ಗುಂಪು ಹತ್ಯೆಗಳಿಗೆ ಪರೋಕ್ಷ ಮಾನ್ಯತೆ ನೀಡುತ್ತಿರುವ ವ್ಯವಸ್ಥೆ

ಅಶ್ರಫ್, ಮಧು
ಕೇರಳದ ಅಟ್ಟಪ್ಪಾಡಿ ಮುಕ್ಕಾಲಿಯ ಬುಡಕಟ್ಟು ಯುವಕ ಮಧು ಮೇಲಿನ ಗುಂಪು ಹಲ್ಲೆ ಮತ್ತು ಕೊಲೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತ್ತು. ಮಾನಸಿಕವಾಗಿ ಅಸ್ವಸ್ಥನಾಗಿದ್ದ ಮಧುವನ್ನು ಅಂಗಡಿಯಿಂದ ತಿಂಡಿ ಕದ್ದು ತಿಂದ ಆರೋಪದಲ್ಲಿ ಗುಂಪೊಂದು ಕಟ್ಟಿ ಹಾಕಿ ಹಲ್ಲೆ ನಡೆಸಿ ಕೊಂದು ಹಾಕಿತ್ತು. ಈ ಕೊಲೆಯು ದೇಶದಲ್ಲಿನ ಆದಿವಾಸಿಗಳ ಸ್ಥಿತಿಗತಿಯನ್ನು ಕೂಡ ಚರ್ಚಿಸುವಂತೆ ಮಾಡಿತ್ತು. ಹಾಗೆಯೇ ನಾಗರಿಕರೆಂದು ಕರೆಸಿಕೊಳ್ಳುವ ಮನುಷ್ಯರೊಳಗಿನ ರಾಕ್ಷಸತ್ವದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಕಳವಳ ವ್ಯಕ್ತವಾಗಿತ್ತು. 2018 ರಲ್ಲಿ ಈ ಕೃತ್ಯ ನಡೆದಾಗ ಕೇರಳ ಸರಕಾರ ಈ ಗುಂಪು ಹತ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿತು ಮಾತ್ರವಲ್ಲ, ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಗುರುತಿಸಿ ಕಾನೂನಿನ ಕುಣಿಕೆಯಿಂದ ಪಾರಾಗದಂತೆ ನೋಡಿಕೊಂಡಿತು. ಪರಿಣಾಮವಾಗಿ, 2023ರಲ್ಲಿ, ಮಣ್ಣಾರ್ಕಾಡ್ನಲ್ಲಿರುವ ವಿಶೇಷ ನ್ಯಾಯಾಲಯವು ಒಟ್ಟು 16 ಆರೋಪಿಗಳ ಪೈಕಿ 14 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿ ಅವರಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಇದೇ ವೇಳೆ ಅವರಿಗೆ ಇನ್ನೂ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೋರಿ ರಾಜ್ಯ ಸರಕಾರವು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಪರಿಣಾಮವಾಗಿ ಇದೀಗ ಕೇರಳ ಹೈಕೋರ್ಟ್ 12 ಮಂದಿ ದೋಷಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಸರಕಾರಕ್ಕೆ ಇಚ್ಛಾಶಕ್ತಿಯಿದ್ದರೆ ಗುಂಪು ಹತ್ಯೆಯಂತಹ ಪ್ರಕರಣಗಳಲ್ಲಿ ಭಾಗಿಯಾಗುವ ಆರೋಪಿಗಳು ಸುಲಭದಲ್ಲಿ ಕಾನೂನು ಕುಣಿಕೆಯಿಂದ ಪಾರಾಗುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಈ ಪ್ರಕರಣ ಸಾಬೀತು ಪಡಿಸಿದೆ. ಇದಕ್ಕಾಗಿ ನಾವು ಕೇರಳದ ಪೊಲೀಸ್ ವ್ಯವಸ್ಥೆಯನ್ನು, ಅಲ್ಲಿನ ಅಂದಿನ ಸರಕಾರವನ್ನು ಅಭಿನಂದಿಸಬೇಕಾಗಿದೆ.
ಮಧು ಹತ್ಯೆ ಆ ಸಂದರ್ಭದಲ್ಲಿ ಆದಿವಾಸಿಗಳ ಸಂಕಟಗಳ ಮೇಲೆ ಬೆಳಕು ಚೆಲ್ಲುವಂತೆ ಮಾಡಿತು. ಕೇರಳದ ಆದಿವಾಸಿಗಳು ಎದುರಿಸುತ್ತಿರುವ ಬಡತನ, ಹಸಿವನ್ನು ಮುನ್ನೆಲೆಗೆ ತಂದಿತು. 2017-18ರಲ್ಲಿ ಮುಕ್ಕಾಲಿ ಮತ್ತು ಚಿಂದಕ್ಕಿ ಪರಿಸರದಲ್ಲಿ ನಡೆಯುತ್ತಿದ್ದ ಸಣ್ಣ ಪುಟ್ಟ ಕಳ್ಳತನಗಳೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಇಷ್ಟಕ್ಕೂ ಕಳ್ಳತನವಾಗುತ್ತಿರುವುದಾದರೂ ಏನು? ಅಕ್ಕಿ, ಮಸಾಲೆ ಪದಾರ್ಥ, ಬೇಯಿಸಿದ ಆಹಾರ ಇತ್ಯಾದಿ. ಸ್ಥಳೀಯ ಆದಿವಾಸಿಗಳ ಬಡತನವೇ ಈ ಸಣ್ಣ ಪುಟ್ಟ ಕಳ್ಳತನಗಳಿಗೆ ಕಾರಣವಾಗಿರಬಹುದು. ಆದರೆ ಅಲ್ಲಿನ ಜನರು ಮಾನಸಿಕ ಅಸ್ವಸ್ಥನಂತೆ ಓಡಾಡುತ್ತಿದ್ದ ಮಧುವನ್ನೇ ಕಳ್ಳ ಎಂದು ಬಗೆದರು. ಕಾಡಿನಲ್ಲಿ ಅಡಗಿಕೊಂಡಿದ್ದ ಮಧುವನ್ನು ಪತ್ತೆ ಹಚ್ಚಿ ಆತನನ್ನು ಕಟ್ಟಿ ಹಾಕಿ ಎಳೆದುಕೊಂಡು ಬಂದು ಗುಂಪೊಂದು ಹಲ್ಲೆ ನಡೆಸಿತು. ಆ ಹಲ್ಲೆಯಿಂದಲೇ ಆತ ಬಳಿಕ ಪ್ರಾಣ ಬಿಟ್ಟ. ನಿಜಕ್ಕೂ ಅದೊಂದು ಭಯಾನಕ ಕೃತ್ಯವಾಗಿತ್ತು. ಆದರೆ ನ್ಯಾಯ ಸಿಗಬೇಕಾಗಿರುವುದು ಮಧುವಿಗೆ ಮಾತ್ರವೆ? ಇಂದು ಭಾರತದಲ್ಲಿ ಯಾವುದೇ ಆದಿವಾಸಿಯ ಸ್ಥಿತಿ ಮಧುವಿಗಿಂತ ಭಿನ್ನವಾಗಿಯೇನೂ ಇಲ್ಲ. ಇಂದು ವ್ಯವಸ್ಥೆ ಬೇರೆ ಬೇರೆ ರೂಪಗಳಲ್ಲಿ ಆದಿವಾಸಿಗಳ ಮೇಲೆ ಗುಂಪು ದಾಳಿ ನಡೆಸುತ್ತಿದೆ. ಒಂದೆಡೆ ಅಪೌಷ್ಟಿಕತೆಯಿಂದ, ಅನಾರೋಗ್ಯದಿಂದ ಆದಿವಾಸಿಗಳ ಸಾವಿನ ದರ ಹೆಚ್ಚಿದ್ದರೆ, ಮಗದೊಂದೆಡೆ ಅವರನ್ನು ಅರಣ್ಯದಿಂದ ಒಕ್ಕಲೆಬ್ಬಿಸುವ ನೆಪದಲ್ಲಿ ಅವರ ಮೇಲೆ ಗುಂಪು ಹಲ್ಲೆಗಳು ನಡೆಯುತ್ತಿವೆ. ಈಶಾನ್ಯ ಭಾರತದಲ್ಲಿ ನಮ್ಮ ಸೇನೆಯೇ ಅದೆಷ್ಟೋ ಅಮಾಯಕ ಆದಿವಾಸಿಗಳನ್ನು ನಕ್ಸಲರು ಎನ್ನುವ ಹೆಸರಿನಲ್ಲಿ ಕೊಂದು ಹಾಕಿದೆ. ಆದರೆ ಇವೆಲ್ಲವನ್ನು ಮೌನವಾಗಿ ಸಮ್ಮತಿಸುತ್ತಾ ಬಂದಿರುವ ನಾಗರಿಕ ಸಮಾಜವೇ, ಮಧುವಿಗಾಗಿ ಕಣ್ಣೀರು ಸುರಿಸುತ್ತಿದೆ. ಮಧುವನ್ನು ಕೊಂದ 12 ಮಂದಿಗೆ ಜೀವಾವಧಿಯಾದರೂ ದೊರಕಿತು. ಆದರೆ ಸಾವಿರಾರು ಆದಿವಾಸಿಗಳ ಸಾವು ನೋವಿಗೆ ಕಾರಣವಾಗಿರುವ ವ್ಯವಸ್ಥೆಯನ್ನು ತಡೆದು ನಿಲ್ಲಿಸುವವರಾರು? ಈ ಪ್ರಶ್ನೆಗೂ ಉತ್ತರ ಕಂಡುಕೊಳ್ಳಬೇಕಾಗಿದೆ.
ವಿಪರ್ಯಾಸವೆಂದರೆ ಕೇರಳದಲ್ಲಿ ನಡೆದ ಈ ದುರಂತ ಸುದ್ದಿಯಾದಂತೆ ಈ ದೇಶದಲ್ಲಿ ಪ್ರತಿದಿನ ಗೋವಿನ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ಹತ್ಯೆ ಚರ್ಚೆಯಾಗುವುದಿಲ್ಲ. ಅಷ್ಟೇ ಯಾಕೆ, ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಮಂಗಳೂರಿನಲ್ಲೇ ಮಾನಸಿಕ ಅಸ್ವಸ್ಥನೊಬ್ಬನನ್ನು ಗುಂಪೊಂದು ಬರ್ಬರವಾಗಿ ಬ್ಯಾಟಿನಿಂದ, ಕಲ್ಲಿನಿಂದ ಹೊಡೆದು ಕೊಂದು ಹಾಕಿತು. ಮೂಲತಃ ಈ ವಲಸೆ ಕಾರ್ಮಿಕ ಕೇರಳದವನು. ಆರೋಪಿಗಳನ್ನು ಬಂಧಿಸುವುದಿರಲಿ, ಇದನ್ನು ಹತ್ಯೆ ಎಂದು ಪೊಲೀಸರು ಒಪ್ಪಿಕೊಳ್ಳುವುದಕ್ಕೇ ಮೀನಾಮೇಷ ಎಣಿಸಿದರು. ಸಾರ್ವಜನಿಕರು ಇದರ ವಿರುದ್ಧ ಧ್ವನಿಯೆತ್ತಿದ ಬಳಿಕ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಒಪ್ಪಿಕೊಂಡರು. ವಿಪರ್ಯಾಸವೆಂದರೆ, ಈ ಕೃತ್ಯವನ್ನು ‘ಪಾಕಿಸ್ತಾನದ ಪರ ಘೋಷಣೆ’ಯೊಂದಿಗೆ ಜೋಡಿಸುವ ಪ್ರಯತ್ನ ನಡೆಯಿತು. ಮಾನಸಿಕ ಅಸ್ವಸ್ಥ ಪಾಕಿಸ್ತಾನ ಪರ ಘೋಷಣೆ ಕೂಗಿದ ಕಾರಣಕ್ಕಾಗಿ ಆತನನ್ನು ಗುಂಪು ಹತ್ಯೆ ಮಾಡಿತು ಎಂಬ ವದಂತಿಯನ್ನು ಸಂಘಪರಿವಾರ ತೂರಿ ಬಿಟ್ಟರೆ, ಅದನ್ನು ಈ ರಾಜ್ಯದ ಗೃಹ ಸಚಿವರೇ ಪ್ರಸಾದವೆಂಬಂತೆ ಸ್ವೀಕರಿಸಿದರು. ಮುಖ್ಯ ಆರೋಪಿಯನ್ನು ಬಂಧಿಸುವುದಕ್ಕೆ ಪೊಲೀಸರಿಗೆ ಸಾಧ್ಯವೇ ಆಗಲಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ಯಾವ ಸಾಧ್ಯತೆಗಳೂ ಕಾಣುತ್ತಿಲ್ಲ. ಯಾಕೆಂದರೆ ಆರೋಪಿಗಳಿಗೆ ಶಿಕ್ಷೆಯಾಗಲೇ ಬೇಕು ಎನ್ನುವ ಇಚ್ಛಾಶಕ್ತಿ ಪೊಲೀಸರಲ್ಲೂ ಇರಲಿಲ್ಲ, ಗೃಹ ಸಚಿವರಲ್ಲೂ ಇರಲಿಲ್ಲ.
ಇತ್ತೀಚಿನ ದಿನಗಳಲ್ಲಿ ಗೋವಿನ ಹೆಸರಿನಲ್ಲಿ ನಡೆಯುವ ಯಾವುದೇ ಗುಂಪು ಹತ್ಯೆಗಳನ್ನು ಪೊಲೀಸ್ ಇಲಾಖೆಯೇ ಪರೋಕ್ಷವಾಗಿ ಮಾನ್ಯಗೊಳಿಸುತ್ತಿದೆ. ಗೋವನ್ನು ಸಾಗಿಸಿದ್ದಾನೆ ಎನ್ನುವ ಆರೋಪದಲ್ಲಿ ಮಂಡ್ಯದಲ್ಲಿ ಓರ್ವ ಅಮಾಯಕನನ್ನು ಕೊಂದು ಹಾಕಿದ ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸರಕಾರಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಇತ್ತೀಚೆಗೆ ರಾಜ್ಯದ ಮಹಿಳಾ ಆಯೋಗದ ಅಧ್ಯಕ್ಷೆ ಈ ಕೊಲೆ ಆರೋಪಿಗೆ ಸಾರ್ವಜನಿಕವಾಗಿ ಹುಟ್ಟು ಹಬ್ಬದ ಶುಭಾಶಯಕೋರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಗುಂಪು ಹತ್ಯೆ ಭಾರತದಲ್ಲಿ ಒಂದು ಪಿಡುಗಾಗಿ ಪರಿಣಮಿಸಿದೆಯಾದರೂ, ನ್ಯಾಶನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಇದನ್ನು ಪ್ರತ್ಯೇಕ ಅಪರಾಧವಾಗಿ ದಾಖಲಿಸುವುದಿಲ್ಲ. ಮಾಧ್ಯಮಗಳ ವರದಿಗಳ ಪ್ರಕಾರ 2014ರಿಂದ 2023ರ ನಡುವೆ ಭಾರತದಲ್ಲಿ ಕನಿಷ್ಠ 189 ಹತ್ಯೆ ಪ್ರಕರಣಗಳು ವರದಿಯಾಗಿವೆ. ಇದು ಈ ಅವಧಿಯಲ್ಲಿ ನಡೆದ ಒಟ್ಟು 5,26,000ಕ್ಕೂ ಹೆಚ್ಚು ಗುಂಪು ಹಿಂಸಾಚಾರದ ಘಟನೆಗಳ ಒಂದು ಸಣ್ಣ ಭಾಗವಷ್ಟೇ. ಹಿಂದೊಮ್ಮೆ ಗೃಹಸಚಿವಾಲಯವು ಸಂಸತ್ತಿಗೆ ನೀಡಿದ ಮಾಹಿತಿಯ ಪ್ರಕಾರ 2014ರಿಂದ 2018ರ ನಡುವೆ ಒಂಭತ್ತು ರಾಜ್ಯಗಳಲ್ಲಿ 40ಕ್ಕೂ ಅಧಿಕ ಗುಂಪು ಹತ್ಯೆಗಳು ನಡೆದಿದ್ದವು. ಇದರಲ್ಲಿ 45 ಜನರು ಸಾವನ್ನಪ್ಪಿದ್ದಾರೆ. ಇದೇ ಸಂದರ್ಭದಲ್ಲಿ ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಆಂಡ್ ಸೆಕ್ಯುಲರಿಸಂ ನಡೆಸಿದ ವಿಶ್ಲೇಷಣೆಯ ಪ್ರಕಾರ, 2014ರಿಂದ 2018ರವರೆಗೆ ನಡೆದ 109 ಲಿಂಚಿಂಗ್ ಘಟನೆಗಳಲ್ಲಿ 78 ಜನರು ಸಾವನ್ನಪ್ಪಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗುಂಪು ಹತ್ಯೆ ಎನ್ನುವುದು ರಾಜಕಾರಣದ ಒಂದು ಭಾಗವೇ ಆಗಿ ಬಿಟ್ಟಿದೆ. ಆದುದರಿಂದಲೇ, ನಡೆದ ಕೃತ್ಯಗಳು ದಾಖಲಾಗುವುದು ಸರಕಾರಕ್ಕೆ ಬೇಕಾಗಿಲ್ಲ. ಆರೋಪಿಗಳಿಗೆ ಶಿಕ್ಷೆಯಾಗುವುದರ ಬದಲು ಮಾಬ್ ಲಿಂಚಿಂಗ್ನಲ್ಲಿ ಭಾಗಿಯಾದ ರೌಡಿಗಳು ಸಮಾಜದ ನವನಾಯಕರಾಗಿ ಹೊರಹೊಮ್ಮುತ್ತಿರುವುದು ಇನ್ನೊಂದು ದುರಂತವಾಗಿದೆ. ಗುಂಪು ಹತ್ಯೆ ಹೆಚ್ಚುತ್ತಿರುವ ಕಾರಣದಿಂದಲೇ ಇಂದು ಭಾರತ ಪ್ರವಾಸಿಗರ ಪಾಲಿಗೂ ಅತ್ಯಂತ ಅಪಾಯಕಾರಿ ದೇಶವಾಗಿ ಪರಿಣಮಿಸಿದೆ. ಈ ಕಾರಣಕ್ಕೆ ಮಧುವಿನ ಸಾವಿಗೆ ನ್ಯಾಯ ಸಿಕ್ಕಿದೆ ಎಂದು ಸಮಾಧಾನ ಪಡುವ ಸ್ಥಿತಿಯಲ್ಲಿ ಭಾರತವಿಲ್ಲ. ಇಂದು ಪ್ರತಿದಿನ ಈ ದೇಶದ ಯಾವುದೋ ಒಂದು ಮೂಲೆ ಯಲ್ಲಿ ಒಬ್ಬ ಮಧು ಗುಂಪು ಹತ್ಯೆಗೆ ಬಲಿಯಾಗುತ್ತಿರುತ್ತಾನೆ. ಆದರೆ ಭಾರತದಲ್ಲಿ ಈ ಸಾವುಗಳನ್ನು ಸಂಭ್ರಮಿಸುವ ಗುಂಪೊಂದು ಬೆಳೆಯುತ್ತಿದೆ. ಇದಕ್ಕಾಗಿ ನಾವು ಆತಂಕ ಪಡಬೇಕಾಗಿದೆ.






