ಪ್ರಜಾಪ್ರಭುತ್ವದ ಕೊರಳಿಗೆ ಎಸ್‌ಐಆರ್ ನೇಣಿನ ಕುಣಿಕೆ

ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಘೋಷಣೆಯನ್ನು ಭಾರತೀಯ ಚುನಾವಣಾ ಆಯೋಗ ಹೊರಡಿಸಿದ ಮರುದಿನವೇ ಪಶ್ಚಿಮಬಂಗಾಳದಲ್ಲಿ 57 ವರ್ಷದ ವ್ಯಕ್ತಿಯೊಬ್ಬರು, ಪೌರತ್ವವನ್ನು ಸಾಬೀತು ಮಾಡಲು ಸಾಧ್ಯವಾಗುವುದಿಲ್ಲ ಎಂಬ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತನನ್ನು ಪ್ರದೀಪ್ ಕಾರ್ ಎಂದು ಗುರುತಿಸಲಾಗಿದೆ. ‘ಎಸ್‌ಐಆರ್ ಮತ್ತು ಎನ್‌ಆರ್‌ಸಿ ಕುರಿತಾದ ಆತಂಕದಿಂದ ನಾನು ಸಾವಿಗೆ ಶರಣಾಗುತ್ತಿದ್ದೇನೆ’ ಎಂದು ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕುಟುಂಬವು ಅಜ್ಞಾತ ವ್ಯಕ್ತಿಗಳ ವಿರುದ್ಧ ಆತ್ಮಹತ್ಯೆ ಪ್ರಚೋದನೆಯ ಆರೋಪವನ್ನು ಹೊರಿಸಿ ದೂರನ್ನು ನೀಡಿದೆ. ಪ್ರದೀಪ್ ಕಾರ್ ಮುಸ್ಲಿಮನಾಗಿರಲಿಲ್ಲ, ಬಾಂಗ್ಲಾ ನುಸುಳುಕೋರನೂ ಅಲ್ಲ. ಇಷ್ಟಾದರೂ ಆತ ಪೌರತ್ವ ಸಾಬೀತಿಗೆ ಯಾಕೆ ಹೆದರಬೇಕಾಯಿತು? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ, ಎಸ್‌ಐಆರ್ ಎನ್ನುವ ಮುಖವಾಡದಲ್ಲಿ ಮರಳಿ ಬಂದಿರುವ ಎನ್‌ಆರ್‌ಸಿ ಎನ್ನುವ ಮಾರ್ಜಾಲ ಸನ್ಯಾಸಿಯ ಅಸಲಿಯತ್ತು ಬಯಲಾಗಿ ಬಿಡುತ್ತದೆ.
ಬಿಹಾರದಲ್ಲಿ ಸಾಕಷ್ಟು ವಿವಾದಗಳಿಗೆ, ಕಾನೂನು ಹೋರಾಟಗಳಿಗೆ ಕಾರಣವಾದ, ಅಲ್ಲಿನ ಲಕ್ಷಾಂತರ ಮತದಾರರ ಹೆಸರುಗಳು ಪಟ್ಟಿಯಿಂದ ನಾಪತ್ತೆಯಾಗಿಸಿದ ಹೆಗ್ಗಳಿಕೆಯನ್ನು ಹೊಂದಿರುವ ಎಸ್‌ಐಆರ್ ಎನ್ನುವ ಎರಡು ಅಲಗಿನ ಕತ್ತಿಯನ್ನು ಇದೀಗ ದೇಶಾದ್ಯಂತ ಪ್ರಯೋಗಿಸಲು ಚುನಾವಣಾ ಆಯೋಗ ಹೊರಟಿದೆ. ಅಕ್ಟೋಬರ್ 27ರಂದು ಚುನಾವಣಾ ಆಯುಕ್ತರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಮತದಾರರ ಪಟ್ಟಿಗಳ ಈ ವಿಶೇಷ ತೀವ್ರ ಪರಿಷ್ಕರಣೆಯು ಮುಂದಿನ ವರ್ಷದ ಫೆಬ್ರವರಿ 27ರಂದು ದೇಶಾದ್ಯಂತ ಸಮಾಪ್ತಿಗೊಳ್ಳಲಿದೆ ಎಂದು ಹೇಳಿದ್ದಾರೆ. ಈ ಎಸ್‌ಐಆರ್ ಬಳಿಕ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಯಾವುದೇ ಪ್ರಜೆ ಪರೋಕ್ಷವಾಗಿ ತನ್ನ ಪೌರತ್ವವನ್ನೂ ನಿರಾಕರಿಸಲ್ಪಡುತ್ತಾನೆ. ಚುನಾವಣಾ ಆಯೋಗವು ಮತದಾರನ ಪಟ್ಟಿಯಲ್ಲಿ ಹೆಸರು ನಮೂದಿಸಬೇಕಾದರೆ ಆತ ಆಯೋಗ ಹೇಳಿದ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಅದರಲ್ಲಿ ವಿಫಲನಾದರೆ ಆತ ಚುನಾವಣೆಯಲ್ಲಿ ಭಾಗವಹಿಸುವ ಅರ್ಹತೆಯನ್ನು ಕಳೆದುಕೊಳ್ಳುತ್ತಾನೆ. ಅಂದರೆ ಚುನಾವಣಾ ಆಯೋಗ ಆತನನ್ನು ಈ ದೇಶದ ಪೌರನಲ್ಲ ಎಂದು ಪರಿಗಣಿಸಿ ಚುನಾವಣೆಯಿಂದ ಹೊರಗಿಡುತ್ತದೆ. ಭವಿಷ್ಯದಲ್ಲಿ ಆತ ತನ್ನ ಪೌರತ್ವವನ್ನು ಸಾಬೀತು ಪಡಿಸದೇ ಇದ್ದರೆ ಸರಕಾರದ ಎಲ್ಲ ಸವಲತ್ತುಗಳನ್ನು ಹಂತ ಹಂತವಾಗಿ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ ಮತ್ತು ಅಂತಿಮವಾಗಿ ಆತನನ್ನು ಅಕ್ರಮ ಬಂಧನ ಕೇಂದ್ರಗಳು ಸ್ವಾಗತಿಸಲು ಸಿದ್ಧವಾಗಿರುತ್ತವೆ.
ನೀವು ಈ ದೇಶದ ಪೌರರು ಹೌದಾದರೆ ಪೌರತ್ವ ಸಾಬೀತು ಮಾಡುವುದಕ್ಕೆ ಅಥವಾ ಚುನಾವಣಾ ಆಯೋಗ ಕೇಳುವ ದಾಖಲೆಗಳನ್ನು ಒದಗಿಸುವುದಕ್ಕೆ ಇರುವ ಅಡ್ಡಿಯೇನು ಎನ್ನುವ ಪ್ರಶ್ನೆಯನ್ನು ಕೇಂದ್ರ ಸರಕಾರ ಪರೋಕ್ಷವಾಗಿ ಕೇಳುತ್ತಿದೆ. ಸಮಸ್ಯೆಗಳು ಎದುರಾಗುವುದು ನಮ್ಮ ಪೌರತ್ವವನ್ನು ಅಥವಾ ನಾನು ಮತ ಹಾಕಲು ಅರ್ಹನೆಂದು ಚುನಾವಣಾ ಆಯೋಗ ತೀರ್ಮಾನಿಸಲು ಕಡ್ಡಾಯವಾಗಿ ನಮ್ಮೊಂದಿಗೆ ಇರಬೇಕಾದ ದಾಖಲೆಗಳ ಪ್ರಶ್ನೆ ಬಂದಾಗ. ಚುನಾವಣಾ ಆಯೋಗ ಬಿಹಾರದಲ್ಲಿ ಎಸ್‌ಐಆರ್ ಆರಂಭಿಸಿದಾಗ ಸುಮಾರು 11 ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಆದೇಶ ಹೊರಡಿಸಿತು. ಇದರ ಹಿಂದೆ ಇದ್ದುದು, ಬಿಹಾರದಲ್ಲಿರುವ ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ದುರುದ್ದೇಶ ಮಾತ್ರವಲ್ಲ, ಅವರ ಪೌರತ್ವವನ್ನೇ ನಿರಾಕರಿಸುವ ಸಂಚು. ಎನ್‌ಆರ್‌ಸಿಯನ್ನು ದೇಶಾದ್ಯಂತ ವಿಸ್ತರಿಸುವ ಯೋಜನೆ ವಿಫಲವಾದ ಬಳಿಕ, ಕೇಂದ್ರ ಸರಕಾರವು ಎಸ್‌ಐಆರ್ ಮೂಲಕ ಅದನ್ನು ಮತ್ತೆ ಜಾರಿಗೆ ತರಲು ಚುನಾವಣಾ ಆಯೋಗವನ್ನು ಬಳಸಿಕೊಂಡಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಈವರೆಗೆ ಆಧಾರ್ ಕಾರ್ಡ್, ರೇಶನ್ ಕಾರ್ಡ್‌ಗಳು ಸಾಕಾಗುತ್ತಿತ್ತು. ಇದೀಗ ಏಕಾಏಕಿ 11 ದಾಖಲೆಗಳನ್ನು ಕೇಳಿದ ಪರಿಣಾಮವಾಗಿ ಲಕ್ಷಾಂತರ ಮತದಾರರು ಮತಹಾಕುವ ಹಕ್ಕಿನ ಜೊತೆ ಜೊತೆಗೆ ಪೌರತ್ವವನ್ನೂ ಪರೋಕ್ಷವಾಗಿ ಕಳೆದುಕೊಳ್ಳುತ್ತಾರೆ. ಇದರ ವಿರುದ್ಧ ಎಲ್ಲ ರಾಜಕೀಯ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಸುಪ್ರೀಂಕೋರ್ಟ್ ಮೊರೆ ಹೋದರು. ಪರಿಣಾಮವಾಗಿ ಆಧಾರ್ ಕಾರ್ಡ್‌ನ್ನು ದಾಖಲೆಯಾಗಿ ಸ್ವೀಕರಿಸಬೇಕು ಎಂದು ಅದು ಸೂಚನೆ ನೀಡಿತು. ಈ ಸೂಚನೆಯನ್ನು ನೀಡಿದ ಬಳಿಕವೂ ಎಸ್‌ಐರ್‌ನಿಂದ ಸುಮಾರು 65 ಲಕ್ಷ ಜನರು ಹೊರಗುಳಿದರು. ಹೀಗೆ ಮತದಾರರ ಪಟ್ಟಿಯಿಂದ ಹೊರಗುಳಿದ ಜನರೆಲ್ಲರೂ ವಲಸಿಗರು, ನುಸುಳುಕೋರರು ಎಂದು ಚುನಾವಣಾ ಆಯೋಗ ಹೇಳುತ್ತದೆಯೆ? ಇದೇ ಸಂದರ್ಭದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ನಲ್ಲಿ ನಡೆದಿರುವ ಭಾರೀ ಅಕ್ರಮಗಳು, ಗೊಂದಲಗಳು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿವೆ. ಎಸ್‌ಐಆರ್‌ನ ವೈಫಲ್ಯಗಳನ್ನು ರಾಜಕೀಯ ಪಕ್ಷಗಳು ಸುಪ್ರೀಂಕೋರ್ಟ್ ಮುಂದೆ ತಂದಿದ್ದು, ವಿಚಾರಣೆ ಮುಂದುವರಿದಿದೆ. ಇವುಗಳ ನಡುವೆಯೇ ಚುನಾವಣಾ ಆಯೋಗ ದೇಶಾದ್ಯಂತ ಅವಸರವಸರವಾಗಿ ಎಸ್‌ಐಆರ್ ನಡೆಸುವ ಕಾರ್ಯಾಚರಣೆಗೆ ಯಾಕೆ ಇಳಿದಿದೆ? ಈ ಬಗ್ಗೆ ಸುಪ್ರೀಂಕೋರ್ಟ್ ತನ್ನ ಸ್ಪಷ್ಟ ತೀರ್ಪನ್ನು ನೀಡುವ ಮೊದಲೇ ದೇಶಾದ್ಯಂತ ಎಸ್‌ಐಆರ್ ನಡೆಸಿದರೆ ಆ ಮತದಾರರ ಪಟ್ಟಿ ಮುಂದಿನ ಚುನಾವಣೆಯಲ್ಲಿ ಮಾನ್ಯವಾಗುವುದೆ? ಎಸ್‌ಐಆರ್ ಸಂವಿಧಾನ ಬಾಹಿರ ಎಂದು ಸುಪ್ರೀಂಕೋರ್ಟ್ ಹೇಳಿದರೆ ಈ ಎಸ್‌ಐಆರ್ ವ್ಯರ್ಥವಾಗುವುದಿಲ್ಲವೆ? ಈ ಪ್ರಶ್ನೆಗಳಿಗೆ ಚುನಾವಣಾ ಆಯೋಗದ ಬಳಿ ಉತ್ತರವಿಲ್ಲ.
ಈ ದೇಶದಲ್ಲಿ ಅರ್ಹ ಮತದಾರರು ಚುನಾವಣೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವ ಮೂಲಕ ಪ್ರಜಾಸತ್ತೆಯನ್ನು ಯಶಸ್ವಿಗೊಳಿಸಬೇಕಾದ ಚುನಾವಣಾ ಆಯೋಗವೇ ಮತದಾರರನ್ನು ಚುನಾವಣೆಯಿಂದ ದೂರ ಉಳಿಸಲು ಶ್ರಮಿಸುತ್ತಿರುವುದು ವಿಪರ್ಯಾಸವಾಗಿದೆ. ದೇಶದ ಜನರಲ್ಲಿ ಅನಗತ್ಯ ಆತಂಕಗಳನ್ನು ಬಿತ್ತುವುದಕ್ಕಾಗಿ ಚುನಾವಣಾ ಆಯೋಗವನ್ನು ಕೇಂದ್ರ ಸರಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಈಗಾಗಲೇ ಕೇರಳ ಸರಕಾರ ಮತ್ತು ತಮಿಳು ನಾಡು ಎಸ್‌ಐಆರ್‌ಗೆ ತಮ್ಮ ಸ್ಪಷ್ಟ ವಿರೋಧವನ್ನು ವ್ಯಕ್ತಪಡಿಸಿವೆ. ಬಿಜೆಪಿಯೇತರ ಹಲವು ರಾಜ್ಯಗಳು ಎಸ್‌ಐಆರ್‌ನ್ನು ತಿರಸ್ಕರಿಸಿವೆ. ಇದು ಭವಿಷ್ಯದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಇನ್ನೊಂದು ಸಂಘರ್ಷವನ್ನು ಹುಟ್ಟು ಹಾಕಲಿವೆ. ಚುನಾವಣಾ ಆಯೋಗದ ಜೊತೆಗೆ ರಾಜ್ಯಗಳು ಸಹಕರಿಸದೇ ಇದ್ದರೆ ದೇಶದೊಳಗೆ ಸಂಘರ್ಷವೊಂದಕ್ಕೆ ವೇದಿಕೆ ನಿರ್ಮಾಣ ಮಾಡಿಕೊಟ್ಟಂ
ತಾಗುತ್ತದೆ. ಬಹುಶಃ ಕೇಂದ್ರ ಸರಕಾರ ಆ ಉದ್ದೇಶದಿಂದಲೇ ಈ ಎಸ್‌ಐಆರ್‌ಗೆ ಹೊರಟಂತಿದೆ. ತಮ್ಮ ಪೌರತ್ವವನ್ನು ಸಾಬೀತು ಮಾಡಲು ಸಾಧ್ಯವಾಗುತ್ತದೆಯೋ ಇಲ್ಲವೋ ಎನ್ನುವ ಆತಂಕಕ್ಕೆ ಈ ದೇಶದ ಕೋಟ್ಯಂತರ ಜನರನ್ನು ತಳ್ಳುವ ಮೂಲಕ ಚುನಾವಣಾ ಆಯೋಗವು ಪ್ರಜಾಸತ್ತೆಯ ಕೊರಳಿಗೆ ನೇಣಿನ ಕುಣಿಕೆಯನ್ನು ಹಾಕಲು ಮುಂದಾಗಿದೆ. ಯಾವ ಪ್ರಜೆಗಳು ಮತಹಾಕಿ ಈ ದೇಶದ ಪ್ರಧಾನಿಯನ್ನು ಆಯ್ಕೆ ಮಾಡಿದರೋ, ಅದೇ ಮತದಾರರನ್ನು ಇದೀಗ ನಿಮ್ಮ ಪೌರತ್ವ ಸಾಬೀತು ಪಡಿಸಿ ಎಂದು ಪ್ರಧಾನಿ ಒತ್ತಾಯಿಸುತ್ತಿದ್ದಾರೆ. ತನಗೆ ಮತಹಾಕಿದ ಜನರ ಪೌರತ್ವದ ಬಗ್ಗೆ ಪ್ರಧಾನಿಗೆ ಅನುಮಾನವಿದೆ ಎಂದಾದರೆ, ಪರೋಕ್ಷವಾಗಿ ಅವರ ಆಯ್ಕೆಯನ್ನು ಅವರೇ ಸಂಶಯಿಸಿಕೊಂಡಂತಾಗಲಿಲ್ಲವೆ?







