ನಿರುದ್ಯೋಗಿ ಯುವ ಭಾರತದ ಗಾಯಗಳಿಗೆ ಎಐ ಬರೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದಿಲ್ಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯ ಸಂಭ್ರಮ ಮುಗಿಲು ಮುಟ್ಟಿದೆ. ಹತ್ತು ಹಲವು ಕೊರತೆಗಳ ನಡುವೆಯೂ ದೇಶ ವಿದೇಶಗಳ ಉದ್ಯಮಿಗಳು, ರಾಜಕೀಯ ನಾಯಕರ ಜೊತೆಗೆ ಪ್ರಧಾನಿ ಮೋದಿಯವರು ಮದುವೆ ಮನೆಯ ಬೀಗತಿಯಂತೆ ಸಂಭ್ರಮಿಸುತ್ತಿದ್ದಾರೆ. ಎಐ ಕ್ರಾಂತಿಯಲ್ಲಿ ಭಾರತ ಕೇವಲ ಪಾಲುದಾರ ಮಾತ್ರವಲ್ಲ, ಅದು ನಾಯಕತ್ವವನ್ನು ವಹಿಸಿಕೊಂಡಿದೆ ಎಂದು ಪ್ರಧಾನಿ ಮೋದಿಯವರು ಘೋಷಿಸಿದ್ದಾರೆ. ಇತ್ತೀಚೆಗೆ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿಯವರು ‘ಭಾರತದ ನಗರ-ಗ್ರಾಮೀಣ ಅಂತರವನ್ನು ಎಐ ಕಡಿಮೆ ಮಾಡಲಿದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ‘‘ಎಐ ಅಸಮಾನತೆಗಳನ್ನು ಆಳಗೊಳಿಸುತ್ತದೆ ಎಂದು ಜಗತ್ತು ಆತಂಕ ಪಡುತ್ತಿರುವ ಸಮಯದಲ್ಲಿ, ಭಾರತವು ಅಂತರಗಳನ್ನು ಅಳಿಸಲು ಅದನ್ನು ಬಳಸುತ್ತಿದೆ. ನಾವು ಇದನ್ನು ಪ್ರತೀ ಹಳ್ಳಿಗೆ, ಪ್ರತೀ ಜಿಲ್ಲೆಗೆ ಮತ್ತು ಪ್ರತಿಯೊಬ್ಬ ನಾಗರಿಕನಿಗೆ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಆರ್ಥಿಕ ಅವಕಾಶಗಳನ್ನು ತಲುಪಿಸುವ ಸಮರ್ಥ ಸಾಧನವನ್ನಾಗಿ ಮಾಡುತ್ತಿದ್ದೇವೆ’’ ಎಂದು ಅವರು ಹೇಳಿಕೊಂಡಿದ್ದಾರೆ.
ದಿಲ್ಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯ ಕುಂದುಕೊರತೆಗಳು, ಮೂಲಭೂತ ಸೌಕರ್ಯಗಳಲ್ಲಾಗಿರುವ ಲೋಪಗಳು, ವಿಶ್ವವಿದ್ಯಾನಿಲಯವೊಂದರ ನಕಲಿ ರೋಬೋಟ್‌ಗಳು ಚರ್ಚೆಯಾದಷ್ಟು, ಎಐ ಈ ದೇಶದ ಜನರ ಬದುಕಿನ ಮೇಲೆ ಭವಿಷ್ಯದಲ್ಲಿ ಬೀರುವ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಗಳು ನಡೆದಿಲ್ಲ. ವಿದೇಶಿ ಸಂಸ್ಥೆಗಳ ನಡುವೆ ನಡೆದ ಒಪ್ಪಂದಗಳ ‘ಭೋಪರಾಕ್’ಗಳಿಗೆ ಮಾಧ್ಯಮಗಳು ಸೀಮಿತವಾಗಿವೆ. ಶೃಂಗಸಭೆಯ ಸಫಲತೆಯ ಮಾನದಂಡಗಳು ಯಾವುವು? ಎಷ್ಟು ವಿದೇಶಿ ಕಂಪೆನಿಗಳು ಭಾರತದೊಂದಿಗೆ ಒಪ್ಪಂದಕ್ಕೆ ಸಿದ್ಧವಾಗಿವೆ, ಭಾರತದಲ್ಲಿ ತನ್ನ ನೆಲೆಗಳನ್ನು ಸ್ಥಾಪಿಸಲು ಮುಂದಾಗಿವೆ ಎನ್ನುವುದು ಈ ಸಭೆಯ ಯಶಸ್ಸನ್ನು ಹೇಳುತ್ತದೆಯೋ ಅಥವಾ ಭವಿಷ್ಯದಲ್ಲಿ ಅದು ಭಾರತದ ಅಭಿವೃದ್ಧಿಯ ಮೇಲೆ ಯಾವ ರೀತಿ ಪರಿಣಾಮಗಳನ್ನು ಬೀರಲಿದೆ ಎನ್ನುವುದರ ಮಾನದಂಡದಲ್ಲಿ ನಿರ್ಧಾರವಾಗುತ್ತದೆಯೋ? ಈ ಸಂದರ್ಭದಲ್ಲಿ ಐಎಂಎಫ್ ಆಡಳಿತ ನಿದೇಶಕಿ ಕ್ರಿಸ್ಟಲೀನಾ ಅವರು ಸಮ್ಮೇಳನದ ಭಾಷಣದಲ್ಲಿ ನೀಡಿದ ಎಚ್ಚರಿಕೆಯನ್ನು ಭಾರತ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ‘‘ಎಐಯು ಜಾಗತಿಕ ಬೆಳವಣಿಗೆಯನ್ನು ಹೆಚ್ಚಿಸಬಹುದೇನೋ ನಿಜ. ಆದರೆ ಅದೇ ವೇಳೆ ಉದ್ಯೋಗ ಕಡಿತ ಮತ್ತು ಆರ್ಥಿಕ ಅಸ್ಥಿರತೆಯ ದೊಡ್ಡ ಅಪಾಯವನ್ನೂ ಒಡ್ಡಿದೆ’’ ಎಂದು ಅವರು ತಮ್ಮ ಭಾಷಣದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಅನೇಕ ಸಂದರ್ಭದಲ್ಲಿ ಎಐ ಕುರಿತ ಬಣ್ಣನೆಗಳು ಒಳಗಿರುವ ಕಹಿಗಳಿಗೆ ನೀಡಿದ ಸಿಹಿ ಲೇಪನವಾಗುವ ಸಾಧ್ಯತೆಗಳಿವೆ ಎನ್ನುವ ಅವರ ಮಾತು ಭಾರತವನ್ನೇ ಉದ್ದೇಶಿಸಿ ಆಡಿರುವಂತಿದೆ. ಕೆಲವು ದೇಶಗಳು ಈ ತಂತ್ರಜ್ಞಾನವನ್ನು ಬಳಸಿ ಅತಿ ಎತ್ತರಕ್ಕೆ ತಲುಪುವ ಸಂದರ್ಭದಲ್ಲಿ ಎಐಯ ವ್ಯಾಪ್ತಿಯಲ್ಲಿಲ್ಲದ ಬಡ ಮತ್ತು ಹಿಂದುಳಿದ ದೇಶಗಳು ಪಾತಾಳಕ್ಕೆ ತಲುಪಬಹುದು. ಈ ಅಂತರಗಳನ್ನು ತುಂಬುವುದು ಸುಲಭವಿಲ್ಲ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಅಂತರವನ್ನು ಇಲ್ಲವಾಗಿಸುವ, ಸಮತೋಲನವನ್ನು ಕಾಯ್ದುಕೊಳ್ಳುವ ಬಗ್ಗೆ ಸಮ್ಮೇಳನದಲ್ಲಿ ಯಾರೂ ಗಂಭೀರವಾಗಿ ಚರ್ಚಿಸಿಲ್ಲ. ಎಲ್ಲ ದೇಶ ವಿದೇಶಗಳ ಸಂಸ್ಥೆಗಳು ತಮ್ಮ ತಮ್ಮ ಬಟ್ಟಲನ್ನು ತುಂಬಿಸಿಕೊಳ್ಳುವುದರಲ್ಲೇ ಮಗ್ನವಾಗಿದ್ದವು. ಕ್ರಿಸ್ಟಲೀನಾ ಮಾತುಗಳಲ್ಲಿ ಈ ಬಗ್ಗೆ ಕಳವಳಗಳಿದ್ದವು.
ಅವರದೇ ಮಾತುಗಳ ಪ್ರಕಾರ, ಜಾಗತಿಕವಾಗಿ ಉದ್ಯೋಗಗಳ ಮೇಲೆ ಎಐ ಪರಿಣಾಮ ಬೀರುತ್ತದೆ. ಕೆಲವು ಕೆಲಸಗಳನ್ನು ಸುಲಲಿತಗೊಳಿಸುವುದರ ಜೊತೆಗೇ ಹಲವು ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ. ಈಗಾಗಲೇ ಕಸಿದುಕೊಳ್ಳುವ ಕೆಲಸ ಶುರುವಾಗಿದೆ. ಅಭಿವೃದ್ಧಿ ಶೀಲ ದೇಶಗಳಲ್ಲಿ ಶೇ. 40ರಷ್ಟು ಉದ್ಯೋಗಗಳು ನಾಶವಾಗಲಿದ್ದರೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಶೇ. 60 ಉದ್ಯೋಗಗಳು ನಾಶವಾಗಲಿವೆ. ಉದ್ಯೋಗಗಳು ನಾಶವಾದಾಗ ಅದರ ಲಾಭವನ್ನು ಪಡೆದುಕೊಳ್ಳುವುದು ಉದ್ಯಮಿಗಳು. ಅಂದರೆ ಕಡಿಮೆ ಉದ್ಯೋಗಿಗಳಿಂದ ಹೆಚ್ಚು ಸಂಪಾದಿಸುವ ಅವಕಾಶ ಅವರಿಗೆ. ಭಾರತ ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆಯನ್ನು ತೀವ್ರವಾಗಿ ಅನುಭವಿಸುತ್ತಿದೆ. ವಿಪರ್ಯಾಸವೆಂದರೆ, ವಿದ್ಯಾವಂತ ಯುವ ಸಮೂಹದಲ್ಲೇ ನಿರುದ್ಯೋಗ ಏರುಗತಿಯಲ್ಲಿದೆ ಎನ್ನುವುದನ್ನು ಅಂಕಿಅಂಶಗಳು ಹೇಳುತ್ತವೆ. ನಿರುದ್ಯೋಗ ಪ್ರಮಾಣದಲ್ಲಿ ಯುವಜನತೆಯ ಪಾಲು ಶೇ. 83ರಷ್ಟಿದೆ ಎಂದು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಭಾರತದ ಮಾನವಾಭಿವೃದ್ಧಿ ಸಂಸ್ಥೆ ಬಿಡುಗಡೆ ಮಾಡಿದ 2024ರ ವರದಿ ವಿವರಿಸುತ್ತದೆ. 2000ದಿಂದ 2019ರ ಅವಧಿಯಲ್ಲಿ ಭಾರತದ ಯುವ ಸಮೂಹದಲ್ಲಿನ ಉದ್ಯೋಗ ಮತ್ತು ಅರೆ ಉದ್ಯೋಗ ಪ್ರಮಾಣ ಏರುಗತಿಯಲ್ಲೇ ಇತ್ತು. ಆದರೆ ಕೋವಿಡ್ ಅವಧಿಯಲ್ಲಿ ಅದು ಇಳಿಮುಖವಾಯಿತು. 2000ನೇ ಇಸವಿಯಲ್ಲಿ ದೇಶದಲ್ಲಿನ ಒಟ್ಟು ವಿದ್ಯಾವಂತ ಯುವ ಸಮೂಹ ಉದ್ಯೋಗಿಗಳ ಪೈಕಿ ಶೇ. 50ರಷ್ಟು ಜನರು ಸ್ವಯಂ ಉದ್ಯೋಗ ಮಾಡುತ್ತಿದ್ದರು. ಶೇ. 13ರಷ್ಟು ಜನರು ನಿಯಮಿತ ಉದ್ಯೋಗವನ್ನು ಹೊಂದಿದ್ದರು. ಶೇ. 37ರಷ್ಟು ಜನರು ತಾತ್ಕಾಲಿಕ ಉದ್ಯೋಗ ಹೊಂದಿದ್ದರು. 2022ರಲ್ಲಿ ಅದು ತೀವ್ರ ಇಳಿಕೆ ಕಂಡಿದೆ. ಭಾರತವು ಮುಂದಿನ ಒಂದು ದಶಕದಲ್ಲಿ 80 ಲಕ್ಷ ಜನರು ಉದ್ಯೋಗ ಪಡೆದುಕೊಳ್ಳಲಿದ್ದಾರೆ ಎಂದು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಅಭಿಪ್ರಾಯ ಪಟ್ಟಿತ್ತು. ಆದರೆ ಎಐ ಕ್ರಾಂತಿಯು ಆ ಅಂದಾಜುಗಳನ್ನು ಬುಡಮೇಲು ಮಾಡಲಿದೆ.
ಎಐ ಗ್ರಾಮೀಣ ಮತ್ತು ನಗರದ ನಡುವಿನ ಅಸಮಾನತೆಯನ್ನು ಅಳಿಸುತ್ತದೆ ಎನ್ನುವುದು ಪ್ರಧಾನಿಯ ಬುರುಡೆ ಮಾತು. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳು ಮೂಲಭೂತ ಸೌಲಭ್ಯಗಳಿಂದಲೇ ವಂಚಿತವಾಗಿವೆ. ಆ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸರಕಾರ ವಿಶೇಷ ಆಸಕ್ತಿಯನ್ನೇ ಹೊಂದಿಲ್ಲ. ಹೀಗಿರುವಾಗ ಎಐ ಗ್ರಾಮೀಣ ಪ್ರದೇಶಗಳಿಗೆ ಹೇಗೆ ಪೂರಕವಾಗಿ ಕೆಲಸ ಮಾಡಬಹುದು? ಕೆಲಸ ಕಳೆದುಕೊಳ್ಳುವ ವಿದ್ಯಾವಂತ ಸಮುದಾಯಗಳಿಗೆ ನೀಡುವುದಕ್ಕೆ ಸರಕಾರದ ಬಳಿ ಏನಿದೆ? ಉದ್ಯೋಗಿಗಳ ಸಂಖ್ಯೆಗಳನ್ನು ಇಳಿಸಿ ಬೃಹತ್ ಕಾರ್ಪೊರೇಟ್ ಸಂಸ್ಥೆಗಳನ್ನು ಇನ್ನಷ್ಟು ಲಾಭದಾಯಕವನ್ನಾಗಿಸುವುದರಿಂದ ಗ್ರಾಮೀಣ ಪ್ರದೇಶಗಳಿಗೆ ಹೇಗೆ ಲಾಭವಾಗಲಿದೆ? ಈಗಾಗಲೇ ಗ್ರಾಮೀಣ ಪ್ರದೇಶದ ತಳಸ್ತರದ ಜನರ ಬದುಕಿಗೆ ಆಸರೆಯಾಗಿರುವ ಮನರೇಗಾ ಯೋಜನೆಯನ್ನು ಕೂಡ ಹಂತಹಂತವಾಗಿ ಇಲ್ಲವಾಗಿಸಲು ಸರಕಾರ ಹೊರಟಿದೆ. ಎಐ ತಂತ್ರಜ್ಞಾನ ವಿದ್ಯಾವಂತ ಯುವಕರು ಅದರಲ್ಲೂ ಐಟಿ ಕ್ಷೇತ್ರದಲ್ಲಿರುವ ಯುವಕರ ಕೆಲಸಗಳನ್ನೇ ಮೊದಲಿಗೆ ನುಂಗಿ ಹಾಕಲಿದೆ.ಆ ಬಳಿಕ ಹಂತಹಂತವಾಗಿ ಇತರ ಉದ್ಯೋಗಗಳನ್ನು ಆಪೋಷನ ತೆಗೆದುಕೊಳ್ಳಲಿದೆ. ಇವೆಲ್ಲವೂ ಅಂತಿಮವಾಗಿ ದೇಶದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳನ್ನು ಸರಕಾರ ಶೃಂಗಸಭೆಯಲ್ಲಿ ಗಂಭೀರವಾಗಿ ಚರ್ಚಿಸಬೇಕಾಗಿತ್ತು.
ಆಧುನಿಕ ಸಂಶೋಧನೆಗಳನ್ನು, ಅದರ ಮೂಲಕ ನಡೆಯುವ ವಿಕಾಸವನ್ನು ತಡೆಯಲು ಸಾಧ್ಯವಿಲ್ಲ ನಿಜ. ಆದರೆ ಇಂದು ನಮ್ಮ ನೆಲ, ಜಲವನ್ನು ಒತ್ತೆಯಿಟ್ಟು ವಿದೇಶಿ ಕಂಪೆನಿಗಳನ್ನು ಭಾರತಕ್ಕೆ ಆಹ್ವಾನಿಸುವ ಸಂದರ್ಭದಲ್ಲಿ ಅದು ಒಟ್ಟು ದೇಶದ ಅಭಿವೃದ್ಧಿಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಚರ್ಚೆನಡೆಸುವುದು ಅತ್ಯಗತ್ಯವಾಗಿದೆ. ಕೃತಕ ಬುದ್ಧಿ ಮತ್ತೆಯ ‘ಮಾನವ್’ ನೋಟವನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ನರೇಂದ್ರ ಮೋದಿ, ಮಾನವ್ ಅಂದರೆ ನೈತಿಕತೆ, ಉತ್ತರದಾಯಿತ್ವವುಳ್ಳ ಆಡಳಿತ, ಪಾರದರ್ಶಕ ನಿಯಮಗಳು ಮತ್ತು ಸದೃಢ ಮೇಲುಸ್ತುವಾರಿ, ರಾಷ್ಟ್ರೀಯ ಸಾರ್ವಭೌಮತೆ, ಎಲ್ಲರನ್ನೂ ಒಳಗೊಳ್ಳುವುದು ಎಂದು ವಿವರಿಸಿದ್ದಾರೆ. ನಮ್ಮ ನೆಲ ಜಲವನ್ನು ಬಲಿಕೊಟ್ಟು ಕಾರ್ಪೊರೇಟ್ ಸಂಸ್ಥೆಯನ್ನು ಬೆಳೆಸುವುದು ನೈತಿಕತೆಯೆ? ನಮ್ಮ ದತ್ತಾಂಶಗಳನ್ನು ಅಮೆರಿಕದಂತಹ ದೇಶಗಳಿಗೆ ಒತ್ತೆಯಿಡುವುದು ಸಾರ್ವಭೌಮತೆಯ ರಕ್ಷಣೆಯೆ? ಉತ್ತರದಾಯಿತ್ವವುಳ್ಳ ಆಡಳಿತ ರೀತಿಯೆ? ಲಕ್ಷಾಂತರ ವಿದ್ಯಾವಂತ ಯುವಕರು ಉದ್ಯೋಗಗಳನ್ನು ಕಳೆದುಕೊಳ್ಳುವುದು ಎಲ್ಲರನ್ನು ಒಳಗೊಳ್ಳುವ ಬಗೆಯೆ? ಭಾರತವು ವಿದೇಶಿ ಕಂಪೆನಿಗಳ ಜೊತೆಗೆ ನಡೆಸಿದ ಒಪ್ಪಂದಗಳು ನಿಜಕ್ಕೂ ಪಾರದರ್ಶಕವಾಗಿವೆ ಎಂದು ಪ್ರಧಾನಿ ಎದೆ ಮುಟ್ಟಿ ಹೇಳಿಕೊಳ್ಳಬಲ್ಲರೆ?






