ಕದನ ವಿರಾಮಕ್ಕೆ ಮಧ್ಯಸ್ಥಿಕೆ: ಕಳ್ಳನ ಜೊತೆಗೆ ಮಳ್ಳ!

ಚೀನಾ ವಿದೇಶಾಂಗ ಸಚಿವ ವಾಂಗ್ ಯಿ |ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
PC: x.com/globaltimesnews
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಆಪರೇಷನ್ ಸಿಂಧೂರ ‘ಕದನ ವಿರಾಮ’ಕ್ಕೆ ಅಪ್ಪನಾಗುವುದಕ್ಕೆ ಕೆಲವು ದೇಶಗಳು ತಾಮುಂದು ನಾಮುಂದು ಎಂದು ಪೈಪೋಟಿಗಿಳಿದಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಆಪರೇಷನ್ ಸಿಂಧೂರ ‘ಕದನ ವಿರಾಮ’ಕ್ಕೆ ಯಾವುದೇ ರಾಷ್ಟ್ರ ಮಧ್ಯಸ್ಥಿಕೆಯನ್ನು ವಹಿಸಿಲ್ಲ ಎಂದು ಭಾರತವು ಪದೇ ಪದೇ ಸ್ಪಷ್ಟೀಕರಣ ನೀಡಿದ ಬಳಿಕವೂ, ಅದರ ಹೆಗ್ಗಳಿಕೆಯನ್ನು ತನ್ನದಾಗಿಸಲು ಅಮೆರಿಕ ಪ್ರಯತ್ನಿಸುತ್ತಲೇ ಇದೆ. ‘‘ನಾನು ಮಧ್ಯಸ್ಥಿಕೆಯನ್ನು ವಹಿಸದೇ ಇದ್ದರೆ ಎರಡೂ ರಾಷ್ಟ್ರಗಳು ಅಣ್ವಸ್ತ್ರ ಬಳಕೆ ಮಾಡುವ ಸ್ಥಿತಿ ನಿರ್ಮಾಣವಾಗುತ್ತಿತ್ತು’’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗಷ್ಟೇ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದರು. ಜೊತೆಗೇ, ಪಾಕಿಸ್ತಾನವು ಮತ್ತೆ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧವಾಗುತ್ತಿದೆ ಎಂಬ ಹೇಳಿಕೆ ನೀಡಿ ಉಭಯ ದೇಶಗಳ ನಡುವಿನ ಗಾಯಗಳಿಗೆ ಉಪ್ಪು ಸವರಿದ್ದರು.
ಆಪರೇಷನ್ ಸಿಂಧೂರದಂತಹ ಕಾರ್ಯಾಚರಣೆ ಎಸಗುವ ಅನಿವಾರ್ಯ ಭಾರತಕ್ಕೆ ಯಾಕೆ ಸೃಷ್ಟಿಯಾಯಿತು ಎನ್ನುವುದು ಅಮೆರಿಕಕ್ಕೆ ಗೊತ್ತಿರದ ವಿಷಯವಲ್ಲ. ಪಹಲ್ಗಾಮ್ನಲ್ಲಿ ಅಮಾಯಕರ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವನ್ನು ಗುರುತಿಸಿ, ಅನಿವಾರ್ಯವಾಗಿ ಭಾರತವು ಪಾಕಿಸ್ತಾನದಲ್ಲಿರುವ ಭಯೋತ್ಪಾದನಾ ಶಿಬಿರಗಳ ಮೇಲೆ ಕಾರ್ಯಾಚರಣೆ ನಡೆಸಬೇಕಾಯಿತು. ಈ ಕೆಲಸವನ್ನು ಪಾಕಿಸ್ತಾನವೇ ಮಾಡಿದ್ದರೆ, ಭಾರತ ರಂಗಕ್ಕಿಳಿಯುವ ಅಗತ್ಯ ಬೀಳುತ್ತಿರಲಿಲ್ಲ. ಭಾರತದ ಗುರಿ ಪಾಕಿಸ್ತಾನವಾಗಿರಲಿಲ್ಲ, ಬದಲಿಗೆ ಪಾಕಿಸ್ತಾನದ ಗಡಿಯಲ್ಲಿ ಆಶ್ರಯ ಪಡೆದಿರುವ ಉಗ್ರಗಾಮಿ ಶಿಬಿರಗಳಾಗಿದ್ದವು. ಆದರೆ ಪ್ರತಿಯಾಗಿ ಪಾಕಿಸ್ತಾನವು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸಿತು. ಅಂತಿಮವಾಗಿ ಆಪರೇಷನ್ ಸಿಂಧೂರ ಯುದ್ಧದ ರೂಪ ಪಡೆಯಿತು. ಆದರೆ ಭಾರತವು ತನ್ನ ಉದ್ದೇಶ ಈಡೇರಿದ ಬೆನ್ನಿಗೇ ಕಾರ್ಯಾಚರಣೆಯಿಂದ ಹಿಂದೆ ಸರಿಯಿತು. ಪಾಕಿಸ್ತಾನದ ವಿರುದ್ಧ ಭಾರತವೇನೂ ಪೂರ್ಣ ಪ್ರಮಾಣದ ಯುದ್ಧ ಘೋಷಿಸಿರಲಿಲ್ಲ. ಆದುದರಿಂದ, ‘ಕದನ ವಿರಾಮ’ಕ್ಕೆ ಇನ್ನೊಂದು ದೇಶ ಮಧ್ಯಸ್ಥಿಕೆ ವಹಿಸುವ ಅಗತ್ಯವೇ ಇದ್ದಿರಲಿಲ್ಲ. ಭಾರತದ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಬಗ್ಗೆ ಕೊನೆಯವರೆಗೂ ಮೌನವಾಗಿದ್ದ ಅಮೆರಿಕ, ಕದನ ವಿರಾಮಕ್ಕೆ ತಾನು ಮಧ್ಯಸ್ಥಿಕೆ ವಹಿಸಿದೆ ಎನ್ನುವುದರಲ್ಲಿ ರಾಜಕೀಯ ದುರುದ್ದೇಶವಿದೆ. ಭಾರತ ಉಪಖಂಡದಲ್ಲಿ ಅಮೆರಿಕ ಶಾಂತಿಯನ್ನು ಬಯಸುತ್ತದೆ ಎಂದಾದರೆ, ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಕುಮ್ಮಕ್ಕು ಕೊಟ್ಟದ್ದಕ್ಕಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಬೇಕಾಗಿತ್ತು. ಯಾಕೆಂದರೆ, ಭಯೋತ್ಪಾದಕರ ಕುರಿತಂತೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇನೆ ಎಂದು ಅಮೆರಿಕ ಹೇಳುತ್ತಲೇ ಬಂದಿತ್ತು. ಹೀಗಿರುವಾಗ, ಭಯೋತ್ಪಾದಕರಿಗೆ ಪರೋಕ್ಷ ಬೆಂಬಲ ನೀಡುತ್ತಾ ಬಂದಿರುವ ಪಾಕಿಸ್ತಾನದೊಂದಿಗೆ ಅಮೆರಿಕ ಯಾಕೆ ಇನ್ನೂ ಸೌಹಾರ್ದ ಸಂಬಂಧವನ್ನು ಮುಂದುವರಿಸಿದೆ? ಈ ಪ್ರಶ್ನೆಯನ್ನು ಭಾರತ ಪದೇ ಪದೇ ವಿಶ್ವದ ಮುಂದಿಡುತ್ತಾ ಬಂದಿದೆಯಾದರೂ, ಉತ್ತರ ಸಿಕ್ಕಿಲ್ಲ. ಹೀಗಿರುವಾಗ, ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದೇನೆ ಎನ್ನುವ ಅಮೆರಿಕದ ಮಾತು ನಂಬುವುದಕ್ಕೆ ಅರ್ಹವೆ?
ಇದೀಗ ಕಳ್ಳನ ಜೊತೆಗೆ ಮಳ್ಳ ಎನ್ನುವಂತೆ ನೆರೆಯ ಚೀನಾ ಕೂಡ ‘ಕದನ ವಿರಾಮ’ದಲ್ಲಿ ಪಾಲುಕೇಳಲು ಬಂದಿದೆೆ. ಬೀಜಿಂಗ್ನಲ್ಲಿ ನಡೆದ ‘ಅಂತರ್ರಾಷ್ಟ್ರೀಯ ಪರಿಸ್ಥಿತಿ ಮತ್ತು ಚೀನಾದ ವಿದೇಶಾಂಗ ಸಂಬಂಧ’ಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ ಚೀನಾ ಮಧ್ಯಸ್ಥಿಕೆಯನ್ನು ವಹಿಸಿ ಕದನ ವಿರಾಮಕ್ಕೆ ಕಾರಣವಾಗಿದೆ ಎಂಬರ್ಥದಲ್ಲಿ ಮಾತನಾಡಿದರು. ಆದರೆ ಇದನ್ನು ಭಾರತ ಸ್ಪಷ್ಟವಾಗಿ ಅಲ್ಲಗಳೆದಿದೆ. ‘ಭಾರತ-ಪಾಕಿಸ್ತಾನ ದ್ವಿಪಕ್ಷೀಯ ವಿಚಾರಗಳಲ್ಲಿ ತೃತೀಯ ಪಕ್ಷಕ್ಕೆ ಯಾವುದೇ ಪಾತ್ರವಿಲ್ಲ’ ಎಂದು ಭಾರತ ಸ್ಪಷ್ಟಪಡಿಸಿದೆ. ಭಾರತವು ಚೀನಾದ ಜೊತೆಗೆ ಸಂಬಂಧ ಸುಧಾರಣೆಗೆ ಗರಿಷ್ಠ ಪ್ರಯತ್ನವನ್ನು ಮಾಡುತ್ತಾ ಬಂದಿದೆ. ಅದರ ಭಾಗವಾಗಿಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚೀನಾಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಆದರೆ, ಬಳಿಕವೂ ಚೀನಾ ತನ್ನ ಕುತಂತ್ರವನ್ನು ಬಿಟ್ಟಿಲ್ಲ. ಭಾರತದ ಗಡಿಭಾಗದಲ್ಲಿ ಅದು ನಡೆಸುತ್ತಿರುವ ಅನಗತ್ಯ ಹಸ್ತಕ್ಷೇಪಗಳಿಂದ ಹಿಂದೆ ಸರಿದಿಲ್ಲ. ಭಾರತ-ಪಾಕ್ ಯುದ್ಧದಲ್ಲಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸುವುದು ಪಕ್ಕಕ್ಕಿರಲಿ, ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದಾಗ ಚೀನಾವು ತನ್ನ ಶಸ್ತ್ರಾಸ್ತ್ರಗಳ ಮೂಲಕ ಪಾಕಿಸ್ತಾನವನ್ನು ಬೆಂಬಲಿಸಿತ್ತು ಎನ್ನುವ ಆರೋಪಗಳಿವೆ. ನಾಲ್ಕು ದಿನಗಳ ಯುದ್ಧವನ್ನು ಚೀನಾವು ತನ್ನ ನೂತನ ಶಸ್ತ್ರಾಸ್ತ್ರಗಳ ಪರೀಕ್ಷಾ ತಾಣವಾಗಿ ಬಳಸಿಕೊಂಡಿತು ಎಂದು ಅಮೆರಿಕ ದೂರಿದೆ. ತನ್ನ ರಕ್ಷಣಾ ಉದ್ಯಮದ ಗುರಿಗಳನ್ನು ವಿಸ್ತರಿಸಿಕೊಳ್ಳಲು ಈ ಯುದ್ಧವನ್ನು ಚೀನಾ ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿತು. ಪಾಕಿಸ್ತಾನ-ಭಾರತದ ನಡುವಿನ ಸಂಬಂಧ ಸದಾ ಉದ್ವಿಗ್ನ ಸ್ಥಿತಿಯಲ್ಲಿರಬೇಕು ಎನ್ನುವುದು ಅಮೆರಿಕದಂತೆಯೇ ಚೀನಾದ ಬಯಕೆಯೂ ಆಗಿದೆ. ಭಾರತವನ್ನು ತೋರಿಸಿ ಚೀನಾವೂ ಪಾಕಿಸ್ತಾನವನ್ನು ತನಗೆ ಪೂರಕವಾಗಿ ಬಳಸಿಕೊಳ್ಳುತ್ತಾ ಬಂದಿದೆ. ತಾನು ಮಧ್ಯಸ್ಥಿಕೆ ವಹಿಸಿದ್ದೇನೆ ಎನ್ನುವುದು ಚೀನಾದ ಇನ್ನೊಂದು ಮುಖವಾಡವಾಗಿದೆ. ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ನೆಲೆಗೊಳ್ಳಲು ಅಮೆರಿಕ ಮತ್ತು ಚೀನಾಗಳೆರಡರ ಕೊಡುಗೆ ಬಹುದೊಡ್ಡದು. ಶಸ್ತ್ರಾಸ್ತ್ರ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಭಾರತ ಉಪಖಂಡ ಸದಾ ಯುದ್ಧ ಭೀತಿಯಲ್ಲಿರಬೇಕು ಎಂಬುದು ಉಭಯ ದೇಶಗಳ ಬಯಕೆಯಾಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದ
ಭಯೋತ್ಪಾದಕರ ಶಿಬಿರ ಎಷ್ಟು ನಾಶವಾಯಿತೋ ಗೊತ್ತಿಲ್ಲ, ಆದರೆ ಪಾಕಿಸ್ತಾನವು ಅಮೆರಿಕಕ್ಕೆ ಇನ್ನಷ್ಟು ನಿಷ್ಠವಾಯಿತು. ಇರಾನ್ ವಿರುದ್ಧದ ಸಂಘರ್ಷದಲ್ಲಿ ಪಾಕಿಸ್ತಾನವು ಅಮೆರಿಕದ ಜೊತೆಗೆ ಕೈ ಜೋಡಿಸಿದ್ದೂ ಭಾರತದ ಮೇಲಿನ ಆತಂಕದಿಂದಲೇ. ಇದೇ ಸಂದರ್ಭದಲ್ಲಿ, ಭಾರತದಿಂದ ಅಪಾಯ ಹೆಚ್ಚಿದಂತೆಯೇ ಪಾಕಿಸ್ತಾನ ಚೀನಾಕ್ಕೆ ಹತ್ತಿರವಾಗಿರುತ್ತದೆ. ಭಾರತವನ್ನು ತೋರಿಸಿ ಪಾಕಿಸ್ತಾನದ ವಶದಲ್ಲಿರುವ ಭಾರತದ ನೆಲವನ್ನು ಬಳಸಿಕೊಳ್ಳಲು ಚೀನಾಕ್ಕೆ ಸಾಧ್ಯವಾಗುತ್ತದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಚೀನಾವು ಪಾಕಿಸ್ತಾನಕ್ಕೆ ತನ್ನ ಶಸ್ತ್ರಾಸ್ತ್ರಗಳ ನೆರವನ್ನು ನೀಡಿರುವುದು ಇದೇ ಕಾರಣದಿಂದ. ಈ ಎರಡೂ ಬಳಿಷ್ಟ ದೇಶಗಳಿಂದ ಪಾಕಿಸ್ತಾನವಾಗಲಿ, ಭಾರತವಾಗಲಿ ಒಳಿತನ್ನು ನಿರೀಕ್ಷಿಸುವಂತಿಲ್ಲ. ಸ್ವತಃ ಭಯೋತ್ಪಾದಕ ದೇಶಗಳಾಗಿರುವ ಅಮೆರಿಕ ಮತ್ತು ಚೀನಾದಿಂದ ‘ಭಯೋತ್ಪಾದನೆಗಳ ವಿರುದ್ಧದ ಕಾರ್ಯಾಚರಣೆ’ಯಲ್ಲಿ ಭಾರತ ನೆರವು ನಿರೀಕ್ಷಿಸುವುದು ಮೂರ್ಖತನ.
ಆದುದರಿಂದ, ಪಾಕಿಸ್ತಾನ-ಭಾರತ ತೃತೀಯ ಪಕ್ಷದ ಸಹಾಯವಿಲ್ಲದೆಯೇ ಮಾತುಕತೆಗಳ ಮೂಲಕ ಮತ್ತೆ ಪರಸ್ಪರ ಸಂಬಂಧ ಸುಧಾರಣೆಗಳಿಗೆ ಹೆಜ್ಜೆಗಳನ್ನಿಡಬೇಕು. ಮಾತುಕತೆಯ ಮುಚ್ಚಿದ ಬಾಗಿಲುಗಳನ್ನು ತೆರೆಯಲು ಉಭಯ ದೇಶಗಳು ಪರಸ್ಪರ ಕೈ ಜೋಡಿಸಬೇಕು. ‘ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದೇವೆ’ ಎನ್ನುವ ಅಮೆರಿಕ, ಚೀನಾ ದೇಶಗಳ ಉದ್ಧಟ ಹೇಳಿಕೆಗಳಿಗೆ ಉಭಯ ದೇಶಗಳ ಈ ನಡೆಯೇ ಪ್ರತ್ಯುತ್ತರವಾಗಿದೆ.







