ಗಾಲ್ಫ್ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇಗೆ ಕಂದಾಯ ಇಲಾಖೆ ನಿರ್ಧಾರ

PC: kga.in
ಬೆಂಗಳೂರು : ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇ ನಡೆಸಲು ಕಂದಾಯ ಇಲಾಖೆಯು ಮುಂದಾಗಿದೆ. ಹಾಗೆಯೇ ಗಾಲ್ಫ್ ಅಸೋಸಿಯೇಷನ್ ಸಂಸ್ಥೆಯ ಆದಾಯವನ್ನೂ ಸಹ ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲು ಕ್ರಮವಹಿಸಿದೆ.
ಈ ಸಂಸ್ಥೆಯ ಆಡಳಿತ ಮಂಡಳಿಗೆ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಸರಕಾರದ ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಕ ಪ್ರಕ್ರಿಯೆಗಳಿಗೆ ಮುಂದಾಗಿದ್ದ ಕಂದಾಯ ಇಲಾಖೆಯು ಇದೀಗ ಈ ಸಂಸ್ಥೆಯು ಹೊಂದಿರುವ ಜಮೀನಿನ ಸರ್ವೇ ನಡೆಸುವ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪೂರ್ವ ವಲಯದ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದೆ.
ಗಾಲ್ಫ್ ಅಸೋಸಿಯೇಷನ್ನನ ಆಡಳಿತವನ್ನು ನಿಯಂತ್ರಿಸಲು ಸಿದ್ಧತೆ ನಡೆಸಿರುವ ಸರಕಾರವು, ಇದಕ್ಕಾಗಿ ನಿಯಮಗಳಲ್ಲಿ ಬದಲಾವಣೆ ತರಲು ಹೊರಟಿರುವ ನಡುವೆಯೇ ಜಮೀನಿನ ಸರ್ವೇ ನಡೆಸಲು ಮುಂದಾಗಿರುವುದು ಮುನ್ನೆಲೆಗೆ ಬಂದಿದೆ.
ಸರಕಾರಿ ಭೂಮಿ ಮಂಜೂರಾತಿ, ಗುತ್ತಿಗೆ, ಒತ್ತುವರಿಗಳ ತೆರವುಗೊಳಿಸುವಿಕೆ ಹಾಗೂ ಅಕ್ರಮ ಹಿಡುವಳಿಗಳನ್ನು ಸಕ್ರಮಗೊಳಿಸುವ ಸಂಬಂಧ 2026ರ ಎಪ್ರಿಲ್ 7ರಂದು ನಡೆದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಕಂದಾಯ ಇಲಾಖೆಯು ನೀಡಿರುವ ವಿವರಣೆಯಲ್ಲಿ ಈ ಮಾಹಿತಿ ಇದೆ. ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿರುವ ವಿವರಣೆಯ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ಇದೇ ಸಂಸ್ಥೆಗೆ ಸಂಬಂಧಿಸಿದಂತೆ 2023ರ ಮಾರ್ಚ್ 7, 2026ರ ಫೆ.10ರಂದು ಅರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಚರ್ಚೆ ನಡೆಸಿತ್ತು.
ಗಾಲ್ಫ್ ಅಸೋಸಿಯೇಷನ್ಗೆ ನೀಡಿರುವ ಭೂಮಿಯ ಮೇಲ್ವಿಚಾರಣೆ, ಷರತ್ತುಗಳ ಅನುಸರಣೆಯಾಗಿದೆಯೇ ಇಲ್ಲವೇ, ಮೇಲ್ವಿಚಾರಣೆ ಮಾಡದ ಕಾರಣ ಆಗಿರುವ ಪರಿಣಾಮಗಳು, ಭೂಮಿಯ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಜಂಟಿ ಭೌತಿಕ ಪರಿವೀಕ್ಷಣೆ ಮಾಡುವುದು, ಗುತ್ತಿಗೆ ಬಾಡಿಗೆ ಪಾವತಿಗಾಗಿ ತಗಾದೆ ಸೃಷ್ಟಿಸದೇ ಇರುವ ವಿಷಯಗಳ ಕುರಿತು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಲ್ಲಿ ಚರ್ಚಿಸಿರುವುದು ತಿಳಿದು ಬಂದಿದೆ.
2026ರ ಎಪ್ರಿಲ್ 7ರಂದು ನಡೆದ ಸಭೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಇತ್ತೀಚಿನ ಮಾಹಿತಿಯನ್ನು ಸಭೆಗೆ ಒದಗಿಸಿರುವುದು ಗೊತ್ತಾಗಿದೆ.
ಗಾಲ್ಪ್ ಅಸೋಸಿಯೇಷನ್ ಬಳಸುತ್ತಿರುವ ಜಮೀನು, ಸರಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಕಾರಣ ಆಡಳಿತ ವಿಷಯದಲ್ಲಿಯೂ ನಿರ್ಣಯ ಕೈಗೊಳ್ಳುವ ಅಧಿಕಾರವೂ ಸರಕಾರಕ್ಕಿದೆ ಎಂದು ಪ್ರತಿಪಾದಿಸುತ್ತಿದೆ. ಈ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅಧಿಕಾರಿಗಳು ಸಮಾಲೋಚಿಸಿದ್ದರು.
ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಆಡಳಿತವನ್ನು ನಿಯಂತ್ರಿಸಲು ಹೊರಟಿರುವ ಸರಕಾರವು, ಹಲವು ಸಮರ್ಥನೀಯ ಅಂಶಗಳನ್ನು ಪಟ್ಟಿ ಮಾಡಿತ್ತು. 1980ರಲ್ಲಿ ಸರಕಾರ ಹೊರಡಿಸಿದ್ದ ಆದೇಶ, 1986ರಲ್ಲಿ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಮತ್ತು ನಿಗಮದ ನಡುವೆ ಆಗಿರುವ ಒಪ್ಪಂದವನ್ನು ಮುನ್ನೆಲೆಗೆ ತಂದಿತ್ತು. ಇದರ ಪ್ರಕಾರ ಗಾಲ್ಫ್ ಅಸೋಸಿಯೇಷನ್ನನ ಆಡಳಿತವನ್ನು ನಿಯಂತ್ರಿಸುವ ಕುರಿತು ಗೌರ್ನಿಂಗ್ ಕೌನ್ಸಿಲ್ ರಚಿಸಲು ಸರಕಾರಕ್ಕೆ ಬೇಡಿಕೆ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯು ಪ್ರಸ್ತಾವವನ್ನೂ ಸಿದ್ಧಪಡಿಸಿತ್ತು.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಮಾಲಕತ್ವಕ್ಕೆ ಒಳಪಟ್ಟಿರುವ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಸಂಸ್ಥೆಗೆ ಗುತ್ತಿಗೆ ನೀಡಿರುವ ಜಮೀನಿನ ಸರ್ವೇ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಂದಾಯ ಇಲಾಖೆಯು ನಿರ್ದೇಶನ ನೀಡಿದೆ. ಹಾಗೆಯೇ ಈ ಸಂಸ್ಥೆಯ ಆದಾಯವನ್ನು ಲೆಕ್ಕ ಪರಿಶೋಧಕರಿಂದ ಪರಿಶೀಲಿಸಿ ವರದಿ ಸಲ್ಲಿಸಲು ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳಿಗೆ 2026ರ ಫೆ.6ರಂದು ಪತ್ರವನ್ನು ಬರೆದಿದೆ. ಅಲ್ಲದೇ 2026ರ ಎಪ್ರಿಲ್ 2ರಂದೂ ಸಹ ಈ ಇಲಾಖೆಗಳಿಗೆ ನೆನಪೋಲೆಗಳನ್ನೂ ಬರೆಯಲಾಗಿದೆ ಎಂದು ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.






