ಹೊಲ ಮೇಯುತ್ತಿರುವ ಲೋಕಪಾಲವೆನ್ನುವ ಬೇಲಿ

PC: lokpal.gov.in
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬೇಲಿಯೇ ಹೊಲ ಮೇಯುವುದಕ್ಕೆ ಮುಂದಾಗಿರುವ ಘಟನೆ ಇದೀಗ ಚರ್ಚೆಯಲ್ಲಿದೆ. ಸರಕಾರಿ ಯಂತ್ರಗಳನ್ನು ದುರುಪಯೋಗ ಪಡಿಸುವ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಲಗಾಮು ಹಾಕಬೇಕಾದ ಲೋಕಪಾಲ ಇದೀಗ ತಾನೇ ಸರಕಾರಿ ಯಂತ್ರವನ್ನು ದುರುಪಯೋಗ ಪಡಿಸಿದ ಆರೋಪವನ್ನು ಹೊತ್ತುಕೊಂಡಿದೆ. ಮೂಲಗಳ ಪ್ರಕಾರ ಲೋಕಪಾಲದ ಅಧ್ಯಕ್ಷರು ಮತ್ತು ಆರು ಸದಸ್ಯರಿಗಾಗಿ ಏಳು ಬಿಎಂಡಬ್ಲ್ಯು ಸೀರೀಸ್ ಕಾರುಗಳನ್ನು ಕೊಳ್ಳಲು ಟೆಂಡರ್ ಕರೆದಿದೆ. ಪ್ರತೀ ಕಾರಿಗೆ ಸರಿ ಸುಮಾರು 70 ಲಕ್ಷ ರೂ. ಬೆಲೆಯಾಗಿದ್ದು ಒಟ್ಟು ಏಳು ಕಾರುಗಳಿಗೆ ಐದು ಕೋಟಿ ರೂಪಾಯಿವರೆಗೆ ವೆಚ್ಚವಾಗಲಿದೆ. ಮಾಧ್ಯಮಗಳ ವರದಿಗಳ ಪ್ರಕಾರ, ಅಕ್ಟೋಬರ್ 16ರಂದು ಟೆಂಡರ್ ಹೊರಡಿಸಲಾಗಿದ್ದು, ಈ ಕಾರುಗಳನ್ನು ದಿಲ್ಲಿಯ ವಸಂತ ಕುಂಜ್ ಇನ್ಸ್ಟಿಟ್ಯೂಟ್ ಪ್ರದೇಶದಲ್ಲಿರುವ ಲೋಕಪಾಲ ಕಚೇರಿಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ. ಎರಡು ವಾರಗಳ ಒಳಗೆ ವಿತರಿಸುವವರಿಗೆ ಆದ್ಯತೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದೆ. ಸರಕಾರದ ಹಣ ದುಂದು ವೆಚ್ಚವಾಗದಂತೆ ಕಣ್ಗಾವಲು ಮಾಡಬೇಕಾಗಿದ್ದ ಸಂಸ್ಥೆಯೇ 5 ಕೋಟಿ ರೂ ಬೆಲೆಬಾಳುವ ಕಾರುಗಳನ್ನು ಕೊಂಡುಕೊಳ್ಳಲು ಮುಂದಾದರೆ, ಇತರ ಸರಕಾರಿ ಅಧಿಕಾರಿಗಳ ದುಂದುವೆಚ್ಚವನ್ನು ಪ್ರಶ್ನಿಸುವ ನೈತಿಕತೆಯನ್ನು ಅದು ಉಳಿಸಿಕೊಳ್ಳುತ್ತದೆಯೇ ಎಂದು ವಿರೋಧ ಪಕ್ಷದ ನಾಯಕರು ಇದೀಗ ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ, ಹಲವು ಹಿರಿಯ ನಿವೃತ್ತ ಅಧಿಕಾರಿಗಳು ಲೋಕಪಾಲದ ಈ ವಿಲಾಸಿ ಖರೀದಿಯನ್ನು ಟೀಕಿಸುತ್ತಿದ್ದಾರೆ.
ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಅವರು ಈ ಖರೀದಿಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದು ಟೆಂಡರನ್ನು ರದ್ದುಗೊಳಿಸಿ ಲೋಕಪಾಲ ಸಂಸ್ಥೆಯ ಘನತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಕಾರುಗಳ ಬದಲಿಗೆ ಮೇಕ್ ಇಂಡಿಯಾ ಇಲೆಕ್ಟ್ರಿಕ್ ವಾಹನಗಳನ್ನು ಬಳಸುವಂತೆಯೂ ಸಲಹೆ ನೀಡಿದ್ದಾರೆ. ‘‘ಈ ಟೆಂಡರನ್ನು ರದ್ದು ಪಡಿಸಿ ಮಹೀಂದ್ರ ಕಂಪೆನಿಯ ಎಕ್ಸ್ ವಿವಿ 9ಇ, ಬಿಇ6 ಅಥವಾ ಟಾಟಾ ಕಂಪೆನಿಯ ಕಾರುಗಳನ್ನು ಖರೀದಿಸಬಹುದಾಗಿದೆ. ವೆಚ್ಚ ಕಡಿಮೆಯಾಗುತ್ತದೆ ಮಾತ್ರವಲ್ಲ, ಈ ಕಾರುಗಳ ದರ್ಜೆಯೂ ಅತ್ಯುತ್ತಮವಾಗಿದೆ’’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಲೋಕಪಾಲರ ವರ್ತನೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೇ ಸಾಧಾರಣವಾದ ಸೆಡಾನ್ ಕಾರುಗಳನ್ನು ನೀಡಲಾಗುತ್ತದೆ. ಅವರಿಗಿಲ್ಲದ ಐಶಾರಾಮಿ ಕಾರುಗಳು ಲೋಕಪಾಲ ಸದಸ್ಯರಿಗೆ ಯಾಕೆ? ಎಂದು ಕೇಳಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಐಷಾರಾಮಿಕಾರುಗಳಿಗಾಗಿ ಜನಸಾಮಾನ್ಯರ ಹಣವನ್ನು ಪೋಲು ಮಾಡಲು ಲೋಕಪಾಲ ಸಂಸ್ಥೆಯೇ ಮುಂದಾಗಿರುವುದು ಒಂದು ವ್ಯಂಗ್ಯವಾಗಿದೆ. ಈ ಕಾರುಗಳನ್ನು ಲೋಕಪಾಲ ಸಂಸ್ಥೆಯ ಸದಸ್ಯರು ನಿರಾಕರಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
2010ರಲ್ಲಿ ಭ್ರಷ್ಟಾಚಾರದ ವಿರುದ್ಧ ದೇಶಾದ್ಯಂತ ಬಹುದೊಡ್ಡ ಆಂದೋಲನವೊಂದು ಎದ್ದಿತು. ಆ ಆಂದೋಲನದ ಹಿಂದೆ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರಿದ್ದರು. ‘ಭಾರತದ ಪಾಲಿನ ಎರಡನೇ ಸ್ವಾತಂತ್ರ್ಯ ಹೋರಾಟ’ ಎಂಬ ರೀತಿಯಲ್ಲಿ ಈ ಆಂದೋಲನವನ್ನು ಬಿಂಬಿಸಲಾಗಿತ್ತು. ಈ ಹೋರಾಟದ ಫಲವಾಗಿ ನನೆಗುದಿಯಲ್ಲಿದ್ದ ಲೋಕಪಾಲ ಮಸೂದೆ ಜೀವ ಪಡೆಯಿತು. ಮೊರಾರ್ಜಿ ದೇಸಾಯಿಯ ಕಾಲದಿಂದಲೂ ಈ ಲೋಕಪಾಲ ಮಸೂದೆಯನ್ನು ಮಂಡಿಸುವ ಪ್ರಯತ್ನ ನಡೆಯುತ್ತಲೇ ಬಂದಿತ್ತು. 1969ರಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರವಾಯಿತಾದರೂ, ರಾಜ್ಯ ಸಭೆಯಲ್ಲಿ ವಿಫಲವಾಯಿತು. ಸರಕಾರದ ಅನುಮತಿಯಿಲ್ಲದೆ ಭ್ರಷ್ಟ ಜನಪ್ರತಿನಿಧಿಗಳು ಮತ್ತು ಕೇಂದ್ರದ ಸರಕಾರಿ ಅಧಿಕಾರಿಗಳನ್ನು ವಿಚಾರಣೆ ನಡೆಸುವ ಮತ್ತು ಅವರಿಗೆ ಶಿಕ್ಷೆ ವಿಧಿಸುವ ಅಧಿಕಾರವನ್ನು ಲೋಕಪಾಲಕ್ಕೆ ನೀಡುವ ಈ ಮಸೂದೆ ಜಾರಿಗೊಳ್ಳುವುದು ಜನಪ್ರತಿನಿಧಿಗಳಿಗೆ ಯಾಕೆ ಇಷ್ಟವಿಲ್ಲ ಎನ್ನುವುದನ್ನು ಊಹಿಸುವುದು ಕಷ್ಟವೇನಿಲ್ಲ. ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಾವಾಗಿಯೇ ತಮ್ಮ ಮೂಗುದಾರವನ್ನು ತನಿಖಾ ಸಂಸ್ಥೆಯ ಕೈಗೆ ಒಪ್ಪಿಸುವುದು ಸಾಧ್ಯವಿಲ್ಲದ ಮಾತು. ಇಷ್ಟಾದರೂ ಎಲ್ಲ ಸರಕಾರಗಳೂ ಈ ಮಸೂದೆಯನ್ನು ಜಾರಿಗೊಳಿಸುವ ವಿಫಲ ಪ್ರಯತ್ನ ನಡೆಸಿವೆ. ಕೊನೆಗೂ ಜನಾಂದೋಲನದ ಪರಿಣಾಮವಾಗಿ 2013ರಲ್ಲಿ ಲೋಕಪಾಲ ಮಸೂದೆ ಅಂಗೀಕಾರವಾಗಿತ್ತು. ವಿಪರ್ಯಾಸವೆಂದರೆ, 2014ರಲ್ಲಿ ಮೋದಿ ನೇತೃತ್ವದ ಎನ್ಡಿಎ ಸರಕಾರ ಅಸ್ತಿತ್ವಕ್ಕೆ ಬಂದದ್ದೇ, ಲೋಕಪಾಲ ಸಂಸ್ಥೆಯನ್ನು ಮೂಲೆಗುಂಪು ಮಾಡಿತು. ಯುಪಿಎ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಆಂದೋಲನ ರೂಪಿಸಿ ಲೋಕಪಾಲ ಅಸ್ತಿತ್ವಕ್ಕೆ ಬರಲು ಕಾರಣರಾದ ನಾಯಕರೆಲ್ಲ ಬಾಯಿ ಮುಚ್ಚಿ ಕೂತರು. ಹಲವರು ಮೋದಿ ನೇತೃತ್ವದ ಸರಕಾರದಲ್ಲೇ ಉನ್ನತ ಹುದ್ದೆಗಳನ್ನು ತಮ್ಮದಾಗಿಸಿಕೊಂಡರು. ಮೋದಿ ಸರಕಾರವು ಅಧಿಕಾರಕ್ಕೆ ಬಂದು ಸುಮಾರು ಐದು ವರ್ಷಗಳ ಕಾಲ ಈ ಸಂಸ್ಥೆಗೆ ಮುಖ್ಯಸ್ಥರನ್ನು ನೇಮಕ ಮಾಡಿರಲಿಲ್ಲ. ಎಲ್ಲ ತನಿಖಾ ಸಂಸ್ಥೆಗಳ ಬೆನ್ನೆಲುಬುಗಳನ್ನು ಮುರಿದು ಹಾಕಿದಂತೆಯೇ ಪ್ರಧಾನಿ ಮೋದಿಯವರು ಲೋಕಪಾಲ ಸಂಸ್ಥೆಯನ್ನು ತನ್ನ ಕೈಗೊಂಬೆಯಾಗಿಸಿಕೊಂಡರು. ಇಂದು ಲೋಕಪಾಲ ಸಂಸ್ಥೆಯು ಇದ್ದೂ ಇಲ್ಲದಂತಾಗಿದೆ. ದೇಶದಲ್ಲಿ ಲೋಕಪಾಲ ಸಂಸ್ಥೆ ಇದೆ ಎನ್ನುವುದು ಜನರಿಗೆ ಗೊತ್ತಾಗಿರುವುದೇ ಅದರ ಐಶಾರಾಮಿ ಕಾರು ಖರೀದಿ ಹಗರಣದಿಂದಾಗಿ.
ಲೋಕಪಾಲ ಸಂಸ್ಥೆ ಕಾರ್ಯ ನಿರ್ವಹಿಸಲು ಆರಂಭಿಸಿದ ಐದು ವರ್ಷಗಳ ಬಳಿಕ ಅದು ಕೇವಲ 24 ಪ್ರಕರಣಗಳನ್ನಷ್ಟೇ ತನಿಖೆಗೆ ಆದೇಶಿಸಿದೆ ಮತ್ತು ಆರು ಪ್ರಕರಣಗಳಲ್ಲಿ ಮಾತ್ರ ಕಾನೂನು ಕ್ರಮಕ್ಕೆ ಅನುಮತಿ ನೀಡಿದೆ ಎಂದು ಮಾಧ್ಯಮಗಳು ಇತ್ತೀಚೆಗೆ ವರದಿ ಮಾಡಿದ್ದವು. ಶೇ. 90ರಷ್ಟು ದೂರುಗಳನ್ನು ವಿವಿಧ ನೆಪಗಳನ್ನು ಮುಂದಿಟ್ಟುಕೊಂಡು ಅದು ತಿರಸ್ಕರಿಸಿದೆ. ಒಟ್ಟು ದೂರುಗಳ ಶೇ. 3ರಷ್ಟು ಪ್ರಧಾನಿ, ಸಂಸದರು ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ದಾಖ ಲಾಗಿದ್ದರೆ, ಶೇ. 21ರಷ್ಟು ದೂರುಗಳು ಕೇಂದ್ರ ಸರಕಾರದ ಎ, ಬಿ, ಸಿ, ಅಥವಾ ಡಿ ಗುಂಪಿನ ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗಿವೆ. ಆದರೆ ಸರಕಾರದ ಭಾಗವಾಗಿರುವ ನಾಯಕರ ವಿರುದ್ಧ ತನಿಖೆ ನಡೆಸಲು ಲೋಕಪಾಲ ಹಿಂಜರಿಯುತ್ತಾ ಬಂದಿದೆ. ಕೇಂದ್ರ ಸರಕಾರಕ್ಕೆ ತಲೆನೋವಾಗಿರುವ ಸಂಸದೆ ಮಹುವಾ ಮೊಯಿತ್ರಾ, ಶಿಬುಸೊರೇನ್ ನಂತಹ ಜನಪ್ರತಿನಿಧಿಗಳನ್ನಷ್ಟೇ ಗುರಿ ಮಾಡಿ, ತನ್ನ ಸೇಡಿನ ರಾಜಕಾರಣಕ್ಕೆ ಲೋಕಪಾಲವನ್ನು ಸರಕಾರ ದುರುಪಯೋಗಪಡಿಸಿದೆ. ಇತ್ತೀಚೆಗೆ ಲೋಕಪಾಲ ಮುಖ್ಯಸ್ಥರಾಗಿ ಆಯ್ಕೆಯಾದ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅಜಯ್ ಮಾಣಿಕ್ ರಾವ್ ಖಾನ್ವಿಲ್ಕರ್ ಗುಜರಾತ್ ಗಲಭೆ ಪ್ರಕರಣದಲ್ಲಿ ಮೋದಿಗೆ ಸಿಟ್ ನೀಡಿದ್ದ ಕ್ಲೀನ್ ಚಿಟ್ನ್ನು ಎತ್ತಿ ಹಿಡಿದಿದ್ದವರಾಗಿದ್ದರು. ಇವರಿಂದ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವರ ವಿರುದ್ಧದ ದೂರುಗಳಿಗೆ ನ್ಯಾಯ ನಿರೀಕ್ಷಿಸಲು ಸಾಧ್ಯವೆ? ಇಂತಹ ತಂಡ ಮುನ್ನಡೆಸುತ್ತಿರುವ ಲೋಕಪಾಲ ಸಂಸ್ಥೆ ಐಶಾರಾಮಿ ಕಾರುಗಳಿಗಾಗಿ ಟೆಂಡರ್ಗಳನ್ನು ಹೊರಡಿಸಿದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಯುಪಿಎ ಕಾಲದಲ್ಲಿ ಸರಕಾರದ ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ರೂಪಿಸಿ ಲೋಕಪಾಲ ಸ್ಥಾಪನೆ ಮಾಡಿದವರು, ಇದೀಗ ಲೋಕಪಾಲ ಸಂಸ್ಥೆಯೊಳಗಿರುವ ಭ್ರಷ್ಟರನ್ನು ನಿಯಂತ್ರಿಸಲು ಹೊಸತೊಂದು ಆಂದೋಲನ ರೂಪಿಸಲು ಮುಂದಾಗಬೇಕಾಗಿದೆ.







