ಲೋಹಿಯಾ ಚಿಂತನೆಗೆ ಮುಖಾಮುಖಿಯಾಗುವ ‘ರಾಮ ಕೃಷ್ಣ ಶಿವ’

ನಾಟಕ: ರಾಮ-ಕೃಷ್ಣ-ಶಿವ
ಮೂಲ: ಲೋಹಿಯಾ ಬರಹಗಳು
ಕನ್ನಡಕ್ಕೆ: ಕೆ.ವಿ. ಸುಬ್ಬಣ್ಣ
ಸಂಗೀತ ಸಹಾಯ: ಶುಭಕರ ಪುತ್ತೂರು,
ಕೃಷ್ಣ ಅಟ್ಟದಮನಿ ಮಳ್ಳಿ
ವಸ್ತ್ರವಿನ್ಯಾಸ: ಮಂಜು ಕಾಸರಗೋಡು
ಬೆಳಕು: ಪೃಥ್ವಿನ್ ಉಡುಪಿ
ರಂಗ ಪರಿಕರ: ಗೋಪಿನಾಥ ಸಾಗರ,
ನಾಗರಾಜ ಶಿವಸಿಂಪಿ
ರಂಗರೂಪ, ವಿನ್ಯಾಸ, ಸಂಗೀತ, ನಿರ್ದೇಶನ: ಗಣೇಶ್ ಮಂದಾರ್ತಿ
ತಂಡ: ಕರಾವಳಿ ನಿರ್ದಿಗಂತ
ಕಲಾವಿದರು: ಮಂಜು ಕಾಸರಗೋಡು, ಅಜಿತ್ ಸಿಂಹ, ನಯನಾ ಸಿ., ರಾಧಾ ರಾಮಚಂದ್ರನ್, ಮಾಧವ ಜೋಗಿ
ಈಗಾಗಲೇ ‘ವಾಲಿವಧೆ’, ‘ದ್ರೌಪದಿ ಹೇಳ್ತವ್ಳೆ’ ನಾಟಕಗಳ ಮೂಲಕ ಗಮನ ಸೆಳೆದಿರುವ ಗಣೇಶ್ ಮಂದಾರ್ತಿ ಅವರ ಹೊಸ ನಾಟಕ ‘ರಾಮ ಕೃಷ್ಣ ಶಿವ’ ಇದು ರಾಮಮನೋಹರ ಲೋಹಿಯಾ ಅವರ ಲೇಖನಗಳನ್ನು ಆಧರಿಸಿದ ನಾಟಕ. ಶೇಷಗಿರಿಯ ಕಲಾತಂಡಕ್ಕೆ ‘ವಾಲಿವಧೆ’ ನಾಟಕ ನಿರ್ದೇಶಿಸಿದ ನಂತರ ಕಾಲೇಜಿನ ವಿದ್ಯಾರ್ಥಿಗಳಿಗೆ ವಾಚಾನಾಭಿನಯದ ಮೂಲಕ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನು ತಲುಪಿಸಿದ ಹೆಗ್ಗಳಿಕೆ ಅವರದು.
ಸದ್ಯ ಕರಾವಳಿ ನಿರ್ದಿಗಂತ ತಂಡಕ್ಕೆ ಗಣೇಶ್ ಅವರು ‘ರಾಮ ಕೃಷ್ಣ ಶಿವ’ ನಾಟಕವಾಗಿಸಿ, ಸಂಗೀತ ನೀಡಿ ಸಮರ್ಥವಾಗಿ ನಿರ್ದೇಶಿಸಿದ್ದಾರೆ. ಲೋಹಿಯಾ ಅವರ ಚಿಂತನೆಗಳೊಂದಿಗೆ ಮುಖಾಮುಖಿಯಾಗುವ ಈ ನಾಟಕದಲ್ಲಿ ಮಂಜು ಕಾಸರಗೋಡು, ಅಜಿತ್ ಸಿಂಹ, ನಯನಾ, ರಾಧಾ ರಾಮಚಂದ್ರನ್ ಹಾಗೂ ಮಾಧವ ಜೋಗಿ ಅವರು ತಮ್ಮ ಪಾತ್ರಗಳ ತಲ್ಲೀನತೆಯಿಂದಾಗಿ ಗೆಲ್ಲಿಸುತ್ತಾರೆ. ಈ ಐವರೇ ಎರಡು ಗಂಟೆಗಳ ನಾಟಕವನ್ನು ಮುನ್ನಡೆಸುತ್ತಾರೆ. ಈ ನಾಟಕ ನೋಡಲು ಮುಖ್ಯವಾಗಿ ಪ್ರೇಕ್ಷಕರಿಗೆ ತಾಳ್ಮೆ ಬೇಕು.
ನಾಟಕದ ಆರಂಭದಲ್ಲಿ ಲೋಹಿಯಾ ಕುರಿತ ಮಾತು ಗಮನ ಸೆಳೆಯುತ್ತದೆ- ‘ಮಾನವಪ್ರೇಮಿಯಾಗಿದ್ದ ಡಾಕ್ಟರ್ ರಾಮ ಮನೋಹರ ಲೋಹಿಯಾ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡ ಒಬ್ಬ ಗಾಂಧಿವಾದಿ. ಮಹಾತ್ಮಾ ಗಾಂಧಿಯವರ ನೇರ ಶಿಷ್ಯ ಮತ್ತು ಮಾನಸಪುತ್ರನೆನೆಸಿಕೊಂಡಿದ್ದರು. ಗಾಂಧೀಜಿಯವರ ನಡೆ-ನುಡಿಗಳನ್ನು ಟೀಕಿಸುತ್ತಲೇ ಪ್ರೀತಿಸಿದ ಒಬ್ಬ ಸಮಾಜವಾದಿ. ರಾಮ, ಕೃಷ್ಣ, ಶಿವ ಮೊದಲಾದ ಸಾಂಸ್ಕೃತಿಕ ಅಥವಾ ಪೌರಾಣಿಕ ವ್ಯಕ್ತಿತ್ವಗಳನ್ನು ಕುರಿತಂತೆ ಲೋಹಿಯಾ ಚಿಂತನೆಗೂ ಆ ಕಾಲದ ಗಾಂಧಿ, ಅಂಬೇಡ್ಕರ್ ಅಥವಾ ಪೆರಿಯಾರ್ ನಿಲುವುಗಳಿಗೂ ಒಂದು ಕುತೂಹಲಕರವಾದ ವ್ಯತ್ಯಾಸವಿದೆ. ಗಾಂಧೀಜಿಗೆ ಪೌರಾಣಿಕ ಪಾತ್ರಗಳ ಆಧ್ಯಾತ್ಮಿಕ ಮುಖದ ಬಗ್ಗೆ ಅತೀವ ಆರಾಧನೆಯಿದ್ದರೆ ಅಂಬೇಡ್ಕರ್ ಅಥವಾ ಪೆರಿಯಾರರಲ್ಲಿ ಈ ಪೌರಾಣಿಕ ವ್ಯಕ್ತಿತ್ವಗಳೇ ಭಾರತದಲ್ಲಿ ಧಾರ್ಮಿಕ ದಬ್ಬಾಳಿಕೆಗಳ ಸಾಧನವಾದದ್ದರ ಬಗ್ಗೆ ಅಪಾರ ವ್ಯಗ್ರತೆಯಿದೆ. ಆದರೆ ಲೋಹಿಯಾಗೆ ಮಾತ್ರ ರಾಮ, ಕೃಷ್ಣ, ಶಿವರೆಂಬ ಈ ಪೌರಾಣಿಕ ಪಾತ್ರಗಳೆಲ್ಲ ಸಮಕಾಲೀನರು. ಆದ್ದರಿಂದಲೇ ಈ ಮೂವರ ನೈತಿಕ-ಅನೈತಿಕ ವರ್ತನೆ, ರಾಜಕೀಯ ನಡೆ, ಆ ವ್ಯಕ್ತಿತ್ವಗಳ ಶಕ್ತಿ-ದೌರ್ಬಲ್ಯ ಎಲ್ಲ. ಎಲ್ಲವೂ ಲೋಹಿಯಾಗೆ ಮುಖ್ಯ’ ಎನ್ನುವುದು ನಾಟಕಕ್ಕೆ ಪೀಠಿಕೆಯಾಗಿದೆ.
‘ರಾಮ, ಕೃಷ್ಣ ಮತ್ತು ಶಿವ ಇವು ಇಂಡಿಯಾದ ಮಹತ್ ಸ್ವಪ್ನಗಳು. ಮಹತ್ ದುಃಖಗಳು ಕೂಡ. ಇಂಡಿಯಾದ ಮಹಾಪುರಾಣಗಳ ಈ ಮೂರು ನಾಯಕ ಮಣಿಗಳು ಎಂದಾದರೂ ವಾಸ್ತವವಾಗಿ ಇದ್ದುದುಂಟೆ ಅಥವಾ ಇಲ್ಲವೇ ಎಂಬ ಪ್ರಶ್ನೆ ದೇಶದ ಸಾಂಸ್ಕೃತಿಕ ಇತಿಹಾಸಕ್ಕೆ ತುಲನಾತ್ಮಕವಾಗಿ ಅಷ್ಟೇನೂ ಅಗತ್ಯವಿಲ್ಲದ ವಿವರ’ ಹೀಗೆ ಹೇಳುವ ಲೋಹಿಯಾ ‘ಇನ್ನಷ್ಟು ಸೂಕ್ಷ್ಮದಲ್ಲಿ ಪುರಾಣಗಳು ಅನಕ್ಷರಸ್ಥರನ್ನೂ ಸುಸಂಸ್ಕೃತಗೊಳಿಸಬಲ್ಲವು. ಹಾಗೆ ಅನುಭವದ ರೂಪ ತೀವ್ರ ಬದಲಾಗುವ ಕಾಲದಲ್ಲಿ ಜನರ ಬದುಕನ್ನು ನಿಂತ ನೀರಾಗಿಸಿ ನಾರುವಂತೆಯೂ ಮಾಡಿಬಿಡಬಲ್ಲವು’ ಎನ್ನುತ್ತಾರೆ. ಹೀಗೆ ಮೇಳವು ನಾಟಕದ ವಿವರಗಳನ್ನು, ಮುಂದಿನ ನಡೆಯನ್ನು ಹೇಳುತ್ತ ಸಾಗುತ್ತದೆ.
ಮೊದಲಿಗೆ ರಾಮನ ಕುರಿತ ನಾಟಕದಲ್ಲಿ ‘ರಾಮ ಅತ್ತದ್ದನ್ನು ಚಂದ್ರ ನೋಡಿದ. ರಾಮ ಯಾವ ಕಾರಣಕ್ಕೆ ಅತ್ತನೋ ಆ ಅದೇ ಕಾರಣಕ್ಕೆ ಕಾಲಾಂತರದಲ್ಲಿ ಕೃಷ್ಣ ನಕ್ಕಿದ್ದನ್ನೂ ಚಂದ್ರ ನೋಡಿದ. ರಾಮಕೃಷ್ಣರ ಈ ಸೀಮಿತ-ಸಮೃದ್ಧ ವ್ಯಕ್ತಿತ್ವಗಳ ನಡುವಣ ಅಗಾಧ ವ್ಯತ್ಯಾಸವನ್ನು ಬಹುಶಃ ಮೊತ್ತಮೊದಲ ಬಾರಿಗೆ ಕಂಡು ಗುರುತಿಸಿ ಬೆರಗಾದವನು ಚಂದ್ರನೇ ಇರಬೇಕು. ಇದನ್ನು ದರ್ಶಿಸಲು ಲೋಹಿಯಾ ಆರಿಸಿಕೊಂಡದ್ದು ಸೀತಾಪಹರಣ ಸಂದರ್ಭದ ರಾಮನ ಶೋಕತಪ್ತ ಕಥೆಯನ್ನು. ಈ ಸನ್ನಿವೇಶವನ್ನು ಕುವೆಂಪು ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಹೇಗೆ ಚಿತ್ರಿಸಿದ್ದಾರೆ ಎಂಬುದನ್ನು ‘ರಾಮವಿಲಾಪ’ ಪ್ರಸಂಗದ ಮೂಲಕ ಕಲಾವಿದರು ಪ್ರಸ್ತುತಪಡಿಸುತ್ತಾರೆ.
ನಂತರ ಶೂರ್ಪನಖಿಯ ಪ್ರವೇಶ, ವಾಲಿ-ಸುಗ್ರೀವರ ಯುದ್ಧದ ನಂತರ ಮೇಳವು ಲೋಹಿಯಾರ ಮಾತನ್ನು ಉಲ್ಲೇಖಿಸುತ್ತದೆ ‘ಸಾಮೂಹಿಕ ಕೊಲೆ, ಅತ್ಯಾಚಾರಗಳ ತಪ್ಪಿಸಲು ವಾಲಿಯಂಥವನ ಕೊಂದೆ ಎಂದನೆ ರಾಮ? ರಾಮನಂಥ ಮನುಷ್ಯ ನಿಯಮವನ್ನು ಉಲ್ಲಂಘಿಸಬಾರದಿತ್ತು. ನಿಯಮ ಅಲ್ಪವೊ? ಮಹತ್ವವೊ ಅದು ಮುಖ್ಯ ಅಲ್ಲ. ಉಲ್ಲಂಘಿಸಿದ್ದು ಜೀವನದಲ್ಲಿ ಒಮ್ಮೆ ಮಾತ್ರ ಇದ್ದಿರಬಹುದು ಅಥವಾ ಉನ್ನತ ರಾಜಕೀಯ ಸ್ಥಾಪನೆಗಾಗಿ ಕೊಲೆ ಮಾಡಿದೆ ಎನ್ನಬಹುದು. ಏನೇ ಅನ್ನಿ, ರಾಮನಂಥವನಿಗೆ ಇಂತಹ ಸಮರ್ಥನೆ ತಕ್ಕುದಲ್ಲ. ಅಪರಾಧ ಮಹಾಪರಾಧ. ಒಂದು ಕೊಲೆಗೆ ಸಮರ್ಥನೆ ಕೊಡುವುದಾದರೆ ರಾಮ ಪಕ್ಷಕ್ಕೆ ಗೌರವ ಗತಿ ಉಳಿದೀತೆ?’
ರಾಮ ಪಟ್ಟಕ್ಕೇರಿದ ಮೇಲೂ ಇಂಥದ್ದೇ ಇನ್ನೊಂದು ಕೊಲೆಗೆ ಕೈ ಹಾಕಿ ಹೆಸರು ಕೆಡಿಸಿಕೊಳ್ಳಬೇಕಾಯಿತು. ಅದು ಶೂದ್ರ ತಪಸ್ವಿ ‘ಶಂಭೂಕ’ನ ಕಥೆಯಲ್ಲಿ ಅನಾವರಣಗೊಳ್ಳುತ್ತದೆ. ನಂತರ ಸೀತೆಯು ರಾಮನನ್ನು ಕೇಳುವ ಪ್ರಶ್ನೆ ಗಮನಾರ್ಹವಾದುದು- ‘ಕಲ್ಲಾಗಿದ್ದ ಅಹಲ್ಯೆಗೆ ಗೌತಮಾಲಿಂಗನವ ನೀಡಿದ ಮಹಾಪುರುಷ ನೀನು ಎಂಬ ಕಾರಣಕ್ಕೆ ಹೆಮ್ಮೆಯಲಿ ಬೀಗಿದ್ದ ನೀ ಮಿಥಿಲೆಗೆ ಸ್ವಯಂವರಕ್ಕೆ ಬಂದಾಗ. ಅದೇ ನೀನು ಕಾಲಾಂತರದಲ್ಲಿ ನಿನ್ನ ಕೈಯಾರೆ ಮತ್ತೊಬ್ಬ ಅಹಲ್ಯೆಯ ಸೃಷ್ಟಿಸಿದೆ ಎಂಬುದು ನಿನ್ನರಿವಿಗೆ ಬಂತೊ? ಅಧಿಕಾರ ಇಷ್ಟು ಕುರುಡೆ? ಶಬರಿ ಯಾರು? ಬೇಡತಿ, ಶೂದ್ರೆ ತಾನೆ? ಅವಳು ನಿನ್ನನ್ನು ಆರಾಧಿಸಿದಳು. ಆಕೆಯ ತಪಸ್ಸು ತಪ್ಪಲ್ಲ. ಅದೇ ಆ ಶಂಭೂಕನನ್ನು? ಶೂದ್ರ ತಪಸ್ವಿ ಎಂಬ ಕಾರಣಕ್ಕೆ ಕೊಂದೆಯಂತೆ! ಇದೇ ಏನು ಮುಂದೆ ಮಕ್ಕಳು ಆಳ್ವಿಕೆ ಮಾಡಬೇಕಾದ ನಿನ್ನಯ ಅಯೋಧ್ಯಾ ನೀತಿ? ಅದೇ ಇರಲಿ, ಗರ್ಭದಲ್ಲಿರುವಾಗಲೇ ಮಕ್ಕಳನ್ನು ತೊರೆದ ನಿನಗೆ ಅವರ ಮೇಲಿನ್ನು ಹಕ್ಕಿಲ್ಲ. ತೊಟ್ಟಿಲು ತೂಗಿದವನಲ್ಲ, ತಟ್ಟಿ ಮಲಗಿಸಿದವನಲ್ಲ, ತುತ್ತು ಉಣಿಸಿದವನಲ್ಲ, ಎತ್ತಿ ಆಡಿಸಿದವನೂ ಅಲ್ಲ. ಅವರಿಗೆ ನಾನೇ ಅಮ್ಮ, ನಾನೇ ಅಪ್ಪ, ಬಂಧುಬಳಗ ಎಲ್ಲ. ಅಪ್ಪ ಅಪರಿಚಿತ ನನ್ನ ಮಕ್ಕಳಿಗೆ. ಅದು ಹಾಗೇ ಉಳಿಯಲಿ, ಬೆಳೆಯಲಿ, ಸಾಯಲಿ. ರಾಮ, ನೀನು ರಾಜನಾಗಿಯೂ ಸೋತೆ, ಗಂಡನಾಗಿಯೂ ಸೋತೆ. ಈಗ ಅಪ್ಪನಾಗಿಯೂ ಸೋತೆ. ಕೇಳು, ಅಂದು ನೀನು ನನ್ನನ್ನು ತಿರಸ್ಕರಿಸಿದೆ. ಇಕಾ! ಇಂದು ನಾನೇ ನಿನ್ನನ್ನು ತಿರಸ್ಕರಿಸುತ್ತಿದ್ದೇನೆ! ನಡೆ ಇಲ್ಲಿಂದ’ ಎನ್ನುತ್ತಾಳೆ.
ಹೀಗೆ ಲೋಹಿಯಾರ ಮಾತುಗಳನ್ನು, ಪೌರಾಣಿಕ ಕಥೆಯನ್ನು ಮುರಿದು ಕಟ್ಟುವಲ್ಲಿ ಗಣೇಶ್ ಮಂದಾರ್ತಿ ಯಶಸ್ವಿಯಾಗಿದ್ದಾರೆ. ಈಮೂಲಕ ರಾಮನ ವ್ಯಕ್ತಿತ್ವವನ್ನು ಒರೆಗೆ ಹಚ್ಚುತ್ತಾರೆ. ಮುಂದೆ ಕೃಷ್ಣನ ಕುರಿತು ನಾಟಕ ಅನಾವರಣಗೊಳ್ಳುತ್ತದೆ. ಕೃಷ್ಣ-ಸುಧಾಮರ ಭೇಟಿ, ವಾನಪ್ರಸ್ಥಕ್ಕೆ ಹೊರಟ ಕುಂತಿ, ಕರ್ಣ-ಕುಂತಿಯರ ಮಾತುಕತೆ, ಧರ್ಮಾಧಿಕಾರಿ ಧರ್ಮರಾಯನ ಸನ್ನಿವೇಶದಲ್ಲಿ ಪ್ರಸ್ತುತ ರಾಜ್ಯದ ಧರ್ಮಾಧಿಕಾರಿಯೊಬ್ಬರ ನೆನಪಾಗುವುದು. ಹಾಗೆಯೇ ರಾಮಕೃಷ್ಣರ ಕುರಿತು ಲೋಹಿಯಾ ‘ಅಂಶಾವತಾರಿ ರಾಮ ದೇಶದಾಚೆಗೂ ಸದ್ದಿಲ್ಲದೆ ಪ್ರಭುತ್ವ ವಿಸ್ತರಿಸಿ ರಾಜಕಾರಣದಲ್ಲಿ ಪವಾಡವನ್ನೇ ಸಾಧಿಸಿದ. ಪೂರ್ಣಾವತಾರಿಯಾದ ಕೃಷ್ಣನ ರಾಜಕೀಯ ಸಾಧನೆ ಮಾತ್ರ ನೀರಿಗಿಂತ ಹೆಚ್ಚು ನೊರೆಯಾಗಿಬಿಟ್ಟಿತು’ ಎಂದು ವಿಮರ್ಶಿಸುತ್ತಾರೆ.
ಕೊನೆಗೆ ಶಿವನ ಕುರಿತ ಚಿತ್ರಣ. ಲೋಹಿಯಾ ಅವರು ಶಿವನನ್ನು ದೇವರು ಎನ್ನುವುದಕ್ಕಿಂತ ಗಾತ್ರಾತೀತ ಎನ್ನುತ್ತಾರೆ. ಇಂಥ ಗಾತ್ರಾತೀತತೆಯ ಕಥಾಕಲ್ಪನೆಯ ದೃಷ್ಟಿಯಿಂದ ಇವನ ಹತ್ತಿರಕ್ಕೆ ಬರಬಹುದಾದ ಕಲ್ಪನೆ ಇನ್ನೊಂದಿಲ್ಲ ಎಂಬುದಂತೂ ನಿಶ್ಚಿತ ಎನ್ನುತ್ತಾರೆ. ಇದಕ್ಕೆ ಬ್ರಹ್ಮ ಮತ್ತು ವಿಷ್ಣುರಲ್ಲಿ ಯಾರು ಶ್ರೇಷ್ಠರು ಎನ್ನುವ ಕಾರಣಕ್ಕೆ ನಡೆದ ಜಟಾಪಟಿಯನ್ನು ಕಲಾವಿದರು ದೃಶ್ಯದ ಮೂಲಕ ಪರಿಣಾಮಕಾರಿ ಹಿಡಿದಿಡುತ್ತಾರೆ. ಆಮೇಲೆ ಏಳುಕೊಳ್ಳದ ಎಲ್ಲಮ್ಮನ ಕುರಿತ ಹಾಡು, ಶಿವ-ರಾವಣರ ಭೇಟಿ, ಶಿವ-ಗಣೇಶನ ದೃಶ್ಯ, ಋಷಿಗಳು ಶಿವನನ್ನು ಪ್ರಶ್ನಿಸುವುದು. ಕೊನೆಗೆ ಶಿವ ‘ರಾಮನನ್ನೋ ಕೃಷ್ಣನನ್ನೋ ಶಿವನನ್ನೋ ಪೂಜಿಸಿಯೂ ನೀವಿನ್ನೂ ಶ್ರೇಷ್ಠತೆಯ ವ್ಯಸನಗಳಲ್ಲೇ ಕೊಳೆಯುತ್ತಿದ್ದೀರಿ ಎಂದಾದರೆ ಅಂಥ ಪೂಜಾಕಾರ್ಯಗಳಿಂದೇನು ಪ್ರಯೋಜನವಾದಂತಾಯಿತು? ಲಿಂಗ ಭಾವವನ್ನೊಡೆದು ನಿಮ್ಮೊಳಗೆ ಇರುವ ನಿಜವನ್ನು ಹುಡುಕುವ ಪ್ರಯತ್ನವನ್ನು ನಡೆಸದೆ ಹೋದಲ್ಲಿ, ಪ್ರಜ್ಞೆ ಅರಳದೆ ಹೋದಲ್ಲಿ, ಎಷ್ಟು ಲಿಂಗ ಪೂಜೆಗಳಿಂದೇನು ಪ್ರಯೋಜನ?’ ಎಂದು ಕೇಳುತ್ತ ಶಿಶುನಾಳ ಶರೀಫರ ತತ್ವಪದವನ್ನು ಮೇಳದವರು ಹಾಡುತ್ತಾರೆ.
ಕೇಳ ಜಾಣ ಶಿವ ಧ್ಯಾನವ ಮಾಡಣ್ಣ
ನಿನ್ನೊಳಗ ನೀನು ತಿರುಗಿ ನೋಡಣ್ಣ
ಅಂತಿಮವಾಗಿ ನಮ್ಮನ್ನು ನಾವು ಅರಿಯುವುದು ಮುಖ್ಯ ಎನ್ನುವ ಮೇಳವು ‘ನಮಗೆ ಶಿವನ ಮನಸ್ಸನ್ನೂ ಕೃಷ್ಣನ ಹೃದಯವನ್ನೂ ರಾಮನ ಕಾರ್ಯ-ಪ್ರಪಂಚವನ್ನೂ ಕೊಡು. ಪ್ರಮಾಣಾತೀತವಾದ ಮನಸ್ಸು, ಸಮೃದ್ಧವಾದ ಹೃದಯ. ಆದರೆ ಸೀಮಿತವಾದ ಬದುಕು ಇವುಗಳಿಂದ ನಮ್ಮನ್ನು ನಿರ್ಮಿಸು’ ಎಂದು ಕೇಳುತ್ತ ಶಿಶುನಾಳ ಶರೀಫರ ತತ್ವಪದದೊಂದಿಗೆ ನಿರ್ಗಮಿಸುತ್ತಾರೆ.
ಹೀಗೆ ಪೌರಾಣಿಕ ಕಥೆಯನ್ನು ಸಮಕಾಲೀನಗೊಳಿಸುವಲ್ಲಿ ಗಣೇಶ್ ಮಂದಾರ್ತಿ ಯಶಸ್ವಿಯಾಗಿದ್ದಾರೆ. ಮೇಳದ ಮೂಲಕ ಲೋಹಿಯಾ ಅವರ ಮಾತುಗಳನ್ನು, ಕಥೆಯನ್ನು ಮುಂದುವರಿಸುತ್ತ ಬೋರಾಗದ ಹಾಗೆ ನೋಡಿಕೊಂಡಿದ್ದಾರೆ. ಈ ಮೂಲಕ ‘ರಾಮ ಕೃಷ್ಣ ಶಿವ’ ಅವರ ಗೊಂದಲಗಳು ಏನು ಎಂಬುದನ್ನು ತಿಳಿಸುತ್ತಲೇ ಇವರನ್ನು ನೋಡುವ ಬಗೆ ಹೇಗೆ ಎಂಬುದನ್ನು ಚಿತ್ರಿಸುತ್ತ, ಹೀಗೂ ನೋಡಬಹುದು ಎಂದು ಹೇಳುತ್ತ, ವೈಚಾರಿಕಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಸೂಕ್ಷ್ಮವಾಗಿ ತಿಳಿಹೇಳುವ ನಾಟಕವಿದು. ಈ ನಾಟಕ ಹೆಚ್ಚೆಚ್ಚು ಪ್ರದರ್ಶನಗೊಳ್ಳಬೇಕು. ಆಸಕ್ತರು 9845697231/7619642358 ಸಂಪರ್ಕಿಸಬಹುದು.






