ರಂಗದಲ್ಲಿ ರಾಜನಾಗಿ ಮೆರೆದ ರಾಜು ತಾಳಿಕೋಟೆ

‘‘ಛಲವಂತ. ಸಾಧಿಸಬೇಕೆಂದುಕೊಂಡಿದ್ದನ್ನು ಸಾಧಿಸಿಯೇ ತೀರುತ್ತಿದ್ದರು. ಗದಗದ ಪಂಚಾಕ್ಷರಿ ಗವಾಯಿಗಳ ಜಾತ್ರೆಯಲ್ಲಿ ಲಕ್ವಾ ಹೊಡೆದಾಗ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಆರಾಮವಾಗುತ್ತಾರೆ. ಇಷ್ಟೊತ್ತಿಗೆ ಸಕ್ಕರೆ ಕಾಯಿಲೆ ಕಾಡುತ್ತಿರುತ್ತದೆ. ಆದರೆ ಅವರು ಪಥ್ಯ ಮಾಡುವುದಿಲ್ಲ. ಅಂದರೆ ಮದ್ಯ, ಸಿಗರೇಟು ತ್ಯಜಿಸಬೇಕಿತ್ತು. ಆದರೆ ತ್ಯಜಿಸಲಿಲ್ಲ. ಸ್ಟಂಟ್ ಅಳವಡಿಸಿಕೊಳ್ಳಬೇಕಿದ್ದರೂ ನಿರ್ಲಕ್ಷ್ಯ ವಹಿಸಿದರು. ತೊಳೆಸಿಕೊಳ್ಳುವುದು, ಬಳಸಿಕೊಳ್ಳುವುದು ಬೇಕಿಲ್ಲ. ಪಟ್ಟನೆ ಹೋಗಿಬಿಡಬೇಕು ಎನ್ನುವ ಧಾವಂತದವರು’’ ಎಂದು ರಾಜು ಕುರಿತು ಮೆಲುಕು ಹಾಕುತ್ತಾರೆ ಹಿರಿಯ ರಂಗಕರ್ಮಿ ಜೇವರ್ಗಿ ರಾಜಣ್ಣ.
ರಾಜೇಸಾಬ್ ಮಕ್ತುಂಸಾಬ್ ಯಂಕಂಚಿ ಎಂದರೆ ಬಹುಶಃ ಬಹಳ ರಂಗಾಸಕ್ತರಿಗೂ ಗೊತ್ತಾಗಲಿಕ್ಕಿಲ್ಲ. ಆದರೆ ರಾಜು ತಾಳಿಕೋಟಿ ಎಂದರೆ ರಂಗಾಸಕ್ತರಿಗೆಲ್ಲ ಗೊತ್ತಿರುವ ಹೆಸರು. ರಂಗಭೂಮಿಯಲ್ಲಿ ಹೆಸರುವಾಸಿಯಾಗಿ ಇನ್ನಿಲ್ಲವಾದರು.
ತಮ್ಮ ವಾಕ್‌ಚಾತುರ್ಯದಿಂದಲೇ ರಂಗಭೂಮಿಯಲ್ಲಿ ಹೆಸರುವಾಸಿಯಾದ ರಾಜು ತಾಳಿಕೋಟೆ ಅವರಿಗೆ 59 ವರ್ಷ ವಯಸ್ಸಷ್ಟೇ. ಉಡುಪಿ ಜಿಲ್ಲೆಯ ಹೆಬ್ರಿಯ ಕಬ್ಬಿನಾಲೆಯಲ್ಲಿ ‘ಶಂಕರಾಭರಣ’ ಸಿನೆಮಾದ ಚಿತ್ರೀಕರಣಕ್ಕೆ ತೆರಳಿದ್ದರು. ರಾತ್ರಿ ಉಸಿರಾಟ ತೊಂದರೆಯಾಗಿ ಆಸ್ಪತ್ರೆ ಸೇರಿದಾಗ ತುರ್ತು ಅಂಜಿಯೊಪ್ಲಾಸ್ಟಿ ನಡೆಸಿದರೂ ಸೋಮವಾರ (ಅಕ್ಟೋಬರ್ 13) ಉಸಿರು ಚೆಲ್ಲಿದರು.
ಅವರು ನಾಟಕದ ಸಂಭಾಷಣೆಗಳನ್ನು ಕಲಿತು ಮಾತನಾಡುವುದಕ್ಕಿಂತ ಅಂದರೆ ಕಂಠಪಾಠ ಮಾಡಿ ಮಾತಾಡದೆ ಸ್ವಂತ ಮಾತನಾಡುತ್ತಿದ್ದರು. ತಮ್ಮದೇ ಶೈಲಿಯ ಹಾಸ್ಯದಲ್ಲಿ ಮಾತಾಡುತ್ತಿದ್ದರು. ಹಾಸ್ಯಪ್ರಜ್ಞೆ ಚೆನ್ನಾಗಿದ್ದುದರಿಂದ ಬಹಳ ಬೇಗ ರಂಗಭೂಮಿಯಲ್ಲಿ ಹಾಸ್ಯಪಾತ್ರಗಳ ಮೂಲಕ ಹೆಸರಾದರು. ಅವರು ಪ್ರಸಿದ್ಧರಾದುದು ಟಿ.ಕೆ. ಮಹ್ಮದ್ ಅಲಿ ಅವರ ‘ಕಲಿಯುಗದ ಕುಡುಕ’ ನಾಟಕದ ಮೂಲಕ. ಈ ನಾಟಕವನ್ನು ಬಿ.ಆರ್. ಅರಿಶಿಣಗೋಡಿ ಅವರ ಕಂಪನಿಯು ಆಡುತ್ತಿತ್ತು. ಈ ನಾಟಕದಲ್ಲಿ ಕುಡುಕನ ಪಾತ್ರಕ್ಕೆ ರಾಜು ಬಣ್ಣ ಹಚ್ಚುತ್ತಿದ್ದರು. ನಂತರ ಅದು ಕ್ಯಾಸೆಟ್ ಆಗಿ ಬಹಳ ಪ್ರಸಿದ್ಧವಾಯಿತು. ರಂಗಭೂಮಿ ಜೊತೆಗೆ ಸಿನೆಮಾ ರಂಗಕ್ಕೂ ಕಾಲಿಟ್ಟು ಗಮನ ಸೆಳೆದರು.
ಅವರ ತಾಯಿ ಮೆಹಬೂಬುಬಿ ಕನ್ನಡ ಶಾಲೆ ಶಿಕ್ಷಕಿಯಾಗಿದ್ದವರು ರಂಗಭೂಮಿಯ ಹುಚ್ಚಿನಿಂದಾಗಿ ತಮ್ಮ ವೃತ್ತಿ ತೊರೆದು ರಂಗಭೂಮಿಯಲ್ಲಿ ಕಲಾವಿದೆಯಾದರು. ನಂತರ ವೃತ್ತಿ ರಂಗಭೂಮಿಯ ಕಲಾವಿದರೊಬ್ಬರನ್ನು ಮದುವೆಯಾದರು. ಅವರ ತಂದೆ ವೃತ್ತಿ ರಂಗಭೂಮಿ ಕಲಾವಿದರು ಮತ್ತು ನಾಟಕ ಕಂಪೆನಿ ಮಾಲಕರಾಗಿದ್ದರು. ಮದುವೆಯಾದ ಬಳಿಕ ಹಂದಿಗನೂರು ಸಿದ್ರಾಮಪ್ಪ, ಯಂಕಂಚಿ ಜೋಶಿ, ನ್ಯಾಮತಿ ಶಾಂತಪ್ಪ, ಗುಬ್ಬಿ ವೀರಣ್ಣ ಕಂಪನಿಯಲ್ಲಿ ಮೆಹಬೂಬುಬಿ ಕಲಾವಿದೆಯಾಗಿದ್ದರು. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು. ವಿಜಯಕುಮಾರ್ ಯಂಕಂಚಿ ಮೊದಲ ಪುತ್ರ. ಅವರು ರಂಗಭೂಮಿ ಕಲಾವಿದರಾಗಿದ್ದರು. ಕೊನೆಯವರು ರಾಜು ಹುಟ್ಟಿದ್ದು ನಾಟಕ ಕಂಪನಿಯಲ್ಲಿ. ಇಬ್ಬರು ಅಕ್ಕಂದಿರ ಮದುವೆಯಾಗಿ ಗಂಡನ ಮನೆ ಸೇರಿದರು. ರಾಜು ಅವರು ನಾಲ್ಕನೆಯ ತರಗತಿಯಲ್ಲಿ ಓದುವಾಗ ಹನ್ನೊಂದು ವರ್ಷ ವಯಸ್ಸು. ಅವರ ತಂದೆ, ತಾಯಿ ಒಂದು ತಿಂಗಳ ಅಂತರದಲ್ಲಿ ತೀರಿಕೊಂಡರು. ಆಗ ತಾಳಿಕೋಟೆಯ ಖಾಸ್ಗತೇಶ್ವರ ಮಠದಲ್ಲಿ ತಬಲಾ ಕಲಿಯಲು ಹೋಗುತ್ತಿದ್ದವರು ರಾಜು. ಇದಕ್ಕಾಗಿ ಒಂದು ವರ್ಷಕ್ಕೆ ಅರ್ಧ ಚೀಲ ಜೋಳ ಹಾಗೂ 75 ರೂಪಾಯಿ ಕೊಡಬೇಕಿತ್ತು. ಆದರೆ ಹೆತ್ತವರಿಬ್ಬರೂ ನಿಧನರಾದುದರಿಂದ ಕೊಡಲಾಗದ ಸ್ಥಿತಿಗೆ ಹೊರಬಂದು ಹೋಟೆಲ್‌ನಲ್ಲಿ ಕಪ್ಪು-ಬಸಿ (ಸಾಸರ್) ತೊಳೆಯುತ್ತಾರೆ. ನಂತರ ಲಾರಿಯಲ್ಲಿ ಕ್ಲೀನರ್ ಆಗುತ್ತಾರೆ. ಇದನ್ನು ಕಂಡವರೊಬ್ಬರು ‘‘ನಿಮ್ಮ ಅಪ್ಪ ಭಾಳ ದೊಡ್ಡ ಕಲಾವಿದ. ಇಂಥ ಕೆಲಸ ಮಾಡಬಾರದು. ನೀನೂ ಕಲಾವಿದನಾಗು’’ ಎಂದು ಸಲಹೆ ನೀಡುತ್ತಾರೆ. ಆಗ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನರಗೋಳಿ ಸುಬೇದಾರ್ ಅವರ ಸುಬೇದಾರ ನಾಟಕ ಕಂಪನಿಗೆ ಗೇಟ್ ಕೀಪರ್ ಆಗಿ ಸೇರಿದರು. ಕಸಗುಡಿಸಿ, ಪರದೆ ಎಳೆದು, ಟಿಕೆಟ್ ಹರಿದು, ಪ್ರಚಾರ ಕೈಗೊಳ್ಳುತ್ತಿದ್ದರು. ಜೊತೆಗೆ ದಿನಾಲೂ ನಾಟಕ ನೋಡುತ್ತಿದ್ದರು. ಒಂದು ದಿನ ಹಾಸ್ಯ ಪಾತ್ರಧಾರಿ ರಜೆ ಕೇಳುತ್ತಾರೆ. ಮಾಲಕರು ಕೊಡುವುದಿಲ್ಲ. ಆದರೆ ಕಲಾವಿದರು ಹೋಗಲೇಬೇಕೆನ್ನುತ್ತಾರೆ. ಆಗ ರಾಜು ಅವರು ತಾನು ಪಾತ್ರ ಮಾಡುತ್ತೇನೆಂದು ಹೇಳುತ್ತಾರೆ. ನಾಟಕದ ಸಂಭಾಷಣೆ ಹೇಳಲು ಮಾಲಕರು ಹೇಳಿದಾಗ ಸುಲಲಿತವಾಗಿ ಹೇಳಿದಾಗ ಪಾತ್ರಕ್ಕೆ ಬಣ್ಣ ಹಚ್ಚಲು ಅವಕಾಶ ಸಿಗುತ್ತದೆ. ಆಮೇಲೆ ನಟರಾಗಿ ಮುಂದುವರಿಯುತ್ತಾರೆ. ಮುಂದೆ ಸುಬೇದಾರ್ ಕಂಪನಿ ನಿಂತ ಮೇಲೆ ಅವರ ಅಣ್ಣ ವಿಜಯಕುಮಾರ್ ಯಂಕಂಚಿ ಅವರ ಕಂಪನಿ ಸೇರುತ್ತಾರೆ. ಹೊಂದಾಣಿಕೆಯಾಗದೆ ಅಲ್ಲಿಂದ ಹೊರಬಂದು ಶೀಲಮ್ಮ ಯಲ್ಲಾಪುರ ಅವರ ಕಂಪನಿಯಲ್ಲಿ ಪಾತ್ರ ನಿರ್ವಹಿಸುತ್ತಾರೆ. ಹಂಸನೂರು ಈರಣ್ಣ ಅವರ ‘ಕಾಳಿಂಗ ಸರ್ಪ’ ನಾಟಕದಲ್ಲಿ ಹಾಸ್ಯಪಾತ್ರದಿಂದ ಭೀಕ್ಯಾ (ಭೀಕುಸಾ) ಹಾಗೂ ಗಣಪ್ಯಾ ಎರಡು ಪಾತ್ರಗಳಲ್ಲಿ ಭೀಕ್ಯಾ ಪಾತ್ರಕ್ಕೆ ರಾಜು ಬಣ್ಣ ಹಚ್ಚುತ್ತಿದ್ದರು. ಮಹಾರಾಷ್ಟ್ರದ ಜತ್ತದಲ್ಲಿ 1984ರಲ್ಲಿ ಶೀಲಮ್ಮ ಅವರ ಕಂಪನಿ ಸುಟ್ಟು ಹೋಗುತ್ತದೆ. ಅಲ್ಲಿಂದ ಬಿ.ಆರ್. ಅರಿಶಿಷಣಗೋಡಿ ಅವರ ಹುಚ್ಚೇಶ್ವರ ನಾಟ್ಯ ಸಂಘ, ಕಮತಗಿ ಕಂಪನಿಗೆ ಸೇರಿದಾಗ ‘ಕಲಿಯುಗದ ಕುಡುಕ’ ನಾಟಕದ ಹಾಸ್ಯಪಾತ್ರಕ್ಕೆ ತಮ್ಮದೇ ಮಾತುಗಳನ್ನು ಸೇರಿಸಿ ಪ್ರದರ್ಶಿಸುವಾಗ ಬಹಳ ಕಲೆಕ್ಷನ್ ಆಗುತ್ತದೆ. ತನ್ನಿಂದ ಕಲೆಕ್ಷನ್ ಆಗುತ್ತದೆ ಎಂದು ಪಗಾರವನ್ನು ಕೇಳಿ ಹೆಚ್ಚಿಸಿಕೊಳ್ಳುತ್ತಾರೆ. ಇತರ ಕಲಾವಿದರಿಗೆ ಅಷ್ಟಾಗಿ ಪಗಾರ ಹೆಚ್ಚುವುದಿಲ್ಲ. ಆಗ ಅವರನ್ನು ಕಂಪನಿಯಿಂದ ಬಿಡಿಸಬೇಕೆಂದು ಮಾಲಕರು ನಿರ್ಧರಿಸುತ್ತಾರೆ. ತನ್ನಿಂದ ಕಲೆಕ್ಷನ್ ಆಗುವಾಗ ಸ್ವಂತ ಕಂಪನಿ ಶುರು ಮಾಡಬೇಕೆಂದು ನಿರ್ಧರಿಸುತ್ತಾರೆ. ಇಷ್ಟೊತ್ತಿಗೆ ‘ಕಲಿಯುಗದ ಕುಡುಕ’ ಕ್ಯಾಸೆಟ್ ಹೊರಬಂದು ಜನಪ್ರಿಯವಾಗಿರುತ್ತದೆ. ಎಷ್ಟೆಂದರೆ; 1996-97ರಲ್ಲಿ ಹಳ್ಳಿಗಳಲ್ಲಿ ಜನರು ಗುಂಪಾಗಿ ನಿಂತುಕೊಂಡು ಕ್ಯಾಸೆಟ್ ಕೇಳುತ್ತಾರೆ.
ಆಗ ಜೂನಿಯರ್ ರಾಜ್‌ಕುಮಾರ್ ಎಂದೇ ಪ್ರಸಿದ್ಧರಾದ ಅಶೋಕ ಬಸ್ತಿ ಅವರು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಆರ್ಕೆಸ್ಟ್ರಾ ಏರ್ಪಡಿಸಿದಾಗ ರಾಜು ತಾಳಿಕೋಟೆ ಅವರನ್ನು ಆಹ್ವಾನಿಸುತ್ತಾರೆ. ಆಗ ಹೆಚ್ಚು ಜನರು ಸೇರಿದ್ದರಿಂದ ಲಾಠಿಚಾರ್ಜ್ ಆಗುತ್ತದೆ. ತನ್ನ ಜನಪ್ರಿಯತೆ ಅರಿತ ಅವರು ಸ್ವಂತ ಆರ್ಕೆಸ್ಟ್ರಾ ಶುರು ಆರಂಭಿಸಿದಾಗ 60-70 ಸಾವಿರ ರೂಪಾಯಿ ಕಲೆಕ್ಷನ್ ಆಗುತ್ತದೆ. ಮುಂದೆ ಸ್ವಂತ ನಾಟಕ ಕಂಪನಿ ಶುರು ಮಾಡಬೇಕೆಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆಯ ಖಾಸ್ಗತೇಶ್ವರ ಮಠದ ಮೇಲಿನ ಪ್ರೀತಿಗೆ ‘ಖಾಸ್ಗತೇಶ್ವರ ಮಹಾತ್ಮೆ’ ನಾಟಕ ಬರೆಸುತ್ತಾರೆ. ಈ ನಾಟಕದ ಕಲೆಕ್ಷನ್ ಚೆನ್ನಾಗಿ ಆಗುತ್ತದೆ. ಆಗ ಖಾಸ್ಗತೇಶ್ವರ ನಾಟ್ಯ ಸಂಘ, ತಾಳಿಕೋಟೆ ಎಂದು 1988ರಲ್ಲಿ ಕಂಪನಿ ಆರಂಭಿಸುತ್ತಾರೆ.
ಇದಕ್ಕೂ ಮೊದಲು ವಿಜಯಕುಮಾರ್ ಯಂಕಂಚಿ ಹಾಗೂ ಲಿಂಗರಾಜ ಕಲ್ಲೂರ ಅವರು ಖಾಸ್ಗತೇಶ್ವರ ನಾಟ್ಯ ಸಂಘವನ್ನು 1984ರಲ್ಲಿ ಆರಂಭಿಸಿದ್ದರು. ಈ ಕಂಪನಿಯಲ್ಲಿದ್ದಾಗಲೇ ಪ್ರೇಮಾ ಹಾಗೂ ರಾಜು ಮದುವೆಯಾದರು. ಆಗ ಪ್ರೇಮಾ ಅವರಿಗೆ ಹನ್ನೊಂದು ವರ್ಷ, ರಾಜು ಅವರಿಗೆ ಹದಿನೆಂಟು ವರ್ಷ. ನಂತರ ಕಂಪನಿಯು ಬಂದ್ ಆಯಿತು. ಬಿ.ಆರ್.ಅರಿಶಿಣಗೋಡಿಯ ಹುಚ್ಚೇಶ್ವರ ನಾಟ್ಯ ಸಂಘ, ಚಿತ್ತರಗಿಯ ಕುಮಾರವಿಜಯ ನಾಟ್ಯ ಸಂಘದಲ್ಲಿ ಸುಮಾರು ಹತ್ತು ವರ್ಷಗಳವರೆಗೆ ರಾಜು ಹಾಗೂ ಪ್ರೇಮಾ ದುಡಿದರು. ಸ್ವಂತ ಕಂಪನಿ ಆರಂಭಿಸಿದರು. ರಾಜು ಹಾಗೂ ಪ್ರೇಮಾ ಒಟ್ಟಿಗೇ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದರು. ಅವರ ಕಂಪನಿಯಿಂದಲೇ ‘ಕಲಿಯುಗದ ಕುಡುಕ’ ನಾಟಕವು 25 ಸಾವಿರ ಪ್ರಯೋಗಗಳಾದರೆ, ಕೆ.ಎಸ್. ಮಹಾದೇವಯ್ಯ ಅವರ ‘ಮಾನವಂತರ ಮನೆತನ’ ನಾಟಕವು 15-20 ಸಾವಿರ ಪ್ರಯೋಗಗಳನ್ನು ಕಂಡಿತು.
ಅವರ ಕಂಪನಿಗೆ 2003ರಲ್ಲಿ ಜೇವರ್ಗಿ ರಾಜಣ್ಣ ಅವರು ‘ವರಪುತ್ರ’ ನಾಟಕ ರಚಿಸಿಕೊಡುತ್ತಾರೆ. ನಂತರ ಗದಗಿನ ಸಾರಂಗಮಠ ಅವರಿಂದ ‘ಮನೆಗೆ ಬಂದ ಮಹಾಲಕ್ಷ್ಮಿ’ ನಾಟಕ ಬರೆಸಿ ಬನಶಂಕರಿ, ಸವದತ್ತಿ ಹೀಗೆ ಬೇರೆ ಬೇರೆ ಜಾತ್ರೆಗಳಲ್ಲಿ ಪ್ರದರ್ಶಿಸಿ ಯಶಸ್ವಿಯಾಗುತ್ತಾರೆ. ಹೀಗೆ ಜಾತ್ರೆಗಳಲ್ಲಿ ಜಯಭೇರಿ ಬಾರಿಸುವಾಗ ಗುಡಗೇರಿ ಬಸವರಾಜ ಅವರ ಶ್ರೀ ಗುರು ಸಂಗಮೇಶ್ವರ ನಾಟ್ಯ ಸಂಘಕ್ಕೆ ಕಲೆಕ್ಷನ್ ಇಲ್ಲದೆ ನಿಲ್ಲುವ ಪ್ರಸಂಗ ಬರುತ್ತದೆ. ಆಗ ಗುಡಗೇರಿ ಬಸವರಾಜ ಹಾಗೂ ರಾಜು ತಾಳಿಕೋಟೆ ಅವರು ಒಪ್ಪಂದ ಮಾಡಿಕೊಳ್ಳುತ್ತಾರೆ. ಎರಡೂ ಕಂಪನಿಗಳು ಒಂದೇ ಜಾತ್ರೆಯಲ್ಲಿ ಇರಬಾರದೆಂದು. ಹೀಗೆ ರಂಗಭೂಮಿಯಲ್ಲಿ ಯಶಸ್ಸು ಕಂಡಾಗ ಯೋಗರಾಜ ಭಟ್ ನಿರ್ದೇಶನದಲ್ಲಿ ‘ಮನಸಾರೆ’ ಸಿನೆಮಾದಲ್ಲಿ ಬಣ್ಣ ಹಚ್ಚುತ್ತಾರೆ. ಅಲ್ಲಿಂದ 70ಕ್ಕೂ ಅಧಿಕ ಸಿನೆಮಾಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಕಳೆದ ವರ್ಷ ಧಾರವಾಡ ರಂಗಾಯಣದ ನಿರ್ದೇಶಕರೂ ಆಗಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದರು.
ಧೋತ್ರ ಉಟ್ಟುಕೊಳ್ಳುವುದು, ರುಮಾಲು ಸುತ್ತಿಕೊಳ್ಳುವುದು, ಚಕ್ಕಡಿ ಓಡಿಸುವುದು ಅವರ ಹೆಚ್ಚಿನ ಆಸಕ್ತಿ. ಇದಕ್ಕಿಂತ ತಮ್ಮ ಜಮೀನಿನಲ್ಲಿ ದ್ರಾಕ್ಷಿ, ಲಿಂಬೆ, ಕಬ್ಬು, ಹತ್ತಿ ಬೆಳೆಯುವುದರ ಜೊತೆಗೆ ಕುರಿ ಸಾಕಣೆಗೆ ಒತ್ತು ಕೊಟ್ಟಿದ್ದರು. ಡಬ್ಬಗಟ್ಟಲೆ ದ್ರಾಕ್ಷಿಯನ್ನು ತರಿಸಿ ಧಾರವಾಡ ರಂಗಾಯಣಕ್ಕೆ ಬಂದವರಿಗೆಲ್ಲ ಕೊಡುತ್ತಿದ್ದರು. ಕಡಿಮೆ ಅವಧಿಯಲ್ಲಿ ಅಚ್ಚುಕಟ್ಟಾಗಿ ಅಡುಗೆ ಮಾಡುವುದರಲ್ಲೂ ಅವರದು ಎತ್ತಿದ ಕೈ.
ಅವರ ಒಬ್ಬ ಪುತ್ರರು ಬಶೀರ್ (ಭರತ್ ರಾಜ್) ಇನ್ನೊಬ್ಬ ಪುತ್ರ ದಾವಲ್ ರಂಗಭೂಮಿಯಲ್ಲಿ ಸಕ್ರಿಯರು.







