ಜಿ ರಾಮ್ ಜಿ ಬಗ್ಗೆ ವಿಶೇಷ ಗ್ರಾಮ ಸಭೆ ಎಂಬ ಅಭಾಸ

PC: x.com/DKashmirimages
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏರಿಗೆ ಎಳೆದರೆ, ಅಧಿಕಾರಿಗಳು ಸರಕಾರವನ್ನು ನೀರಿಗೆ ಎಳೆಯುತ್ತಿದ್ದಾರೆಯೆ? ಕೇಂದ್ರದ ಕೆಲವು ಕಾಯ್ದೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜನವಿರೋಧಿಯೆಂದು ತಿರಸ್ಕರಿಸಿದರೆ, ಸರಕಾರದೊಳಗಿರುವ ಅಧಿಕಾರಿಗಳು ಆ ಕಾಯ್ದೆಗಳನ್ನು, ಯೋಜನೆಗಳನ್ನು ಅನುಷ್ಠಾನಗೊಳಿಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಸಾರ್ವಜನಿಕ ವೇದಿಕೆಗಳಲ್ಲಿ ಕಾಂಗ್ರೆಸ್ ಮುಖಂಡರು ಆರೆಸ್ಸೆಸ್ ಮತ್ತು ಅದರ ಸೋದರ ಸಂಘಟನೆಗಳನ್ನು ಕಟು ಪದಗಳಿಂದ ಟೀಕಿಸುತ್ತಿರುವಾಗಲೇ ಇತ್ತ ಕನ್ನಡ ಸಂಸ್ಕೃತಿ ಇಲಾಖೆಯು ರಾಷ್ಟ್ರೋತ್ಥಾನದ ಸಹಯೋಗದ ಜೊತೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತವೆ. ರಾಜ್ಯ ಸರಕಾರದ ಹಲವು ಇಲಾಖೆಗಳ ಅಧಿಕಾರಿ ವರ್ಗ ಇಂದಿಗೂ ಮಾನಸಿಕವಾಗಿ ಆರೆಸ್ಸೆಸ್ ಸಿದ್ಧಾಂತದ ಜೊತೆಗೆ ಒಲವನ್ನು ಇರಿಸಿಕೊಂಡವರಾಗಿದ್ದಾರೆ. ರಾಜ್ಯ ಸರಕಾರದ ಕೆಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಕೆಲವೊಮ್ಮೆ ಅಧಿಕಾರಿಗಳೇ ಅಡ್ಡಿಯಾಗುತ್ತಾರೆ. ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಪ್ರಚಾರಗಳನ್ನು ನಡೆಸುವುದರಲ್ಲೂ ಈ ಅಧಿಕಾರಿ ವರ್ಗ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಇದೀಗ ವಿಬಿ- ಜಿ ರಾಮ್ ಜಿ ಕಾನೂನು ಅನುಷ್ಠಾನಕ್ಕೆ ಸಂಬಂಧಿಸಿ ಗೊಂದಲ ಸೃಷ್ಟಿಯಾಗಿದ್ದು ಇದಕ್ಕೆ ಯಾರು ಕಾರಣ? ಎನ್ನುವುದು ಅಸ್ಪಷ್ಟವಾಗಿದೆ. ಒಂದೆಡೆ ರಾಜ್ಯ ಕಾಂಗ್ರೆಸ್ ನಾಯಕರು ಜಿ ರಾಮ್ ಜಿ ವಿರುದ್ಧ ಆಂದೋಲನವನ್ನು ರೂಪಿಸುತ್ತಿರುವಾಗಲೇ ಅತ್ತ ಗ್ರಾಮ ಮಟ್ಟದಲ್ಲಿ ಈ ಯೋಜನೆಗೆ ಸಂಬಂಧಿಸಿ ಜನರಲ್ಲಿ ಅರಿವು ಮೂಡಿಸುವುದಕ್ಕೆ ಸುತ್ತೋಲೆಗಳು ಹೋಗಿವೆ.
ಮಹಾತ್ಮಾ ಗಾಂಧಿ ರಾಷ್ಟ್ರಿಯ ಉದ್ಯೋಗ ಖಾತರಿ ಕಾನೂನಿನ ಬದಲಿಗೆ ಕೇಂದ್ರ ಸರಕಾರ ತಂದಿರುವ ವಿಬಿ -ಜಿ ರಾಮ್ ಜಿ ಕಾನೂನನ್ನು ಕಾಂಗ್ರೆಸ್ ಪಕ್ಷ ಮತ್ತು ಕರ್ನಾಟಕದ ರಾಜ್ಯ ಸರಕಾರ ವಿರೋಧಿಸುತ್ತಿದೆ. ಈ ಹೊಸ ಕಾನೂನಿನ ನಕಾರಾತ್ಮಕ ಅಂಶಗಳ ಬಗ್ಗೆ ಕಾಂಗ್ರೆಸ್ ಪಕ್ಷ ಮತ್ತು ಅದರ ರಾಜ್ಯ ಸರಕಾರಕ್ಕಿರುವ ಆಕ್ಷೇಪಗಳನ್ನು ಈಗಾಗಲೇ ಸರಕಾರ ಹೇಳಿದೆ. ಈ ಕುರಿತು ವಿಶೇಷ ಅಧಿವೇಶನವನ್ನೂ ಕರೆಯುವ ನಿರ್ಧಾರವನ್ನು ಪ್ರಕಟಿಸಿದೆ. ಇದರೊಂದಿಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳೂ ಹೊಸ ಕಾನೂನಿನ ವಿರುದ್ಧ ಹೋರಾಡುವ ನಿರ್ಧಾರವನ್ನೂ ಮಾಡಿವೆ.
ಹೊಸ ಕಾನೂನಿನಲ್ಲಿ ಇರುವ ಆಕ್ಷೇಪಾರ್ಹ ಸಂಗತಿಗಳನ್ನು ಈಗಾಗಲೇ ಕಾಂಗ್ರೆಸ್ ಪಕ್ಷ ಸಹಿತ ಎಲ್ಲರೂ ಎತ್ತಿ ಹೇಳಿದ್ದಾರೆ. ಬೇಡಿಕೆ ಆಧಾರಿತ ಕಾನೂನಿನಿಂದ ಸರಕಾರ ನೀಡುವ ಸವಲತ್ತಿನ ಮಟ್ಟಿಗೆ ಈ ಹೊಸ ಕಾನೂನು ಉದ್ಯೋಗ ಖಾತರಿಯನ್ನು ಮಾರ್ಪಡಿಸಿದೆಯಲ್ಲದೆ ಅನುದಾನದಲ್ಲಿ ರಾಜ್ಯ ಸರಕಾರದ ಪಾಲನ್ನು ಶೇ. 40ಕ್ಕೇರಿಸಿದೆ. ಅರ್ಥಾತ್ ತನ್ನ ಸಾಂವಿಧಾನಿಕ ಜವಾಬ್ದಾರಿಯಿಂದ ಹಿಂದೆ ಸರಿದಿದೆ. ಇದರೊಂದಿಗೆ ಎಲ್ಲಿ ಅನುಷ್ಠಾನ ಮಾಡಬೇಕೆಂಬುದನ್ನೂ ತಾನೇ ನಿರ್ಧರಿಸಲಿದೆ. ಹಾಗೆಯೇ ರಾಜ್ಯಗಳಿಗೆ ನೀಡುವ ಅನುದಾನದ ಮೊತ್ತವನ್ನು ಪ್ರತಿವರ್ಷವೂ ತಾನೇ ಮುಂಚಿತವಾಗಿ ನಿರ್ಧರಿಸಲಿದ್ದು, ಕೂಲಿ ನೀಡಿಕೆಯು, ಅನುದಾನದ ಲಭ್ಯತೆಯ ಮಾಮೂಲಿ ಸರಕಾರಿ ಯೋಜನೆಯಾಗಲಿದೆ. ಈ ಕೇಂದ್ರದ ಕಪಿಮುಷ್ಟಿಯ ಏಕಮೇವ ನಿರ್ಧಾರಗಳು ಒಕ್ಕೂಟದ ಆಶಯಕ್ಕೇ ವಿರುದ್ಧ ಅಷ್ಟೇ ಅಲ್ಲ, ಸ್ಥಳೀಯ ಸಂಸ್ಥೆಗಳ ಸ್ವಾಯತ್ತತೆಯನ್ನೂ ಅದುಮುವ ಪ್ರಕ್ರಿಯೆಯಾಗಿದೆ. ಇದರ ಹೊರತಾಗಿ ಈ ಯೋಜನೆಯ ಸ್ಥೂಲ ಕಾನೂನಾತ್ಮಕ ದಾಖಲೆಯಷ್ಟೇ ಪ್ರಕಟವಾಗಿದ್ದು ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಸೂಚಿಗಳು, ನಿಯಮಾವಳಿಗಳು ಇನ್ನೂ ಪ್ರಕಟವಾಗಿಲ್ಲ. ಅಂದರೆ ಈ ಕುರಿತು ಕಾನೂನಿನ ಅಂಶಗಳಾಚೆ ತಳಮಟ್ಟದಲ್ಲಿ ಅನುಷ್ಠಾನ ಹೇಗಾಗಬಹುದು ಎಂಬ ಯಾವ ಸ್ಪಷ್ಟತೆಯೂ ಇಲ್ಲ. ಈ ಬಗ್ಗೆ ಕಾನೂನಿನ ವಿವರಗಳ ಮೂಲಕ ಊಹಾತ್ಮಕವಾಗಿ ಚರ್ಚಿಸಬಹುದಷ್ಟೆ.
ಹೀಗಿರುವಾಗ ಕೇಂದ್ರ ಸರಕಾರವು ಎಲ್ಲಾ ಗ್ರಾಮಪಂಚಾಯತ್ಗಳಲ್ಲಿ ಜಿ ರಾಮ್ ಜಿ ಯ ಬಗ್ಗೆ ಅರಿವು ಮೂಡಿಸಲು ವಿಶೇಷ ಗ್ರಾಮ ಸಭೆಯನ್ನು ಕರೆಯುವಂತೆ ಸುತ್ತೋಲೆ ಹೊರಡಿಸಿದೆ. ಹಾಗೆಯೇ ಈ ಕಾನೂನು ಎಷ್ಟು ಅನುಕೂಲಕರ, ಉದ್ಯೋಗ ಖಾತರಿಗಿಂತ ಉತ್ತಮ ಎಂಬ ವಿವರಣಾತ್ಮಕ ಮಾಹಿತಿ ಸಾಹಿತ್ಯವನ್ನು ಪ್ರಕಟಿಸಿದೆ. ಈ ಗ್ರಾಮ ಸಭೆಗಳಲ್ಲಿ ಸರಕಾರವು ಈ ಮಾಹಿತಿಗಳನ್ನು ಬಳಸುತ್ತದೆ ಎಂಬುದು ಸ್ಪಷ್ಟ. ಇನ್ನೊಂದೆಡೆ ಭಾಜಪವು ಹೊಸ ಯೋಜನೆಯ ಪರವಾಗಿ ಮಿಂಚಿನ ವೇಗದಲ್ಲಿ ಪ್ರಚಾರ ನಡೆಸುತ್ತಿದ್ದು ಪಂಚಾಯತ್ ಮಟ್ಟಕ್ಕೂ ತಲುಪಿದೆ ಎಂಬ ಮಾಹಿತಿ ಇದೆ.
ಹೀಗಿರುವಾಗ ರಾಜ್ಯ ಸರಕಾರದ ಪಂಚಾಯತ್ ರಾಜ್ ಆಯುಕ್ತರು ಕೇಂದ್ರ ಸರಕಾರದ ಸುತ್ತೋಲೆಯನ್ನು ಶಿರಸಾ ವಹಿಸಿ ಪಾಲಿಸಿ, ಜನವರಿ 26ರಂದು ವಿಶೇಷ ಗ್ರಾಮ ಸಭೆ ಈ ಕುರಿತು ನಡೆಸಿ ಎಂಬ ಸುತ್ತೋಲೆಯನ್ನು ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಳಿಸಿದ್ದಾರೆ. ಈಗ ಅಚ್ಚರಿ ಮೂಡಿಸಿರುವುದು ರಾಜ್ಯ ಸರಕಾರ ಈ ಕಾನೂನನ್ನು ‘ನಾವು ವಿರೋಧಿಸುತ್ತಿದ್ದೇವೆ’ ಎಂದು ಹೇಳುತ್ತಿದೆ. ಅದರ ಕೈಕೆಳಗಿನ ತತ್ಸಂಬಂಧಿತ ಅಧಿಕಾರಿ ಈ ಗ್ರಾಮಸಭೆ ಬಗ್ಗೆ ಸುತ್ತೋಲೆ ಹೊರಡಿಸುತ್ತಾರೆ. ಏನು ನಡೆಯುತ್ತಿದೆ ಇಲ್ಲಿ ಎಂಬ ಗೊಂದಲಕ್ಕೆ ಇದು ಎಡೆ ಮಾಡಿಕೊಟ್ಟಿದೆ ಎಂಬುದು ನಿಸ್ಸಂಶಯ.ಈ ಕಾನೂನಿನ ಅನುಷ್ಠಾನ ವಿವರಗಳೇ ಲಭ್ಯವಿಲ್ಲದೆ ಗ್ರಾಮಸ್ಥರು ಚರ್ಚಿಸುವುದು ಹೇಗೆ? ಪಂಚಾಯತ್ಗಳ ಅವಧಿ ಮುಗಿದಿದ್ದು ಸರಕಾರ ಈಗಾಗಲೇ ಆಡಳಿತಾಧಿಕಾರಿಯನ್ನು ನೇಮಿಸಿದ್ದು, ಹೊಸದಾಗಿ ಚುನಾಯಿತ ಪ್ರತಿನಿಧಿಗಳು ಅಧಿಕಾರ ಸ್ವೀಕರಿಸುವವರೆಗೆ ಈ ಹೊಸ ಯೋಜನೆಯ ಬಗ್ಗೆ ಗ್ರಾಮಸ್ಥರು ನಿರ್ಧರಿಸುವುದು ಹೇಗೆ ಸಾಧ್ಯ? ಒಂದು ವೇಳೆ ಇದು ನಡೆದರೂ ಅದಕ್ಕೆ ಪ್ರಜಾಸತ್ತಾತ್ಮಕ ಮಾನ್ಯತೆ ಎಷ್ಟರ ಮಟ್ಟಿಗೆ ಇರುತ್ತದೆ?
ಈ ಹೊಸ ಕಾನೂನಿನಲ್ಲಿರುವ ಆಕ್ಷೇಪಾರ್ಹ ವಿಷಯಗಳ ಬಗ್ಗೆ ಸವಿವರ ಮಾಹಿತಿ ಇನ್ನೂ ಗ್ರಾಮ ಮಟ್ಟಕ್ಕೆ ತಲುಪಿಸಲು ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ಸರಕಾರವೂ ಈ ಬಗ್ಗೆ ನಿಲುವು ತಳೆದರೆ ಆ ಮಾಹಿತಿಯನ್ನೂ ಗ್ರಾಮಗಳಿಗೆ ತಲುಪಿಸಬೇಕಷ್ಟೆ. ಎರಡೂ ವಾದಗಳನ್ನು ನೋಡಿಯೇ ಗ್ರಾಮಸ್ಥರು ನಿರ್ಧರಿಸುವುದು ಸರಿಯಾದ ವಿಧಾನ. ಒಂದೆಡೆ ಹೊಸ ಕಾನೂನನ್ನು ವಿರೋಧಿಸುತ್ತಾ ಇನ್ನೊಂದೆಡೆ ಆಡಳಿತಾತ್ಮಕವಾಗಿ ಕೇಂದ್ರ ಸರಕಾರದ ಆದೇಶವನ್ನು ಪಾಲಿಸುವ ಸರಕಾರದ ದ್ವಂದ್ವ ಎದ್ದು ಕಾಣುತ್ತಿದೆ. ಸಂಘಟನೆಗಳೊಂದಿಗೆ ಹೊಸ ಕಾನೂನಿನ ವಿರುದ್ಧ ಜನಾಭಿಪ್ರಾಯ ಮೂಡಿಸುವ ಸಭೆಯನ್ನೂ, ಈ ಕುರಿತು ವಿಶೇಷ ಅಧಿವೇಶನವನ್ನೂ ಕರೆಯುವ ತುರ್ತನ್ನು ಪ್ರಕಟಿಸಿರುವ ಸರಕಾರ ಈ ನಡೆಯ ಬಗ್ಗೆ ಸ್ಪಷ್ಟತೆ ನೀಡದಿದ್ದರೆ ಸರಕಾರದ ನಿಲುವು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತದೆ.







