ಕಡಲ್ಕೊರೆತ ತಡೆಗೆ 300 ಕೋಟಿ ರೂ.ಗಳ ಯೋಜನೆ: ಕಂದಾಯ ಸಚಿವ ಕೃಷ್ಣ ಭೈರೇಗೌಡ

ಮೂಳೂರು(ಉಡುಪಿ): ರಾಜ್ಯ ಕರಾವಳಿಯ ಪ್ರಮುಖ ಸಮಸ್ಯೆಯಾಗಿರುವ ಕಡಲು ಕೊರೆತದ ಕುರಿತಂತೆ ಮುಖ್ಯ ಮಂತ್ರಿಗಳ ಸೂಚನೆಯಂತೆ ತಜ್ಞರ ತಂಡದಿಂದ ವೈಜ್ಞಾನಿಕ ಅಧ್ಯಯನ ನಡೆಸಿ 300 ಕೋಟಿ ರೂಗಳ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಬುಧವಾರ ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ಉಡುಪಿ ಜಿಲ್ಲೆಗೆ ಆಗಮಿಸಿದ ಸಚಿವರು ಕಾಪು ತಾಲೂಕು ಮೂಳೂರು ಗ್ರಾಮದ ತೊಟ್ಟಂನಲ್ಲಿ ಕಡಲ್ಕೊರೆತದಿಂದ ಹಾನಿಗೊಂಡ ಪ್ರದೇಶಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಕಳೆದ 20-30 ವರ್ಷಗಳಿಂದ ಪ್ರತಿಮಳೆಗಾಲದಲ್ಲಿ ನಿರಂತರ ಸಮಸ್ಯೆಗೆ ಕಾರಣವಾಗುತ್ತಿರುವ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮದರಾಸು ಐಐಟಿ ತಜ್ಞರು ಈಗಾಗಲೇ ವರದಿಯನ್ನು ಸಲ್ಲಿಸಿದ್ದು, ಅದರಂತೆ ಪ್ರತಿ 100ಮೀಗೆ 15ಕೋಟಿ ಖರ್ಚು ಬರುತ್ತದೆ. ಹೀಗಾಗಿ ಇದನ್ನು ಪರಿಶೀಲಿಸಬೇಕಾಗಿದೆ ಎಂದರು.
ಮುಖ್ಯಮಂತ್ರಿಗಳ ಸೂಚನೆಯಂತೆ ಕರಾವಳಿಯ ಮೂರು ಜಿಲ್ಲೆಗಳಿಗೆ ತಲಾ ನೂರು ಕೋಟಿಯಂತೆ ಒಟ್ಟು 300 ಕೋಟಿ ರೂ.ಗಳಿಗೆ ಪ್ರಸ್ತಾಪ ಸಲ್ಲಿಸುವಂತೆ ಜಿಲ್ಲಾಧಿಕಾರಿಘಳಿಗೆ ಸೂಚನೆ ನೀಡಲಾಗಿದೆ ಎಂದರು.
ಅಲ್ಲದೇ ಮಳೆಗಾಲದಲ್ಲಿ ಭೂ ಕುಸಿತ ಕಂಡುಬರುವ ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳಲ್ಲಿ ಸಮಸ್ಯೆ ಪರಿಹಾರಕ್ಕೆ 500 ಕೋಟಿ ರೂ. ಯೋಜನೆ ರೂಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಲ್ಲಿ ತಡೆಗೋಡೆಯಂಥ ಶಾಶ್ವತ ಪರಿಹಾರ ರೂಪಿಸಲು ತಿಳಿಸಲಾಗಿದೆ ಎಂದು ವಿವರಿಸಿದರು.
ಉಡುಪಿ ಜಿಲ್ಲೆಗೆ ಕಡಲ್ಕೊರೆತಕ್ಕೆ 100ಕೋಟಿ ರೂ ಹಾಗೂ ಭೂ ಕುಸಿತಕ್ಕೆ 50 ಕೋಟಿ ರೂ.ಗಳಿಗೆ ಶೀಘ್ರವೇ ಪ್ರಸ್ತಾವನೆ ರೂಪಿಸಲು ಸೂಚಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ತಿಳಿಸಿದರು.,
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಎಸಿ ರಶ್ಮಿ, ಕಾಪು ತಹಶೀಲ್ದಾರ್ ಪ್ರತಿಭಾ, ವಿನಯಕುಮಾರ್ ಸೊರಕೆ, ಅಶೋಕ್ ಕುಮಾರ್ ಕೊಡವೂರು, ಎಂ.ಎ.ಗಫೂರ್ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.







