ಕಾಯಶುದ್ಧಿ, ಕಾಯಕಶುದ್ಧಿಗೆ ಸಾಣೇಹಳ್ಳಿ ರಂಗಹಬ್ಬ

ಈ ಸಲದ 50 ಸಾವಿರ ರೂಪಾಯಿ ನಗದು ಪುರಸ್ಕಾರದ ಶಿವಕುಮಾರ ಪ್ರಶಸ್ತಿ ಪುರಸ್ಕೃತರು ಹಿರಿಯ ರಂಗಕರ್ಮಿ ಬಿ.ಆರ್. ಪೊಲೀಸ್ ಪಾಟೀಲ. ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಎಸ್‌ಆರ್‌ಎ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಾದ ಜಾನಪದ ಮತ್ತು ರಂಗಭೂಮಿಯೊಂದಿಗೆ ಅವರದು ನಿರಂತರ ಒಡನಾಟ.
ಸಾಣೇಹಳ್ಳಿಯು ಮೂವತ್ತನೇ ನಾಟಕೋತ್ಸವಕ್ಕೆ ಸಜ್ಜಾಗುತ್ತಿದೆ.
ಕೇವಲ ಎರಡು ಸಾವಿರ ಜನಸಂಖ್ಯೆಯಿರುವ ಸಾಣೇಹಳ್ಳಿಯು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಪುಟ್ಟ ಹಳ್ಳಿ. ಪ್ರತೀ ವರ್ಷ ನಾಡಹಬ್ಬ ದಸರಾದ ಹಾಗೆ, ರಾಜ್ಯೋತ್ಸವದ ಹಾಗೆ ಅಲ್ಲಿ ನಾಟಕೋತ್ಸವ ನಡೆಯುತ್ತದೆ. ಇದರಿಂದ ಅಲ್ಲಿ ಓದುವ ವಿದ್ಯಾರ್ಥಿಗಳಿಗೆ ನಾಟಕ ನೋಡುವ ಮೂಲಕ ರಂಗಾಸಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಶಿವಸಂಚಾರದ ನಾಟಕಗಳು ಪ್ರದರ್ಶನಗೊಳ್ಳುವ ಮೂಲಕ ಒಂದು ವರ್ಷದಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಸಂಚಾರಕ್ಕೆ ಸಜ್ಜಾಗುತ್ತಾರೆ. ರಂಗ ತರಬೇತಿಗೆ ಬಂದ ವಿದ್ಯಾರ್ಥಿಗಳಿಗೆ ತಾಲೀಮು ಆಗುತ್ತದೆ. ಇಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಬರುತ್ತಾರೆ. ಹೀಗೆಯೇ ನಾಡಿನ ವಿವಿಧೆಡೆಯಿಂದ ಬರುವ ರಂಗಾಸಕ್ತರು, ರಂಗಕರ್ಮಿಗಳು, ಲೇಖಕರು, ಸಾಣೇಹಳ್ಳಿಯ ಸುತ್ತಲಿನ ಪ್ರೇಕ್ಷಕರು ಒಂದೆಡೆ ಸೇರಲು ಸಾಧ್ಯವಾಗುತ್ತದೆ.
ಈ ಬಾರಿಯ ನಾಟಕೋತ್ಸವವು ಕರ್ನಾಟಕ ರಾಜ್ಯೋತ್ಸವ ದಿನವಾದ ನವೆಂಬರ್ 1ರಿಂದ 6ರ ವರೆಗೆ ನಡೆಯಲಿದ್ದು, ರಂಗಹಬ್ಬವಾಗಲಿದೆ. ಈ ಸಲದ ನಾಟಕೋತ್ಸವದ ಧ್ಯೇಯವಾಕ್ಯ ನುಲಿಯ ಚಂದಯ್ಯನ ವಚನದ ಸಾಲು ‘ಗುರುವಾದಡೂ ಕಾಯಕದಿಂದಲೆ ಜೀವನ್ಮುಕ್ತಿ’. ಈ ಕುರಿತು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೀಗೆ ವಿವರಿಸುತ್ತಾರೆ; ‘‘ಬಸವಾದಿ ಶರಣರು ಹೊಸ ಸಮಾಜ ಕಟ್ಟಲು, ಕಾಯಕಕ್ಕೆ ಆದ್ಯತೆ ನೀಡಲು ಹಂಬಲಿಸಿದರು. ಕಾಯಕ, ದಾಸೋಹಕ್ಕೆ ಮಹತ್ವ ನೀಡಿ ಹೊಸ ಸಮಾಜ ನಿರ್ಮಾಣಕ್ಕೆ ಕಾರಣರಾದರು. ನುಲಿಯ ಚಂದಯ್ಯ, ಮೋಳಿಗೆ ಮಾರಯ್ಯ, ಆಯ್ದಕ್ಕಿ ಮಾರಯ್ಯ ಕಾಯಕಕ್ಕೆ ವಿಶೇಷ ಮಹತ್ವ ಕೊಟ್ಟರು. ಬಸವಣ್ಣ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕಾಯವೇ ಕೈಲಾಸ ಎಂದರು. ಕಾಯ ಮತ್ತು ಕಾಯಕ ಒಂದಾದರೆ ನೆಮ್ಮದಿಯಿಂದ ಬದುಕಲು ಸಾಧ್ಯ. ಈ ನೆಲೆಯಲ್ಲಿ ನಮ್ಮ ಜನರಿಗೆ ಕಾಯಕಶ್ರದ್ಧೆ ಇಲ್ಲ ಜೊತೆಗೆ ಕಾಯದ ಬಗ್ಗೆ ಕಾಳಜಿಯೂ ಇಲ್ಲ. ಹೀಗಾಗಿ ಯಾರೂ ಕೆಲಸ ಮಾಡುತ್ತಿಲ್ಲ. ದುರಭ್ಯಾಸ, ದುಶ್ಚಟಗಳಿಗೆ ಬಲಿಯಾಗಿ ಚಿಕ್ಕವಯಸ್ಸಲ್ಲೇ ಈ ಲೋಕದಿಂದಲೇ ಹೋಗುತ್ತಿದ್ದಾರೆ. ದುಶ್ಚಟಗಳಿಗೆ ಬಲಿಯಾದರೆ ಕಾಯಕದ ಬಗ್ಗೆ ಶ್ರದ್ಧೆ ಇರಲ್ಲ. ಈ ಹಿನ್ನೆಲೆಯಲ್ಲಿ 21ನೇ ಶತಮಾನದಲ್ಲಿ ಕಾಯಶುದ್ಧಿ, ಕಾಯಕಶುದ್ಧಿ ನಡೆಸಿ ಆತ್ಮಕಲ್ಯಾಣದ ಜೊತೆಗೆ ಲೋಕಕಲ್ಯಾಣದ ಕಡೆ ನಡೆಯಬೇಕು.
ಈ ಬಾರಿ ನಮ್ಮ ಶಿವಸಂಚಾರದ ನಾಟಕಗಳು ನುಲಿಯ ಚಂದಯ್ಯ, ಕೂದಲಸ್ವಾಮಿ ಹಾಗೂ ಬರ್ಬರೀಕ. ಇವು ಕೂಡಾ ಕಾಯ ಮತ್ತು ಕಾಯಕಶುದ್ಧಿಯನ್ನು ಹೇಳುತ್ತವೆ. ಹೊರಗಿನ ಮೂರು ತಂಡಗಳು ಬರಲಿವೆ. ಸಂಪತ್ತಿಗೆ ಸವಾಲ್, ಸತ್ತವರ ನೆರಳು ಹಾಗೂ ಪ್ರಾಜೆಕ್ಟ್ ಪಂಚತಂತ್ರ ನಾಟಕಗಳು ಪೂರಕವಾಗಿವೆ. ಇದರೊಂದಿಗೆ ನವೆಂಬರ್ 4ರಂದು ಹೈನುಗಾರಿಕೆ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಇವೆಲ್ಲಗಳ ಜೊತೆಗೆ ನಿತ್ಯ ಬೆಳಗ್ಗೆ 8 ಗಂಟೆಗೆ ಚಿಂತನ ಕಾರ್ಯಕ್ರಮಗಳಿರುತ್ತವೆ. ಇವು ಕೂಡಾ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತವೆ. ಇವೆಲ್ಲ ಯಾಕೆಂದರೆ ರಂಗಭೂಮಿ ಮೂಲಕ ಸಮಾಜದ ಉತ್ಥಾನ. ಜನರಿಗೆ ಸ್ಫೂರ್ತಿ ಬರಬೇಕು. ರಂಗಭೂಮಿಯಲ್ಲಿ ಜನರು ಹೆಚ್ಚು ತೊಡಗಿಕೊಳ್ಳಲು ಶಿವಕುಮಾರ ಪ್ರಶಸ್ತಿ ನೀಡುವುದರ ಜೊತೆಗೆ ವಚನ ಸಂಗೀತ, ನೃತ್ಯ ಇರುತ್ತವೆ. ಆದರೆ ರಂಗಭೂಮಿ ದುಬಾರಿಯಾಗುತ್ತಿದೆ. ಸರಕಾರ ಹೆಚ್ಚು ಆದ್ಯತೆ ನೀಡಿ ಸಂಘ-ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಬೇಕು. ಗಮನಿಸಿ; ಸರಕಾರ ಮೊದಲಿನ ಹಾಗೆ ಪ್ರೋತ್ಸಾಹ ನೀಡುತ್ತಿಲ್ಲ. ಅನೇಕ ತಂಡಗಳು ಸ್ಥಗಿತಗೊಳ್ಳುವ ಆತಂಕವಿದೆ. ರಂಗಭೂಮಿ ಉಳಿದರೆ ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸಲು ಸಾಧ್ಯ. ಇದಕ್ಕಾಗಿ ರಂಗಭೂಮಿಗೆ ಹೆಚ್ಚಿನ ಅನುದಾನ ನೀಡಬೇಕು’’ ಎನ್ನುವುದು ಅವರ ಒತ್ತಾಸೆ.
ಈ ಸಲದ 50 ಸಾವಿರ ರೂಪಾಯಿ ನಗದು ಪುರಸ್ಕಾರದ ಶಿವಕುಮಾರ ಪ್ರಶಸ್ತಿ ಪುರಸ್ಕೃತರು ಹಿರಿಯ ರಂಗಕರ್ಮಿ ಬಿ.ಆರ್. ಪೊಲೀಸ್ ಪಾಟೀಲ. ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಎಸ್‌ಆರ್‌ಎ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಾದ ಜಾನಪದ ಮತ್ತು ರಂಗಭೂಮಿಯೊಂದಿಗೆ ಅವರದು ನಿರಂತರ ಒಡನಾಟ.
ವಿಜಾಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಣ್ಣೂರು ಗ್ರಾಮದ ಅವರಿಗೆ ಬಾಲ್ಯದಲ್ಲೇ ಜಾನಪದ ಮತ್ತು ರಂಗಭೂಮಿಯ ಆಸಕ್ತಿ ಹೆಚ್ಚಿತು. ಅವರ ಊರಿನ ವಾತಾವರಣವೂ ಹಾಗಿತ್ತು. ‘‘ಬೀಸುವಕಲ್ಲು, ಹಂತಿ ಹಾಡು, ಗೀಗಿ ಪದಗಳನ್ನು ಕೇಳುತ್ತ ಬೆಳೆದೆ. ನಮ್ಮ ಮಾನ್ಯದ ಹೊಲದ (ಗೌಡಿಕೆಗೆ ಬ್ರಿಟಿಷ್ ಸರಕಾರ ಕೊಟ್ಟ ಇನಾಮು) ಎದುರಿಗೆ ಹೊಲ ಕಾಯಲು ಬರುತ್ತಿದ್ದವನು ಗಿರಿಮಲ್ಲ. ಜಾನಪದ ಕವಿ. ಅವನ ಹಾಡುಗಳನ್ನು ಸಾಲಿಗೆ ಹೋಗುವವರೆಗೆ ಕೇಳುತ್ತಿದ್ದೆ. ಆಗ ಸಾಲಿಗೆ ಹೋಗುವವರೆಗೆ ಹೊಲ ಕಾಯುತ್ತಿದ್ದೆ. ಅಂವ ತನ್ನ ಗುಡಿಸಲು ಮುಂದ ಕುಂತು ಹಾಡ್ತಿದ್ದ. ಕವಿಗೆ ಕಿವಿ ಸಿಕ್ರ ಖುಷಿ ಆದಂಗ ಅವನ ಮುಂದ ಕುಂತ್ರ ಹಾಡ್ತಾ ಇರತಿದ್ದ. ಮುಂದ ಧಾರವಾಡದ ಕರ್ನಾಟಕ ಕಾಲೇಜಿನೊಳಗ ಬಿ.ಎ. ಮುಗಿಸಿ ಅಲ್ಲಿನ ಕರ್ನಾಟಕ ವಿಶ್ವವಿದ್ಯಾನಿಲಯದಾಗ ಎಂ.ಎ. ಇಂಗ್ಲಿಷ್ ಪದವಿಗೆ ಸೇರಿದೆ. ಆಗ ನಡೆದ ಜಾನಪದ ಸಾಹಿತ್ಯ ಸಮ್ಮೇಳನದಲ್ಲಿ ಜಿ.ಶಂ. ಪರಮಶಿವಯ್ಯ ಪಾಲ್ಗೊಂಡಿದ್ದರು. ಅವರು ಜಾನಪದ ಸಾಹಿತ್ಯವನ್ನು ಸಂಗ್ರಹಿಸಬೇಕೆಂದರು. ಆಗ ಟೇಪ್ ರೆಕಾರ್ಡರ್ ತಗೊಂಡು ಊರಿಗೆ ಹೋದೆ. ಗುಡಿಸಲದಾಗ ಗಿರಿಮಲ್ಲ ಕಾಣಲಿಲ್ಲ. ಅಲ್ಲಿದ್ದವರನ್ನು ಕೇಳಿದೆ. ಹ್ವಾದ ಅಂದ್ರು. ಗೋಳೋ ಅಂತ ಅತ್ತೆ. ಅಂವ ಹಾಡಿದ್ದನ್ನು ಕೇಳಿದ್ದೆ ಅಷ್ಟೆ.
ಖುಷಿಯಿಂದ ಕುಣಕೊಂತ ಹಾಡ್ಯಾನ ಗಿರಿಮಲ್ಲ
ಊರೆಲ್ಲ ಅಂತೈತಿ ಹುಚಮಲ್ಲ
ಅವನ ಹಾಡ ತಿಳಿದಾವ ತಿಂದಾನ ಸವಿಬೆಲ್ಲ
ಹಿಂಗ ಅವನ ಬಗ್ಗೆ ಹಾಡಿದೆ. ಬಿ.ಎ. ಓದುವಾಗಲೇ ಯೂತ್ ಫೆಸ್ಟಿವಲ್‌ನಲ್ಲಿ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಇದರಾಗ ಮೊದಲ ಬಹುಮಾನ ಬಂತು. ಮುಂದ ರಾಜ್ಯಮಟ್ಟದ ಯೂತ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದೆ. ಆಗ ಧಾರವಾಡ ಆಕಾಶವಾಣಿಯೊಳಗಿದ್ದ ಯಮುನಾಮೂರ್ತಿ ಅವ್ರ ಸಂದರ್ಶನ ಮಾಡಿದ್ರು. ನಾಟಕದ ಆಡಿಷನ್‌ಗೆ ಬರ್ರಿ ಅಂದ್ರು. ಹಳ್ಳಿಯಾಂವ ಅದೀನಿ ಅಂದೆ. ಅವರೇ ಅರ್ಜಿ ಬರೆಸಿದರು. 32 ಅಭ್ಯರ್ಥಿಗಳ ಆಡಿಷನ್ ನಡೆಯಿತು. ನಾನೊಬ್ಬನೇ ಆಯ್ಕೆಯಾದೆ. ಹಿಂಗ ರೇಡಿಯೊ ನಾಟಕದಾಗ ಭಾಗವಹಿಸಿದೆ. ಮುಂದ ರೇಡಿಯೊ ನಾಟಕ ಬರೆಯಾಕ ಪ್ರೇರಣೆ ಸಿಕ್ಕಿತು. ‘ಎಲ್ಲಿ ಹೋದನೋ ಕಂದ? ಎಲ್ಲಿ ಹೋದನೋ?’ ಎನ್ನುವ ನಾಟಕ ಬರೆದೆ. ಅದು ಪ್ರಸಾರವಾದಾಗ 500 ಪತ್ರಗಳು ಆಕಾಶವಾಣಿಗೆ, ವೈಯಕ್ತಿಕವಾಗಿ ನನಗ 150 ಪತ್ರಗಳು ಬಂದವು. ಆಗಾಗ ನಾಟಕ ಬರೆದೆ; ಒಟ್ಟು 65 ನಾಟಕಗಳು ಧಾರವಾಡ ಆಕಾಶವಾಣಿಯಿಂದ ಪ್ರಸಾರವಾಗಿವೆ’’ ಎನ್ನುವ ಖುಷಿ ಅವರಿಗೆ.
ಈಚಿನ ಅವರ ನಾಟಕ ‘ಬಯಲು ಬಯಲಾಯಿತು’. ಇದು ಸಿದ್ಧೇಶ್ವರ ಶ್ರೀಗಳ ಕುರಿತ ನಾಟಕ. ಇದೀಗ ರಂಗದ ಮೇಲೂ ಪ್ರದರ್ಶನಗೊಳ್ಳುತ್ತಿದೆ. ಇದರಲ್ಲಿ ಸಿದ್ಧೇಶ್ವರ ಶ್ರೀಗಳ ಗುರುಗಳಾಗಿದ್ದ ಮಲ್ಲಿಕಾರ್ಜುನ ಸ್ವಾಮಿಗಳ ಪಾತ್ರಕ್ಕೆ ಪೊಲೀಸ್ ಪಾಟೀಲರು ಬಣ್ಣ ಹಚ್ಚಿದ್ದಾರೆ. ಈ ನಾಟಕದ ನಿರ್ದೇಶಕರು ವೈ.ಡಿ. ಬಾದಾಮಿ ಹಾಗೂ ಮಂಜುಳಾ ಬಾದಾಮಿ.
‘‘ಎಂ.ಎ. ಮುಗಿದ ಮ್ಯಾಲ ಬನಹಟ್ಟಿಯೊಳಗ ಉಪನ್ಯಾಸಕನಾದೆ. ನಾಟಕ ಆಡಿಸೋದು, ನಾಟಕೋತ್ಸವ ನಡಿಸೋದು ಮಾಡ್ತಾ ಇದ್ದೆ. ‘ಕೊನೆ ನಮಸ್ಕಾರ’ ಎನ್ನುವ ನಾಟಕ ಬರೆದೆ; ಪ್ರಸಿದ್ಧವಾಯಿತು. ದುಬೈವರೆಗೂ ಹೋಯಿತು. ಒಟ್ಟು 106 ನಾಟಕಗಳನ್ನು ಬರೆದೆ’’ ಎನ್ನುವ ಬಾಪುಗೌಡ ಪೊಲೀಸ್ ಪಾಟೀಲ ಅವರು ನಟ, ನಿರ್ದೇಶಕ, ಲೇಖಕ.
‘‘ಎಪ್ಪತ್ತರ ದಶಕದಾಗ ಬನಹಟ್ಟಿಗೆ ಬಂದಾಗ 50 ಗೀಗೀಮೇಳ ಇದ್ದವು. 35 ಶ್ರೀಕೃಷ್ಣ ಪಾರಿಜಾತ ತಂಡಗಳಿದ್ದವು. 35-40 ಬಯಲಾಟ ತಂಡಗಳಿದ್ದವು. ಆದರೆ ಕ್ರಮೇಣ ಕಡಿಮೆಯಾದವು. 1985ರಲ್ಲಿ ಮನೆ ಕಟ್ಟಿಸಿ ವಾತ್ಸಲ್ಯ ಎಂದು ಹೆಸರಿಟ್ಟೆ. ಇದರ ಉದ್ಘಾಟನೆಗೆ ವಿಜಾಪುರದ ಸಿದ್ಧೇಶ್ವರ ಶ್ರೀಗಳು ಬಂದು, ನನ್ನ ರಚನೆಯ ತತ್ವಾಂತರಪರ್ವ ನಾಟಕವನ್ನು ಬಿಡುಗಡೆ ಗೊಳಿಸಿದರು. ಆಮ್ಯಾಲ ಕವಿಗೋಷ್ಠಿ ನಡೀತು. ಅವತ್ತೇ ವಾತ್ಸಲ್ಯ ವಿಚಾರ ವೇದಿಕೆ ಕಟ್ಟಿದೆ. ಪ್ರತೀ ತಿಂಗಳು ಉಪನ್ಯಾಸ, ಸಂವಾದವನ್ನು 13 ವರ್ಷಗಳವರೆಗೆ ನಡೆಸಿದೆವು’ ಎನ್ನುವ ಅವರಿಗೆ ಈಗ 77 ವರ್ಷ ವಯಸ್ಸು. ಅವರಿಗೆ ಶಿವಕುಮಾರ ಪ್ರಶಸ್ತಿ ಪ್ರದಾನ ನವೆಂಬರ್ 6ರಂದು ಸಾಣೇಹಳ್ಳಿಯಲ್ಲಿ ನಡೆಯಲಿದೆ.
ಅವರಿಗೆ ಅಭಿನಂದನೆಗಳು.
(ಅಂಕಣಕಾರರು ಹಿರಿಯ ಪತ್ರಕರ್ತ, ರಂಗಕರ್ಮಿ)






