ಎಲವೋ ಎನ್ನಬೇಕಾದಲ್ಲಿ ಅಯ್ಯಾ ಎಂದರೆ ಹೇಗೆ?

Photo: PTI
‘‘ಭಾರತದಲ್ಲಿ 2021ರಿಂದ ಪ್ರಯತ್ನಿಸುತ್ತಿದ್ದರೂ, ತನ್ನ ಸ್ಟಾರ್ ಲಿಂಕ್ ಸಂಸ್ಥೆಗೆ ಸ್ಯಾಟಲೈಟ್ ಇಂಟರ್ನೆಟ್ ಸೇವೆಗಳನ್ನು ಆರಂಭಿಸಲು ಅವಕಾಶ ನೀಡುತ್ತಿಲ್ಲ; ಭಾರತ ಸರಕಾರವು ಕೆಲವು ‘ಒಲಿಗಾರ್ಕ್’ (ಉದ್ಯಮಶಾಹಿ)ಗಳ ಹಿಡಿತದಲ್ಲಿರುವಂತಿದೆ’’ ಎಂದು ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೇರವಾಗಿ ದೂರಿದ್ದಾರೆ. ತನ್ನ ಸ್ಯಾಟಲೈಟ್ಗಳನ್ನು ನೆಲಕ್ಕೆ ಸಂಪರ್ಕಿಸುವುದಕ್ಕೆ ಅವರ ಸಂಸ್ಥೆಯು ಈಗಾಗಲೇ ನೂರಾರು ನಿರ್ದಿಷ್ಟ ಆಂಟೆನಾಗಳನ್ನು ಹೊಂದಿರುವ 20 ಗೇಟ್ವೇ ಸೈಟ್ಗಳನ್ನು ನಿರ್ಮಿಸಿ ಭಾರತದಲ್ಲಿ ಕಾರ್ಯಾಚರಣೆಗೆ ಸನ್ನದ್ಧವಾಗಿದೆ, ಆದರೆ ಈ ಒಲಿಗಾರ್ಕ್ ಗಳ ಹಿತಾಸಕ್ತಿ ರಕ್ಷಣೆಗಾಗಿ ಭಾರತ ಸರಕಾರವು ವಿಳಂಬ ಮಾರ್ಗ ಅನುಸರಿಸುತ್ತಿದೆ ಎಂಬುದು ಅವರ ಆಕ್ರೋಶ.
ಭಾರತ ಸರಕಾರವು ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯುನಿಕೇಷನ್ ಬೈ ಸ್ಯಾಟಲೈಟ್ (ಜಿಎಂಪಿಸಿಎಸ್) ಸೇವೆಗಳಿಗಾಗಿ ಏಕೀಕೃತ ಲೈಸನ್ಸ್ (ಯುಎಲ್) ಅನ್ನು ಮೂರು ಸಂಸ್ಥೆಗಳಿಗೆ ಮಂಜೂರು ಮಾಡಿದೆ. ವನ್ ವೆಬ್ ಇಂಡಿಯಾ ಕಮ್ಯೂನಿಕೇಷನ್ಸ್, ಜಿಯೊ ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಮತ್ತು ಸ್ಟಾರ್ ಲಿಂಕ್ ಸ್ಯಾಟಲೈಟ್ ಕಮ್ಯುನಿಕೇಷನ್ಸ್ - ಈ ಲೈಸನ್ಸ್ ಪಡೆದಿವೆ. ಸರಕಾರದ ಭಾರತ್ ನೆಟ್ ಯೋಜನೆ ಗ್ರಾಮೀಣ ಪ್ರದೇಶಗಳಿಗೆ ಇಂಟರ್ನೆಟ್ ಸಂಪರ್ಕ ತಲುಪಿಸುವಲ್ಲಿ ಇನ್ನೂ ಹೆಣಗಾಡುತ್ತಿರುವುದರಿಂದ, ಸ್ಯಾಟಲೈಟ್ ಆಧರಿತ ಇಂಟರ್ನೆಟ್ ಸೇವೆ ಅಂತಹ ಪ್ರದೇಶಗಳಿಗೆ ಸುಲಭವಾಗಿ ತಲುಪಬಹುದೆಂಬುದು ಸರಕಾರದ ಚಿಂತನೆಯಾಗಿತ್ತು.
ತನಗಾಗುತ್ತಿರುವ ವಿಳಂಬದ ಕುರಿತು ಮಸ್ಕ್ ತೋರಿಸಿರುವ ಅಸಹನೆಗೆ ಪ್ರತಿಕ್ರಿಯಿಸಿರುವ ಭಾರತ ಸರಕಾರವು, ತಮ್ಮ ಕಡೆಯಿಂದ ಯಾವುದೇ ತಾರತಮ್ಯ ಆಗಿಲ್ಲ. ಲೈಸನ್ಸ್ ನಿಯಮಗಳ ಪ್ರಕಾರ, ಭಾರತದ ಭದ್ರತಾ ಸಂಬಂಧಿ ಷರತ್ತುಗಳನ್ನು ಈ ಕಂಪೆನಿಗಳು ಅನುಸರಿಸಬೇಕು. ಆ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಅದು ಮುಗಿದ ತಕ್ಷಣ ಸ್ಪೆಕ್ಟ್ರಂ ಹಂಚಿಕೆಯಂತಹ ಮುಂದಿನ ಪ್ರಕ್ರಿಯೆಗಳು ಆರಂಭ ಆಗಲಿವೆ ಎಂದು ಹೇಳಿದೆ. ಸರಕಾರದ ಈ ನಿಲುವಿನಲ್ಲಿ ಹುರುಳಿದೆ. ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಈಗಾಗಲೇ ಭಾರತದ ಸುತ್ತಮುತ್ತ ಭೂತಾನ್, ಬಾಂಗ್ಲಾ, ಶ್ರೀಲಂಕಾ ದೇಶಗಳಲ್ಲೆಲ್ಲ ಕಾರ್ಯಾಚರಿಸುತ್ತಿದೆ. ಅಲ್ಲಿಂದ ಲಿಂಕ್ ಬಳಸಿಕೊಂಡು, ಭಾರತದ ಭದ್ರತೆಯ ಮೇಲೆ ಸವಾರಿ ನಡೆದ ಹಲವು ಉದಾಹರಣೆಗಳಿವೆ. ಈ ತಂತ್ರಜ್ಞಾನದ ಜಿಯೊಫೆನ್ಸಿಂಗ್ ಅಷ್ಟೊಂದು ನಿಖರ ಇಲ್ಲದಿರುವುದು ಇದಕ್ಕೆ ಕಾರಣ. ಮೇಲಾಗಿ, 2021ರಲ್ಲಿ ಇದೇ ಮಸ್ಕ್ ಕಂಪೆನಿ ಯಾವುದೇ ಲೈಸನ್ಸ್ ಇಲ್ಲದೆ ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಮುಂದಾದಾಗ, ಟೆಲಿಕಾಂ ಇಲಾಖೆ ಅದನ್ನು ಆಗ್ರಹಪೂರ್ವಕವಾಗಿ ತಡೆಯಬೇಕಾಯಿತು. ನೆಲದ ಕಾನೂನಿಗೆ ಗೌರವ ನೀಡದ ಎಲಾನ್ ಮಸ್ಕ್ ತರಹದ ಉದ್ಯಮಿಗಳು ಯಾವತ್ತೂ ಅಪಾಯಕಾರಿ.
ದೇಶದೊಳಗೆ ಈ ಸ್ಪೆಕ್ಟ್ರಂ ಹಂಚಿಕೆ ಏಲಂ ಮೂಲಕ ನಡೆಯಬೇಕೇ ಅಥವಾ ಪೂರ್ವನಿರ್ಧರಿತ ದರಗಳಲ್ಲಿ ಹಂಚಬೇಕೇ ಎಂಬ ಪ್ರಶ್ನೆ ಎದ್ದಾಗ, ದೇಶೀ ಮೂಲದ ಜಿಯೊ ಸಂಸ್ಥೆಯು ಅದು ಏಲಂ ಮೂಲಕ ನಡೆಯಬೇಕೆಂದು ಒತ್ತಾಯಿಸಿತ್ತು. ಆದರೆ ಸರಕಾರ ಅದನ್ನು ಪೂರ್ವನಿರ್ಧರಿತ ದರಗಳಲ್ಲಿ ಹಂಚಿಕೆ ಮಾಡುವ ಚಿಂತನೆಯಲ್ಲಿದೆ. ಸುಮಾರು 107 ಕೋಟಿ ಇಂಟರ್ನೆಟ್ ಬಳಕೆದಾರರಿರುವ ಭಾರತದಲ್ಲಿ ನಗರ ಪ್ರದೇಶಗಳಲ್ಲಿ ಜಿಯೊ, ಏರ್ಟೆಲ್ ಮತ್ತು ವಡಾಫೋನ್ಗಳು ಶೇ. 98 ಮಾರುಕಟ್ಟೆಯ ಮೇಲೆ ಹಿಡಿತ ಹೊಂದಿವೆ. ಗ್ರಾಮೀಣ ಭಾಗಗಳಲ್ಲಿ ಸ್ಟಾರ್ ಲಿಂಕ್ ತನ್ನ ಸ್ಯಾಟಲೈಟ್ ಇಂಟರ್ನೆಟ್ ಮೂಲಕ ಮಾರುಕಟ್ಟೆ ಹಿಡಿತ ಹೊಂದುವುದು ದೇಶೀ ಕಂಪೆನಿಗಳಿಗೆ ಪಥ್ಯವಿಲ್ಲ ಎಂಬುದೂ ನಿಜ. ಸರಕಾರ ಈ ನಿಟ್ಟನಲ್ಲಿ ಅಂತಿಮ ತೀರ್ಮಾನಕ್ಕೆ ಸಮಯ ಕೊಲ್ಲುತ್ತಿರುವುದು ಎಲಾನ್ ಮಸ್ಕ್ ಅಸಮಾಧಾನಕ್ಕೆ ಒಂದು ಕಾರಣ. ಈ ವಿಳಂಬ ಆದಷ್ಟೂ, ಅದರ ಲಾಭ ಪಡೆಯಲಿರುವುದು ರಿಲಯನ್ಸ್ ಬಳಗ. ಹಾಗಾಗಿಯೇ ‘ಒಲಿಗಾರ್ಕ್’ ಮಾತು ಕಿಡಿ ಹೊತ್ತಿಕೊಂಡದ್ದು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಕಟ ಬಳಗದಲ್ಲಿದ್ದಾಗಲೇ ಭಾರತದಲ್ಲಿ ಸ್ಟಾರ್ ಲಿಂಕ್ ಜಿಎಂಪಿಸಿಎಸ್ ಸೇವೆಗೆ ಅನುಮತಿ ಪಡೆಯುವ ಪ್ರಕ್ರಿಯೆ ವೇಗ ಪಡೆಯಿತು. ಮಧ್ಯೆ ಟ್ರಂಪ್ ಆಪ್ತಬಳಗದಿಂದ ಹೊರಬಿದ್ದಿದ್ದ ಮಸ್ಕ್, ಈಗ ಮತ್ತೆ ಅಲ್ಲಿ ಸೇರಿಕೊಂಡಿದ್ದಾರೆ. ಈ ಹೊಸ ಬಲ, ಮಸ್ಕ್ ಅಸಮಾಧಾನದ ಧ್ವನಿಗೆ ಖಾರ ಹಚ್ಚಿದೆ. ತನ್ನ ಬಳಗಕ್ಕೆ ಕೇಳಿದ್ದು ಸಿಗದಿದ್ದರೆ, ದಂಡನಾ ಸುಂಕಗಳನ್ನು ಮನಸೋಇಚ್ಛೆ ಹೇರುವುದಕ್ಕೂ ಟ್ರಂಪ್ ಆಡಳಿತ ಹೇಸುವುದಿಲ್ಲ ಎಂಬುದು ಈಗಾಗಲೇ ಭಾರತದ ಅನುಭವಕ್ಕೆ ಬಂದಿದೆ.
ಹೊರಗಿನವರು ದೇಶದ ಒಳಗಿನ ವ್ಯವಸ್ಥೆಯ ಬಗ್ಗೆ ಉಡಾಫೆಯ ಮಾತನಾಡಿದರೆ, ನಮ್ಮ ಒಳಗಿನ ವ್ಯವಹಾರಗಳಲ್ಲಿ ತಲೆ ಹಾಕಬೇಡಿ ಎಂದು ನಿರ್ದಾಕ್ಷಿಣ್ಯದಿಂದ ಹೇಳಬೇಕಿದ್ದ ಸರಕಾರ, ‘ಒಲಿಗಾರ್ಕ್’ ಟೀಕೆಗೆ ಪ್ರತಿಕ್ರಿಯಿಸಿರುವ ಸೌಮ್ಯ ಧ್ವನಿಯನ್ನು ಗಮನಿಸಿದರೆ, ಅಚ್ಚರಿ ಅನ್ನಿಸುವುದಿಲ್ಲ. ಉದಾರೀಕರಣದ ಹೆಸರಿನಲ್ಲಿ ಅಡ್ಡಾದಿಡ್ಡಿ ತೀರ್ಮಾನಗಳನ್ನು ತೆಗೆದುಕೊಂಡಿರುವ ಹಾಲಿ ಭಾರತ ಸರಕಾರವು ತನ್ನ ಗಾತ್ರವನ್ನೂ ಮೀರಿ ಬೆಳೆದಿರುವ ಖಾಸಗಿ ಕಾರ್ಪೊರೇಷನ್ಗಳನ್ನು (ಉದಾ: ಮೆಟಾ, ಆಲ್ಫಾಬೆಟ್, ಮೈಕ್ರೊಸಾಫ್ಟ್, ಸ್ಪೇಸ್ ಘಿ-ಟೆಸ್ಲಾ) ದೇಶದೊಳಗೆ ಮುಕ್ತವಾಗಿ ಬಿಟ್ಟುಕೊಂಡಿದೆ. ಈಗ ಅವರ ತಾಳಕ್ಕೆ ತಕ್ಕಂತೆ ಕುಣಿಯುವುದು ಅನಿವಾರ್ಯ ಆಗಿದೆ. ಹಾಗಾಗಿ, ‘ಒಲಿಗಾರ್ಕ್’ ಅಧೀನ ಎಂದು ತನ್ನನ್ನು ಟೀಕಿಸಿದ ಉದ್ಯಮಿಗೆ ‘‘ಎಲವೋ, ನಮ್ಮ ನೆಲದ ಕಾನೂನು ಪಾಲಿಸಲಾಗದಿದ್ದರೆ ತೊಲಗು’’ ಎನ್ನುವ ಬದಲು, ‘‘ಅಯ್ಯಾ ನಾವು ತಾರತಮ್ಯ ನೀತಿ ಅನುಸರಿಸುತ್ತಿಲ್ಲ’’ ಎಂದು ಸಮಜಾಯಿಷಿ ಕೊಡುವ ಸ್ಥಿತಿಗೆ ಸರಕಾರ ತಲುಪಿದೆ.






