ಪ್ರಾಜೆಕ್ಟ್ ಪಂಚತಂತ್ರ
ಪ್ರಕಾಶ್ ರಾಜ್ ಅರ್ಪಿಸುವ ನಿರ್ದಿಗಂತ ಮೈಸೂರು ಅಭಿನಯದ ಅರುಣ್ ಲಾಲ್ ನಿರ್ದೇಶನದ ನಾಟಕ

‘‘ಒಂದು ಬಾರಿ ಮುಟ್ಟಿದ ನದಿಯನ್ನು ಮತ್ತೆ ಮುಟ್ಟಿದಾಗ ಹಾಗೇ ಇರಲ್ಲ: ಅದರಂತೆ ಕಥೆಯೂ’’ ಎಂಬ ಘೋಷದಿಂದ ಆರಂಭವಾದ ನಾಟಕ ಪಂಚತಂತ್ರದ ಕಥೆಗಳನ್ನು ಭಿನ್ನ ಬಗೆಯಲ್ಲಿ ಮುಟ್ಟಿಸಿಕೊಳ್ಳುತ್ತಾ ಸಾಗುತ್ತದೆ. ನಾಟಕ ತಾನೇ ರಂಗದ ಮೇಲೆ ಘೋಷಿಸಿಕೊಂಡಂತೆ ವರ್ತಮಾನ ಭಾರತದ ರಾಜಕೀಯ ಮತ್ತು ಸಾಮಾಜಿಕ ತುರ್ತು ಸಾಂದರ್ಭಿಕತೆಯ ಹಿನ್ನೆಲೆಯಲ್ಲಿ ಪಂಚತಂತ್ರದ ಕಥೆಗಳು ಇಲ್ಲಿ ಮರುಹುಟ್ಟು ಪಡೆಯುತ್ತವೆ. ಇಲ್ಲಿ ಪಂಚತಂತ್ರ ಒಂದು ನೆಪ ಮಾತ್ರ. ಇಡೀ ಪಂಚತಂತ್ರದ ಕಥೆಗಳನ್ನು ಮುರಿಯಲಾಗಿದೆ; ಮತ್ತೆ ಕಟ್ಟಲಾಗಿದೆ ಎಂದೂ ಹೇಳಬಹುದು. ಇವತ್ತಿನ ಭಾರತದ ರಾಜಕೀಯ ಪರಿಸ್ಥಿತಿಗೆ ನೇರಾ ನೇರವಾಗಿ ಎದುರಾಗುವುದರ ಮೂಲಕ ಕನ್ನಡ ರಂಗಭೂಮಿಯಲ್ಲಿ ಹೊಸ ನರೇಟಿವ್ ಅನ್ನು ಪ್ರಾಜೆಕ್ಟ್ ಪಂಚತಂತ್ರ ನಾಟಕದ ಮೂಲಕ ಸೃಷ್ಟಿಸಲಾಗಿದೆ.
ಪಂಚತಂತ್ರದ ಈ ಪ್ರಾಜೆಕ್ಟ್ ಹದಿನೈದಕ್ಕೂ ಮಿಕ್ಕಿ ಕಥೆಗಳನ್ನು ಒಂದರೊಳಗೊಂದು ಬೆಸೆದರೂ, ಅವು ಅಂತಿಮವಾಗಿ ಒಂಭತ್ತು ಪ್ರಮುಖ ಕಥೆಗಳ ಮೂಲಕ ರಂಗವೇರುತ್ತದೆ. ಸಿದ್ಧ ಮಾದರಿಗಳನ್ನು ಒಡೆದು ರಂಗದಲ್ಲಿ ಹೊಸ ಮಾದರಿಗಳನ್ನು ಈಗಾಗಲೇ ತಮ್ಮ ಹಿಂದಿನ ನಾಟಕಗಳಲ್ಲಿ ಸೃಷ್ಟಿಸಿದ ನಿರ್ದೇಶಕ ಅರುಣ್ ಲಾಲ್ ಇಲ್ಲಿ ತಮ್ಮದೇ ಮಾದರಿಗಳನ್ನು ಒಡೆದು, ಪುನರ್ ನಿರೂಪಿಸುತ್ತಾರೆ. ಇಲ್ಲಿನ ಎಲ್ಲಾ ಕಥೆಗಳನ್ನು ಆಡಳಿತ ವಿರೋಧಿ ಕನ್ನಡಕವನ್ನಿಟ್ಟು ಆರಿಸಿ, ಶೋಧಿಸಿ, ಮಥಿಸಿ, ಮರು ರಚಿಸಲಾಗಿದೆ. ಈ ನೆಲೆಯಲ್ಲಿ ನಿಂತು ನೋಡಿದರೆ ಇಲ್ಲಿರುವ ಕಥೆಗಳೆಲ್ಲವೂ ಸ್ವತಂತ್ರ ಕಥೆಗಳಾಗುತ್ತವೆ. ಆದರೆ ಪ್ರೇಕ್ಷಕ ವರ್ಗದ ಸ್ವಲ್ಪ ಮಟ್ಟಿನ ಆಡಳಿತ ವಿರೋಧಿ ನಿಲುವನ್ನು ನಾಟಕ ಕಡ್ಡಾಯವಾಗಿ ಬಯಸುತ್ತದೆ.
ಶ್ರೇಷ್ಠತೆಯ ವ್ಯಸನ
ಪ್ರತಿಯೊಂದು ಜೀವಿಯೂ ಅನನ್ಯ. ಅದಕ್ಕೆ ಅದರದ್ದೇ ಆದ ಆಯ್ಕೆಯ ಹಕ್ಕಿದೆ ಬದುಕಿನ ಸಂಗಾತಿಯನ್ನು ಆರಿಸಿಕೊಳ್ಳುವಲ್ಲಿಯೂ ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತಾ ಆರಂಭವಾದ ನಾಟಕ, ಪ್ರತಿಯೊಂದು ವೃತ್ತಿಯೂ ಶ್ರೇಷ್ಠ, ರಂಗಭೂಮಿಯ ಕಾಯಕವೂ ಅಷ್ಟೇ ಘನತೆಯ ಬದುಕಿನದ್ದು ಎಂದು ಸಾರುತ್ತದೆ. ಬದುಕಿನ ಪ್ರತೀ ಆಯ್ಕೆಯೂ ಶ್ರೇಷ್ಠವೇ ಆಗಿರುವಾಗ ನಮ್ಮ ಸುತ್ತಲಿನ ಕಣ್ಣೋಟಗಳು ವ್ಯಕ್ತಿಯ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಶ್ರೇಷ್ಠತೆಯನ್ನು ಹುಡುಕುತ್ತಿವೆ ಎಂಬುದನ್ನು ಸಾರುತ್ತದೆ.
ಸಿಂಹ-ನರಿ ಗೆಳೆತನ
ವರ್ಗ ಸಂಘರ್ಷವನ್ನು ತೆರೆದಿಡುವ ಕಥೆಯಿದು. ಮೇಲುವರ್ಗದ ಪ್ರತಿನಿಧಿಯಾದ ಸಿಂಹ ಮತ್ತು ಕೆಳವರ್ಗದ ನರಿ ಇವೆರಡರ ಗೆಳೆತನ ಮತ್ತು ಅದರ ಆಚೆಗಿನ ಭಿನ್ನತೆಯಲ್ಲಿ ನ್ಯಾಯವೆನ್ನುವುದು ಅಂತಿಮವಾಗಿ ಅದು ಉಳ್ಳವರ ಪರವಾಗಿಯೇ ಇರುತ್ತದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಸ್ವಾತಂತ್ರ್ಯದ ಹಕ್ಕನ್ನು ಪ್ರತಿಪಾದಿಸಿದ ಕಟ್ಟಕಡೆಯ ಮನುಷ್ಯನನ್ನು ಶಿಲುಬೆಗೆ ಏರಿಸಿದ ಉದಾಹರಣೆಗಳು ಕ್ರಿಸ್ತನಿಂದ ವೇಮುಲಾವರೆಗೆ ಚರಿತ್ರೆಯ ಪುಟಗಳಲ್ಲಿ ಇನ್ನೂ ಹಸಿಯಾಗಿವೆ. ಸಿಂಹ, ನರಿಗಳ ಜಗಳದಲ್ಲಿ ಇದು ಮರು ನಿರೂಪಿತವಾಗುತ್ತದೆ.
ನೇಕಾರನ ಕಥೆ
ಹೆಣ್ಣುಮಕ್ಕಳೆಂದರೆ ಆಷಾಡಭೂತಿಗಳು; ಹೆಣ್ಣುಬುದ್ಧಿ ಹೀನಬುದ್ಧಿ ಎಂಬ ಮನುಸ್ಮತಿಯಲ್ಲಿ ಉಲ್ಲೇಖಿತವಾದ ತಲೆತಲಾಂತರದ ಒಂದು ಅವಹೇಳನವನ್ನು ಇಂದಿಗೂ ಹೆಣ್ಣಿನ ಮೇಲೆ ಹೊರಿಸಿರುವ ವ್ಯವಸ್ಥೆಯಲ್ಲಿ ನೇಕಾರನ ಸಾವಿಗೆ ಅವನ ಹೆಂಡತಿಯೇ ಕಾರಣ ಎಂಬ ಅಪವಾದವನ್ನು ಹೊರಿಸಲಾಗುತ್ತದೆ. ನ್ಯಾಯಾಂಗ ವ್ಯವಸ್ಥೆಯ ಶಿಥಿಲೀಕರಣ ಮತ್ತು ದೃಶ್ಯ ಮಾಧ್ಯಮಗಳ ನೈತಿಕ ಅಧಃಪತನವನ್ನು ಸಶಕ್ತವಾಗಿಯೇ ರಂಗದ ಮೇಲೆ ತರಲಾಗಿದೆ. ದೃಶ್ಯ ಮಾಧ್ಯಮಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನೇಕಾರನ ಸಾವಿಗೆ ಆತನ ಪತ್ನಿಯೇ ಕಾರಣ ಎಂದು ನ್ಯಾಯ ತೀರ್ಮಾನವನ್ನೇ ನೀಡುವುದು ಇಡೀ ವ್ಯವಸ್ಥೆಗೆ ಕನ್ನಡಿಯಂತಿದೆ.
ಸಿಂಹ ಮತ್ತು ಪಂಡಿತರು
ಇಡೀ ನಾಟಕದಲ್ಲಿ ಸರ್ವಾಧಿಕಾರತ್ವವನ್ನು ನೇರವಾಗಿ ಟಾರ್ಗೆಟ್ ಮಾಡಿದ ಕಥೆ ಸಿಂಹಕ್ಕೆ ಜೀವ ಬರಿಸುವ ಕಥೆ. ಅಸ್ಥಿಪಂಜರದಿಂದ ಜೀವ ಪಡೆದ ಸಿಂಹ ಎದ್ದು ನಿಲ್ಲುವುದು ಸರ್ವಾಧಿಕಾರದ ಪ್ರತೀಕವಾದ ಹಿಟ್ಲರ್ ರೂಪದಲ್ಲಿ. ಆದರೆ ಈ ರೂಪದಲ್ಲಿ ಹಿಟ್ಲರ್ ಮಾತ್ರ ಕಾಣದೆ ಭಾರತದ ವರ್ತಮಾನವೂ ಅನಾವರಣಗೊಳ್ಳುತ್ತದೆ. ಫ್ರೀಜಿಂಗ್ ಎಲಿಮಿನೇಶನ್ ರಂಗ ಆಟದ ಮೂಲಕ ಅಧಿಕಾರಕ್ಕೇರಿಸಿದವರನ್ನೇ ಒಬ್ಬೊಬ್ಬರನ್ನಾಗಿ ಕೊಲ್ಲುವ, ಒಬ್ಬರು ಇನ್ನೊಬ್ಬರನ್ನು ಕೊಲ್ಲುವ ಮತ್ತು ಅಧಿಕಾರಕ್ಕೆ ಏರಿಸಿದ್ದಕ್ಕಾಗಿ ತನ್ನನ್ನು ತಾನೇ ಕೊಂದುಕೊಳ್ಳುವ ಸ್ಥಿತಿಗೆ ನಾಗರಿಕರನ್ನು ತಳ್ಳುವ ಆಡಳಿತಶಾಹಿ ವ್ಯವಸ್ಥೆಯ ಕ್ರೌರ್ಯದ ಪರಾಕಾಷ್ಠೆ, ಯುದ್ಧ ಬಯಸದವರಿಗೆ ಅಸ್ತಿತ್ವವಿಲ್ಲ ಎಂಬ ನಿರಂಕುಶವಾದವನ್ನು ಹೇರುತ್ತದೆ. ಒಂದು ಕೊಲೆ ಮಾಡಿದವ ಕಟುಕ, ನೂರು ಜನರನ್ನು ಕೊಂದವ ನಾಯಕ ಎನ್ನುವ ಮೂಲಕ ಜಗತ್ತಿನಲ್ಲಿ ನಡೆದ ನರಮೇಧಗಳು ಮತ್ತು ಅದರಿಂದಾಗಿ ರಾಜಕೀಯ ಅಸ್ತಿತ್ವವನ್ನು ಪಡೆದ ನಾಯಕರ ಚರಿತ್ರೆ ನೋಡುಗರ ಮನಸಲ್ಲಿ ಮಿಂಚಂತೆ ಒಮ್ಮೆಗೆ ಆವರಿಸಿ ಬಿಡುತ್ತದೆ.
ಡೋಂಟ್ ಕ್ರಾಸ್ ದಿ ಬಾರ್ಡರ್
ನ್ಯಾಯಾಧೀಶ ಬೆಕ್ಕಿನ ಕಥೆಯಲ್ಲಿ ಹಕ್ಕಿ ಮತ್ತು ಮೊಲಗಳ ನಡುವೆ ಮನೆಗಾಗಿ ನಡೆಯುವ ಜಗಳದಲ್ಲಿ ನ್ಯಾಯಾಧೀಶನಾಗುವ ಬೆಕ್ಕು ಮನೆಯನ್ನೇ ತನ್ನದಾಗಿಸಿಕೊಳ್ಳುತ್ತದೆ. ಇಲ್ಲಿ ನೇರವಾಗಿ ಸಾಂಸ್ಕೃತಿಕ ರಾಜಕಾರಣಕ್ಕಿಳಿದ ನಾಟಕ ನಮ್ಮ ಮನೆ, ನಮ್ಮ ನೆಲ, ನಮ್ಮ ಒಲೆ, ನಮ್ಮ ರೊಟ್ಟಿ ಎಂದು ಸಾಬೀತು ಪಡಿಸುವು ದಾದರೂ ಹೇಗೆ? ಒಂದು ನೆಲ, ಒಂದು ದೇಶ ಅಲ್ಲಿ ಜನಿಸಿದವರಿಗೆ ಮಾತ್ರ ಸೀಮಿತವಾಗಬಾರದು ಎಂಬ ವ್ಯಾಖ್ಯಾನದ ಮೂಲಕ ವಿಶೇಷ ತೀವ್ರ ಪರಿಷ್ಕರಣೆಯ ಸದ್ಯದ ಸರಕಾರದ ದಮನಕಾರಿ ನೀತಿಯನ್ನು ಪ್ರಶ್ನಿಸುತ್ತದೆ.
ಬಕನೆಂಬ ಪೂಜಾರಿ
ನಾಟಕದ ಅಜೆಂಡಾವನ್ನು ಪ್ರಾಪಗಾಂಡಾವಾಗಿಸಿ ನೇರವಾಗಿ ಎತ್ತಿಕೊಂಡ ಕಥೆ ‘ಎರಡು ಕುರಿಗಳ ನಡುವೆ ಸಿಕ್ಕಿದ ತೋಳ’. ಸೋಲು ಗೆಲುವಿನ ಹಂಗಿಲ್ಲದೆ ಇದ್ದ ಎರಡು ಟಗರುಗಳ ನಡುವೆ ತೋಳ ನಿಂತು, ಸ್ಪರ್ಧೆ ಏರ್ಪಡಿಸಿ, ಎರಡೂ ಕುರಿಗಳು ಹೊಡಕೊಂಡು ಸಾಯುವ ಹಾಗೆ ಮಾಡುತ್ತದೆ. ಕುರಿಗಳನ್ನು ಹಿಂದೂ ಮತ್ತು ಮುಸ್ಲಿಮ್ ಪಾತ್ರಗಳಾಗಿಸಿ ಇಡೀ ಕಥೆಯನ್ನು ತಿರುಚಲಾಗಿದೆ. ಕಥೆ ತಿರುಚುವುದರ ಮೂಲಕ, ಭಾರತದ ಈಗಿನ ಸರಕಾರ ಜನರ ಭ್ರಾತೃತ್ವವನ್ನು ವಿಭಜಿಸಿ ಜನರನ್ನು ಕುರಿಗಳನ್ನಾಗಿಸುತ್ತಿದೆ ಎಂಬ ಗಂಭೀರ ಆಪಾದನೆಯನ್ನು ಮಾಡುತ್ತದೆ. ಈ ಕಥೆಯ ಅಂತ್ಯದಲ್ಲಿ ಪ್ರಾಜೆಕ್ಟರ್ನಲ್ಲಿ ಕಾಣುವ ತಂತಿಯ ಗಡಿಬೇಲಿ ಜನರನ್ನು ಕುರಿಗಳಾಗಿಸುವಲ್ಲಿ ಸೈನ್ಯವನ್ನೂ ಭಾವುಕವಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸುತ್ತದೆ.
ಕುರಿ ಮತ್ತು ಮೂವರು ಕಳ್ಳರು
ಸತ್ಯವನ್ನು ಸುಳ್ಳಾಗಿಸಿದ, ಸುಳ್ಳನ್ನೇ ಸತ್ಯವಾಗಿಸಿದ ವರ್ತಮಾನದ ಭಾರತವಿದು. ಇದೇ ಎಳೆಯನ್ನು ಆಯ್ದು ದೃಶ್ಯರೂಪ ಪಡೆದ ಕಥೆಯಿದು. ಕುರಿಯನ್ನು ನಾಯಿ ಎಂದು ಸಾಕಿದ ಮಾಲಕನೇ ನಂಬುವ ಸ್ಥಿತಿಗೆ ತರುವ ವ್ಯಂಗ್ಯ, ವರ್ತಮಾನ ಭಾರತದ ಕಗ್ಗತ್ತಲ ಕಾಲದ ಸಶಕ್ತವಾದ ಅನಾವರಣವಾಗಿದೆ. ಕವಾಯತು ನಡೆಸಿ ಸಂಘ ಕಟ್ಟಿದವರು ಕಳ್ಳರು. ಈ ಕಳ್ಳರು ಸುಳ್ಳಿನ ಬುನಾದಿಯಲ್ಲೇ ವರ್ತಮಾನ ಭಾರತದ ಆಡಳಿತಶಾಹಿಯನ್ನು ನಿಯಂತ್ರಿಸುತಿದ್ದಾರೆ ಎಂಬುದನ್ನು ತನ್ನ ವಿನ್ಯಾಸದ ಮೂಲಕ ಕಟ್ಟಿದ ಈ ಕಥೆಯ ವಾಚಿಕ ನಿರೂಪಣೆಯಲ್ಲಿ ದಿ ಗ್ರೇಟ್ ಡಿಕ್ಟೇಟರ್ ಸಿನೆಮಾದ ಚಾಪ್ಲಿನ್ ಭಾಷಣದ ತುಣುಕುಗಳು ಸರ್ವಾಧಿಕಾರ ರಹಿತ ಶಾಂತಿಯ ನಾಡನ್ನು ಬಯಸುತ್ತದೆ.
ಕೊಳ ಮತ್ತು ಸಿಂಹ
ಕೊಳದಲ್ಲಿ ತನ್ನದೇ ಮುಖವನ್ನು ನೋಡಿ ಬಲಿಯಾದ ಸಿಂಹದ ಕಥೆಯನ್ನು ಬೃಹತ್ ಗಾತ್ರದ ಕನ್ನಡಿಯನ್ನಿಟ್ಟುಕೊಂಡು ಕಟ್ಟಿದ ಕಥೆ ಸರ್ವಾಧಿಕಾರಿಗಳ ಅಂತ್ಯ ಅವರ ಅತಿ ಸರ್ವಾಧಿಕಾರಣದಿಂದಲೇ ಆಗುತ್ತದೆ ಎಂದು ಸಾರುವುದರ ಮೂಲಕ ಭಾರತದ ಪ್ರಸಕ್ತ ರಾಜಕಾರಣವೂ ಅದೇ ಹಾದಿಯಲ್ಲಿ ಸಾಗುತ್ತಿರುವುದನ್ನು ಕಾಣಿಸುತ್ತದೆ. ಅದರೊಂದಿಗೆ ನಾಟಕಕ್ಕೆ ತಾತ್ಕಾಲಿಕವಾದ ಆಶಾಭರಿತ ಅಂತ್ಯವನ್ನು ಒದಗಿಸಲು ಪ್ರಯತ್ನಿಸುತ್ತದೆ.
ಕಾಗೆ ಮತ್ತು ಗೂಬೆಗಳ ಯುದ್ಧ
ಕಾಗೆಗಳ ಹತ್ಯೆಗೆ ತನ್ನದೇ ಆದ ಕಾರಣಗಳನ್ನು ನೀಡಿ ಅವುಗಳ ವಂಶ ನಿರ್ವಂಶಕ್ಕೆ ಯುದ್ಧ ಸಾರುವ ಗೂಬೆ ಒಂದು ಕಡೆಯಾದರೆ, ಅನಾರೋಗ್ಯದ ಕಾರಣ ನೀಡಿ, ಯುದ್ಧದಿಂದ ಹಿಂದೆ ಸರಿದು, ಸದ್ದಿಲ್ಲದೆ ತಂತ್ರಗಳ ಮೂಲಕ ಗೂಬೆಗಳ ಇಡೀ ಬೆಟ್ಟಕ್ಕೆ ಬೆಂಕಿ ಇಡುವ ಕಾಗೆ, ಚರಿತ್ರೆಯಲ್ಲಿ ಯುದ್ಧದ ಮೊದಲ ತಂತ್ರಗಾರಿಕೆಗೆ ಸಾಕ್ಷಿಯಾಗುತ್ತದೆ ಮತ್ತು ಅದರೊಂದಿಗೆ ಸಾಗಿ ಬರುವ ಹೆಲಿಕಾಪ್ಟರ್ಗಳು ಯುದ್ಧ ಮುಗಿದಿಲ್ಲ; ಮುಗಿಯುವುದೂ ಇಲ್ಲ ಎಂಬ ಆತಂಕವನ್ನು ನಮ್ಮ ಮುಂದಿಡುತ್ತದೆ. ಅಂತಿಮವಾಗಿ ಅರ್ಜುನನಿಗೆ ಕಂಡ ಹಕ್ಕಿಯ ಕಣ್ಣಿನಲ್ಲಿ ಇಣುಕಿ ನೋಡುವ ಮೂಲಕ ಹಕ್ಕಿಯ ಕಣ್ಣಲ್ಲಿ ಬದುಕುವ ಹಕ್ಕನ್ನು ಕಾಣಿಸುತ್ತದೆ. ಇದು ನಾಟಕದ ತಾರ್ಕಿಕ ಆಶಯವೂ ಆಗುತ್ತದೆ.
ಪಂಚತಂತ್ರದ ಸರಳವಾದ ಕಥೆಗಳನ್ನು ಆರಿಸಿಕೊಂಡಿ ರುವ ಈ ನಾಟಕ ರಂಗಪ್ರದರ್ಶನದಲ್ಲಿ ತನ್ನ ಬಿಗಿತ್ವ ಮತ್ತು ಸಂಕೀರ್ಣತೆಯನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಇಲ್ಲಿ ಪಂಚತಂತ್ರದ ಕಥೆಗಳನ್ನು ಒಂದು ಅಜೆಂಡಾವನ್ನು ಮರು ರೂಪಿಸಲಿಕ್ಕಾಗಿಯೇ ಎತ್ತಿಕೊಂಡಿರುವುದರಿಂದ, ಹಲವು ವಿನ್ಯಾಸಗಳು ಮತ್ತು ಸಂಭಾಷಣೆಗಳು ನಾಟಕದ ವೇಗಕ್ಕೆ ಒಂದು ನೋಟಕ್ಕೆ ಪ್ರೇಕ್ಷಕನಿಗೆ ಪೂರ್ಣವಾಗಿ ತಲುಪದಷ್ಟು ಸಂಕೀರ್ಣತೆಯನ್ನು ಹೊಂದಿವೆ. ಹಾಗಾಗಿ ಎರಡೂ ದಡದ ಪ್ರೇಕ್ಷಕರಿಗೂ ಒಂದು ಹಂತಕ್ಕೆ ಇಲ್ಲಿನ ಹಲವು ಕಥೆಗಳ ದೃಶ್ಯರೂಪ ಯಾಂತ್ರಿಕ ಸರ್ಕಸ್ನೊಂದಿಗೆ ರಂಜನೆ ಮಾತ್ರ ಆಗುವ ಸಾಧ್ಯತೆ ತುಸು ಹೆಚ್ಚಾಗಿಯೇ ಇದೆ.
ಇಡೀ ನಾಟಕದ ಅಜೆಂಡಾ ಬಹಳ ಸ್ಪಷ್ಟವಾಗಿದೆ ಮತ್ತು ನೇರವಾಗಿದೆ. ವರ್ತಮಾನ ಭಾರತದ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಯ ತೀವ್ರ ಅಸಹನೆಗೆ ಸಕಾರಣವೂ; ಸಕಾಲಿಕವೂ ಹೌದು. ಆದರೆ ನಾಟಕದ ಸಮಸ್ಯೆ ಇರುವುದು ಅದರ ಸಾರ್ವತ್ರೀಕರಣದಲ್ಲಿ. ಈಗಾಗಲೇ ಸಿನೆಮಾ ಕ್ಷೇತ್ರ ಪ್ರಾಪಗಾಂಡಾ ಸಿನೆಮಾಗಳಿಂದಾಗಿ ಎರಡು ದಡಗಳಾಗಿ ಹಂಚಿ ಹೋಗಿದೆ, ರಂಗಭೂಮಿಯಲ್ಲೂ ಅಂತಹ ಪ್ರಾಪಗಾಂಡಾ ನಾಟಕಗಳಿಂದ ಆಗಿರುವ ಹಾನಿ ನಮ್ಮ ಕಣ್ಣ ಮುಂದಿರುವಾಗ, ರಂಗಭೂಮಿ ಮತ್ತೆ ಮತ್ತೆ ಇಂತಹುದೇ ನರೇಟಿವ್ಗಳ ಕಡೆ ಮುಖ ಮಾಡುವುದು, ಅದು ಸಾಂಸ್ಕೃತಿಕ ಪ್ರತಿರೋಧವನ್ನು ಮೀರಿ ಸಾಂಸ್ಕೃತಿಕ ರಾಜಕಾರಣದ ಸ್ವರೂಪವನ್ನು ಪಡೆಯುವ ಅಪಾಯಗಳೇ ಹೆಚ್ಚು ಇರುತ್ತದೆ.
ರಂಗಭೂಮಿ ತನ್ನ ಸುತ್ತಲಿನ ಅಥವಾ ತನ್ನ ದೇಶದ ಅಥವಾ ಜಾಗತಿಕ ವಿದ್ಯಮಾನಗಳಿಗೆ ಸ್ಪಂದಿಸುವ ಬಂಡುಕೋರತನವನ್ನು ತನ್ನೊಳಗೇ ಹೊಂದಿರುತ್ತದೆ. ಆದರೆ ಆ ಬಂಡುಕೋರತನವೂ ‘ಸಾಂಸ್ಕೃತಿಕ ಪ್ರತಿರೋಧ’ದ ರೂಪದಲ್ಲಿ ವ್ಯಕ್ತಗೊಳ್ಳಬೇಕೇ ಹೊರತು ಸಾಂಸ್ಕೃತಿಕ ರಾಜಕಾರಣದ ಸ್ವರೂಪವನ್ನು ಪಡೆಯಬಾರದು. ಒಂದುವೇಳೆ ಸಾಂಸ್ಕೃತಿಕ ರಾಜಕಾರಣದ ಸ್ವರೂಪವನ್ನು ಪಡೆದುಕೊಂಡರೆ ಒಂದು ತುದಿಯ ಕೊನೆಗೆ ಮತ್ತೊಂದು ತುದಿ ಹುಟ್ಟಿಕೊಳ್ಳಲು ದಾರಿಯಾ ಗುತ್ತದೆ ಎಂಬುದನ್ನು ಅರ್ಥೈಸಿಕೊಳ್ಳುವ ಅಗತ್ಯತೆ ಇದೆ.






