ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ವಾಗತಾರ್ಹ ಕ್ರಮ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅಕ್ಕಪಕ್ಕದ ರಾಜ್ಯಗಳಲ್ಲಿ ಹಂಚಿ ಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಟ್ಟು ಗೂಡಿಸಿ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂತು. ಆದರೆ ಅಸ್ತಿತ್ವಕ್ಕೆ ಬಂದು ಐದು ದಶಕಗಳ ನಂತರವೂ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಸಾಧ್ಯವಾಗಲೇ ಇಲ್ಲ. ಪ್ರಾದೇಶಿಕ ತಾರತಮ್ಯದ ವಿರುದ್ಧ ಉತ್ತರ ಕರ್ನಾಟಕ ಭಾಗದಲ್ಲಿ ಅಸಮಾಧಾನ ಹೆಚ್ಚಾಗತೊಡಗಿತು. ಈ ಅಸಮತೋಲನವನ್ನು ನಿವಾರಿಸಲು ಡಿ.ಎಂ. ನಂಜುಂಡಪ್ಪ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿ ನೀಡಿದ ವರದಿಯಂತೆ ವಿವಿಧ ಸರಕಾರಗಳ ಕಾಲಾವಧಿಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಸಂವಿಧಾನದ 371ನೇ ವಿಧಿಯ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಯಿತು. ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ರೂಪಿಸಲಾಯಿತು. ಈ ಮಂಡಳಿಗೆ 2013ರಿಂದ ಈ ವರೆಗೆ ಒಟ್ಟು 24,780 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ನೀಡಲಾಗಿದೆ. ಇಷ್ಟು ಅನುದಾನ ನೀಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯವನ್ನು ರೂಪಿಸಲಾಗುವುದೆಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ಅಧಿಸೂಚನೆಯನ್ನು ಹೊರಡಿಸುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮಾತನಾಡುತ್ತಾ ಈ ಭರವಸೆಯನ್ನು ಅವರು ನೀಡಿದ್ದಾರೆ.
ಮೊದಲು ನಿಜಾಮರ ಆಡಳಿತದಲ್ಲಿ ಇದ್ದ ಈಗ ‘ಕಲ್ಯಾಣ ಕರ್ನಾಟಕ’ ಎಂದು ಕರೆಯಲ್ಪಡುವ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು 1948ರ ಸೆಪ್ಟಂಬರ್ 17 ರಂದು ಸ್ವತಂತ್ರ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರ್ಪಡೆಯಾದವು. ಆಗಿನಿಂದ ಈ ವರೆಗೂ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಈ ಭಾಗದ ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ವ್ಯಾಪಕವಾಗಿದೆ. ಶೈಕ್ಷಣಿಕವಾಗಿ ಈ ಭಾಗ ತೀರಾ ಹಿಂದುಳಿದಿದೆ. ಕೃಷಿ ಕ್ಷೇತ್ರ ಕಡೆಗಣಿಸಲ್ಪಟ್ಟಿದೆ. ಹೀಗಾಗಿ ಈ ಭಾಗದ ಜನರು ಮುಂಬೈ, ಗೋವಾ, ಬೆಂಗಳೂರು ಹಾಗೂ ಮಂಗಳೂರು ಮೊದಲಾದ ಕಡೆ ಗುಳೆ ಹೋಗುತ್ತಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅಪೌಷ್ಟಿಕತೆ ತೀವ್ರವಾಗಿದೆ. ಬಾಲ್ಯ ವಿವಾಹಗಳು ಹೆಚ್ಚಾಗಿವೆ. ಸೂಕ್ತವಾದ ಆರೋಗ್ಯ ಸೌಕರ್ಯಗಳಿಲ್ಲ. ಆಗಾಗ ಬರಗಾಲ ಈ ಜಿಲ್ಲೆಗಳ ಜನರನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. 371‘ಜೆ’ ಅಡಿಯಲ್ಲಿ ವಿಶೇಷ ಅನುದಾನವನ್ನು ನೀಡಲಾಗಿದೆ. ವಿಶೇಷ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ. ಅಭಿವೃದ್ಧಿ ಯೋಜನೆಗಳು ಸರಿಯಾಗಿ ಅನುಷ್ಠಾನಕ್ಕೆ ಬಂದಿದ್ದರೆ ಕಲ್ಯಾಣ ಕರ್ನಾಟಕ ಇಳೆಯ ಮೇಲಿನ ಸ್ವರ್ಗವಾಗಬಹುದಿತ್ತು. ಆದರೆ ಅಂತಹ ಪ್ರಯತ್ನ ನಡೆಯಲಿಲ್ಲ. ಈಗ ಅಸಮಾಧಾನ ಅಲ್ಲಿ ವ್ಯಾಪಕವಾಗಿದೆ.
ಈ ಜ್ವಲಂತ ಸಮಸ್ಯೆಗಳನ್ನು ಗುರುತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಭಾಗದ ತಲಾ ಆದಾಯ ಹೆಚ್ಚಿಸುವ ಹಾಗೂ ಶಿಕ್ಷಣ, ಆರೋಗ್ಯ, ಉದ್ಯೋಗ, ಮೂಲಭೂತ ಸೌಕರ್ಯ ಮುಂತಾದವುಗಳು ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿ ಸರಕಾರದ ವಿಶೇಷ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ. ಅದಕ್ಕಾಗಿಯೇ ಈ ಭಾಗದ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ನೆರವೇರಿಸಲು ಪ್ರತ್ಯೇಕ ಸಚಿವಾಲಯವನ್ನು ಮಾಡುವ ಭರವಸೆಯನ್ನು ನೀಡಿದ್ದಾರೆ.
ಸರಕಾರ ವಿಶೇಷ ಅನುದಾನವನ್ನು ಒದಗಿಸಿದರೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾಕೆ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ ಎಂಬ ಬಗ್ಗೆ ಸರಕಾರ ಗಮನಿಸಬೇಕಾಗಿದೆ. ಈ ಭಾಗದ ಜಿಲ್ಲೆಗಳಿಗೆ ಸಾಕಷ್ಟು ರಾಜಕೀಯ ಪ್ರಾತಿನಿಧ್ಯವೂ ಲಭಿಸಿದೆ. ಈ ಭಾಗದಿಂದ ಬಂದ ಇಬ್ಬರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ರಾಷ್ಟ್ರ ಮಟ್ಟದ ರಾಜಕೀಯದಲ್ಲೂ ಸ್ಥಾನಮಾನವನ್ನು ಪಡೆದಿದ್ದಾರೆ. ಆದರೂ ಅಭಿವೃದ್ಧಿ ಕಾರ್ಯದಲ್ಲಿ ಈ ಭಾಗ ಯಾಕೆ ಹಿಂದುಳಿದಿದೆ? ಅನುದಾನ ಸಾಕಷ್ಟು ಬಂದರೂ ಯಾಕೆ ಎಲ್ಲ ಅನುದಾನದ ಹಣವನ್ನು ಸರಿಯಾಗಿ ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ? ಈ ಭಾಗದ ನಗರ ಪ್ರದೇಶಗಳಲ್ಲಿ ಅಲ್ಪಸ್ವಲ್ಪ ಪ್ರಗತಿಯಾಗಿದ್ದರೂ ಗ್ರಾಮೀಣ ಪ್ರದೇಶಗಳು ಈಗಲೂ ಮೂಲ ಸೌಕರ್ಯಗಳಿಂದ ಯಾಕೆ ವಂಚಿತವಾಗಿವೆ? ಜನ ಸಾಮಾನ್ಯರ ಕನಿಷ್ಠ ಅಗತ್ಯಗಳಾದ ಶುದ್ಧ ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಕೇಂದ್ರ, ಗುಣಮಟ್ಟದ ಸರಕಾರಿ ಶಾಲೆಗಳು, ಸುಸಜ್ಜಿತ ರಸ್ತೆ ಸೌಕರ್ಯ ಇನ್ನೂ ಈ ಭಾಗದ ಜನರಿಗೆ ಯಾಕೆ ಲಭ್ಯವಾಗಿಲ್ಲ? ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ.
ಉತ್ತರ ಕರ್ನಾಟಕದ ಮುಂಬೈ ಕರ್ನಾಟಕ (ಈಗ ಕಿತ್ತೂರು ಕರ್ನಾಟಕ) ಭಾಗದ ಬೆಳಗಾವಿ, ಧಾರವಾಡ, ಕಾರವಾರ, ಬಿಜಾಪುರ, ಬಾಗಲಕೋಟೆ, ಹಾವೇರಿ, ಗದಗ, ಮೊದಲಾದ ಜಿಲ್ಲೆಗಳಲ್ಲೂ ಪ್ರಾದೇಶಿಕ ಅಸಮಾನತೆಯ ಬಗ್ಗೆ ಅಸಮಾಧಾನ ಇದೆ. ಆದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಹೋಲಿಸಿದರೆ ಇವು ಸಾಕಷ್ಟು ಮುಂದುವರಿದಿವೆ. ಕಲ್ಯಾಣ ಕರ್ನಾಟಕ ಈಗಲೂ ಕಡೆಗಣಿಸಲ್ಪಟ್ಟಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಗೊತ್ತು. ಹಾಗಾಗಿಯೇ ಅವರು ‘‘ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯಾಗದೆ ಇಡೀ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯವಿಲ್ಲ’’ ಎಂದು ಹೇಳಿರುವ ಮಾತು ಹೊಸ ಭರವಸೆಯನ್ನು ಮೂಡಿಸಿದೆ. ಮುಖ್ಯಮಂತ್ರಿಗಳೇ ಈ ಭಾಗದ ಜಿಲ್ಲೆಗಳನ್ನು ತಮ್ಮ ಉಸ್ತುವಾರಿಗೆ ತೆಗೆದುಕೊಂಡು ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ.
ರಾಜ್ಯದಲ್ಲಿ ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಹಿಂದುಳಿದ ಹೈದರಾಬಾದ್ ಕರ್ನಾಟಕದ ಯಾವ ಸಮಸ್ಯೆಗಳಿಗೂ ಸ್ಪಂದಿಸಲಿಲ್ಲ. ಆದರೆ ತನ್ನ ಹಳೆಯ ಚಾಳಿಯಂತೆ ಮರು ನಾಮಕರಣದ ಕೆಲಸಕ್ಕೆ ಕೈ ಹಾಕಿತ್ತಾದರೂ ಅಭಿವೃದ್ಧಿ ಕಾರ್ಯದಲ್ಲಿ ಈ ಭಾಗ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲಬುರಗಿಯಲ್ಲಿ ಪ್ರಕಟಿಸಿರುವ ಪ್ರತ್ಯೇಕ ಸಚಿವಾಲಯ ಕೇವಲ ಭರವಸೆಯಾಗಿ ಉಳಿಯಬಾರದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾಲ ಮಿತಿಯನ್ನು ನಿಗದಿಪಡಿಸಬೇಕು. ಯಾವುದೇ ಅಭಿವೃದ್ಧಿ ಕಾರ್ಯದಲ್ಲಿ ಅಪಾರ ಪ್ರಮಾಣದ ಅವ್ಯವಹಾರ ಕಂಡು ಬಂದರೆ ಅದನ್ನು ನಿಗ್ರಹಿಸಬೇಕು. ತಪ್ಪು ಯಾರೇ ಮಾಡಿರಲಿ ಅವರ ವಿರುದ್ಧ ಉಗ್ರ ಕ್ರಮವನ್ನು ಕೈಗೊಳ್ಳಬೇಕು.
ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಅತ್ಯಂತ ಹಿಂದುಳಿದ ಪ್ರದೇಶಗಳಾದ ಬಿಜಾಪುರ, ಕಲಬುರಗಿ, ರಾಯಚೂರು, ಬೀದರ್ ಮೊದಲಾದ ಜಿಲ್ಲೆಗಳ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದರು. ಬಿಜಾಪುರ ಜಿಲ್ಲೆಯ ಉಸ್ತುವಾರಿಯನ್ನು ತಾವೇ ತೆಗೆದುಕೊಂಡಿದ್ದರು. ಈಗ ಸಿದ್ದರಾಮಯ್ಯ ಸರಕಾರವೂ ಈ ನಿರ್ಲಕ್ಷಿತ ಭಾಗಗಳ ಸಮಸ್ಯೆಗಳಿಗೆ, ಆಶೋತ್ತರಗಳಿಗೆ ತಾಯಿ ಕರುಳಿನಿಂದ ಸ್ಪಂದಿಸಬೇಕಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಬಗ್ಗೆ ಆಗಾಗ ಪರಾಮರ್ಶೆ ನಡೆಯಬೇಕಾಗಿದೆ. ಈ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಈ ಭಾಗದ ಜನರು ತುಂಬಾ ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದಾರೆ. ಅದು ಹುಸಿಯಾಗದಂತೆ ಸರಕಾರ ನೋಡಿಕೊಳ್ಳಬೇಕಾಗಿದೆ.







