ನಿವೃತ್ತ ಕಾರ್ಗಿಲ್ ಯೋಧನ ಕುಟುಂಬಕ್ಕೆ ಪೌರತ್ವ ಸಾಬೀತುಪಡಿಸಲು ತಾಕೀತು!

PC: x.com/newslaundry
ಪುಣೆ: ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧರೊಬ್ಬರ ಮನೆಗೆ ಶನಿವಾರ ರಾತ್ರಿ 30-40 ಜನರ ಗುಂಪು ಪೊಲೀಸರ ಜತೆ ಆಗಮಿಸಿ ಕುಟುಂಬ ಸದಸ್ಯರ ಭಾರತೀಯ ಪೌರತ್ವ ಸಾಬೀತುಪಡಿಸಲು ತಾಕೀತು ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಕೀಮುದ್ದೀನ್ ಶೇಖ್ 1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ನಿವೃತ್ತರಾಗಿದ್ದರು. ಪುಣೆಯ ಪೂರ್ವಭಾಗದ ಚಂದನ್ ನಗರದಲ್ಲಿರುವ ಮನೆಗೆ ಶನಿವಾರ ರಾತ್ರಿ ಮುತ್ತಿಗೆ ಹಾಕಿದ ಗುಂಪು ಪೌರತ್ವ ಸಾಬೀತುಪಡಿಸಲು ತಾಕೀತು ಮಾಡಿತು ಎಂದು ಮಂಗಳವಾರ ದೂರಿದ್ದಾರೆ. ಜತೆಗೆ ಕುಟುಂಬದ ಎಲ್ಲ ಪುರುಷರನ್ನು ಠಾಣೆಗೆ ಕರೆದೊಯ್ಯಲಾಯಿತು ಎಂದು ಹೇಳಿದ್ದಾರೆ.
"ನಸುಕಿನ 3 ಗಂಟೆವರೆಗೆ ನಮ್ಮನ್ನು ಠಾಣೆಯಲ್ಲಿ ಕಾಯಿಸಿ, ಭಾರತೀಯ ಪೌರತ್ವ ಸಾಬೀತುಪಡಿಸಲು ವಿಫಲವಾದಲ್ಲಿ, ನಿಮ್ಮನ್ನು ಬಾಂಗ್ಲಾದೇಶಿ ಅಥವಾ ರೋಹಿಂಗ್ಯ ಎಂದು ಘೋಷಿಸಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ" ಎಂದು ಕುಟುಂಬ ಸದಸ್ಯರು ಆಪಾದಿಸಿದ್ದಾರೆ.
ಶಂಕಿತ ಅಕ್ರಮ ವಲಸಿಗರ ಬಗ್ಗೆ ಲಭ್ಯವಾದ ಮಾಹಿತಿ ಆಧಾರದಲ್ಲಿ ಪೊಲೀಸರು ಕಾರ್ಯಚಣೆ ನಡೆಸಿದ್ದಾಗಿ ಡಿಸಿಪಿ ಸೋಮಯ್ ಮುಂಢೆ ಹೇಳಿದ್ದಾರೆ. "ನಮ್ಮ ತಂಡ ದಾಖಲೆಗಳನ್ನು ಕೇಳಿದೆ. ಅವರು ಭಾರತೀಯರು ಎಂದು ದೃಢಪಟ್ಟ ಬಳಿಕ ಅವರನ್ನು ಠಾಣೆಯಿಂದ ಕಳುಹಿಸಲಾಗಿದೆ. ಪೊಲೀಸ್ ತಂಡದ ಜತೆ ಬೇರೆ ಯಾರೂ ಇರಲಿಲ್ಲ. ನಮ್ಮಲ್ಲಿ ವಿಡಿಯೊ ದೃಶ್ಯಾವಳಿಯ ತುಣುಕು ಇದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದ ಹಕೀಮುದ್ದೀನ್ (58), ಸೇನೆಯ ಎಂಜಿನಿಯರ್ ರೆಜಿಮೆಂಟ್ ನಲ್ಲಿ 1984ರಿಂದ 2000ವರೆಗೆ ಕರ್ತವ್ಯ ನಿರ್ವಹಿಸಿದ್ದರು. "ದೇಶಕ್ಕಾಗಿ ನಾನು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದೆ. ನನ್ನ ಇಡೀ ಕುಟುಂಬ ಈ ದೇಶಕ್ಕೆ ಸೇರಿದೆ. ನನ್ನ ಪೌರತ್ವ ಸಾಬೀತುಪಡಿಸಲು ಏಕೆ ಕೇಳಲಾಯಿತು" ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುಟುಂಬ ಮೂಲತಃ ಉತ್ತರ ಪ್ರದೇಶದ ಪ್ರತಾಪಗಢದ್ದಾಗಿದ್ದು, 1960ರಿಂದ ಪುಣೆಯಲ್ಲಿ ವಾಸವಿದೆ. ಹಕೀಮುದ್ದೀನ್ 2013ರಲ್ಲಿ ಹುಟ್ಟೂರಿಗೆ ತೆರಳಿದರೂ, ಅವರ ಸಹೋದರರು, ಅಳಿಯಂದಿರು ಮತ್ತು ಅವರ ಕುಟುಂಬದವರು ಪುಣೆಯಲ್ಲೇ ಉಳಿದಿದ್ದಾರೆ.
"ಘೋಷಣೆಗಳನ್ನು ಕೂಗುತ್ತಾ ಬಂದ ಅಪರಿಚಿತರ ಗುಂಪು ಬಾಗಿಲಿಗೆ ಒದ್ದು, ನಮ್ಮ ದಾಖಲೆಗಳನ್ನು ನೀಡುವಂತೆ ಆಗ್ರಹಿಸಿತು. ಸಮವಸ್ತ್ರದಲ್ಲಿ ಇಲ್ಲದ ಅಧಿಕಾರಿಯೊಬ್ಬರು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ರಸ್ತೆಯಲ್ಲಿ ಪೊಲೀಸ್ ವ್ಯಾನ್ ಕಾಯುತ್ತಿತ್ತು" ಎಂದು ಹಕೀಮುದ್ದಿನ್ ಅವರ ಸಹೋದರ ಇರ್ಷಾದ್ ಶೇಖ್ ಹೇಳಿದ್ದಾರೆ.
ಈ ಕುಟುಂಬದಲ್ಲಿ ಇತರ ಇಬ್ಬರು ನಿವೃತ್ತ ಯೋಧರಿದ್ದು, ಶೇಖ್ ನಯೀಮುದ್ದೀನ್ ಹಾಗೂ ಶೇಖ್ ಮೊಹ್ಮದ್ ಸಲೀಂ 1965 ಹಾಗೂ 1971ರ ಯುದ್ಧಗಳಲ್ಲಿ ಪಾಲ್ಗೊಂಡಿದ್ದರು. ಸೈನಿಕರ ಕುಟುಂಬವನ್ನು ಹೀಗೆ ಪರಿಗಣಿಸುವುದೇ ಎಂದು ಇರ್ಷಾದ್ ಪ್ರಶ್ನಿಸುತ್ತಾರೆ. ಯಾರೋ ಬಂದು ಬಾಗಿಲು ಬಡಿದಾಗಲೆಲ್ಲ ನಾವು ಭಾರತೀಯರು ಎಂದು ಸಾಬೀತುಪಡಿಸಬೇಕೇ ಎನ್ನುವುದು ಅವರ ಪ್ರಶ್ನೆ.







