ಬಾನು ಕಥೆಗಳಾಧಾರಿತ ಮನ ಮಿಡಿವ ‘ಒಮ್ಮೆ ಹೆಣ್ಣಾಗು’

ನಾಟಕ: ಒಮ್ಮೆ ಹೆಣ್ಣಾಗು
ಮೂಲ: ಬಾನು ಮುಷ್ತಾಕ್ ಅವರ ಆಯ್ದ ಕಥೆಗಳು
ಪರಿಕಲ್ಪನೆ, ವಿನ್ಯಾಸ, ನಿರ್ದೇಶನ: ಸವಿತಾರಾಣಿ
ಸಹವಿನ್ಯಾಸ, ಸಹನಿರ್ದೇಶನ: ಶ್ವೇತಾರಾಣಿ ಎಚ್.ಕೆ.
ಬೆಳಕಿನ ವಿನ್ಯಾಸ: ಮಹೇಶ್ ಕಲ್ಲತ್ತಿ
ತಂಡ: ರಂಗಾಯಣ, ಮೈಸೂರು
‘‘ಬಾ ಗೆಳತಿ ಚೂರಾದ ಮುಖಗಳನ್ನು ಆಯೋಣ
ಎಲ್ಲಾದರೂ ಅಳು ಅಂಟಿಕೊಂಡಿದ್ದರೆ
ನಮ್ಮ ಕಣ್ಣುಗಳಿಗೆ ಬಸಿದುಕೊಳ್ಳೋಣ
ಬಾ ಗೆಳತಿ ಚೂರಾದ ಮುಖಗಳನ್ನು ಆಯೋಣ
ಎಲ್ಲಾದರೂ ನಗು ಮೆತ್ತಿಕೊಂಡಿದ್ದರೆ
ನಮ್ಮ ತುಟಿಗಳಿಗೆ ತುಂಬಿಕೊಳ್ಳೋಣ
ಬಾ ಗೆಳತಿ ಚೂರಾದ ಮುಖಗಳನ್ನು ಆಯೋಣ
ಚೂರಾದ ಎದೆಗಳನು ಆಯೋಣ
ಎಲ್ಲಾದರೂ ಹದವಿದ್ದರೆ
ಅಲ್ಲಿ ಬೀಜಗಳಾಗಿ ಮೊಳೆಯೋಣ
ಬಾ ಗೆಳತಿ ಬಾ ಗೆಳತಿ ಬಾ ಗೆಳತಿ...’’
ಹೀಗೆ ಕವಿ ಎನ್.ಕೆ.ಹನುಮಂತಯ್ಯ ಅವರ ಕವಿತೆಯ ಸಾಲುಗಳನ್ನು ಮೈಸೂರು ರಂಗಾಯಣದ ಕಲಾವಿದೆಯರಾದ ಕೆ.ಆರ್. ನಂದಿನಿ ಹಾಗೂ ಬಿ.ಎನ್. ಶಶಿಕಲಾ ಅವರು ಹೇಳಿದ ಬಗೆ ಹಿಡಿಸಿತು. ಅಲ್ಲದೆ ‘‘ಈ ಜಗತ್ತನ್ನೂ ಈ ವ್ಯವಸ್ಥೆಯನ್ನೂ ನೀನೇ ಸೃಷ್ಟಿಸಿದ್ದರೆ ಪ್ರಭು, ನೀನು ಅನುಭವ ಹೊಂದಿದ ಕುಂಬಾರನಲ್ಲ. ಬಾ ಭೂಮಿಗೆ ಒಮ್ಮೆ ಹೆಣ್ಣಾಗು... ಪ್ರಭು ಒಮ್ಮೆ ಹೆಣ್ಣಾಗು’’
ಹೀಗೆ ಹೇಳುವ ಮೂಲಕ ಕೊನೆಗೊಳ್ಳುತ್ತದೆ ‘ಒಮ್ಮೆ ಹೆಣ್ಣಾಗು’ ನಾಟಕ. ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕಥಾಸಂಕಲನದಿಂದ ಆಯ್ದ ಕಥೆಗಳನ್ನಾಧರಿಸಿದ ನಾಟಕವಿದು. ಈ ಮೂಲಕ ಬಾನು ಅವರಿಗೆ ಗೌರವ ಸಲ್ಲಿಸಿದಂತಾಗಿದೆ. ಜೊತೆಗೆ ಅವರ ಕಥೆಗಳನ್ನು ಓದದವರಿಗೆ ಈ ನಾಟಕ ಮೂಲಕ ತಲುಪಿಸಿದಂತಾಗುತ್ತಿದೆ.
ಮೈಸೂರು ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಸದ್ಯ ಪ್ರತೀ ರವಿವಾರ ಸಂಜೆ ಆರೂವರೆಗೆ ಪ್ರದರ್ಶನಗೊಳ್ಳುತ್ತಿರುವ ಈ ನಾಟಕದಲ್ಲಿ ಕಲಾವಿದೆಯರಾದ ಕೆ.ಆರ್. ನಂದಿನಿ ಹಾಗೂ ಬಿ.ಎನ್. ಶಶಿಕಲಾ ಇಬ್ಬರು ಅಭಿನಯಿಸದೆ ಪಾತ್ರಗಳೇ ಅವರಾಗಿರುವ ನಾಟಕವಿದು. ಹೀಗಾಗಿ ನಾಟಕದ ನಂತರ ನನ್ನ ಪಕ್ಕದಲ್ಲಿ ಕುಳಿತಿದ್ದ ಪ್ರೇಕ್ಷಕಿಯೊಬ್ಬರು ‘‘ಒಮ್ಮೆ ಹೆಣ್ಣಾಗು ಎನ್ನಬಾರದು. ಸಾವಿರ ಬಾರಿ ಹೆಣ್ಣಾಗು ಎಂದೇ ಹೇಳಬೇಕು’’ ಎಂದರು. ಅವರ ಮಾತಿನಲ್ಲಿ ರೋಷವಿತ್ತು, ವಿಷಾದವಿತ್ತು, ಸಿಟ್ಟಿತ್ತು, ನಿಟ್ಟುಸಿರಿತ್ತು.
ನಾಟಕ ಶುರುವಾಗುವುದೇ ಶಶಿಕಲಾ ಅವರ ತಲೆಯ ಮೇಲೆ ಸಾಸರ್ ಇಟ್ಟು ನಂದಿನಿ ಅವರು ಕಾಫಿ ಕುಡಿಯುವ ದೃಶ್ಯದ ಮೂಲಕ. ಇದು ಹೆಣ್ಣು ತಾಳ್ಮೆ, ಸಹನೆಯ ಪ್ರತೀಕವೆಂದು ತೋರಿಸುವ ಬಗೆಯೂ ಹೌದು. ಹಿನ್ನೆಲೆಯಲ್ಲಿ ‘ಜರೂರತೆ ಜರೂರತೆ ಜರೂರತೆ ಹೆ, ಸಿರಿಮತಿಕಿ, ಕಲಾವತಿಕಿ, ಸೇವಾಕರೆ...’ ಹಾಡು ಗಮನ ಸೆಳೆಯುತ್ತದೆ.
‘‘ಹೆಣ್ಣು ತನ್ನ ಜೀವನದ ಗೋಲ್ಡನ್ ಪಿರಿಯಡ್ ಅಂತ ಏನು ಕರಿತೀವಿ 13ರಿಂದ 35 ವರ್ಷಗಳನ್ನು ಮಕ್ಕಳನ್ನು ಹೆರೋಕೆ, ಬೆಳೆಸೋಕೆ, ಮಕ್ಕಳು, ಮನೆ ಕುಟುಂಬಕ್ಕೆ ಇನ್ವೆಸ್ಟ್ ಮಾಡ್ತಾಳೆ. ಅದ್ರಿಂದ ಏನೂ ರಿಟರ್ನ್ ಬರಲ್ಲ ಅಂತ ಗೊತ್ತಿದ್ದೂ ತನ್ನ ಗುರುತೇ ಅಳಿಸಿಹೋಗೋವಷ್ಟು ಮನೆಗಾಗಿ ಜೀವನಾನೇ ಸವೆಸಿಬಿಡ್ತಾಳೆ. ಇಷ್ಟೆಲ್ಲ ಮಾಡಿದ್ರೂ ಹೆಂಡತಿ ಚಿಟಿಕೆ ಹೊಡೆಲಯೋದ್ರಲ್ಲಿ ರಿಪ್ಲೇಸ್ ಆಗಿಬಿಡ್ತಾಳೆ. ನನ್ನ ಅಜ್ಜಿ ಹೇಳ್ತಿದ್ರು, ನಿಮ್ಮ ಅಜ್ಜಿಯಂದಿರು ಕೂಡಾ ಹೇಳಿರ್ತಾರೆ. ಹೆಂಡತಿ ಸತ್ರೆ ಗಂಡನಿಗೆ ಮೊಣಕೈ ಎಲುಬಿಗೆ ಪೆಟ್ಟು ಬಿದ್ದಂಗೆ. ಮೊಣಕೈಗೆ ಪೆಟ್ಟು ಬಿದ್ರೆ ಒಂದು ಕ್ಷಣ ಭಯಂಕರ ಅಸಹನೀಯ ನೋವುಂಟಾಗುತ್ತೆ. ಒಂದು ಸೆಕೆಂಡ್ ಅಷ್ಟೆ. ಆಮೇಲೆ ಏನೂ ಅನಿಸೋದಿಲ್ಲ. ಗಾಯ ಇಲ್ಲ, ರಕ್ತ ಇಲ್ಲ, ಗುರುತಿಲ್ಲ. ಈ ಲವಿಂಗ್, ಕೇರಿಂಗ್, ರೊಮ್ಯಾಂಟಿಕ್, ರೇಮಂಡ್ ದಿ ಕಂಪ್ಲೀಟ್ ಮ್ಯಾನ್. ಹೆಂಡತೀನೆ ಸರಿಯಿಲ್ಲ ಅಂತಾರೆ...’’ ಇಂಥ ಸಂಭಾಷಣೆಗಳು ಗಮನ ಸೆಳೆಯುತ್ತವೆ.
ಒಂದೂವರೆ ಗಂಟೆಯ ಈ ನಾಟಕದಲ್ಲಿ ಝುಲೇಖ ಹಾಗೂ ಅವಳ ಗೆಳತಿಯ ನಡುವೆ ನಡೆಯುವ ಕಥೆ, ಸಂಭಾಷಣೆ ಗಮನಾರ್ಹ. ರಿಕ್ಷಾ ಓಡಿಸೋಕೆ ಗಂಡುಮಗು ಆಗಿಲ್ಲವೆಂದು ಗಂಡ ತನ್ನನ್ನು ಬಿಟ್ಟುಹೋದನೆಂದು ಝುಲೇಖಳ ಗೆಳತಿ ಕಣ್ಣೀರು ಹಾಕಿದಾಗ ಝುಲೇಖ ಸಮಾಧಾನಿಸಿ ಹೆಂಡಿ-ಮಕ್ಕಳನ್ನು ಹೀಗೆ ಬೀದಿಪಾಲು ಮಾಡಿ ಹೋದ ಗಂಡನ ಕುರಿತು ಮಸೀದಿಗೆ ಯಾಕೆ ಅರ್ಜಿ ಕೊಡಬಾರದು ಎಂದಾಗ ‘‘ನೀನೇ ಅರ್ಜಿ ಬರೆದುಕೊಡು’’ ಎಂದು ಕೇಳುತ್ತಾಳೆ. ಹಾಗೆ ಅರ್ಜಿ ಬರೆಸಿಕೊಂಡು ಮುತವಲ್ಲಿ ಸಾಹೇಬರ ಮನೆಗೆ ಸುತ್ತಿದರೂ ಅವರು ಸಿಗಲಿಲ್ಲ. ಈಗ ಬಾ, ಹೋಗಿ ಬಾ, ಅರ್ಜಿ ಕಳೆದುಹೋಗಿದೆ ಎನ್ನುವ ಮಾತುಗಳು. ತನ್ನ ಮಗು ಭೇದಿಯಿಂದ ನರಳುತ್ತಿರುವಾಗ ಔಷಧಿ ಕೇಳಿದರೂ ಸಿಗುವುದಿಲ್ಲ. ಅಲ್ಲಿಂದ ತನ್ನ ತವರುಮನೆಗೆ ಹೋದರೆ ಅಟ್ಟಿಸಿಕಳಿಸುವ ಅಣ್ಣ ‘‘ಸಾಯೋರು ಯಾರೂ ಹೇಳಿ ಸಾಯಲ್ಲ. ನಡಿ ಹೊರಗೆ. ಡೋಲಿ ಹೋದ ಮನೆಯಿಂದ ಡೋಲ ಹೊರಹೋಗಬೇಕು’’ ಎನ್ನುತ್ತಾನೆ. ಆ ಮೇಲೆ ಮಗಳ ಸ್ಪರ್ಶ, ಗೆಳತಿಯ ಸಾಂತ್ವನ ಬದುಕಿಸಿತು ಎನ್ನುತ್ತಾಳೆ ಝುಲೇಖಳ ಗೆಳತಿ.
ಇನ್ನೊಂದು ಕಥೆಯಲ್ಲಿ ಸೊಪ್ಪು ಮಾರುವಾಕೆ ಸೊಪ್ಪಮ್ಮ. ಆಕೆಯ ಹೆಸರು ಕೇಳಿದಾಗ ಜಯ-ಜಯಮ್ಮ ಎನ್ನುತ್ತಾಳೆ. ನಮ್ಮ ಅಮ್ಮನ ಹೆಸರೂ ಜಯ ಅಂತಾನೆ. ಆದರೆ ಜೀವನಪೂರ್ತಿ ಬರೀ ಕಷ್ಟವೆ ಆಗೋಯ್ತು ಎನ್ನುತ್ತಾಳೆ. ಆಗ ನಂದಿನಿ ‘‘ಸೀತಾ, ಗೀತಾ, ಶ್ವೇತಾ, ಸವಿತಾ, ಶಶಿಕಲಾ, ಜಯಾ ಹೆಸರು ಯಾವುದಾದರೇನು? ಹೆಸರಲ್ಲೇನಿದೆ? ಹೆಣ್ಣಾಗಿ ಹುಟ್ಟಿದ್ಮೇಲೆ ಮುಗೀತು ಕಷ್ಟ ತಪ್ಪಿದ್ದಲ್ಲ’’ ಎನ್ನುತ್ತಾರೆ. ಆಗ ಶಶಿಕಲಾ ‘‘ಈ ಭೂಮಿ ನಮಗೋಸ್ಕರನೇ ಯಾಕೆ ಬಾಯಿ ತೆರೆಯುತ್ತೆ? ನಾನೇ ಯಾಕೆ ಅದರೊಳಗೆ ಸಮಾಧಿಯಾಗಬೇಕು? ಮತ್ತೆ ಮತ್ತೆ ಮಣ್ಣಾಗಿ ನಾನೇ ಯಾಕೆ ಅಗ್ನಿಪರೀಕ್ಷೆಯ ಪುರಾವೆಯಲ್ಲಿ ಸಾಬೀತು ಮಾಡಬೇಕು?’’ ಎಂದು ಕೇಳುತ್ತಾರೆ. ಆಗ ಶಶಿಕಲಾ ‘‘ಯಾಕೆ ಹೇಳು? ಪೆಟ್ರಿಯಾರ್ಕಿ ಅಂದ್ರೆ ಪಿತೃಪ್ರಧಾನ ವ್ಯವಸ್ಥೆ’’ ಎನ್ನುವುದರ ಜೊತೆಗೆ ಬಹಳ ದೊಡ್ಡ ಅಳತೆಯ ಚಪ್ಪಲಿ ಮೆಟ್ಟಲು ಹೇಳುತ್ತಾರೆ. ತನ್ನ ಸೈಜಲ್ಲವೆಂದು ಶಶಿಕಲಾ ಹೇಳಿದರೂ ‘‘ನಿಂಗಾಗುತ್ತೊ, ಬಿಡುತ್ತೊ, ಹೊಂದುತ್ತೊ, ಹೊಂದಲ್ವೊ, ಇಷ್ಟನೊ? ಕಷ್ಟಾನೋ? ನೀನು ಇದರೊಳಗೆ ಫಿಟ್ ಆಗ್ಲೇಬೇಕು. ಇದು ಪಿತೃಪ್ರಧಾನ ವ್ಯವಸ್ಥೆ’’ ಎಂದಾಗ ಹಿನ್ನೆಲೆಯಲ್ಲಿ ‘ಸೋಬಾನವೆನ್ನಿರೆ ಶಿವನಿಗೆ, ಚಪ್ಪರದಡಿಯ ಚೆಂದಕೆ ಬೀಸೋ ಗಾಳಿ...’ ಹಾಡು ಕೇಳಿಬರುತ್ತದೆ.
ನಂತರ ವೆಜ್, ನಾನ್‌ವೆಜ್ ಕುರಿತು ಚರ್ಚೆ ನಡೆಯುತ್ತದೆ. ಮದುವೆಗೆ ಮುಂಚೆ ನಾನ್‌ವೆಜ್ ಎಂದು ಹೇಳಿದ್ದರೂ ಅದೊಂದು ದಿನ ಹುಡುಗ ಫೋನ್ ಮಾಡಿ ಹುಡುಗಿಯನ್ನು ಕೇಳುತ್ತಾನೆ. ‘ಏನು ಮಾಡ್ತಿದ್ದಿ?’
‘ಅಡುಗೆ’ ಎನ್ನುತ್ತಾಳೆ ಹುಡುಗಿ.
‘ಗುಡ್. ಅಡುಗೇನೂ ಬರುತ್ತೆ. ಏನು ಅಡುಗೆ?’ ಕೇಳುತ್ತಾನೆ.
‘ಪೋರ್ಕ್’ ಎನ್ನುತ್ತಾಳೆ.
‘ಏನು ಫೋರ್ಕ್?’ ಗಾಬರಿಯಾಗಿ ಕೇಳುತ್ತಾನೆ.
‘ಅಲ್ಲ, ಪೋರ್ಕ್ ಹಂದಿ ಮಾಂಸ’ ಎನ್ನುತ್ತಾಳೆ.
‘ಐ ಹ್ಯಾವ್ ಟು ಥಿಂಕ್’ ಎನ್ನುತ್ತಾನೆ ಹುಡುಗ.
‘ಓಕೆ ಥಿಂಕ್’ ಎಂದು ಹುಡುಗಿ ಫೋನ್ ಕಟ್ ಮಾಡಿ ‘‘ಹುಡುಗಿ ವೆಜ್ ಆಗಿದ್ದು ಹುಡುಗ ನಾನ್‌ವೆಜ್ ತಿಂತಾನೆ ಅಂದ್ರೆ ಹುಡುಗಿ ಕಲಿತಾದ್ರು ಮಾಡಿಕೊಡಬೇಕು, ಮಾಡಿಕೊಡ್ತಾಳೆ. ಅದೇ ಉಲ್ಟಾ ಆದ್ರೆ ಐ ಹ್ಯಾವ್ ಟು ಥಿಂಕ್’’ ಎಂದು ವ್ಯಂಗ್ಯವಾಡುತ್ತಾಳೆ. ಹೀಗೆ ಸದಾ ತುಳಿತಕ್ಕೆ ಒಳಗಾದಾಗ ‘‘ನನಗೆ ನೋವುಗಳನ್ನು ಭರಿಸುವ ಶಕ್ತಿಯನ್ನು ನೀನು ನೀಡಿದೆ. ಆದರೆ ನೋವುಗಳನ್ನು ನೀಡುವ ಇಷ್ಟೊಂದು ಕ್ರೌರ್ಯವನ್ನು ಅವನಿಗೆ ನೀಡಬಾರದಿತ್ತು. ಕ್ರೌರ್ಯವನ್ನು ಅವನು ಮುಂದುವರಿಸುತ್ತಲೇ ಹೋದರೆ, ಅವನು ರಾಜಿ ಆಗದಿದ್ರೆ ನಾವು ಹೇಳ್ತೀವಿ. ಇನ್ನು ಬೇಡ, ಸಾಕು. ಮದುವೆ ಬೇಡ, ಮಕ್ಕಳು ಬೇಡ, ಕುಟುಂಬ ಬೇಡ. ಎಲ್ಲವನ್ನೂ ನಿರಾಕರಿಸ್ತೀವಿ. ಇದು ಬರೀ ರೋಷದ ಮಾತಲ್ಲ. ಇದು ನನ್ನ ಒಡಲ ಕಿಚ್ಚು. ಇದು ನಿಮಗೆ ಮನೆಯಾಗಿ ಕಾಣಬಹುದು. ಆದರೆ ನನಗೆ ಇದು ಹಿಟ್ಲರನ ಗ್ಯಾಸ್ ಛೇಂಬರ್...’’
ಇಂಥವೇ ಮಾತುಗಳು ಪ್ರೇಕ್ಷಕರನ್ನು ಹಿಡಿದಿಡುತ್ತವೆ, ಚುಚ್ಚುತ್ತವೆ, ಎಚ್ಚರಿಸುತ್ತವೆ. ಮಾತನಾಡುತ್ತಲೇ ಪ್ರೇಕ್ಷಕರನ್ನು ಪ್ರಶ್ನಿಸುತ್ತ ಮುಂದುವರಿಯುವ ನಾಟಕವಿದು. ಹೀಗಾಗಿ ಪ್ರೇಕ್ಷಕರ ಮೇಲೆ ಆಗಾಗ ಬೆಳಕೂ ಬೀಳುತ್ತದೆ. ಸೋರುವ ಮನೆಯ ನಡುವೆ ನಿಂತು ಅಸಹಾಯಕಳಾಗಿ ಕೇಳುವ, ಮನೆಯೊಳಗಿರುವ ಮನೆಯ ಆಟಿಕೆಯ ಸಾಮಾನನ್ನೇ ಎಸೆಯುವ, ಗಾದಿ ಸಿದ್ಧಪಡಿಸುವುದಕ್ಕಾಗಿ ಹತ್ತಿ ಸರಿಪಡಿಸುತ್ತಲೇ ಮಾತನಾಡುವ... ಹೀಗೆ ಸರಳವಾದ ರಂಗಸಜ್ಜಿಕೆಯ ನಡುವೆ ನಂದಿನಿ ಹಾಗೂ ಶಶಿಕಲಾ ಅವರ ಪಾತ್ರಗಳು ಕಾಡುತ್ತವೆ.
ಅಂದ ಹಾಗೆ ಈ ನಾಟಕ ಇದೇ ಅಕ್ಟೋಬರ್ 26ರಂದು ಸಂಜೆ ಆರೂವರೆಗೆ ಮೈಸೂರಿನ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ, ನವೆಂಬರ್ ಒಂದರಂದು ಸಂಜೆ ಆರೂವರೆಗೆ ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ನಂತರ ವಾರಾಂತ್ಯ ನಾಟಕವೆಂದು ಕೆಲ ರವಿವಾರ ಪ್ರದರ್ಶನಗೊಳ್ಳಲಿದೆ.







