ದಿಲ್ಲಿಯ ರಂಗಕರ್ಮಿ ಕನ್ನಡದ ಮಿತಾ ಮಿಶ್ರಾ

‘‘ರಂಗಭೂಮಿಯಲ್ಲೇ ಬದುಕು ಕಟ್ಟಿಕೊಂಡಿರುವೆ. ನನ್ನೊಳಗಿನ ನಟಿಯ ಜೀವಂತಿಕೆಗೆ ಆಗಾಗ ನಟಿಸುವೆ. ನಾಟಕಗಳಿಗೆ ಲೈಟಿಂಗ್ ಮಾಡಲು ಆಗಾಗ ದೇಶದ ವಿವಿಧ ರಾಜ್ಯಗಳಲ್ಲಿ ಸುತ್ತಾಡುವೆ. ಅಭಿನಯ ತರಗತಿಗಳ ಜೊತೆಗೆ ಮಕ್ಕಳಿಗೆ ನಾಟಕ ನಿರ್ದೇಶಿಸುವೆ. ವಸ್ತ್ರವಿನ್ಯಾಸಕಿಯಾಗಿ ದುಡಿಯುವೆ. ಸುಖವೋ ದುಃಖವೋ? ಎರಡು ರೊಟ್ಟಿ ಜಾಸ್ತಿ ಸಿಗುತ್ತೊ, ಕಡಿಮೆ ಸಿಗುತ್ತೊ ಗೊತ್ತಿಲ್ಲ. ಅಂತೂ ರಂಗಭೂಮಿಗೇ ಜೀವನ ಮುಡಿಪಾಗಿಟ್ಟಿರುವೆ’’ ಎನ್ನುವ ಮಿತಾ ಮಿಶ್ರಾ ಐವತ್ತು ನಾಟಕಗಳನ್ನು ನಿರ್ದೇಶಿಸಿದ್ದಾರೆ, 500 ನಾಟಕಗಳಿಗೆ ಬೆಳಕಿನ ವಿನ್ಯಾಸಗೊಳಿಸಿದ್ದಾರೆ. ದಿಲ್ಲಿಯಲ್ಲಿರುವ ಕರ್ನಾಟಕ ಸಂಘದೊಂದಿಗೆ ಒಡನಾಟವಿದ್ದು, ಇಲ್ಲಿನ ಕನ್ನಡಿಗರಿಗೆ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ದಿಲ್ಲಿಯ ಜನಕಪುರಿ ಕನ್ನಡ ಕೂಟದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಹಿರಿಯ ಲೇಖಕ ರಘುಪತಿ ತಾಮ್ಹನಕರ್ ಸನ್ಮಾನಿತರಾಗುವವರಿದ್ದರು. ಇದಕ್ಕಾಗಿ ರಘುಪತಿ ಅವರೊಂದಿಗೆ ಅವರ ಸಂಬಂಧಿಕರಾದ ಪವಿತ್ರಾ ಹಾಗೂ ಅವರ ಪತಿ ಕಿರಣ್‌ಕುಮಾರ್ ತಾಮ್ಹನಕರ್ ಅವರು ನನ್ನನ್ನೂ ಆಹ್ವಾನಿಸಿದರು. ಹೀಗೆ ದಿಲ್ಲಿಗೆ ಹೋದ ನಂತರ ಎನ್‌ಎಸ್‌ಡಿ ನೋಡಲು ರಘುಪತಿ ಅವರೊಂದಿಗೆ ಹೋದೆ. ಅಲ್ಲಿನ ಆಡಳಿತ ವಿಭಾಗದಲ್ಲಿ ಉದ್ಯೋಗಿಯಾಗಿರುವ ಕನ್ನಡತಿ ಮಿತಾ ಮಿಶ್ರಾ ಅವರು ಗುಜರಾತಿನ ಕೆವಡಿಯಾಕ್ಕೆ ನಾಟಕವೊಂದಕ್ಕೆ ಬೆಳಕಿನ ವಿನ್ಯಾಸಕ್ಕಾಗಿ ಹೋಗಿದ್ದರು.
ಅವರ ಅನುಪಸ್ಥಿತಿಯಲ್ಲಿ ಎನ್‌ಎಸ್‌ಡಿಯಲ್ಲಿ ನಡೆಯುತ್ತಿದ್ದ ತಾಲೀಮು, ನಾಟಕ ಪ್ರದರ್ಶನ, ಉಡುಪು ವಿಭಾಗ ನೋಡಿಕೊಂಡು ಬರುವಾಗ ಕಂಡಿದ್ದು ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಭಾವಚಿತ್ರ. ಅವರು ಎನ್‌ಎಸ್‌ಡಿಯ ಛೇರ್ಮನ್ ಆಗಿದ್ದರು. ಅಲ್ಲಿಯೇ ಕಂಡಿದ್ದು ನಮ್ಮ ಬಿ.ವಿ.ಕಾರಂತರು. ಅವರು 1977ರಿಂದ 1982ರ ವರೆಗೆ ಛೇರ್ಮನ್ ಆಗಿದ್ದರು. ಇದಕ್ಕೂ ಮೊದಲು ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರ ಭಾವಚಿತ್ರ ಕಂಡಿತು. ಅವರು 1961ರಿಂದ 1965ರವರೆಗೆ ಎನ್‌ಎಸ್‌ಡಿಯ ಅಧ್ಯಕ್ಷರಾಗಿದ್ದರು. ಹಾಗೆ ಸುತ್ತಾಡುವಾಗ ಎನ್‌ಎಸ್‌ಡಿಯಲ್ಲಿ ಪ್ರದರ್ಶನಗೊಂಡ ನಾಟಕಗಳ ಪ್ರದರ್ಶನದ ಭಾವಚಿತ್ರಗಳಿದ್ದವು. ಇದರಲ್ಲಿ ನಮ್ಮ ಬಿ.ವಿ. ಕಾರಂತ, ಪ್ರಸನ್ನ ಅವರು ನಿರ್ದೇಶಿಸಿದ ನಾಟಕಗಳ ಭಾವಚಿತ್ರಗಳಿದ್ದವು.
ಆಮೇಲೆ ನಾವು ಉಳಿದುಕೊಂಡಿದ್ದ ಜಾಗಕ್ಕೇ ಮಿತಾ ಮಿಶ್ರಾ ಅವರು ಬಂದರು. ಅವರ ತಂದೆ ಡಾ. ಹರಿಪಾದ ಮಿಶ್ರಾ ಒಡಿಶಾದವರು. ಅವರು ಓದಲಿಕ್ಕೆಂದು ಬೆಂಗಳೂರಿನ ನಿಮ್ಹಾನ್ಸ್‌ಗೆ ಬಂದರು. ನಂತರ ಅಲ್ಲಿಯೇ ಮನಶಾಸ್ತ್ರಜ್ಞರಾದರು. ಮಿತಾ ಅವರ ತಾಯಿ ಶಾಂತಾ ಚಿತ್ರದುರ್ಗದವರು. ಅವರೂ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮನಶಾಸ್ತ್ರಜ್ಞರು.
‘‘ನಾನು ಜಯನಗರದ ಒಂದನೇ ಬ್ಲಾಕಿನ ಬೈರಸಂದ್ರ ಪ್ರದೇಶದಲ್ಲಿ ಹುಟ್ಟಿ ಬೆಳೆದೆ. ಈಗ ಹಿಂದಿರುಗಿ ನೋಡಿದಾಗ, ನನ್ನ ಬಾಲ್ಯದ ದಿನಗಳು ಅದ್ಭುತವಾಗಿದ್ದವು. ಕ್ಲಿನಿಕಲ್ ಸೈಕಾಲಜಿಸ್ಟ್‌ಗಳಾಗಿದ್ದ ನನ್ನ ಹೆತ್ತವರು ನಿಮ್ಹಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಆ ದಿನಗಳಲ್ಲಿ ಬೈರಸಂದ್ರದಲ್ಲಿ ವಾಸಿಸುತ್ತಿ ದ್ದರು. ಆಗ ಬೈರಸಂದ್ರವನ್ನು ಮುಖ್ಯನಗರದಿಂದ ದೂರವಿರುವ ಪ್ರದೇಶವೆಂದು ಪರಿಗಣಿಸಲಾಗಿತ್ತು. ಅಲ್ಲಿ ರಾಗಿ ಗದ್ದೆಗಳಿದ್ದವು. ಸುತ್ತಲೂ ಹಸಿರು, ಜಾನುವಾರುಗಳ ಮತ್ತು ಕೋಳಿ ಸಾಕಣೆ ಕೇಂದ್ರಗಳಿದ್ದವು. ಎತ್ತರದ ಬೇವಿನಮರಗಳು ಮತ್ತು ನುಗ್ಗೆ ಮರಗಳಿದ್ದವು. ಅಲ್ಲಿ ವಾಸಿಸುತ್ತಿದ್ದ ಜನರ ಸಮುದಾಯ ಅದ್ಭುತವಾಗಿತ್ತು. ಅವರಲ್ಲಿ ಹೆಚ್ಚಿನವರು ಕಲ್ಲು ಒಡೆಯುವವರು, ರೈತರು ಮತ್ತು ಜಾನುವಾರು ಸಾಕಣೆದಾರರು. ನನ್ನ ನೆರೆಹೊರೆಯವರಲ್ಲಿ ಗುಜರಾತಿ, ಮಲಯಾಳಿ, ಶ್ವೇತಾಂಬರ ಜೈನ ಮಾರ್ವಾಡಿ ಕುಟುಂಬಗಳು, ತೆಲುಗು, ತಮಿಳು, ಮರಾಠಿ ಮತ್ತು ಉರ್ದು ಮಾತನಾಡುವ ಕುಟುಂಬಗಳಿದ್ದವು. ಎಂತಹ ಶ್ರೇಷ್ಠ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ನಾನು ಹೊಂದಿದ್ದೆ’’ ಎಂದು ಅಚ್ಚರಿ ಮತ್ತು ಹೆಮ್ಮೆ ಪಡುತ್ತಾರೆ ಮಿತಾ.
ಹೈದರಾಬಾದಿನಲ್ಲಿ ನಡೆದ ಅಂತರ್‌ರಾಷ್ಟ್ರೀಯ ನಿಶುಂಬಿತಾ ಮಕ್ಕಳ ನಾಟಕೋತ್ಸವದಲ್ಲಿ ತಾನೇ ನಿರ್ದೇಶಿಸಿ, ಅಭಿನಯಿಸಿದ ’ಡಂಬಲಿನೊ ಮಂಬಲಿನೊ’ ನಾಟಕದಲ್ಲಿ ಮಿತಾ ಮಿಶ್ರಾ
‘‘ನನ್ನ ಶಾಲಾ-ಕಾಲೇಜು ವಿದ್ಯಾಭ್ಯಾಸವು ಬೆಂಗಳೂರಿನ ಮಾಧವನ್ ಪಾರ್ಕ್ ಶಾಖೆಯ ಶ್ರೀ ಸರಸ್ವತಿ ವಿದ್ಯಾಮಂದಿರ, ವಿಜಯ ಪ್ರೌಢಶಾಲೆ ಮತ್ತು ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನಲ್ಲಿ ನಡೆಯಿತು. ಈ ಸಂಸ್ಥೆಗಳಲ್ಲಿ ಕಲಿಯುವಾಗ ನಾಟಕದ ಆಸಕ್ತಿ ಹಾಗೂ ಕಲೆಗಳ ಬಗೆಗಿನ ಒಲವು ಮೂಡಿತು. ಇಲ್ಲಿಯೇ ನನಗೆ ಅಭಿನಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಲೋಕದ ಪರಿಚಯವಾಯಿತು’’ ಎನ್ನುವ ಅವರು ಪದವಿ ಪಡೆದ ನಂತರ ಹೆಗ್ಗೋಡಿನ ನೀನಾಸಂನಲ್ಲಿ ಡಿಪ್ಲೊಮಾ ಪದವಿ ಪಡೆದರು. ಬಳಿಕ ದಿಲ್ಲಿಯಲ್ಲಿ ಮೂರು ವರ್ಷಗಳ ಎನ್‌ಎಸ್‌ಡಿ ಪದವಿ ಪಡೆದ ಮೇಲೆ ಚಿದಂಬರರಾವ್ ಜಂಬೆ ಅವರು ರಂಗಾಯಣದ ನಿರ್ದೇಶಕರಾಗಿದ್ದಾಗ ಮೈಸೂರಿನಲ್ಲಿ ಎರಡು ವರ್ಷ ರೆಪರ್ಟರಿಯಲ್ಲಿ ಕಾರ್ಯ ನಿರ್ವಹಿಸಿದರು. ಬಹುರೂಪಿ ಅಂತರ್‌ರಾಷ್ಟ್ರೀಯ ನಾಟಕೋತ್ಸವ ಸೇರಿದಂತೆ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿದರು. ನಂತರ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ರಂಗಭೂಮಿ ಕುರಿತು ಪಾಠ ಮಾಡಿದರು. ಅಲ್ಲಿಂದ ಹೊಸದಿಲ್ಲಿಯ ಎಲ್‌ಟಿಜಿ (ಲಟ್ಲ್ ಥಿಯೇಟರ್ ಗ್ರೂಪ್) ರೆಪರ್ಟರಿ ಮುಖ್ಯಸ್ಥರಾಗಿ ಎಂಟು ವರ್ಷಗಳವರೆಗೆ ಕಾರ್ಯನಿರ್ವಹಿಸಿದರು.
‘‘ದಿಲ್ಲಿಯ ಎನ್‌ಎಸ್‌ಡಿಗೆ ದೇಶದ ಬೇರೆ ಬೇರೆ ರಾಜ್ಯದವರಲ್ಲದೆ ವಿದೇಶದಿಂದಲೂ ಬರುತ್ತಾರೆ. ಅವರ ಭಾಷೆ, ನಡವಳಿಕೆ, ಯೋಚನೆ ಭಿನ್ನವಾಗಿರುತ್ತವೆ. ಆದರೆ ಎನ್‌ಎಸ್‌ಡಿಗೆ ಸೇರಿದ ನಂತರ ಒಟ್ಟಿಗೇ ಮೂರು ವರ್ಷ ಕಳೆಯುತ್ತೇವೆ. ಆಗ ಸಹಪಾಠಿಗಳ ರಾಜ್ಯ ತಲುಪುತ್ತೇವೆ. ಅಲ್ಲಿನ ಲೇಖಕರು, ರಂಗಕರ್ಮಿಗಳು, ಮಾತಿನ ಲಯ, ಧಾಟಿ ತಿಳಿಯುತ್ತೇವೆ. ಸಹಪಾಠಿಗಳ ಊರಿಗೆ ಹೋಗುವುದರಿಂದ ಅಲ್ಲಿನ ಕಲೆಗಳು ಪರಿಚಯವಾಗುತ್ತವೆ. ನಾವೆಲ್ಲರೂ ಬೇರೆ ಬೇರೆ ಭಾಷೆಯವರಾದರೂ ನಾಟಕವಾಡುವುದು ಹಿಂದಿಯಲ್ಲಿ. ಭಾಷೆಯ ಜೊತೆಗೆ ವಿವಿಧತೆಯಲ್ಲಿ ಏಕತೆ ಎನ್ನುವುದನ್ನು ಅನುಭವಿಸುತ್ತೇವೆ. ನಮ್ಮ ನಮ್ಮ ಊರುಗಳಲ್ಲಿ ನಾಟಕ ಮಾಡುವಾಗ ಒಂದು ತಿಂಗಳಲ್ಲಿ ಕೆಲಸ ಮಾಡುವುದಕ್ಕಿಂತ ಹತ್ತರಷ್ಟು ಕೆಲಸ ಮಾಡಬೇಕು ಎನ್‌ಎಸ್‌ಡಿಯಲ್ಲಿದ್ದಾಗ. ಎಲ್ಲರೂ ತಮ್ಮ ಮಾತೃಭಾಷೆಯಲ್ಲಿ ಹಿಂದಿ ಸಂಭಾಷಣೆ ಬರೆದುಕೊಂಡು ಹೇಳುತ್ತಾರೆ. ಆದರೆ ನಾಟಕ ಪ್ರದರ್ಶಿಸುವಾಗ ಹಾಗೆ ಕಾಣುವುದಿಲ್ಲ. ಮೂರು ವರ್ಷಗಳ ನಂತರ ಪ್ರಪಂಚದಲ್ಲಿ ಎಲ್ಲೇ ಬಿಟ್ಟರೂ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ನಾಟಕ ಪ್ರದರ್ಶಿಸುತ್ತಾರೆ’’ ಎನ್ನುವ ಮಿತಾ ಅಹಮದಾಬಾದಿನ ಗೋವಿಂದ್ ಸಿಂಗ್ ಯಾದವ್ ಅವರನ್ನು ಮದುವೆಯಾಗಿದ್ದಾರೆ. ಅವರು ಲಖನೌದಲ್ಲಿ ಬಿಎನ್‌ಎ (ಭಾರತೇಂದು ನಾಟ್ಯ ಅಕಾಡಮಿ)ಯಲ್ಲಿ ರಂಗಶಿಕ್ಷಕರು.
‘‘ರಂಗಭೂಮಿಯಲ್ಲೇ ಬದುಕು ಕಟ್ಟಿಕೊಂಡಿ ರುವೆ. ನನ್ನೊಳಗಿನ ನಟಿಯ ಜೀವಂತಿಕೆಗೆ ಆಗಾಗ ನಟಿಸುವೆ. ನಾಟಕಗಳಿಗೆ ಲೈಟಿಂಗ್ ಮಾಡಲು ಆಗಾಗ ದೇಶದ ವಿವಿಧ ರಾಜ್ಯಗಳಲ್ಲಿ ಸುತ್ತಾಡುವೆ. ಅಭಿನಯ ತರಗತಿಗಳ ಜೊತೆಗೆ ಮಕ್ಕಳಿಗೆ ನಾಟಕ ನಿರ್ದೇಶಿಸುವೆ. ವಸ್ತ್ರವಿನ್ಯಾಸಕಿಯಾಗಿ ದುಡಿಯುವೆ. ಸುಖವೋ ದುಃಖವೋ? ಎರಡು ರೊಟ್ಟಿ ಜಾಸ್ತಿ ಸಿಗುತ್ತೊ, ಕಡಿಮೆ ಸಿಗುತ್ತೊ ಗೊತ್ತಿಲ್ಲ. ಅಂತೂ ರಂಗಭೂಮಿಗೇ ಜೀವನ ಮುಡಿಪಾಗಿಟ್ಟಿರುವೆ’’ ಎನ್ನುವ ಅವರು ಐವತ್ತು ನಾಟಕಗಳನ್ನು ನಿರ್ದೇಶಿಸಿದ್ದಾರೆ, 500 ನಾಟಕಗಳಿಗೆ ಬೆಳಕಿನ ವಿನ್ಯಾಸಗೊಳಿಸಿದ್ದಾರೆ. ದಿಲ್ಲಿಯಲ್ಲಿರುವ ಕರ್ನಾಟಕ ಸಂಘದೊಂದಿಗೆ ಒಡನಾಟವಿದ್ದು, ಇಲ್ಲಿನ ಕನ್ನಡಿಗರಿಗೆ ನಾಟಕಗಳನ್ನು ನಿರ್ದೇಶಿಸಿದ್ದಾರೆ.
‘‘ಲೈಟ್ ಡಿಸೈನರ್ ಆಗಿ ದೇಶಾದ್ಯಂತ ಸುತ್ತಾಡುವಾಗ, ನನಗೆ ಯಾವಾಗಲೂ ಗೌರವಯುತ ವಾದ ನಡವಳಿಕೆ ಮತ್ತು ಸುರಕ್ಷತೆ ದೊರೆತಿದೆ. ನಾನು ಭೇಟಿಯಾದ ಯಾವುದೇ ಪುರುಷ ಸಹೋದ್ಯೋಗಿಯಿಂದ ಎಂದಿಗೂ ಮುಜುಗರದ ಸನ್ನಿವೇಶವನ್ನು ಎದುರಿಸಬೇಕಾಗಿ ಬಂದಿಲ್ಲ. ಅನೇಕ ಸಂದರ್ಭಗಳಲ್ಲಿ, ಹಲವಾರು ಪುರುಷರ ನಡುವೆ ಏಕೈಕ ಮಹಿಳೆಯಾಗಿ ನಾನು ರಾತ್ರಿಯಿಡೀ ನಾಟಕದ ಸಲುವಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ನಾಟಕ ಯಶಸ್ವಿಗೊಳಿಸಲು ಅತ್ಯಂತ ಶ್ರಮ ವಹಿಸಿ ದುಡಿಯುವ ಎಲ್ಲಾ ಹಿನ್ನೆಲೆ ಕಾರ್ಯಕರ್ತರನ್ನು (ಬ್ಯಾಕ್‌ಸ್ಟೇಜ್ ವರ್ಕರ್ಸ್) ಗೌರವಿಸುವೆ. ಇನ್ನು ದಿಲ್ಲಿಯ ಸಾಂಸ್ಕೃತಿಕ ರಂಗದಲ್ಲಿ ಬದ್ಧತೆಯುಳ್ಳ ರಂಗಕರ್ಮಿಯಾಗಿ ನೆಲೆ ನಿಲ್ಲುವುದು ಒಂದು ಸವಾಲಾಗಿತ್ತು. ದಿಲ್ಲಿಯಲ್ಲಿ ನನಗೆ ಪರಿಚಯವಿರುವ ಹಾಗೂ ನನಗೆ ಬೆಂಬಲ ನೀಡಿರುವ ಎಲ್ಲರಿಗೂ ಧನ್ಯವಾದ ಅರ್ಪಿಸುವೆ’’ ಎನ್ನುವ ಅವರಿಗೆ ದಿಲ್ಲಿ ಬಹಳ ಇಷ್ಟ.
‘‘ದಿಲ್ಲಿ ಯಾಕೆ ಇಷ್ಟವೆಂದರೆ ಇಲ್ಲಿ ಮಲ್ಟಿಪಲ್ ಐಡೆಂಟಿಟಿಯನ್ನು ಸ್ವೀಕರಿಸುತ್ತಾರೆ. ಸಂಪ್ರದಾಯದ ಮನೆತನದ ಪರಿಣಾಮ ರಂಗಭೂಮಿಯಲ್ಲಿ ಬದುಕು ಕಟ್ಟಿಕೊಳ್ಳಲು ಕಷ್ಟಸಾಧ್ಯ. ಆದರೆ ನೀನಾಸಂಗೆ ಹೋಗುವ ಮುನ್ನವೇ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರಿಂದ ಧೈರ್ಯವಿತ್ತು. ನಮ್ಮ ಕನ್ನಡದ ರಂಗವಿದ್ಯಾರ್ಥಿಗಳು ದಿಲ್ಲಿಯ ಎನ್‌ಎಸ್‌ಡಿಗೆ ಹೆಚ್ಚು ಬರಬೇಕು. ಆದರೆ ಹಿಂದಿ ಭಾಷೆ ಬರಲ್ಲವೆಂದು ಎನ್‌ಎಸ್‌ಡಿಗೆ ಬರಲ್ಲ ನಮ್ಮ ಕನ್ನಡದ ರಂಗಾಭ್ಯಾಸಿಗಳು. ಆದರೆ 25 ವರ್ಷಗಳಲ್ಲಿ ತಂತ್ರಜ್ಞಾನ ಬಹಳ ಬದಲಾಗಿದೆ. ಇದರಿಂದ ರಂಗಭೂಮಿಗೆ ಅನುಕೂಲವಾಗಿದೆ. ಬಂಗಾಳಿಗರ ಹಾಗೆ, ಬಿಹಾರಿಗಳ ಹಾಗೆ ನಮ್ಮ ಕನ್ನಡಿಗರು ಅದರಲ್ಲೂ ರಂಗಕರ್ಮಿಗಳು ಮುನ್ನುಗ್ಗಬೇಕು. ದೇಶದ ಎಲ್ಲೆಡೆ ಪಸರಿಸಬೇಕು. ಲಾಬಿ ಇದೆ, ರಾಜಕೀಯ ಇದೆ. ಆದರೆ ವಿದ್ಯೆಗೆ ಅರ್ಹತೆ ಇದೆ. ಕನ್ನಡದವಳಾಗಿ ದಿಲ್ಲಿಯಲ್ಲಿರುವುದಕ್ಕೆ ಖುಷಿಯಿದೆ’’ ಎನ್ನುವ ಅವರು ಕನ್ನಡದ ಜೊತೆಗೆ ಒರಿಯಾ, ಹಿಂದಿ, ಇಂಗ್ಲಿಷ್, ಸಂಸ್ಕೃತ ಬಲ್ಲವರು.
(ಅಂಕಣಕಾರರು ಹಿರಿಯ ಪತ್ರಕರ್ತ, ರಂಗಕರ್ಮಿ)






