿ ಮಕ್ಕಳ ರಂಗಭೂಮಿಯತ್ತ ಗಮನ ಹರಿಸುತ್ತಾರೆ. ಹಾಗೆಯೇ ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿಗಳನ್ನು ಏರ್ಪಡಿಸಿ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಇವುಗಳಿಗೆಲ್ಲ ಸರದಾರ ಅವರ ಪತ್ನಿ ಪುಷ್ಪಾ ಅವರೂ ಸಾಥ್ ನೀಡುತ್ತಾರೆ. ಶಿವಮೊಗ್ಗದ ಪುಷ್ಪಾ ಓದಿದ್ದು ಎಂ.ಎ. ಕನ್ನಡ. ನೀನಾಸಂನಲ್ಲಿ ಸರದಾರ ಅವರು ಓದುವಾಗ ಪುಷ್ಪಾ ಅವರ ಪರಿಚಯವಾಗಿ, ಆರು ವರ್ಷಗಳ ಒಡನಾಟದ ನಂತರ ೨೦೧೮ರಲ್ಲಿ ಮದುವೆಯಾದರು. ಶಿವಮೊಗ್ಗದಿಂದ ಮರಿಯಮ್ಮನಹಳ್ಳಿಗೆ ಬಂದ ಪುಷ್ಪಾ ಅವರು ಸರದಾರ ಅವರೊಂದಿಗೆ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರ ಜೊತೆಗೆ ಕವಿತೆಗಳನ್ನು ರಚಿಸುತ್ತಾರೆ. ಇವರಿಗೆ ನರ್ತನ, ನಾದ ಮಕ್ಕಳಿದ್ದಾರೆ.
ವಿಶೇಷವಾಗಿ ಸರಕಾರಿ ಶಾಲಾ ಮಕ್ಕಳಿಗೆ ‘ಚೌಕಿ ಚಂದ್ರಮ’ ಎಂಬ ಹೆಸರಿನಲ್ಲಿ ಮಾಸಿಕ ಕಾರ್ಯಕ್ರಮ ಆಯೋಜಿಸುತ್ತಿದ್ದು, ಕಥೆಗಳನ್ನು ಹೇಳುವುದು, ಓದುವುದರ ಜೊತೆಗೆ ಅಜ್ಜಿಯರ ಕಥೆಗಳು ಹೇಗಿರುತ್ತವೆ? ಪುಸ್ತಕದ ಕಥೆಗಳು ಹೇಗಿರುತ್ತವೆ? ಕವನಗಳನ್ನು ಹೇಗೆ ರಚಿಸಬಹುದು ಎಂಬುದನ್ನು ಸರದಾರ ತಿಳಿಸಿಕೊಡುತ್ತಾರೆ. ಅಲ್ಲದೆ ರಂಗಾಟಗಳೆಂದು (ಥಿಯೇಟರ್ ಗೇಮ್ಸ್) ಅಂದರೆ ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾದ ಆಟಗಳನ್ನು ಆಡಿಸುತ್ತಾರೆ. ನೆನಪಿನ ಶಕ್ತಿ ಹೆಚ್ಚಿಸುವಂಥ ಆಟಗಳನ್ನು ಆಡಿಸುವುದರ ಜೊತೆಗೆ ಆತ್ಮಸ್ಥೈರ್ಯ ತುಂಬುವುದು. ಇದು ಏಕೆಂದರೆ ಹಳ್ಳಿಯ ಶಾಲೆಯ ಮಕ್ಕಳಿಗೆ ಕೀಳರಿಮೆ ಜೊತೆಗೆ ವೇದಿಕೆಯ ಭಯವನ್ನು ಹೋಗಲಾಡಿಸುವುದು ಉದ್ದೇಶ. ಹಾಗೆಯೇ ಮಕ್ಕಳ ಅನುಭವಗಳನ್ನು ಕೇಳುವುದು, ಅವರಿಂದಲೇ ಎಲ್ಲರಿಗೆ ಹೇಳಿಸುವುದರ ಜೊತೆಗೆ ಅವರ ಕಥೆಯನ್ನು ಅಲ್ಲಿಯೇ ನಾಟಕವಾಗಿ ಸಿದ್ಧಪಡಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು. ಹೀಗೆ ಮಕ್ಕಳಿಗೆ ರಂಗಭೂಮಿ ಪರಿಚಯಿಸುವುದರ ಜೊತೆಗೆ ಅವರಲ್ಲಿರುವ ಸ್ಥಳೀಯವಾದ ಗೀಗಿಪದ, ಲಾವಣಿ, ಕೋಲಾಟ, ಡೊಳ್ಳಿನಪದ, ರಿವಾಯತು ಪದಗಳನ್ನು ಹಾಡಿಸಿ, ಅವುಗಳತ್ತ ಹೆಚ್ಚು ವಾಲುವಂತೆ ಪ್ರೋತ್ಸಾಹಿಸುವುದು ಸರದಾರ ಅವರ ಮುಖ್ಯ ಕೆಲಸವಾಗಿದೆ.
ಇವುಗಳ ಜೊತೆಗೆ ಆರು ವರ್ಷಗಳ ಹಿಂದೆ ರಂಗಚೌಕಿಯನ್ನು ಆರಂಭಿಸಿದರು. ಇದಕ್ಕೆ ಕಾರಣ ನಟ ಪ್ರಕಾಶ್ ರೈ ಅವರ ಪ್ರಕಾಶರಾಜ್ ಫೌಂಡೇಷನ್. ಇದರ ಮೂಲಕ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಣಸಿನಗೆರೆಯಲ್ಲಿ ರಂಗಶಿಕ್ಷಕರಾಗಿ ಈ ದಂಪತಿ ದುಡಿದರು. ಆಗ ಅವರು ಕಂಡುಕೊಂಡಿದ್ದು; ಮಕ್ಕಳಿಗೆ ರಂಗಶಿಕ್ಷಣ ಬಹಳ ಮುಖ್ಯ ಎಂದು. ಇದಕ್ಕಾಗಿ ತಮ್ಮ ಊರಾದ ಮರಿಯಮ್ಮನಹಳ್ಳಿ ಹಾಗೂ ಸುತ್ತಮುತ್ತ ರಂಗಚಟುವಟಿಕೆಗಳನ್ನು ಆರಂಭಿಸಿದರು.
(‘ಜಾಗತೀಕರಣವೊ? ತಿಮ್ಮಜ್ಜಿಯ ಕೋಳಿಯೋ?’ ನಾಟಕದ ದೃಶ್ಯ)
‘‘ಅಕ್ಷರಗಳನ್ನು ಗುರುತಿಸಿದ್ದು ನಾಟಕದ ಹಸ್ತಪ್ರತಿ ಮೂಲಕ ಅಂದರೆ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಶಿಕ್ಷಕರೆಲ್ಲ ಅಮಾವಾಸ್ಯೆಗೆ, ಹುಣ್ಣಿಮೆಗೆ ಬರ್ತೀಯಾ ಅಂತ ಬಯ್ಯುತ್ತಿದ್ದರು. ಸರಿಯಾಗಿ ಡ್ರೆಸ್ ಹಾಕ್ಕೊಂಡು ಬಾ ಎಂದರೆ ಭಯ. ಸರಿಯಾಗಿ ಡ್ರೆಸ್ ಇರಲಿಲ್ಲ. ಮನೆಪಾಠ ಬರೆದುಕೊಂಡು ಬಾ ಎಂದರೆ ಆಗುತ್ತಿರಲಿಲ್ಲ. ಹೀಗಿದ್ದಾಗ ಐದನೇ ಕ್ಲಾಸಿನಲ್ಲಿದ್ದಾಗ ನಮ್ಮ ಶಾಲೇಲಿ ರಂಗಚಟುವಟಿಕೆಗಳನ್ನು ನಡೆಸಲು ರಂಗಶಿಕ್ಷಕರಾದ ಎಸ್.ಎಂ. ಹುಲಗಪ್ಪ ಬಂದಿದ್ದರು. ಅವರೊಂದಿಗೆ ನೀನಾಸಂ ಪದವೀಧರರಾಗಿದ್ದ ನಾಗರಾಜ್ ಅವರು ಕಲಿಸುವುದನ್ನು ನೋಡಿ ಆಸಕ್ತಿ ಬಂತು. ಶಾಲೆಯಲ್ಲಿ ಕಲಿಯುವಾಗ ಶಿಕ್ಷಕರು ಹೊಡೆಯುತ್ತಿದ್ದರು. ಆದರೆ ರಂಗಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಚಪ್ಪಾಳೆ ತಟ್ಟೋರು. ಹೀಗಿದ್ದಾಗ ಒಂಭತ್ತನೇ ತರಗತಿಯಲ್ಲಿದ್ದಾಗ ಹೂವಿನಹಡಗಲಿಯಲ್ಲಿನ ರಂಗಭಾರತಿ ತಂಡದಲ್ಲಿದ್ದ ಏಣಗಿ ನಟರಾಜ ಹಾಗೂ ಮಹಾಂತೇಶ ರಾಮದುರ್ಗ ಅವರು ನಮ್ಮೂರಿಗೆ ಬಂದು ರಂಗ ತರಬೇತಿ ಶಿಬಿರ ಏರ್ಪಡಿಸಿದರು. ೪೫ ದಿನಗಳ ಶಿಬಿರವು ಗುಣಮಟ್ಟದ್ದಾಗಿತ್ತು. ಪುರುಷೋತ್ತಮ ತಲವಾಟ ಅವರು ಪ್ರಸಾಧನ ಕುರಿತು, ಧಾರವಾಡ ಆಕಾಶವಾಣಿಯಲ್ಲಿದ್ದ ಆರತಿ ಅವರು ಸಾಹಿತ್ಯ ಕುರಿತು ಹೇಳಿಕೊಟ್ಟರು. ಮಹಾಂತೇಶ ರಾಮದುರ್ಗ ಅವರು ರಂಗದ ಆಟಗಳನ್ನು ಆಡಿಸುವುದರ ಜೊತೆಗೆ ನಾಟಕ ಕಟ್ಟುವ ಬಗೆಯನ್ನು ಹೇಳಿಕೊಟ್ಟರು. ಈ ಶಿಬಿರಕ್ಕೆ ತಪ್ಪದೆ ಯಾಕೆ ಹೋದೆನೆಂದರೆ ನಮ್ಮನೆಯಲ್ಲಿ ಮೂರೊಪ್ಪತ್ತು ಊಟ ಇರಲಿಲ್ಲ. ನಮ್ಮವ್ವ ಬಾರಿಗಿಡದ ಭರಮವ್ವ ಹೂವು, ಹಣ್ಣು ಮಾರುವಾಕೆ ಜೊತೆಗೆ ದೇವದಾಸಿ ಕೂಡಾ. ನಾವು ಮೂವರು ಗಂಡುಮಕ್ಕಳೇ. ಹಿರಿಯಣ್ಣ ಉಮೇಶ ಗೂಡ್ಸ್ ವಾಹನ ಚಾಲಕ. ಎರಡನೆಯ ಅಣ್ಣ ಹನುಮಂತನಿಗೆ ಗೌಂಡಿ ಕೆಲಸ. ೨೦೧೪ರಲ್ಲೇ ನಮ್ಮವ್ವ ಅನಾರೋಗ್ಯದಿಂದ ತೀರಿಕೊಂಡ್ಲು. ಆಗ ನಂಗೆ ಇಪ್ಪತ್ತೊಂದು ವರ್ಷ ವಯಸ್ಸಾಗಿತ್ತು. ನಮ್ಮಪ್ಪ ಇಮಾಮ್ಸಾಬ್ ಹೊಸಪೇಟೆಯಲ್ಲಿರುತ್ತಿದ್ದರು. ಅವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡುವ ಕೆಲಸ. ಹೊಸಪೇಟೆಯಲ್ಲಿ ಅವರಿಗೆ ಅವರದೇ ಇನ್ನೊಂದು ಕುಟುಂಬವಿತ್ತು. ಆದರೆ ಅಪ್ಪ ಎಂದು ಹೇಳಿಕೊಳ್ಳುವ ಧೈರ್ಯ ನಮಗೆ ಇರುತ್ತಿರಲಿಲ್ಲ. ಸರಿಯಾಗಿ ಕಲಿಸಲಿಲ್ಲ, ಮನೆ ಕಟ್ಟಿಸಲಿಲ್ಲ. ಒಟ್ಟಾರೆ ಆರ್ಥಿಕವಾಗಿ ನೆರವಾಗಲಿಲ್ಲ. ಸರಿಯಾಗಿ ಊಟ ಸಿಗದೆ ಇದ್ದಾಗ ಶಿಬಿರದಲ್ಲಿ ಮೂರೊಪ್ಪತ್ತು ಊಟ ಸಿಕ್ಕೋದು. ನೀನಾಸಂಗೆ ಹೋದ ಮೇಲೆ ಮೂರೊಪ್ಪತ್ತು ಉಂಡೆ. ನೀನಾಸಂನಲ್ಲಿ ತಿರುಗಾಟದಲ್ಲಿದ್ದಾಗ ಹತ್ತು ಸಾವಿರ ರೂಪಾಯಿ ಪಗಾರ ಸಿಗೋದು. ಪಗಾರವೆಂದು ನೋಡಿದ್ದು ಆಗಲೇ. ಆಗ ಬಂದ ಪಗಾರದಲ್ಲಿ ಹತ್ತು ಸಾವಿರ ರೂಪಾಯಿ ಸೀರೆ ತಗೊಂಡು ಬಂದು ನಮ್ಮವ್ವಗ ಕೊಟ್ಟೆ. ನಮ್ಮವ್ವ ೧೦-೧೧ ವರ್ಷವಿರುವಾಗಲೇ ಆಕೆಯ ಅಪ್ಪ-ಅವ್ವ ತೀರಿಕೊಂಡಿದ್ರು. ಒಂಟಿಯಾಗಿ ಬೆಳೆದಳು. ಈಗ ಮೂರೊಪ್ಪತ್ತು ಊಟ ಸಿಕ್ಕೋದು ರಂಗಭೂಮಿಯಿಂದ’’ ಎಂದು ಸರದಾರ ಹೆಮ್ಮೆಯಿಂದ ಹೇಳುತ್ತಾರೆ.
‘‘ಆರು ವರ್ಷದ ರಂಗಚೌಕಿಯ ಮೂಲಕ ‘ಏಕಲವ್ಯ’, ‘ಸುಮತಿಯ ಪ್ರಸಂಗ’, ‘ಜಾಗತೀಕರಣವೊ? ತಿಮ್ಮಜ್ಜಿಯ ಕೋಳಿಯೋ?’, ‘ಮಹಾಭೋಜನ’, ‘ಮದ್ದಿಗಿಂತ ಮುನ್ನೆಚ್ಚರಿಕೆ ಮೇಲು’, ‘ಆಲಿಬಾಬ ಮತ್ತು ನಲವತ್ತು ಮಂದಿ ಕಳ್ಳರು’ ನಾಟಕಗಳನ್ನು ನಿರ್ದೇಶಿಸಿರುವೆ. ಅಲ್ಲದೆ ಪ್ರತೀ ವರ್ಷ ಬೇಸಿಗೆಯಲ್ಲಿ ಮಕ್ಕಳ ರಂಗ ಶಿಬಿರ ಆಯೋಜಿಸಲಾಗುತ್ತದೆ. ಇದಕ್ಕೂ ಮೊದಲು ೨೦೧೦ರಲ್ಲಿ ಸೃಷ್ಟಿ ಕಲಾಬಳಗದ ಮೂಲಕ ‘ಮಸ್ತ್ ಮಜಾ ಮಕ್ಕಳ ರಜಾ’ ಎನ್ನುವ ಶಿಬಿರ ಏರ್ಪಡಿಸಿದಾಗ ಮಹಾದೇವ ಹಡಪದ, ಅಪ್ಪಣ್ಣ ರಾಮದುರ್ಗ, ಯತೀಶ್ ಕೊಳ್ಳೇಗಾಲ, ಲೋಕನಾಥ್ ಸೋಗಂ ಅವರು ನಿರ್ದೇಶಕರಾಗಿ ಬಂದಿದ್ದರು. ಆಗ ೨೦೦ ರೂಪಾಯಿ ಪ್ರವೇಶ ಶುಲ್ಕ. ಸಂಜೆಯಾದರೆ ಪ್ರವೇಶ ಶುಲ್ಕ ಕೇಳೋರು. ಎಲ್ಲರು ಕೊಟ್ಟರೂ ನನಗೆ ಕೊಡಲಾಗಲಿಲ್ಲ. ಇದಕ್ಕಾಗಿ ನಾಲ್ಕೈದು ದಿನಗಳಿಂದ ಹೋಗಲಿಲ್ಲ. ಉಪನ್ಯಾಸಕ ಸೋಮೇಶ್ ಉಪ್ಪಾರ ಅವರು ‘ದುಡ್ಡು ಕೊಡಬೇಡ, ಬಾ ಸೇರ್ಕೊ’ ಎಂದು ಕರೆದುಕೊಂಡು ಹೋದರು. ಆ ಶಿಬಿರದ ನಂತರ ನೀನಾಸಂಗೆ ಹೋದೆ, ಬಿ.ಎ. ಹಾಗೂ ಎಂ.ಎ. ಪದವಿ ಪಡೆದೆ. ನಮ್ಮ ಕುಟುಂಬದಲ್ಲಿ ೩-೪ ತಲೆಮಾರಿಗೆ ಹೋಲಿಸಿದರೆ ಶಿಕ್ಷಣ ಪಡೆದವರಿಲ್ಲ. ರಂಗಭೂಮಿಯಿಂದ ಶಿಕ್ಷಣ ಪಡೆದೆ. ಲೋಕಜ್ಞಾನ ಬಂತು. ಉತ್ತಮ ನಾಗರಿಕನಾಗಿ ಬದುಕಲು ರಂಗಭೂಮಿಯಿಂದ ಸಾಧ್ಯವಾಯಿತು. ಮೂರೊಪ್ಪತ್ತು ಊಟ ಕೊಟ್ಟ ರಂಗಭೂಮಿಯ ಮೂಲಕ ರಂಗ ತರಬೇತಿ ಶಿಬಿರ ಏರ್ಪಡಿಸುವೆ. ನಮ್ಮೂರಲ್ಲಿ ದೇವದಾಸಿ ಮಕ್ಕಳಿದ್ದಾರೆ, ಒಂಟಿ ತಾಯಿಮಕ್ಕಳಿದ್ದಾರೆ. ನಮ್ಮೂರು ಕೈಗಾರಿಕೆ ಪ್ರದೇಶ. ಬಹಳ ಬೇಗ ದುಶ್ಚಟಗಳಿಗೆ ಬಲಿಯಾಗುತ್ತಾರೆ. ಅವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾಳಜಿಯಿಂದ ರಂಗಚಟುವಟಿಕೆಗಳಿಂದ ಮಕ್ಕಳು ಬದಲಾಗುತ್ತಾರೆಂಬ ಭರವಸೆ ಹೊತ್ತೆ. ಈಗ ಆ ಮಕ್ಕಳೆಲ್ಲ ಹೆತ್ತವರ ಮಾತು ಕೇಳುತ್ತಾರೆ. ಒಳ್ಳೆಯ ಅಂಕಗಳನ್ನು ಪಡೆಯುತ್ತಿದ್ದಾರೆ. ಹೀಗೆ ರಂಗಭೂಮಿಯಿಂದ ಬದಲಾಗುತ್ತಿದ್ದಾರೆ ಎನ್ನುವುದೇ ಖುಷಿ’’ ಎನ್ನುತ್ತಾರೆ ಅವರು.
ಅವರ ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ರಾಜೇಶ್, ರಾಜೇಶ್ವರಿ, ಹನುಮಂತ, ಅಜೇಯ್ ಈಗ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ‘‘ನಮ್ಮ ಗ್ರಾಮೀಣ ಭಾಗದಲ್ಲಿ ತರಬೇತಿಗಳಾಗಲಿ, ವೇದಿಕೆಗಳಾಗಲಿ ಕಮ್ಮಿ. ಇದಕ್ಕಾಗಿ ನಮ್ಮೂರಲ್ಲೇ ಗಟ್ಟಿಯಾಗಿ ನಿಂತಿದ್ದೇವೆ’’ ಎನ್ನುವ ಸರದಾರ ಅವರೂ ನಾಲ್ಕೈದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಆದರೂ ಮರಿಯಮ್ಮನಹಳ್ಳಿಯಲ್ಲೇ ನೆಲೆ ನಿಂತ ಅವರು ರಂಗಭೂಮಿ ಬಿಡರು.







