ಕಾಗದಗಳ ಮೇಲೆ ಎಲ್ಲವೂ ಪ್ಲಸ್ಸು; ಫಲಿತಾಂಶ ಮಾತ್ರ ಮೈನಸ್ಸು!

Photo: AI
ಸರಕಾರಿ ಅಂಕಿಅಂಶಗಳ ಮ್ಯಾಜಿಕ್ಕಿಗೆ ಯಾವುದೇ ತಲೆ-ಬುಡ ಇರುವುದಿಲ್ಲ ಎಂಬುದನ್ನು ಸಾಬೀತುಪಡಿಸುವುದಕ್ಕೆ ಇದೊಂದು ‘ಕ್ಲಾಸಿಕ್’ ಉದಾಹರಣೆ. 2002-2025ರ ನಡುವೆ ಭಾರತದ ಹಸಿರು ಆಚ್ಛಾದಿತ ಪ್ರದೇಶಗಳ ಪ್ರಮಾಣದಲ್ಲಿ ಶೇ. 5.6ರಷ್ಟು ಇಳಿಕೆ ಆಗಿದೆ. 2001ರಲ್ಲಿ ದೇಶದ ಭೂ ಪ್ರದೇಶದ ಶೇ. 36.95 ಭಾಗದಲ್ಲಿ ಹಸಿರು ತುಂಬಿದ್ದರೆ, ಅದರ ಪ್ರಮಾಣ ಈಗ 2025ರ ಹೊತ್ತಿಗೆ 31.35ಕ್ಕೆ ಇಳಿದಿದೆ ಎಂದು ಇತ್ತೀಚೆಗೆ ಬಿಡುಗಡೆಗೊಂಡ ‘ಕ್ಲೈಮೇಟ್ ಟ್ರೆಂಡ್ಸ್’ ಅಧ್ಯಯನ ಕಂಡುಕೊಂಡಿದೆ. ‘ಭಾರತದಾದ್ಯಂತ ಹಸಿರು ಆಚ್ಛಾದಿತ ಭಾಗದಲ್ಲಿ ಏರಿಳಿತಗಳು ಮತ್ತು ಬೇಸಗೆಯ ಉಷ್ಣತೆಯ ಮೇಲೆ ಅದರ ಪರಿಣಾಮಗಳ ವಿಶ್ಲೇಷಣೆ’ ಎಂಬ ಹೆಸರಿನ ಅಧ್ಯಯನ ಇದು.
ಈ ಅಧ್ಯಯನದ ಕಾಣ್ಕೆಗಳು ಸ್ವಲ್ಪ ವಿಲಕ್ಷಣ ಎಂದು ಮೇಲುನೋಟಕ್ಕೇ ಅನ್ನಿಸುತ್ತಿವೆ. ಏಕೆಂದರೆ, ಭಾರತದ ಅರಣ್ಯ (ಸಂರಕ್ಷಣೆ) ಕಾಯ್ದೆ 1980 ಮತ್ತದರ ನಿಯಮಗಳು ಹಾಗೂ ಮಾರ್ಗದರ್ಶಿಗಳ ಅನ್ವಯ, ದೇಶದ ಯಾವುದೇ ಅರಣ್ಯ ಭೂಪ್ರದೇಶವನ್ನು ಅರಣ್ಯೇತರ ಉದ್ದೇಶಗಳಿಗೆಂದು ಬಳಸಿದಾಗ, ಎಷ್ಟು ಭೂಮಿಯನ್ನು ಆ ಅರಣ್ಯೇತರ ಉದ್ದೇಶಕ್ಕೆ ಬಳಸಲಾಗಿದೆಯೋ ಅಷ್ಟೇ ಪ್ರಮಾಣದ ಭೂಮಿಯನ್ನು ಗುರುತಿಸಿ, ಅಲ್ಲಿ ಪರಿಹಾರ ರೂಪದಲ್ಲಿ ಅರಣ್ಯ ಪುನರ್ನಿರ್ಮಾಣ ಮಾಡಬೇಕು ಮತ್ತು ಅದರ ಸಂಪೂರ್ಣ ಖರ್ಚನ್ನು ಅರಣ್ಯ ಭೂಮಿ ಬಳಸಿದವರು ಭರಿಸಬೇಕು. ಈ ನಿಯಮ ಖಾಸಗಿಯವರಿಗೆ ಮಾತ್ರವಲ್ಲದೆ, ಸರಕಾರಗಳಿಗೂ ಅನ್ವಯ. ಅವರು ತಮ್ಮ ಯೋಜನೆಯ ಆರಂಭದ ಹಂತದಲ್ಲೇ ಈ ಕುರಿತು ಸಂಪೂರ್ಣ ವಿವರಗಳನ್ನು ಸಂಬಂಧಿತ ರಾಜ್ಯದ ಅರಣ್ಯ ಇಲಾಖೆಯ ಮೂಲಕ ಭಾರತ ಸರಕಾರದ ಪರಿಸರ ಮತ್ತು ಅರಣ್ಯ ಇಲಾಖೆಗೆ ಸಲ್ಲಿಸಿ, ಅನುಮೋದನೆ ಪಡೆಯಬೇಕು. ಒಂದು ವೇಳೆ ಅರಣ್ಯೇತರ ಭೂಮಿ ಲಭ್ಯ ಇಲ್ಲದಿದ್ದರೆ ಅಥವಾ ಅದರ ಲಭ್ಯತೆ ಕಡಿಮೆ ಇದ್ದರೆ, ಕಳಪೆ ಗುಣಮಟ್ಟದ ಅರಣ್ಯ ಇರುವ ಭೂಮಿಯೊಂದನ್ನು ಆಯ್ಕೆ ಮಾಡಿ, ಅಲ್ಲಿ ಯೋಜನೆಗೆ ಬೇಕಾದ ಭೂಮಿಯ ದುಪ್ಪಟ್ಟು ಗಾತ್ರದ ಭೂಮಿಯನ್ನು ಪುನಃ ಅರಣ್ಯೀಕರಣಕ್ಕೆ ಬಳಸಬೇಕಾಗುತ್ತದೆ. ಒಟ್ಟಿನಲ್ಲಿ, ರಾಜ್ಯ ಸರಕಾರಗಳು ತಮ್ಮ ವ್ಯಾಪ್ತಿಯ ಭೌಗೋಳಿಕ ಪ್ರದೇಶದಲ್ಲಿ ಶೇ. 33 ಅರಣ್ಯ ಭೂಮಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕಾದ ಕಾನೂನಾತ್ಮಕ ಹೊಣೆ ಹೊಂದಿವೆ.
ದೇಶದಲ್ಲಿ ಪರಿಹಾರ ರೂಪದ ಅರಣ್ಯೀಕರಣ ಯೋಜನೆ (CAMPA) ಮಾತ್ರವಲ್ಲದೇ, ರಾಷ್ಟ್ರೀಯ ಅರಣ್ಯೀಕರಣ ಯೋಜನೆ (NAP), ನ್ಯಾಷನಲ್ ಮಿಷನ್ ಫಾರ್ ಗ್ರೀನ್ ಇಂಡಿಯಾ (GIM), ನಗರ ವನ ಯೋಜನೆ ಎಂದೆಲ್ಲ ಪ್ರತ್ಯೇಕ ಹಸಿರು ಆಚ್ಛಾದನೆ ಯೋಜನೆಗಳೂ ಇವೆ. ಪ್ರತೀ ವರ್ಷ ಈ ಯೋಜನೆಗಳಿಗೆಲ್ಲ 3,000 ಕೋಟಿಗೂ ಮಿಕ್ಕಿ ಹಣವನ್ನು ತೆಗೆದಿರಿಸಲಾಗುತ್ತಿದೆ. ಸರಕಾರದ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ಸ್ ವರದಿ 2023ರ ಪ್ರಕಾರ, ಈಗ ಭಾರತದಲ್ಲಿ 7,15,343 ಚದರ ಕಿ.ಮೀ. ಅರಣ್ಯ ಭೂಮಿ ಇದೆ ಮತ್ತು ಇದು ದೇಶದ ಒಟ್ಟು ಭೌಗೋಳಿಕ ವ್ಯಾಪ್ತಿಯ ಶೇ. 21.76ರಷ್ಟಾಗುತ್ತದೆ. ಸರಕಾರಗಳು ಕಾಗದ ಪತ್ರಗಳ ಮೇಲೆ ತೋರಿಸುವ ಈ ಎಲ್ಲ ದಾಖಲೆಗಳು ಮತ್ತು ವೈಜ್ಞಾನಿಕ ಅಧ್ಯಯನಗಳ ನಡುವಣ ಈ ಕಂದರ ಅರಣ್ಯೀಕರಣದ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರಗಳತ್ತಲೇ ನಮ್ಮ ಗಮನವನ್ನು ಸೆಳೆಯುತ್ತದೆ. ಪರ್ಯಾಯ ಅರಣ್ಯೀಕರಣ ಮತ್ತು ಅರಣ್ಯ ಪ್ರಮಾಣ ಹೆಚ್ಚಿಸುವ ಯೋಜನೆಗಳು ಸೇರಿದಂತೆ ದೇಶದ ಒಟ್ಟು ಹಸಿರು ಆಚ್ಛಾದಿತ ಪ್ರದೇಶ ಹೆಚ್ಚಾಗುವುದು ಬಿಡಿ, ಇದ್ದಷ್ಟೇ ಉಳಿದೂ ಇಲ್ಲ; ಬದಲಾಗಿ ಶೇ.5ರಷ್ಟು ಕಡಿಮೆ ಆಗಿದೆ ಎಂಬುದು ಆತಂಕಕಾರಿ ಸಂಗತಿ.
ಈ ಆತಂಕಗಳು ಕೇವಲ ಆಡಳಿತಾತ್ಮಕ ಅವ್ಯವಸ್ಥೆಗೆ ಸೀಮಿತ ಅಲ್ಲ. ಇದೆಲ್ಲ ಅಂತಿಮವಾಗಿ ನಮ್ಮ ಬದುಕಿನ ಮೇಲೇ ನೇರ ಪರಿಣಾಮ ಬೀರುತ್ತಿದೆ ಎಂಬುದನ್ನು ಈ ಅಧ್ಯಯನ ಕಂಡುಕೊಂಡಿದೆ. ಹಸಿರು ಆಚ್ಛಾದಿತ ಅಲ್ಲದ ಪ್ರದೇಶಗಳಲ್ಲಿ ಬೇಸಗೆಯ ಉಷ್ಣತೆಯು ಬೇರೆಡೆಗಳಿಗಿಂತ 1-2.5ಲಿಅನಷ್ಟು ಹೆಚ್ಚಿರುತ್ತದೆ ಎಂದು ಅಧ್ಯಯನ ಹೇಳಿದೆ. ಇಂದು ಹವಾಮಾನ ಬದಲಾವಣೆಯು 21ನೇ ಶತಮಾನದ ಅತಿದೊಡ್ಡ ಸವಾಲು. ಭೂಮಿಯ ಉಷ್ಣತೆ ಹೆಚ್ಚಳದಿಂದಾಗಿ ಪರಿಸರ, ಮಾನವರ ಆರೋಗ್ಯ, ಜಲಸಂಪನ್ಮೂಲಗಳು, ಕೃಷಿ, ಜೀವವೈವಿಧ್ಯಗಳೆಲ್ಲವುಗಳ ಮೇಲೂ ವ್ಯಾಪಕ ದುಷ್ಪರಿಣಾಮಗಳು ಉಂಟಾಗುತ್ತಿವೆ. ಗ್ರೀನ್ಹೌಸ್ ಅನಿಲಗಳ ಕಾರಣದಿಂದಾಗಿ ಬಿಸಿಗಾಳಿ, ಬರ ಪರಿಸ್ಥಿತಿ ಇತ್ಯಾದಿ ವಿಕೋಪಗಳೆಲ್ಲ ಸೃಷ್ಟಿ ಆಗುತ್ತಿವೆ. ಇಂತಹ ಅಪಾಯಗಳಿಗೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಏಕೆಂದರೆ, ಇಲ್ಲಿನ ಜನಸಂಖ್ಯೆ, ಕ್ಷಿಪ್ರ ನಗರೀಕರಣ, ಹವಾಮಾನ ಅವಲಂಬಿತ ಕೃಷಿ ಮತ್ತಿತರ ಅಂಶಗಳು ಇಲ್ಲಿನ ಭೂ ಬಳಕೆ-ಭೂ ಆಚ್ಛಾದನೆ (LULC) ಸ್ಥಿತಿಯ ಸಂತುಲನವನ್ನು ಹದ ತಪ್ಪಿಸುತ್ತಿವೆ ಮತ್ತು ಅದರ ಫಲವಾಗಿ ಎಲ್ ನಿನೊ/ಲಾ ನಿನಾ ಇತ್ಯಾದಿಗಳೆಲ್ಲ ದೇಶದ ದೈನಂದಿನ ಚರ್ಚೆಯ ಭಾಗಗಳಾಗತೊಡಗಿವೆ.
ಈ ಹಿನ್ನೆಲೆಯಲ್ಲಿ, ಸದ್ಯ ಅತಿಹೆಚ್ಚು ಅರಣ್ಯ ನಾಶ ಆಗುತ್ತಿರುವ ಪಶ್ಚಿಮ ಭಾರತ, ಗಂಗಾ ನದಿಯ ಬಯಲು ಪ್ರದೇಶಗಳು, ಮಧ್ಯ ಮತ್ತು ದಕ್ಷಿಣ ಭಾರತದ ಭಾಗಗಳಲ್ಲಿ ಪರ್ಯಾಯ ಅರಣ್ಯ ಭೂಮಿ ನಿರ್ಮಾಣದ ಜೊತೆಗೆ ಇರುವ ಅರಣ್ಯಗಳನ್ನು ಹಾಗೆಯೇ ರಕ್ಷಿಸಿಕೊಳ್ಳುವ ಅಗತ್ಯವಿದೆ. ಈ ಪುರಾತನ ಅರಣ್ಯ ಭೂಮಿಗಳು ನೆಲಕ್ಕೆ ಮೇಲ್ಛಾವಣಿ ಆಗುವುದಷ್ಟೇ ಅಲ್ಲದೆ, ವಾತಾವರಣದ ತೇವಾಂಶ ರಕ್ಷಣೆ, ನೆಲದ ತೇವಾಂಶ ನಿಯಂತ್ರಣ ಮತ್ತು ಕಾರ್ಬನ್ ಸಂಗ್ರಹಕ್ಕೆ ಕಾರಣ ಆಗಬಲ್ಲವು. ಪರಿಸರ ಮರುನಿರ್ಮಾಣ ಯೋಜನೆಗಳನ್ನು ಪ್ರದೇಶವಾರು ಅವಶ್ಯಕತೆಗಳಿಗೆ ತಕ್ಕಂತೆ ಮಾರ್ಪಡಿಸಿಕೊಳ್ಳಬೇಕು, ನಗರೀಕರಣ ಯೋಜನೆಗಳಲ್ಲಿ ಸ್ವಲ್ಪವಾದಾರೂ ಹಸಿರು ಮೇಲ್ಮುಚ್ಚು ರೂಪುಗೊಳ್ಳಬೇಕು, ಹಸಿರು ಮೂಲಸೌಕರ್ಯಗಳ ಜೊತೆ ನೀರಿನ ನಿರ್ವಹಣೆಯೂ ಇನ್ನಷ್ಟು ಪರಿಣಾಮಕಾರಿ ಆಗಬೇಕು, ಉಪಗ್ರಹ ಆಧರಿತ ನಿಗಾ ವ್ಯವಸ್ಥೆ ರೂಪುಗೊಳ್ಳಬೇಕು. ಹವಾಮಾನ ನೀತಿಗಳಲ್ಲಿ ಹಸಿರು ಆಚ್ಛಾದನೆ ಮಾತ್ರವಲ್ಲದೆ ಉಷ್ಣತೆ ನಿಯಂತ್ರಣ, ನೀರಿನ ನಿರ್ವಹಣೆ, ನಗರ ವಿನ್ಯಾಸ-ಪರಿಸರ ಕಾರ್ಯಕ್ಷಮತೆ, ಗ್ರೀನ್ ಹೌಸ್ ಅನಿಲಗಳ ಹೊರಸೂಸುವಿಕೆ ನಿಯಂತ್ರಣಗಳೆಲ್ಲ ಒಳಗೊಳ್ಳುವಂತಾಗಬೇಕು ಎಂದು ಅಧ್ಯಯನ ಹೇಳಿದೆ. ಈವತ್ತು ನಮ್ಮ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಭಾರತ ಸರಕಾರ ನಿಜಕ್ಕೂ ಆದ್ಯತೆಯ ಮೇರೆಗೆ ಗಮನ ಹರಿಸಬೇಕಾದ ಮೌಲ್ಯಯುತ ಅಧ್ಯಯನ ಇದು.






