ನೈಜ ವೈಚಾರಿಕ ಪ್ರಜ್ಞೆಗೆ ಸಾಕ್ಷಿಯಾದ ಮುರಾರಿ-ಕೆದ್ಲಾಯ ರಂಗೋತ್ಸವ

ರಥಬೀದಿ ಗೆಳೆಯರು (ರಿ.) ಉಡುಪಿ ಸಾಂಸ್ಕೃತಿಕ ಸಂಘಟನೆಯು ಕಳೆದ ನಾಲ್ಕುವರೆ ದಶಕಗಳಿಂದ ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕರ್ನಾಟಕದ ಜನಸಂಸ್ಕೃತಿಯಲ್ಲಿ ವೈಚಾರಿಕ ಪ್ರಜ್ಞೆ ಮತ್ತು ನೆಲಗಟ್ಟನ್ನು ಸ್ಥಾಪನೆಗೊಳಿಸುವಲ್ಲಿ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಬಂದಿರುವ ಸಂಸ್ಥೆ. ಉಡುಪಿಯ ಧಾರ್ಮಿಕ ಆಚರಣೆಗಳು, ಪರಂಪರಾಗತ ನಂಬಿಕೆಗಳು, ಮತ್ತು ವೈದಿಕಶಾಹಿಯ ನಡುವೆ ಸಾಂಸ್ಕೃತಿಕ ಉಪಾಸನೆಯ ಹಾದಿಯಲ್ಲಿ ಭಿನ್ನ ಕವಲುದಾರಿಯನ್ನು ಕಂಡುಕೊಂಡು ಪ್ರಗತಿಪರ ಕಣ್ಣೋಟಗಳನ್ನು ತನ್ನ ಕಾರ್ಯಕ್ರಮಗಳ ಮೂಲಕವೇ ತೆರೆದಿಡುವ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಅರ್ಧ ಶತಮಾನದೆಡೆಗೆ ಧಾವಿಸುತ್ತಿದೆ. ಈ ಪ್ರಜ್ಞೆ ಮತ್ತು ಧಾವಂತದ ಭಾಗವಾಗಿಯೇ ಪ್ರತೀವರುಷ ಸಂಘಟಿಸಿಕೊಂಡು ಬಂದಿರುವ ಕಾರ್ಯಕ್ರಮ ಮುರಾರಿ ಕೆದ್ಲಾಯ ರಂಗೋತ್ಸವ. ರಥಬೀದಿ ಗೆಳೆಯರ ಹಿರಿಯ ಚೇತನಗಳಾದ ದಿವಂಗತ ನಿಡಂಬೂರು ಬೀಡು ಮುರಾರಿ ಬಲ್ಲಾಳ್ ಮತ್ತು ಕೆ. ಸುಬ್ರಹ್ಮಣ್ಯ ಕೆದ್ಲಾಯರ ನೆನಪಿನಲ್ಲಿ ನಡೆದ ಪ್ರಸ್ತುತ ವರುಷದ ರಂಗೋತ್ಸವ ಈ ದಿಕ್ಕಿನಲ್ಲಿ ನಿಜವಾದ ವೈಚಾರಿಕ ಪ್ರಜ್ಞೆಗೆ ಸಾಕ್ಷಿಯಾಯಿತು.
ಮೈಸೂರು ರಂಗಾಯಣ ಪ್ರಸ್ತುತಿಯಲ್ಲಿ ಕೋಟಿಗಾನಹಳ್ಳಿ ರಾಮಯ್ಯ ರಚನೆಯ ಚಿದಂಬರರಾವ್ ಜಂಬೆ ನಿರ್ದೇಶನದ ‘ಅಂಬೇಡ್ಕರ್ ಕೊಲಾಜ್’, ಸಮುದಾಯ ಶಿವಮೊಗ್ಗ ರಂಗಕ್ಕೆ ತಂದ ಡಾ. ಸಾಸ್ವೆಹಳ್ಳಿ ಸತೀಶ್, ಐ.ಕೆ. ಬೊಳುವಾರು ರಚನೆಯ ಡಾ. ಸಾಸ್ವೆಹಳ್ಳಿ ಸತೀಶ್ ನಿರ್ದೇಶನದ ‘ನೀರೊಳಗಣ ಕಿಚ್ಚು’, ಸಮುದಾಯ ಬೆಂಗಳೂರು ತಂಡದ ಕೆ.ಆರ್. ಮೀರಾ ಕಥೆಯಾಧಾರಿತ ಡಾ.ಸ್ಯಾಮ್ ಕುಟ್ಟಿ ಪಟ್ಟಂಕರಿ ನಿರ್ದೇಶನದ ‘ಭಗವಂತನ ಮರಣ’ ನಾಟಕಗಳು ಇತ್ತೀಚೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಪ್ರದರ್ಶನ ಕಂಡವು.
ಮೇಲ್ನೋಟಕ್ಕೆ ಒಂದೇ ಆಶಯವನ್ನು ಅಂತರಂಗದಲ್ಲಿ ಕಟ್ಟಿಕೊಂಡು ಈ ದೇಶದ ಪ್ರಜಾಪ್ರಭುತ್ವ, ಸಮಾನತೆ, ಜಾತ್ಯತೀತತೆ, ಸಮಗ್ರತೆ, ಸಹೋದರತ್ವ ಮತ್ತು ಸಾರ್ವ ಭೌಮತೆ ಗಳನ್ನು ಗಟ್ಟಿಯಾಗಿ ಪ್ರತಿಪಾದಿಸಿದ ನಾಟಕಗಳಿವು. ಈ ದೇಶದ ಅಲ್ಪಸಂಖ್ಯಾತರು, ದಲಿತರು, ದುಡಿಯುವ ವರ್ಗ ಮತ್ತು ಮಹಿಳೆಯರ ಹಕ್ಕು ಮತ್ತು ಗೌರವಗಳನ್ನು ಪುನರ್ ಸ್ಥಾಪಿಸಬೇಕೆಂಬ ಹಕ್ಕೊತ್ತಾಯಗಳನ್ನು ಮಂಡಿಸಿದ ನಾಟಕಗಳಿವು. ಸಂವಿಧಾನ ಈ ಮೂರೂ ನಾಟಕಗಳ ಸ್ಥಾಯೀ ಆಶಯವಾಗಿ ಗಾಂಧಿ, ಕಾರ್ಲ್ ಮಾರ್ಕ್ಸ್, ಅಂಬೇಡ್ಕರ್, ಬುದ್ಧ, ಬಸವರು ಸಂಚಾರಿ ಪಾತ್ರಗಳಾಗಿ ಮೂರೂ ನಾಟಕಗಳು ಏಕತ್ರ ಐಕ್ಯಗೊಂಡು ಕೂಡಲಸಂಗಮದ ಹೊಸ ಅನುಭವ ಕಲ್ಯಾಣವನ್ನು ಕಟ್ಟುತ್ತವೆ. ಅದೇ ಕಾಲಕ್ಕೆ ಹಿಂದುತ್ವದ ರೋಗಗ್ರಸ್ತ ಮನಸ್ಸಿಗೆ ಬಲಿಯಾದ ಸಫ್ದಾರ್ ಹಶ್ಮಿ, ಗೌರಿ, ಕಲಬುರ್ಗಿ, ಪನ್ಸಾರೆ, ದಾಭೋಲ್ಕರ್ ನೆನಪುಗಳನ್ನು ಕೆಂಪು ರಕ್ತದಲ್ಲಿ ಅದ್ದಿ ಹೊಳೆಯಾಗಿಸುತ್ತದೆ.
ಅಂಬೇಡ್ಕರ್ ಕೊಲಾಜ್
ಅಂಬೇಡ್ಕರ್ ಕೊಲಾಜ್ ನಾಟಕ ಬಾಬಾಸಾಹೇಬರ ಬದುಕು ಮತ್ತು ಹೊರಾಟಗಳ ಕಥನವಾಗಿದ್ದರೂ ರಂಗದ ಮೇಲೆ ಮೂರು ದೃಶ್ಯೀಕೃತ ರೂಪ ಪಡೆದು ಭೂತ ಭವಿಷ್ಯಗಳ ನಡುವೆ ವರ್ತಮಾನವನ್ನೇ ಕಾಲದ ಒರೆಯಲ್ಲಿ ತಿಕ್ಕಿ ತೀಡಿ ನಮ್ಮದೇ ಅಂಗೈಯ ಹೆಬ್ಬೆರಳು, ತೋರುಬೆರಳು ಮತ್ತು ಉಂಗುರ ಬೆರಳುಗಳನ್ನು ಸಾಣೆಹಿಡಿಯುತ್ತದೆ. ದಲಿತರ ಮೇಲಿನ ತಲೆತಲಾಂತರದ ಶೋಷಣೆಗಳು, ಬಾಬಾ ಸಾಹೇಬರು ಜೀವನದುದ್ದಕ್ಕೂ ಅನುಭವಿಸಿದ ಅವಮಾನಗಳು ಇವೆರಡನ್ನು ವರ್ತಮಾನ ಭಾರತದ ರಾಜಕೀಯ ಕಣ್ಣೋಟದ ಸರಹದ್ದಿನಲ್ಲಿ ಹೆಣೆದ ನೇಯ್ಗೆ ಇದು.
ಬಾಲಕ ಭೀಮ ಶಾಲೆಯಲ್ಲಿ ಅನುಭವಿಸಿದ ಶೊಷಣೆಗಳು, ಸಂಸ್ಕೃತ ಅಭ್ಯಾಸ ಮಾಡಲು ಹೊರಟಾಗ ಉಂಟಾದ ಅವಮಾನ, ಬ್ಯಾರಿಸ್ಟರ್ ಆದ ಮೇಲೆ ವಸತಿಗೆ ರೂಮ್ ಕೇಳಲು ಹೋದಾಗ ಉಂಟಾಗುವ ಅವಮಾನ ಮತ್ತು ಆಕ್ರಮಣ ಇವೆಲ್ಲಕ್ಕೆ ಪ್ರತಿಗಾಮಿಯಾಗಿ ಮಹಡ್ ಸತ್ಯಾಗ್ರಹ, ಕಾಳಾರಾಮ್ ದೇವಾಲಯ ಪ್ರವೇಶ, ಹಿಂದೂ ಕೋಡ್ ಬಿಲ್ ಇವೆಲ್ಲ ಒಂದು ಕಡೆಯಾದರೆ, ಚಾಯ್ ವಾಲಾ, ಪಕೋಡಾ, ಚಕ್ಕೋತಾ, ರಫೇಲ್, ಬ್ಲೂ ಬರಿ, ಬ್ಲ್ಯಾಕ್ ಬೆರಿ, ರೋಬರಿ, ಪಂಕ್ಚರ್ ಶಾಪ್, ಪೊರಕೆ ಸ್ವಾಮಿ, ಚಡ್ಡಿ ಸ್ವಾಮಿ, ಹೆಣ್ಣುಮಕ್ಕಳಿಂದ ಶಬರಿ ಮಲೆ ಪ್ರವೆಶ, ಪಾರ್ಲಿಮೆಂಟು, ಸಂಸತ್ತು, ಗಲ್ಲೀ ಬಾಯ್ಸ್ ಇವೆಲ್ಲ ಇನ್ನೊಂದು ಕಡೆ. ಇವೆಲ್ಲದರ ನಡುವೆ ಕಲಾವತಿಯಿಂದ ಹಿಡಿದು ಸೌಜನ್ಯಾ. ಕೊನೆಯಲ್ಲಿ ಕಾರ್ಲ್ ಮಾರ್ಕ್ಸ್, ಥೇಮ್ಸ್ ನದಿ, ಪುಟ್ಟ ಆಲದ ಮರ.
ನೀರೊಳಗಣ ಕಿಚ್ಚು
ಸಫ್ದಾರ್ ಹಶ್ಮಿ ಜನಮ್ ತಂಡಕ್ಕೆ ಕಟ್ಟಿದ್ದ ಬೀದಿ ನಾಟಕದ ತುಣುಕೊಂದನ್ನು ಪ್ರೊಸೀನಿಯಂಗೆ ಅಳವಡಿಸುವ ಪ್ರಯತ್ನವಿದು. ಆ ಮೂಲಕ ಈ ದೇಶದ ನಡುಬೀದಿಯಲ್ಲಿ ಪ್ರಭುತ್ವ ವಿರೋಧಿ ನಾಟಕ ಮಾಡಿದ ಕಾರಣಕ್ಕಾಗಿಯೇ ಕೊಲೆಯಾದ ಪ್ರತಿರೋಧ ರಂಗಭೂಮಿಕೆಯ ನಾಯಕನನ್ನು ಸ್ಮರಿಸುತ್ತಾ ಆತನ ರಂಗಪ್ರೀತಿಯನ್ನು ಬದ್ಧತೆಯನ್ನು ಸಾರುವ ಮೂಲಕ ಈಗಿನ ನಾಟಕಗಳ ವಸ್ತುವಿನ ಆಯ್ಕೆ ಮತ್ತು ನಾಟಕವಾಡುವ ಬದ್ಧತೆಯ ಬಗ್ಗೆ ತೆಗೆದುಕೊಳ್ಳಬೇಕಾದ ಎಚ್ಚರವನ್ನು ಕಾಯ್ದಿರಿಸುತ್ತದೆ.
ವರ್ಗಸಂಘರ್ಷದ ತಲೆತಲಾಂತರದ ಬದುಕನ್ನು ಅತ್ಯಂತ ಹೀನಾಯವಾಗಿ ಅನುಭವಿಸಿದ ದುಡಿಯುವ ವರ್ಗದ ಜನರ ನೆಲೆಯಲ್ಲಿ ನಿಂತು ಬಾಬಾ ಸಾಹೇಬರ ಸಂವಿಧಾನಾತ್ಮಕ ಆಶಯದಡಿಯಲ್ಲಿ ನಾಟಕ ತೆರೆದುಕೊಳ್ಳುತ್ತದೆ. ನ್ಯಾಯಪರತೆಯ ಕಣ್ಣೋಟಗಳಲ್ಲಿ ದುಡಿಯುವ ವರ್ಗದ ದನಿಯಾಗಲು ಬಳಸಿದ ಜನಮಾನಸದಲ್ಲಿ ಮಾಸಿದ ಹೋರಾಟದ ಹಾಡುಗಳನ್ನು ಮತ್ತೆ ನೆನಪಿಸುತ್ತದೆ. ನಿರೂಪಣೆಯೂ, ಕಥನವೂ, ವರ್ತಮಾನದ ಆಳುವ ವರ್ಗದ ಕುರಿತ ವಿಡಂಬನೆಯೂ ಸೇರಿದ ರಂಗ ಪ್ರಸ್ತುತಿಯಿದು. ಒಂದು ಕಡೆ ರಾಜ, ಇನ್ನೊಂದು ಕಡೆ ತೋಟದ ಮಾಲಿ ನಡುವೆ ಒಂದಷ್ಟು ಮೌಢ್ಯಗಳು ಕೊನೆಯಲ್ಲಿ ಸಿಡಿದೇಳಲೇ ಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ದುಡಿಯುವ ವರ್ಗ.
ಭಗವಂತನ ಮರಣ
ಧರ್ಮ ಎಂಬುದು ಒಂದು ಅಫೀಮು. ಈ ಧರ್ಮದ ಅಫೀಮನ್ನು ತಲೆಗೇರಿಸಿಕೊಂಡ ಯುವಜನಾಂಗ ಕಳೆದ ಹತ್ತು ಹದಿನೈದು ವರುಷಗಳಿಂದ ಕರಾವಳಿ ಜಿಲ್ಲೆಗಳನ್ನೂ ಸೇರಿ ಇಡಿಯ ದೇಶಕ್ಕೆ ವ್ಯಾಪಿಸಿದೆ. ಇದು ಧಾರ್ಮಿಕ ಅಸಹಿಷ್ಣುತೆಯ ರೂಪ ಪಡೆದು ಅನೈತಿಕ ಪೋಲೀಸ್‌ಗಿರಿಯಾಗಿ ರಾರಾಜಿಸಿದ್ದಕ್ಕೂ ನಮ್ಮ ತಲೆಮಾರು ಸಾಕ್ಷಿಯಾಗಿದೆ. ಇದು ಹಿಂಸೆಯ ರೂಪ ಪಡೆದು, ಗೋ ರಕ್ಷಕರ ಮುಖವಾಡ ಧರಿಸಿ, ಹಲವು ವೈಚಾರಿಕ ಜ್ಞಾನ ಶಾಖೆಯ ಮೇಲೆ ಆಕ್ರಮಣ ಮಾಡಿದ್ದೂ ನಮ್ಮ ಕಣ್ಣ ಮುಂದೆ ಇದೆ. ಪುಸ್ತಕ ಓದುವ ಕೈಗಳಿಗೆ ಆತ್ಮ ರಕ್ಷಣೆಯ ಹೆಸರಲ್ಲಿ ಕವಾಯತು ಕಲಿಸಿ ದೊಣ್ಣೆ ನೀಡಲಾಗಿದೆ. ಆ ಮೂಲಕ ಬಹುತ್ವದ ಭಾರತದಲ್ಲಿ ಏಕ ಭಾಷೆ, ಏಕ ಧರ್ಮ, ಏಕ ಬಣ್ಣ, ಏಕ ಸಂಸ್ಕೃತಿಯನ್ನು ಬಹಿರಂಗವಾಗಿಯೇ ಬಿತ್ತುತ್ತಿರುವ ಈ ಕಾಲಘಟ್ಟದಲ್ಲಿ ಅಭಿಜಾತ ಪ್ರದರ್ಶನ ಕಲೆಯಾದ ನಾಟಕವೂ ತನ್ನ ಭೂಮಿಕೆಯ ಜವಾಬ್ದಾರಿಯನ್ನು ಅರಿತುಕೊಂಡು ತೀವ್ರವಾಗಿ ಸ್ಪಂದಿಸುವ ಅಗತ್ಯತೆ ಈ ಹಿಂದಿಗಿಂತಲೂ ಇಂದು ತೀವ್ರವಾಗಿದೆ. ಆ ನಿಟ್ಟಿನಲ್ಲಿ ಭಗವಂತನ ಮರಣ ತೀರಾ ಹಸಿಯಾದ ರಂಗ ರೂಪವಾಗಿ ನಮ್ಮ ಮುಂದಿದೆ.
ಕೇಡಿನ ಜ್ವಾಲೆಯ ಮುಂದೆ ವಚನಗಳ ಬೆಳಕನ್ನು ಮುಖಾಮುಖಿಯಾಗಿಸಿದ ನಾಟಕ. ವಚನಗಳು ರಮ್ಯತೆಯ ಹಾಡುಗಳಾಗಿಸದೆ ಮೂಲ ಸಾರತೆಯಲ್ಲೇ ರಂಗಕ್ಕಿಳಿಯುತ್ತವೆ. ಕೊಲ್ಲಲು ಬಂದವನಿಗೆ ವಚನಗಳ ಮೂಲಕ ತತ್ವ ದರ್ಶನ ಮಾಡಿಸುವುದು, ಗಾಂಧಿ ಮತ್ತು ಅಂಬೇಡ್ಕರ್ ಚಿತ್ರಗಳಾಗಿ ತೂಗುಹಾಕಿದ್ದರೂ ಪಾತ್ರಗಳಾಗಿ ಕಾಣುವುದು, ಪಿಸ್ತೂಲಿನಿಂದ ಸಿಡಿದರೂ ಕೇಳದ ಗುಂಡಿನ ಶಬ್ದ, ಪಿಸ್ತೂಲಿನಿಂದ ಗುಂಡು ಹಾರಿಸಿ ಮೂರು ಜನರನ್ನು ಕೊಂದ ವ್ಯಕ್ತಿ ವಚನಗಳ ಮುಂದೆ ಮಂಡಿಯೂರುವುದು, ಒಂದು ಬೊಗಸೆ ನೀರನ್ನಿಟ್ಟುಕೊಂಡು ಇಡೀ ನಾಟಕದ ತುಂಬೆಲ್ಲಾ ಕಾಣುವ ಕೂಡಲ ಸಂಗಮ.
ರಂಗಭೂಮಿಯು ಕಾಲಾತೀತವಾಗಿ ಇದುವರೆಗೆ ಜತನದಿಂದ ಕಾಯ್ದು ಬಂದಿದ್ದ ಬಂಡುಕೋರತನ ಮತ್ತು ಪ್ರತಿರೋಧತನ ಕಡಿಮೆಯಾಗಿ, ನಾಟಕ ಪ್ರದರ್ಶನಗಳು ರಮ್ಯತೆಯ ಸರಕಾಗಿ, ಸುಂದರ ರಂಗಪ್ರದರ್ಶನವಾಗಿ, ಒಣ ಸಿದ್ಧಾಂತಗಳ ಮೂಟೆಯಾಗಿ ಏಕತಾನತೆಯ ದೃಶ್ಯಕಾವ್ಯಗಳಾಗಿ ರಂಗವೇರುತ್ತಿರುವ ಈ ಹೊತ್ತಲ್ಲಿ ಈ ಮೂರೂ ನಾಟಕಗಳು ಮನರಂಜನೆಯನ್ನು ದಾಟಿದ ಹೊಸ ವ್ಯಾಖ್ಯಾನ ನೀಡಿವೆ. ವೈಚಾರಿಕ ನೆಲೆಗಟ್ಟನ್ನು ವಿಸ್ತರಿಸಿವೆ. ರಂಗಭೂಮಿಯ ಜವಾಬ್ದಾರಿಯನ್ನು ಮತ್ತು ಬದ್ಧತೆಯನ್ನು ನೆನಪಿಸುತ್ತಾ ವೈಚಾರಿಕ ನೆಲೆಗಟ್ಟನ್ನು ವಿಸ್ತರಿಸುತ್ತದೆ. ನಾಟಕ ವಸ್ತುವಿನ ಆಯ್ಕೆಯ ಪ್ರಸ್ತುತ ರಾಜಕಾರಣವನ್ನು ತೆರೆದಿಟ್ಟು ಅರಿವಿನ ದರ್ಶನದ ವ್ಯಾಪ್ತಿಯನ್ನು ಹಿರಿದಾಗಿಸಿದೆ. ಇವತ್ತಿನ ಕಾಲಘಟ್ಟದಲ್ಲಿ ಮತ್ತೆ ಮತ್ತೆ ಪ್ರದರ್ಶನ ಕಾಣಬೇಕಾದ ನಾಟಕಗಳಿವು.
ರೋಗ ಉಲ್ಬಣಗೊಂಡ ಮೇಲೆ ಅದಕ್ಕೆ ಕೊಡುವ ಔಷಧವೂ ಸಹ ಆಹಾರವಾಗುವ ಅಪಾಯವಿದೆ. ನಾಟಕದಲ್ಲಿ ಬರುವ ಈ ಮಾತು ಬರಿಯ ವಾಚಿಕರೂಪದ ಪ್ರಸ್ತುತಿಗೆ ಮಾತ್ರವೇ ಸೀಮಿತವಾಗದೆ ವರ್ತಮಾನ ಭಾರತಕ್ಕೆ ಔಷಧವಾಗಲಿ.






