ರಸ್ತೆ ಅಪಘಾತ: 5 ವರ್ಷಗಳಲ್ಲಿ 1.5 ಲಕ್ಷ ಪಾದಚಾರಿಗಳು ಮೃತ್ಯು

ಸಾಂದರ್ಭಿಕ ಚಿತ್ರ PC: shutterstock
ಹೊಸದಿಲ್ಲಿ: ರಸ್ತೆಯ ಮೇಲೆ ಪಾದಚಾರಿಗಳಿಗೇ ಮೊದಲ ಹಕ್ಕು ಇರುವುದಾದರೂ, ರಸ್ತೆ ಅಪಘಾತಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವುದು ಈ ವರ್ಗವೇ ಆಗಿದೆ. 2019-2023ರ ಅವಧಿಯಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಮೃತಪಟ್ಟ 7.9 ಲಕ್ಷ ಮಂದಿಯ ಪೈಕಿ 1.5 ಲಕ್ಷ ಮಂದಿ ಪಾದಚಾರಿಗಳು ಎನ್ನುವುದು ಗಮನಾರ್ಹ.
ಭಾರತ ಸಂವಿಧಾನದ 21ನೇ ವಿಧಿಯ ಅನ್ವಯ ಪಾದಚಾರಿಗಳಿಗೆ ಫುಟ್ಪಾದ್ ಬಳಕೆಯ ಹಕ್ಕನ್ನು ಖಾತರಿಪಡಿಸಲಾಗಿದೆ ಎಂದು ಈ ವಾರ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಸಮಿತಿ 24 ರಾಜ್ಯಗಳಲ್ಲಿ ಇರುವ ಫುಟ್ಪಾತ್ ಲಭ್ಯತೆಯನ್ನು ಅಧ್ಯಯನ ಮಾಡಿದ್ದು, ವಿವಿಧ ರಾಜ್ಯಗಳಲ್ಲಿ ಶೇಕಡ 19 ರಿಂದ ಶೇಕಡ 73ರಷ್ಟು ರಸ್ತೆಗಳಿಗೆ ಫುಟ್ಪಾತ್ಗಳು ಇವೆ ಎನ್ನುವುದನ್ನು ಕಂಡುಕೊಂಡಿದೆ. ಮಹಾರಾಷ್ಟ್ರದಲ್ಲಿ ಫುಟ್ಪಾತ್ಗಳು ಅತ್ಯಧಿಕ ಸಂಖ್ಯೆಯಲ್ಲಿವೆ.
ಸಾರಿಗೆ ಸಂಶೋಧನೆ ಮತ್ತು ಗಾಯ ತಡೆ ಕೇಂದ್ರ ಹಾಗೂ ದೆಹಲಿ ಐಐಟಿ ಜಂಟಿಯಾಗಿ ನಡೆಸಿದ ಅಧ್ಯಯನದ ವರದಿಯನ್ನು ಇತ್ತೀಚಗೆ ಬಿಡುಗಡೆ ಮಾಡಲಾಗಿದೆ. ಇಂಡಿಯನ್ ರೋಡ್ ಕಾಂಗ್ರೆಸ್ ನಿರ್ದಿಷ್ಟಪಡಿಸಿದ ಅಗಲ ಮತ್ತು ಎತ್ತರದ ಮಾನದಂಡವನ್ನು ಅನುಸರಿಸಿ ಪ್ರತಿ ರಾಜ್ಯದ ನಾಲ್ಕು ನಗರಗಳಲ್ಲಿ ಅಧ್ಯಯನ ನಡೆಸಲಾಗಿತ್ತು.
ಈ ಅಧ್ಯಯನದ ಅಂಕಿ ಅಂಶಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಮೀಕ್ಷೆ ನಡೆಸಿದ ರಸ್ತೆಗಳ ಪೈಕಿ ಶೇಕಡ 3ರಷ್ಟು ರಸ್ತೆಗಳಲ್ಲಿ ಮಾತ್ರ ಫುಟ್ಪಾತ್ಗಳಿವೆ. ಪುದುಚೇರಿಯಲ್ಲಿ ಈ ಪ್ರಮಾಣ ಶೇಕಡ 5ರಷ್ಟು. ಬಿಹಾರ ಹಾಗೂ ಹರ್ಯಾಣದಲ್ಲಿ 19-20 ಶೇಕಡ ರಸ್ತೆಗಳಿಗೆ ಫುಟ್ಪಾತ್ಗಳಿದ್ದರೂ, ಐಆರ್ಸಿ ಮಾನದಂಡಕ್ಕೆ ಅನುಸಾರವಾಗಿಲ್ಲ.
ವಿಶ್ವ ಆರೋಗ್ಯಸಂಸ್ಥೆಯ ಪ್ರಕಾರ, ಜಾಗತಿಕವಾಗಿ ಒಟ್ಟು ರಸ್ತೆ ಅಪಘಾತಗಳಿಂದಾಗುವ ಸಾವಿನ ಪೈಕಿ ಶೇಕಡ 21ರಷ್ಟು ಮಂದಿ ಪಾದಚಾರಿಗಳು ಜೀವ ಕಳೆದುಕೊಂಡಿದ್ದಾರೆ. ವಿಶ್ವಸಂಸ್ಥೆಯ ರಸ್ತೆ ಸುರಕ್ಷತೆ ಸಪ್ತಾಹದ ಅಂಗವಾಗಿ ಸರ್ಕಾರಗಳು ವಾಕಿಂಗ್ ಮತ್ತು ಸೈಕ್ಲಿಂಗ್ ಉತ್ತೇಜನಕ್ಕೆ ಸಲಹೆ ನೀಡಲಾಗಿದೆ.







