ಸಂವಿಧಾನದೆಡೆಗೆ ಶೂ ಎಸೆದ ಸನಾತನವಾದಿ!

ಸಿಜೆಐ ಬಿ.ಆರ್. ಗವಾಯಿ / ಆರೋಪಿ ರಾಕೇಶ್ ಕಿಶೋರ್ (Photo credit: indiatoday.in)
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಆರೆಸ್ಸೆಸ್ ಸಂಘಟನೆ ಶತಮಾನೋತ್ಸವವನ್ನು ಆಚರಿಸುತ್ತಿರುವ ಹೊತ್ತಿನಲ್ಲೇ, ಆರೆಸ್ಸೆಸ್ ಸಿದ್ಧಾಂತದಿಂದ ರೂಪುಗೊಂಡ ‘ಸನಾತನವಾದಿ’ಯೊಬ್ಬ ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರತ್ತ ಶೂ ಎಸೆದಿದ್ದಾನೆ. ಒಬ್ಬ ಶ್ರೀಸಾಮಾನ್ಯ ವೈಯಕ್ತಿಕ ಅಸಮಾಧಾನದಿಂದ ಈ ಕೃತ್ಯವನ್ನು ಎಸಗಿದ್ದರೆ ಆತನನ್ನು ಬಂಧಿಸಿ ಪ್ರಕರಣವನ್ನು ಮರೆತು ಬಿಡಬಹುದಿತ್ತು. ಆದರೆ ನ್ಯಾಯಮೂರ್ತಿಯತ್ತ ಶೂ ಎಸೆದವನು ಸಂವಿಧಾನದ ಬಗ್ಗೆ ಅರಿವಿರುವ 70 ವರ್ಷ ಪ್ರಾಯದ ಸುಪ್ರೀಂಕೋರ್ಟ್ ವಕೀಲ ರಾಕೇಶ್ ಕಿಶೋರ್ ಎಂಬಾತ. ಆತ ‘ಸನಾತನ ಧರ್ಮ’ಕ್ಕಾಗಿ ಈ ಕೃತ್ಯವನ್ನು ಎಸಗಿದ್ದೇನೆ ಎಂದು ತನ್ನನ್ನು ಸಮರ್ಥಿಸಿಕೊಂಡಿದ್ದಾನೆ ಮಾತ್ರವಲ್ಲ, ತನ್ನ ಕೃತ್ಯಕ್ಕಾಗಿ ವಿಷಾದಿಸುವುದಿಲ್ಲ, ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿಕೊಂಡಿದ್ದಾನೆ. ಈತನ ಕೃತ್ಯಕ್ಕಾಗಿ ಈಗಾಗಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ತಡವಾಗಿಯಾದರೂ ದೇಶದ ಪ್ರಧಾನಿ ನರೇಂದ್ರ ಮೋದಿಯವರೂ ಖಂಡನೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಗವಾಯಿ ಪ್ರದರ್ಶಿಸಿದ ತಾಳ್ಮೆಯನ್ನು ಶ್ಲಾಘಿಸಿದ್ದಾರೆ. ಘಟನೆಗೆ ಪ್ರತಿಕ್ರಿಯಿಸಿರುವ ಸಿಜೆಐ ಗವಾಯಿ ಅವರು, ಇಂತಹ ವಿಷಯಗಳಿಂದ ವಿಚಲಿತನಾಗುವುದಿಲ್ಲ. ಇದು ನನ್ನ ಮೇಲೆ ಯಾವುದೇ ಪರಿಣಾಮವನ್ನು ಬೀರಲಾರದು ಎಂದು ಹೇಳಿದ್ದಾರೆ. ದುಷ್ಕರ್ಮಿಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಬಿಟ್ಟು ಕಳುಹಿಸಲು ಭದ್ರತಾ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಇದು ಸಿಜೆಐ ಗವಾಯಿಯ ಮೇಲೆ ವೈಯಕ್ತಿಕವಾಗಿ ನಡೆದ ದಾಳಿಯಲ್ಲ. ಯಾವುದೋ ತೀರ್ಪಿಗೆ ಸಂಬಂಧಿಸಿ ವ್ಯಕ್ತವಾದ ತಕ್ಷಣದ ಅಸಮಾಧಾನವೂ ಈ ದಾಳಿಗೆ ಕಾರಣವಲ್ಲ ಎನ್ನುವುದು ಆರೋಪಿಯ ಸಮರ್ಥನೆಯಿಂದ ಗೊತ್ತಾಗುತ್ತದೆ. ಇದು ಸ್ವಾತಂತ್ರ್ಯಾನಂತರ ಸಂವಿಧಾನದ ಮೇಲೆ ಸನಾತನ ವಾದಿಗಳು ಅಥವಾ ಹಿಂದುತ್ವವಾದಿಗಳು ನಡೆಸುತ್ತಾ ಬಂದ ದಾಳಿಗಳ ಮುಂದುವರಿದ ಭಾಗ. ಯಾವ ಸನಾತನ ಸಿದ್ಧಾಂತಗಳು ತಲೆತಲಾಂತರಗಳಿಂದ ಒಂದು ಸಮುದಾಯವನ್ನು ಅಸ್ಪಶ್ಯವೆಂದು ಸಮಾಜದಿಂದ ಹೊರಗಿಡುತ್ತಾ ಬಂದಿದೆಯೋ ಆ ಸಮುದಾಯಕ್ಕೆ ಗವಾಯಿ ಅವರು ಸೇರಿರುವುದು ದಾಳಿಗೆ ಮೊದಲ ಕಾರಣ. ಈ ದೇಶದ ಸಂವಿಧಾನ ಇಂದು ತುಳಿತಕ್ಕೊಳಪಟ್ಟ ಸಮುದಾಯದಿಂದ ಬಂದ ವ್ಯಕ್ತಿಯನ್ನು ಅತ್ಯುನ್ನತ ಸ್ಥಾನದಲ್ಲಿ ಕುಳ್ಳಿರಿಸಿದೆ. ಇದು ಭಾರತದ ಸಂವಿಧಾನದ ಹಿರಿಮೆಯಾಗಿದೆ. ಸನಾತನ ಸಿದ್ಧಾಂತ ದಲಿತರನ್ನು ಶಿಕ್ಷಣದಿಂದ ಹೊರಗಿಟ್ಟು ಅವರನ್ನು ಸಾಮಾಜಿಕವಾಗಿ ತಲೆಯೆತ್ತದಂತೆ ಮಾಡಿದರೆ, ಸಂವಿಧಾನ ಅವರಿಗೆ ಶಿಕ್ಷಣದ ಹಕ್ಕನ್ನು ನೀಡಿ ಅವರನ್ನು ಸ್ವಾಭಿಮಾನದಿಂದ ತಲೆಯೆತ್ತುವಂತೆ ಮಾಡಿತು. ಪರಿಣಾಮವಾಗಿ ಈ ದೇಶದಲ್ಲಿ ಆದಿವಾಸಿ ಸಮುದಾಯದಿಂದ ಬಂದ ಮಹಿಳೆಯೊಬ್ಬರು ರಾಷ್ಟ್ರಪತಿಯಾಗಲು ಸಾಧ್ಯವಾಯಿತು. ಗವಾಯಿಯವರನ್ನು ನ್ಯಾಯ ವ್ಯವಸ್ಥೆಯ ಅತ್ಯುನ್ನತ ಪೀಠದಲ್ಲಿ ಕುಳ್ಳಿರಿಸಿದ್ದು ಅದೇ ಸಂವಿಧಾನ. ದಲಿತನೊಬ್ಬ ಆ ಪೀಠದಲ್ಲಿ ಕುಳಿತು ಜಾತೀಯತೆಯ ವಿರುದ್ಧ, ಅಸ್ಪಶ್ಯತೆಯ ವಿರುದ್ಧ, ಮೇಲ್ಜಾತಿಯ ದಬ್ಬಾಳಿಕೆಗಳ ವಿರುದ್ಧ ಮಾತನಾಡುವುದು, ತೀರ್ಪು ನೀಡುವುದು ಸನಾತನವಾದಿಗೆ ಸಿಟ್ಟು ತರುವುದು ಸಹಜವಾಗಿದೆ. ಇಂದು ದಲಿತ ಸಮುದಾಯದಿಂದ ಅತ್ಯುನ್ನತ ಹುದ್ದೆಗಳನ್ನು ಪಡೆದ ಹಲವರು ಸನಾತನವಾದಿಗಳ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ. ಗವಾಯಿಯವರು ಅಂತಹ ಮಾನಸಿಕ ಜೀತಕ್ಕೆ ತಲೆಬಾಗದೆ, ಸಂವಿಧಾನಕ್ಕೆ ಬದ್ಧವಾಗಿ ಕೆಲಸ ಮಾಡುತ್ತಿರುವುದು ಮತ್ತು ತೀರ್ಪು ನೀಡುತ್ತಿರುವುದು ತನ್ನನ್ನು ತಾನು ಸನಾತನವಾದಿ ಎಂದು ಘೋಷಿಸಿಕೊಂಡಿರುವ ರಾಕೇಶ್ ಕಿಶೋರ್ಗೆ ಅಸಹನೆ ಉಂಟು ಮಾಡಿದೆ. ಇತ್ತೀಚೆಗೆ ಆರೆಸ್ಸೆಸ್ಗೆ ನೂರು ತುಂಬಿದಾಗ ಸಮಾರಂಭಕ್ಕೆ ಗವಾಯಿ ಅವರ ತಾಯಿಗೂ ಆರೆಸ್ಸೆಸ್ ಆಹ್ವಾನವನ್ನು ನೀಡಿತ್ತು. ಆದರೆ ಗವಾಯಿ ಅವರ ತಾಯಿ ಕಮಲ್ ಗವಾಯಿಯವರು ಇದನ್ನು ಸಾರಾಸಗಟಾಗಿ ನಿರಾಕರಿಸಿದ್ದರು. ಮಾತ್ರವಲ್ಲ ‘‘ನಾನು ಅಂಬೇಡ್ಕರ್ ಅವರ ಕಟ್ಟಾ ಅನುಯಾಯಿ. ನಾನೇನಾದಾರೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ ಅಂಬೇಡ್ಕರ್ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದೆ. ನಾನೆಂದೂ ಹಿಂದುತ್ವವಾದವನ್ನು ಒಪ್ಪಿಕೊಂಡಿಲ್ಲ’’ ಎಂದು ಸ್ಪಷ್ಟಪಡಿಸಿದ್ದರು. ಇದು ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ಹಲವರಿಗೆ ಇರಿಸುಮುರಿಸು ಉಂಟು ಮಾಡಿತ್ತು. ಸನಾತನವಾದಿ ರಾಕೇಶ್ ಕಿಶೋರ್ ಆಕ್ರೋಶಕ್ಕೆ, ಇದೂ ಕೂಡ ಕಾರಣವಾಗಿರಬಹುದು. ಆತ ಕೇವಲ ಗವಾಯಿಯ ಮೇಲಿನ ಆಕ್ರೋಶದಿಂದ ಶೂವನ್ನು ಎಸೆದಿಲ್ಲ. ಸಂವಿಧಾನದ ಮೇಲಿನ ಆಕ್ರೋಶದಿಂದ ದಾಳಿ ನಡೆಸಿದ್ದಾನೆ. ಮಹಾತ್ಮಾಗಾಂಧಿಯನ್ನು ಕೊಂದ ಗೋಡ್ಸೆಗೂ, ಸಂವಿಧಾನದ ಕಡೆಗೆ ಶೂ ಎಸೆದ ರಾಕೇಶ್ ಕಿಶೋರ್ಗೂ ಯಾವ ವ್ಯತ್ಯಾಸವೂ ಇಲ್ಲ. ಇವರಿಬ್ಬರನ್ನು ಆ ಕೃತ್ಯಗಳಿಗೆ ಇಳಿಸಿದ ಸಿದ್ಧಾಂತ ಒಂದೇ ಆಗಿದೆ. ಅದು ಸನಾತನವಾದ.
ಈ ಕಾರಣಕ್ಕಾಗಿಯೇ ಆರೋಪಿಯನ್ನು ಗವಾಯಿಯವರು ವೈಯಕ್ತಿಕವಾಗಿ ಕ್ಷಮಿಸಿದಾಕ್ಷಣ ಆತ ಶಿಕ್ಷೆಯಿಂದ ಮುಕ್ತನಾಗುವುದಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಇಂತಹ ಕೃತ್ಯವನ್ನು ಎಸಗಿದ್ದರೆ ಗವಾಯಿ ಅದನ್ನು ಸಹಿಸಿಕೊಳ್ಳುತ್ತಿದ್ದರೆ? ಎನ್ನುವುದು ಮೊದಲ ಪ್ರಶ್ನೆ. ಸಂವಿಧಾನ ಓದಿದ, ಪ್ರಜಾಸತ್ತೆಯನ್ನು ಎತ್ತಿ ಹಿಡಿಯಬೇಕಾದ ಹಿರಿಯ ವಕೀಲನೊಬ್ಬ ನ್ಯಾಯಪೀಠದ ಎಡೆಗೆ ಶೂವನ್ನು ಎಸೆಯುತ್ತಾನೆ ಮಾತ್ರವಲ್ಲ ಅದನ್ನು ಸಮರ್ಥಿಸಿಕೊಳ್ಳುತ್ತಾನೆ ಎಂದರೆ ಆತ ಎಂತಹ ಕ್ರಿಮಿನಲ್ ಮನಸ್ಥಿತಿಯವನಿರಬೇಕು? ಅರಿವಿದ್ದು ಎಸಗಿದ ಈ ಕೃತ್ಯ ಕಠಿಣ ಶಿಕ್ಷೆಗೆ ಅರ್ಹ. ಸಂವಿಧಾನದ ಮೇಲೆ ಗೌರವವಿರುವ ಪ್ರತಿಯೊಬ್ಬ ಪ್ರಜೆಯ ಮುಖದ ಮೇಲೆ ಆತ ಶೂ ಎಸೆದಿದ್ದಾನೆ. ಆದರೆ ಗವಾಯಿಯವರು ಆತನ ಮೇಲೆ ಕ್ರಮ ತೆಗೆದುಕೊಳ್ಳಲು ಅವಕಾಶ ಕೊಡದೆ, ಸಂವಿಧಾನವನ್ನು ಅಸಹಾಯಕಗೊಳಿಸಿದರು. ಶ್ರೀಸಾಮಾನ್ಯನಿಗೊಂದು ಕಾನೂನು, ಮೇಲ್ಜಾತಿಯ ವಿದ್ಯಾವಂತನಿಗೆ ಇನ್ನೊಂದು ಕಾನೂನು ಎಂದು ಸ್ವತಃ ಗವಾಯಿವರೇ ನ್ಯಾಯ ವ್ಯವಸ್ಥೆಗೆ ಮೋಸ ಮಾಡಿದರು. ಇತ್ತ ಪ್ರಧಾನಿ ಮೋದಿಯವರು ಘಟನೆಯನ್ನು ಖಂಡಿಸಿದ್ದಾರೆಯೇ ಹೊರತು, ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಯಾವ ಭರವಸೆಯನ್ನೂ ನೀಡಿಲ್ಲ. ‘ಬುಲ್ಡೋಜರ್ ನ್ಯಾಯ’ವನ್ನು ಬೆಂಬಲಿಸುವ ಈ ಸನಾತನವಾದಿಯು, ಶೂ ಎಸೆದ ಅಪರಾಧಕ್ಕಾಗಿ ತನ್ನ ಮನೆಯನ್ನು ಬುಲ್ಡೋಜರ್ನಿಂದ ಧ್ವಂಸಗೊಳಿಸುವುದನ್ನು ಒಪ್ಪುತ್ತಾನೆಯೆ? ಈತನ ಮನೆಯನ್ನು ಧ್ವಂಸಗೊಳಿಸುವುದಿರಲಿ, ಈವರೆಗೆ ಈತನನ್ನು ಬಂಧಿಸುವ ಕೆಲಸವೂ ಆಗಿಲ್ಲ. ತನ್ನ ಮೇಲಾದ ಅನ್ಯಾಯಕ್ಕೇ ನ್ಯಾಯವನ್ನು ನೀಡಲು ಸಾಧ್ಯವಿಲ್ಲದ ಸುಪ್ರೀಂಕೋರ್ಟ್, ಈ ದೇಶದ ಅಮಾಯಕರಿಗೆ ಯಾವ ರೀತಿಯಲ್ಲಿ ನ್ಯಾಯವನ್ನು ಒದಗಿಸಬಲ್ಲದು? ಶೂ ಎಸೆದಿರುವುದು ಒಂದು ಆಘಾತಕಾರಿ ಕೃತ್ಯವಾದರೆ, ಆರೋಪಿಯ ವಿರುದ್ಧ ಯಾವ ಕ್ರಮವನ್ನು ತೆಗೆದುಕೊಳ್ಳದೇ ಇರುವುದು ಎರಡನೆಯ ಆಘಾತವಾಗಿದೆ. ಈ ಮೂಲಕ ಸನಾತನವಾದಿಯ ಕೃತ್ಯವನ್ನು ನಮ್ಮ ಕಾನೂನು ವ್ಯವಸ್ಥೆಯೇ ಸಮರ್ಥಿಸಿಕೊಂಡಂತಾಗಿದೆ. ಇದು ಮುಂದಿನ ದಿನಗಳಲ್ಲಿ ನ್ಯಾಯ ವ್ಯವಸ್ಥೆಯ ಮೇಲೆ ಇನ್ನಷ್ಟು ದಾಳಿಗಳು ನಡೆಯುವುದಕ್ಕೆ ಕಾರಣವಾಗಬಹುದು. ಸಂವಿಧಾನ ಓದಿದ ವಕೀಲರನ್ನು ಮಾದರಿಯಾಗಿಸಿಕೊಂಡು, ಶ್ರೀಸಾಮಾನ್ಯರೂ ತಮ್ಮ ಚಪ್ಪಲಿಗಳನ್ನು ಕೈಗೆತ್ತಿಕೊಳ್ಳಬಹುದು. ಆದುದರಿಂದ, ಸಂವಿಧಾನದ ಮೇಲೆ ನ್ಯಾಯ ದೇಗುಲದಲ್ಲೇ ದಾಳಿ ನಡೆಸಿದ ಸನಾತನವಾದಿಯನ್ನು ಬಂಧಿಸಿ ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದೇ ಘಟನೆಗೆ ಪ್ರಧಾನಿ ಪ್ರತಿಕ್ರಿಯಿಸುವ ಅತ್ಯುತ್ತಮ ರೀತಿಯಾಗಿದೆ.







