ಗಾಯದಿಂದ ನಿವೃತ್ತಿಗೆ ಮುನ್ನ ವಿಶ್ವ ದಾಖಲೆ ಸೃಷ್ಟಿಸಿದ ರಿಷಭ್ ಪಂತ್

PC: x.com/CricketNDTV
ಹೊಸದಿಲ್ಲಿ: ಭಾರತದ ಯುವ ಬ್ಯಾಟ್ಸ್ಮನ್ ಸಾಯಿ ಸುದರ್ಶನ್ ಅರ್ಧಶತಕ ಗಳಿಸುವ ಮೂಲಕ ತಮಗೆ ದೊರೆತ ಮತ್ತೊಂದು ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಮತ್ತೊಂದು ಗಂಭೀರ ಗಾಯಕ್ಕೆ ತುತ್ತಾಗಿ ಕ್ರೀಸ್ನಿಂದ ನಿರ್ಗಮಿಸುವ ಮುನ್ನ ವಿಶ್ವದಾಖಲೆ ಸೃಷ್ಟಿಸಿದರು. ಹಳೆಯ ಟೆಸ್ಟ್ ಶೈಲಿಗೆ ಮೊರೆ ಹೋದ ಭಾರತ 83 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತು. ಇದು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದ ಹೈಲೈಟ್ಸ್.
ದೇಶದಿಂದ ಹೊರಗೆ 1000 ರನ್ ಗಳಿಸಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾದರು. ಈ ಹೊಸ ಮೈಲುಗಲ್ಲು ತಲುಪುವ ನಿಟ್ಟಿಯಲ್ಲಿ ಪಂತ್ ತಮ್ಮದೇ ದಾಖಲೆಯನ್ನು ಮುರಿದರು. ಈ ಮುನ್ನ ಆಸ್ಟ್ರೇಲಿಯಾದಲ್ಲಿ 879 ರನ್ ಗಳಿಸಿದ್ದು ದಾಖಲೆಯಾಗಿತ್ತು.
ಮಬ್ಬು ಬೆಳಕಿನ ನಡುವೆ ದಿನದಾಟದ ಅಂತ್ಯಕ್ಕೆ ರವೀಂದ್ರ ಜಡೇಜಾ (19) ಮತ್ತು ಶಾರ್ದೂಲ್ ಠಾಕೂರ್ (19) ವಿಕೆಟ್ ಕಾಯ್ದುಕೊಂಡರು. ಪ್ರತಿಕೂಲ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತದ ಪರ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ (98 ಎಸೆತಗಳಲ್ಲಿ 46) ಮತ್ತು ಯಶಸ್ವಿ ಜೈಸ್ವಾಲ್ (107 ಎಸೆತಗಳಲ್ಲಿ 58) ಅವರು 94 ರನ್ ಜತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿದರು. ಇದು ಈ ಸರಣಿಯಲ್ಲಿ ಮೊದಲ ವಿಕೆಟ್ ಗೆ ಗಳಿಸಿದ ಗರಿಷ್ಠ ರನ್ ಆಗಿದೆ.
ಕರುಣ್ ನಾಯರ್ ಅವರ ಸ್ಥಾನದಲ್ಲಿ ಅವಕಾಶ ಪಡೆದ ಸಾಯಿ ಸುದರ್ಶನ್ ಒತ್ತಡದ ಪರಿಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಔಟ್ ಆಗುವ ಮುನ್ನ 151 ಎಸೆತಗಳಲ್ಲಿ 61 ರನ್ ಗಳಿಸಿದರು. ಸಾಯಿ ಸುದರ್ಶನ್ ಜತೆಗೆ ಕ್ರೀಸ್ ನಲ್ಲಿದ್ದ ಪಂತ್ (48 ಎಸೆತಗಳಲ್ಲಿ 37 ರಿಟೈರ್ಡ್ ಹರ್ಟ್) ಆಟದ ಲಯ ಕಂಡುಕೊಳ್ಳುವ ಹಂತದಲ್ಲಿ ಕ್ರಿಸ್ ವೋಕ್ಸ್ ಎಸೆತವನ್ನು ರಿವರ್ಸ್ ಹೊಡೆಯುವಲ್ಲಿ ಎಡವಿ ಗಾಯಗೊಂಡರು. ಬಲ ಪಾದಕ್ಕೆ ತೀವ್ರ ಗಾಯವಾಗಿರುವ ಪಂತ್ ಅವರನ್ನು ಮೈದಾನದಿಂದ ವಾಹನದಲ್ಲಿ ಕರೆದೊಯ್ಯಲಾಯಿತು.







