ಶಾಲಂ ಸೋಲಿಗೆ ರವಿ ಬೋಸರಾಜು ಕಾರಣ : ಕಾಂಗ್ರೆಸ್ ಮುಖಂಡ ಬಷೀರುದ್ದೀನ್ ಆರೋಪ

ರಾಯಚೂರು, ಎ.3: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊಹಮ್ಮದ್ ಶಾಲಂ ಅವರ ಸೋಲಿಗೆ ರವಿ ಬೋಸರಾಜು ಕಾರಣರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಜಿಪಂ ಮಾಜಿ ಸದಸ್ಯ ಬಷೀರುದ್ದೀನ್ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊಹಮ್ಮದ್ ಶಾಲಂ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹೊತ್ತ ರವಿ ಬೋಸರಾಜು ತೆರೆಮರೆಯಲ್ಲಿ ಮಸಲತ್ತು ನಡೆಸಿದ್ದಾರೆ. ಅವರನ್ನು ಸೋಲಿಸಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿಸದ ಹಾಗೆ ಹುನ್ನಾರ ನಡೆಸಿದ್ದಾರೆ ಎಂದು ಬಷೀರುದ್ದೀನ್ ಇತ್ತೀಚೆಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಮಣೆ ಹಾಕಿಲ್ಲ ಎಂಬ ಆರೋಪದ ನಡುವೆ ಬಷೀರುದ್ದೀನ್ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಈ ನಡುವೆ ಯುವ ಮುಖಂಡ ರವಿ ಭೋಸರಾಜ್ ವಿರುದ್ಧ ಬಷೀರುದ್ದೀನ್ ಸಮರ ಸಾರಿದ್ದು, ಬಣಬಡಿದಾಟಕ್ಕೆ ಮತ್ತೊಮ್ಮೆ ವೇದಿಕೆ ಸಜ್ಜುಗೊಳ್ಳುವ ಸೂಚನೆ ಕಾಣುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ.
ಬಷೀರುದ್ದೀನ್ ಹೇಳಿಕೆಗೆ ಬ್ರೇಕ್ ಹಾಕಲು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮೊಹಮ್ಮದ್ ಶಾಲಂ, ಕಾಂಗ್ರೆಸ್ ಮುಖಂಡ ನರಸಿಂಹಲು ಮಾಡಗಿರಿ ಅವರು ಮುಂದಾಗಿದ್ದು, ಬಷೀರುದ್ದೀನ್ ಹೇಳಿಕೆಯನ್ನು ಖಂಡಿಸಿದ್ದಾರೆ.
ಇಬ್ಬರು ಅಲ್ಪಸಂಖ್ಯಾತರ ನಾಯಕರು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದು, ರವಿ ಬೋಸರಾಜ್ ವಿರುದ್ಧ ಬಷೀರುದ್ದೀನ್ ಕೆಂಡ ಕಾರುತ್ತಿದ್ದರೆ, ಇತ್ತ ಶಾಲಂ, ಬೋಸರಾಜ್ ಪರ ಬ್ಯಾಟಿಂಗ್ ಮಾಡಿ, ಅವರ ಕಾರ್ಯಕ್ಷಮತೆಯ ಬಗ್ಗೆ ಸಮರ್ಥನೆಗಿಳಿದಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.
ಸಚಿವ ಎನ್.ಎಸ್.ಬೊಸರಾಜು ಹಾಗೂ ಅವರ ಪುತ್ರ ರವಿ ಬೋಸರಾಜು ಅವರು ಅಲ್ಪಸಂಖ್ಯಾತರ ವಿರೋಧಿಯಲ್ಲ, ಎಲ್ಲಾ ಸಮುದಾಯಗಳೊಂದಿಗೆ ಉತ್ತಮ ಬಾಂಧ್ಯವ ಹೊಂದಿದ್ದಾರೆ. ಅನೇಕ ಅಲ್ಪಸಂಖ್ಯಾತರನ್ನೂ ರಾಜಕೀಯವಾಗಿ ಬೆಳೆಸಿದ್ದಾರೆ ಎಂದು ಪಾಲಿಕೆಯ ಮಾಜಿ ಮೇಯರ್ ಜೆ.ಸಾಜೀದ್ ಸಮೀರ್ ಸಮರ್ಥಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ರವಿ ಬೋಸರಾಜು ಪರ ‘ವಿ ಸ್ಟ್ಯಾಂಡ್‌ವಿತ್ ರವಿ ಬೋಸರಾಜು’ ಎಂಬ ಪೋಸ್ಟರ್ ಹರಿದಾಡುತ್ತಿದೆ. ಇತ್ತ ಬಷೀರುದ್ದೀನ್ ಅವರ ಅಭಿಮಾನಿಗಳು ‘ವಿ ಸ್ಟ್ಯಾಂಡ್ ಬಷೀರುದ್ದೀನ್’ ಎಂದು ಪೋಸ್ಟರ್ ಶೇರ್ ಮಾಡುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಮುಗಿದು ಮೂರು ವರ್ಷ ಸಮೀಪಿಸುತ್ತಿದ್ದು, ಬಷೀರುದ್ದೀನ್ ಈಗ ಯಾಕೆ ಮೊಹಮ್ಮದ್ ಶಾಲಂ ಅವರ ಸೋಲಿನ ಕುರಿತು ಪರಮಾರ್ಶೆ ಮಾಡಿದ್ದಾರೆ ಎಂದು ಅನೇಕರಲ್ಲಿ ಪ್ರಶ್ನೆ ಕಾಡುತ್ತಿದೆ. ಇಬ್ಬರು ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯ ಏನೇ ಇದ್ದರೂ ಸಾಮಾನ್ಯ ಕಾರ್ಯಕರ್ತರಿಗೆ ಗೊಂದಲ ಉಂಟಾಗಿದ್ದು ಪಕ್ಷದ ಹೈಕಮಾಂಡ್ ಹಾಗೂ ಹಿರಿಯ ಮುಖಂಡರು ಹೇಗೆ ಅಸಮಾಧಾನಶಮನ ಮಾಡುತ್ತಾರೆ ಎನ್ನುವುದು ಕಾದು ನೋಡಬೇಕಿದೆ.
ರವಿ ಬೋಸರಾಜ್ ಅವರಿಂದಲೇ ರಾಯಚೂರು ನಗರದಲ್ಲಿ ಮುಸ್ಲಿಮ್ ಅಭ್ಯರ್ಥಿ ಗೆಲುವು ಸಾಧಿಸಲು ಸಾಧ್ಯವಾಗುತ್ತಿಲ್ಲ. ಮುಸ್ಲಿಮರಲ್ಲೇ ಗೊಂದಲ ಸೃಷ್ಟಿಸಿ, ಕೊನೆಯಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟು ಅವರನ್ನು ಸೋಲಿಸುವ ಕೆಲಸ ರವಿ ಬೋಸರಾಜ್ ಮಾಡುತ್ತಿದ್ದಾರೆ.
-ಬಷೀರುದ್ದೀನ್, ಕಾಂಗ್ರೆಸ್ ಮುಖಂಡ
ಪಕ್ಷದವರೇ ಕುತ್ತಿಗೆ ಕೊಯ್ದರು, ಹೆಸರೇಳಲು ಸಾಕ್ಷಿ ಇಲ್ಲ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವರು ಪಕ್ಷದ್ರೋಹ ಮಾಡಿ, ನನ್ನ ಕುತ್ತಿಗೆ ಕೊಯ್ದರು. ಅವರಹೆಸರೇಳಲು ನನ್ನ ಬಳಿ ಸಾಕ್ಷಿ ಇಲ್ಲ. ಇದು ಬಷೀರ್ ಅವರಿಗೂ ತಿಳಿದಿದೆ.ಮುಸ್ಲಿಮ್ ಮತಗಳು ಹರಿದು ಹಂಚಿಹೋಗಬಾರದೆಂದು ನಾನು ಹೆಚ್ಚು ಮುಸ್ಲಿಂ ಸಮಾಜದ ಬಡಾವಣೆಗಳಲ್ಲಿ ಪ್ರಚಾರ ನಡೆಸಿದೆ. ಬೇರೆ ಕಡೆ ರವಿ ಬೋಸರಾಜ್ ಪ್ರಚಾರ ನಡೆಸಿದ್ದರು. ನಗರ ವ್ಯಾಪ್ತಿಯ ಎಲ್ಲಾ ಕಡೆ ನನಗೆ ಹೆಚ್ಚಿನ ಮತಗಳು ಬಂದಿದ್ದು, ಅಲ್ಪಮತಗಳಿಂದ ಸೋತಿದ್ದೇನೆ.
-ಶಾಲಂ, ಪರಾಜಿತ ಅಭ್ಯರ್ಥಿ (ಸುದ್ದಿಗೋಷ್ಠಿಯ ಹೇಳಿಕೆ)







