ಅರಣ್ಯೀಕರಣ: ಪ್ರಚಾರವೊಂದೇ ಸಾಧನೆ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬಹಳ ಅಪರೂಪಕ್ಕೆ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರು ಒಂದು ವಸ್ತುಸ್ಥಿತಿ ವರದಿಯನ್ನು ನೀಡಿದ್ದಾರೆ. 2010ರಲ್ಲಿ ಮನಮೋಹನ್ ಸಿಂಗ್ ಸರಕಾರವು ಹವಾಮಾನ ಬದಲಾವಣೆಯ ಕುರಿತು ರಾಷ್ಟ್ರೀಯ ಕ್ರಿಯಾಯೋಜನೆಯ (NAPCC) ಅಡಿಯಲ್ಲಿ ಸ್ಥಾಪಿಸಿದ್ದ ಒಂಭತ್ತು ಮಿಷನ್‌ಗಳಲ್ಲಿ ಗ್ರೀನ್ ಇಂಡಿಯಾ ಮಿಷನ್ (GIM) ಕೂಡ ಒಂದು. ಕಳಪೆ ಆಗಿರುವ ಅರಣ್ಯ ಭೂಮಿಗಳು ಮತ್ತು ಅರಣ್ಯೇತರ ಭೂವಿಸ್ತಾರಗಳನ್ನು ಸಂಯೋಜಿತವಾಗಿ ಮರುಸ್ಥಾಪಿಸುವ ಉದ್ದೇಶ ಹೊಂದಿರುವ ಈ ಯೋಜನೆಯ ಅಡಿಯಲ್ಲಿ 14 ಲಕ್ಷ ಹೆಕ್ಟೇರ್ ಅರಣ್ಯ ಭೂಮಿಯನ್ನು 2025ಕ್ಕೆ ಮುನ್ನ ಮರುಸ್ಥಾಪಿಸುವುದು, 2014-15ರ ಹೊತ್ತಿಗೆ ಜಾರಿಗೆ ಬಂದ ಈ ಯೋಜನೆಯ ಉದ್ದೇಶವಾಗಿತ್ತು.
ಆಗಸ್ಟ್ 12ರಂದು ಈ ಸಾಧನೆಯ ಕುರಿತಾದ ಸಿಎಜಿ ವರದಿಯನ್ನು ಸರಕಾರ ಸಂಸತ್ತಿನಲ್ಲಿ ಮಂಡಿಸಿದೆ. ಅದರ ಅನ್ವಯ, ಇಲ್ಲಿಯ ತನಕ ಅರಣ್ಯೀಕರಣ ಆಗಿರುವ ಭೂಮಿಯ ಪ್ರಮಾಣ ಕೇವಲ 30 ಸಾವಿರ ಹೆಕ್ಟೇರ್ ಮಾತ್ರ. ಅಂದರೆ, ಉದ್ದೇಶಿತ ಗುರಿಯ ಕೇವಲ ಶೇ. 02.43 ಸಾಧನೆ ಆಗಿದೆ. ಹಾಗೆಯೇ ಅರಣ್ಯ ಭೂಮಿ ಸುಧಾರಣೆಯಲ್ಲಿ ಕೇವಲ ಶೇ. 8.13 ಸಾಧನೆ ಆಗಿದೆ. 17 ರಾಜ್ಯಗಳಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಅಸಮರ್ಪಕ ಯೋಜನೆ ರೂಪಿಸುವಿಕೆ, ಇಲಾಖೆಗಳ ನಡುವೆ ದುರ್ಬಲ ಸಮನ್ವಯ ಮತ್ತು ಸೂಕ್ತ ಬಜೆಟರಿ ಬೆಂಬಲ ಇಲ್ಲದಿರುವುದು ಈ ಯೋಜನೆಯ ವೈಫಲ್ಯಕ್ಕೆ ಕಾರಣ ಎಂದು ವರದಿ ಹೇಳುತ್ತಿದೆ.
ವಾಸ್ತವ ಹೀಗಿದ್ದರೂ, ಇದೇ ಅಧಿವೇಶನದಲ್ಲಿ ಸರಕಾರ ತನ್ನ ಉಬ್ಬಿಸಲಾದ ಅಂಕಿಅಂಶಗಳನ್ನು ಹರಿಬಿಡುವುದನ್ನು ತಪ್ಪಿಸಿಕೊಂಡಿಲ್ಲ. ಪರಿಸರ ಇಲಾಖೆಯ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಲೋಕಸಭೆಯಲ್ಲಿ ಆಗಸ್ಟ್ 10ರಂದು GIM ಕಾರಣದಿಂದಾಗಿ 17 ರಾಜ್ಯಗಳ 1.84 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಅರಣ್ಯ ಪರಿಸರವನ್ನು ಪುನರುಜ್ಜೀವನಗೊಳಿಸಲಾಗಿದೆ ಎಂದು ಹೇಳಿದ್ದಾರೆ. 2020-27ರ ನಡುವೆ 600 ನಗರವನಗಳು, 400 ನಗರವಾಟಿಕಾಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಇದಕ್ಕಾಗಿ ಏಳು ರಾಜ್ಯಗಳಿಗೆ 57.08 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಹೇಳಿದ್ದಾರೆ. ಈ ಯೋಜನೆಗಳನ್ನೆಲ್ಲ ಜಂಟಿ ಅರಣ್ಯ ನಿರ್ವಹಣಾ ಸಮಿತಿಗಳು, ಗ್ರಾಮ ಅರಣ್ಯ ಸಮಿತಿಗಳು, ಸ್ವಸಹಾಯ ಸಂಘಗಳಂತಹ ಸ್ಥಳೀಯ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಇವುಗಳ ಬಗ್ಗೆ ನಿಗಾ ಇರಿಸಿಕೊಂಡಿವೆ ಎಂದೆಲ್ಲ ಅವರು ವಿವರಿಸಿದ್ದಾರೆ.
2026-27ರಲ್ಲಿ ಇಲಾಖಾ ಬೇಡಿಕೆಗಳ ಚರ್ಚೆಯ ವೇಳೆ ಸಂಸತ್ತಿನಲ್ಲಿ GIMಗೆ 170 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಇದು 2025-26ಕ್ಕೆ ಹೋಲಿಸಿದರೆ ಶೇ. 63 ಹೆಚ್ಚಳ. ಆದರೆ, ಮಿಷನ್ 2020-21ರಿಂದಲೂ ಹಂಚಿಕೆಯಾದ ಹಣವನ್ನೂ ಉಪಯೋಗಿಸುವಲ್ಲಿ ಸೋತಿದೆ. 2025-26ರಲ್ಲಿ GIM ತನಗೆ ಹಂಚಿಕೆಯಾದ ಹಣದಲ್ಲಿ ಕೇವಲ ಶೇ. 28 ಭಾಗವನ್ನು ಮಾತ್ರ ಬಳಸಿಕೊಂಡಿದೆ. GIM ಸಮರ್ಪಕವಾಗಿ ಕೆಲಸ ಮಾಡಿದೆಯೇ ಎಂಬುದು, ಪರಿಸರದಲ್ಲಿ ಅಂಗಾರಾಮ್ಲ ಹೀರಿಕೆಯ ಪ್ರಮಾಣ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ (carbon sequestration) ಎಂಬುದನ್ನಾಧರಿಸಿ ನಿರ್ಧಾರ ಆಗಬೇಕು ಎಂದು ನೀತಿ ಆಯೋಗ 2022ರಲ್ಲೇ ಹೇಳಿತ್ತು. ಆದರೆ ಯೋಜನೆ ನಡೆಯುತ್ತಿರುವ ಹೆಚ್ಚಿನ ರಾಜ್ಯಗಳು ಈ ಮಾನದಂಡದ ಮಾಪನವನ್ನೇ ಮಾಡುತ್ತಿಲ್ಲ.
ಕಾಗದ ಪತ್ರಗಳ ಮೇಲೆ ಭಾರತದಲ್ಲಿ 7.15 ಲಕ್ಷ ಚದರ ಕಿಮೀ ಅರಣ್ಯ ಪ್ರದೇಶ ಇದೆ, ಇದು ದೇಶದ ಒಟ್ಟು ಭೂಭಾಗದ ಶೇ. 21.76ರಷ್ಟಾಗುತ್ತದೆ. ಒಂದೆಡೆ ಕೈಗಾರಿಕೆಗಳು, ಗಣಿಗಾರಿಕೆ, ಬೃಹತ್ ಯೋಜನೆಗಳ ಹೆಸರಿನಲ್ಲಿ ಲಕ್ಷಾಂತರ ಮರಗಳ ಮಾರಣಹೋಮ ನಡೆಸಲಾಗುತ್ತಿದೆ. ಅದಕ್ಕೆ ಪರಿಹಾರ ರೂಪದಲ್ಲಿ ಅರಣ್ಯೀಕರಣ ನಡೆಸಬೇಕೆಂದು, ಹಾನಿಗೀಡಾಗಿರುವಷ್ಟೇ ಪ್ರಮಾಣದ ಅರಣ್ಯೇತರ ಭೂಮಿಯನ್ನು ಅರಣ್ಯ ಭೂಮಿ ಆಗಿ ಪರಿವರ್ತಿಸಬೇಕೆಂದು ನಿಯಮಗಳು ಹೇಳುತ್ತವೆ. ಇಂತಹ ಅರಣ್ಯೇತರ ಭೂಮಿಗಳು ಮೀಸಲು ಅರಣ್ಯದ ಸಮೀಪದಲ್ಲಿರಬೇಕು. ಅದು ಸಾಧ್ಯವಾಗದಿದ್ದರೆ, ಕಳಪೆ ಗುಣಮಟ್ಟದ ಅರಣ್ಯ ಭೂಮಿಯನ್ನು ಅರಣ್ಯೇತರ ಭೂಮಿಗೆ ಹೋಲಿಸಿದರೆ ಒಂದಕ್ಕೆರಡು ಪಟ್ಟು ಗಾತ್ರದಲ್ಲಿ ಅರಣ್ಯೀಕರಣಗೊಳಿಸಬೇಕು ಎಂದು ನಿಯಮಗಳು ಹೇಳುತ್ತವೆ. ಆದರೆ ವಾಸ್ತವದಲ್ಲಿ ಎಲ್ಲೂ ಅದು ನಡೆಯುತ್ತಿಲ್ಲ. ಸಣ್ಣ ಉದಾಹರಣೆ ಬೇಕೆಂದರೆ, ಹಿಮಾಚಲ ಪ್ರದೇಶದ ಕುರಿತು ಸಿಎಜಿ ವರದಿಯೊಂದನ್ನು (2025) ಸಿದ್ಧಪಡಿಸಿದೆ, ಅದರಲ್ಲಿ ಶೇ. 47ರಷ್ಟು ಈಗಾಗಲೇ ದಟ್ಟ ಅರಣ್ಯ ಇರುವ ಭೂಮಿಯನ್ನೇ ಪರಿಹಾರ ರೂಪದಲ್ಲಿ ಹೊಸದಾಗಿ ಸಿದ್ಧಪಡಿಸಲಾದ ಅರಣ್ಯಭೂಮಿ ಎಂದು ತೋರಿಸಲಾಗಿದೆಯಂತೆ. ಯಾವುದೇ ವೈಜ್ಞಾನಿಕ ತಳಹದಿ ಇಲ್ಲದ ಇಂತಹ ಕಣ್ಣುಕಟ್ಟಿನ ಅರಣ್ಯೀಕರಣ ಯೋಜನೆಗಳು ಕಾಗದಪತ್ರಗಳ ಮೇಲೆ ಮಾತ್ರ ಅರಣ್ಯ ಬೆಳೆಯುತ್ತಿರುವುದನ್ನು ತೋರಿಸಬಲ್ಲವು. ಆದರೆ ಅವು ಪರಿಸರಕ್ಕೆ ಯಾವುದೇ ರೀತಿಯಲ್ಲಿ ಪೂರಕ ಅಲ್ಲ.
ಕರ್ನಾಟಕದಲ್ಲೇ ನಾಡಿನೊಳಗೆ ನುಗ್ಗುತ್ತಿರುವ ಆನೆ ಹಿಂಡುಗಳು, ಮನೆಬಾಗಿಲಿಗೆ ಬರುತ್ತಿರುವ ಚಿರತೆ, ಮಂಗ, ಕಾಟಿ ಮತ್ತಿತರ ಕಾಡುಪ್ರಾಣಿಗಳು ವಾಸ್ತವ ಏನೆಂಬುದನ್ನು ಬಿಚ್ಚಿಡುತ್ತಿವೆ. ಪರಿಸರದ ಕುರಿತು ಆಡುವ ಮಾತುಗಳೆಲ್ಲ ಕೇವಲ ಅರಣ್ಯರೋದನ ಆಗುತ್ತಿವೆ. ಕ್ರಿಟಿಕಲ್ ಮಿನರಲ್ಸ್-ಸೆಮಿಕಂಡಕ್ಟರ್ ಕೈಗಾರಿಕೆಗೆ ಪ್ರೋತ್ಸಾಹದ ಹೆಸರಿನಲ್ಲಿ ಹೊಸದಾಗಿ ಗಣಿಗಾರಿಕೆಗೆ ಕರ್ನಾಟಕದ ಭೂಮಿಯನ್ನು ಬಗೆಯಲು ಸನ್ನದ್ಧತೆ ಭರದಿಂದ ನಡೆದಿದೆ. ಜನ ಎಚ್ಚರಗೊಳ್ಳದಿದ್ದರೆ ಬದುಕು ದುಸ್ತರ ಆಗಲಿದೆ.






