ಕದಡಿದ ನೀರಿನಲ್ಲಿ ಮೀನು ಹಿಡಿಯಲು ಮುಂದಾಗಿರುವ ವಿಮಾನ ಸಂಸ್ಥೆಗಳು!

ಸಾಂದರ್ಭಿಕ ಚಿತ್ರ | Photo Credit : freepik
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪರೋಕ್ಷ ಏಕಸ್ವಾಮ್ಯದ ಲಾಭ ಪಡೆದು ಪ್ರಯಾಣಿಕರನ್ನು, ಸರಕಾರವನ್ನು ಬ್ಲ್ಯಾಕ್ಮೇಲ್ ಮಾಡುವುದರಲ್ಲಿ ಕುಖ್ಯಾತವಾಗಿರುವ ಭಾರತೀಯ ವಿಮಾನ ಯಾನ ಸಂಸ್ಥೆಗಳು ಇದೀಗ ಮತ್ತೊಮ್ಮೆ ಕದಡಿದ ನೀರಿನಲ್ಲಿ ಮೀನು ಹಿಡಿಯುವುದಕ್ಕೆ ಮುಂದಾಗಿವೆ. ಅಮೆರಿಕ-ಇರಾನ್ ಯುದ್ಧ ಜಗತ್ತಿನ ಬೇರೆ ಬೇರೆ ವಲಯಗಳ ಮೇಲೆ ತನ್ನ ದುಷ್ಪರಿಣಾಮಗಳನ್ನು ಬೀರುತ್ತಿದೆೆ. ಭಾರತವೂ ಇದರ ಫಲವನ್ನು ಉಣ್ಣುತ್ತಿರುವ ದೇಶಗಳಲ್ಲಿ ಒಂದಾಗಿದೆ. ಯುದ್ಧದ ಕಾರ್ಮೋಡವು ಭಾರತದ ಆರ್ಥಿಕತೆಯಲ್ಲಿ ಹಿಂಜರಿಕೆಯನ್ನು ಸೃಷ್ಟಿಸಿದೆ. ತೈಲ ಕೊರತೆ ಇನ್ನಷ್ಟು ತೀವ್ರವಾಗಿ ಕಾಡಿದ್ದೇ ಆದರೆ, ದೇಶದ ಸಾರಿಗೆ ವ್ಯವಸ್ಥೆಯ ಮೇಲೆ ಅದು ಪರಿಣಾಮ ಬೀರಬಹುದು. ಬೆಲೆಯೇರಿಕೆ, ಹಣದುಬ್ಬರಗಳಿಗೆ ಕಾರಣವಾಗಬಹುದು. ಇಂತಹ ಹೊತ್ತಿನಲ್ಲಿ ಗಾಯಗಳಿಗೆ ಬರೆ ಎಳೆಯುವಂತೆ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ, ಇಂಡಿಗೋ ಮತ್ತು ಸ್ಪೈಸ್ ಜೆಟ್ ವಿಮಾನ ಹಾರಾಟಗಳನ್ನು ಸ್ಥಗಿತಗೊಳಿಸುವ ಬೆದರಿಕೆಯನ್ನು ಒಡ್ಡಿವೆ. ‘‘ಭಾರತೀಯ ವಿಮಾನ ಯಾನ ಕ್ಷೇತ್ರವು ತೀವ್ರ ಆರ್ಥಿಕ ಒತ್ತಡದಲ್ಲಿದ್ದು, ವಿಮಾನಹಾರಾಟಗಳನ್ನು ನಿಲ್ಲಿಸುವ ಅನಿವಾರ್ಯಕ್ಕೆ ಒಳಗಾಗಬಹುದು. ಯುದ್ಧ ಪರಿಸ್ಥಿತಿಯಿಂದಾಗಿ ತೈಲ ಬೆಲೆಯಲ್ಲಿ ಹೆಚ್ಚಳವಾಗಿದೆ. ಹಾಗೆಯೇ ವಾಯು ಪ್ರದೇಶ ನಿರ್ಬಂಧಗಳಿಂದಾಗಿ ದೂರ ಪ್ರಯಾಣ ಮಾರ್ಗಗಳಲ್ಲಿ ವಿಮಾನ ಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚದಲ್ಲಿ ಹೆಚ್ಚಳವಾಗಿದೆ. ಆದುದರಿಂದ, ವಿಮಾನ ಯಾನ ಸಂಸ್ಥೆಗಳು ಬದುಕುಳಿಯಲು ಮತ್ತು ಮುನ್ನಡೆಯಲು ಕೇಂದ್ರ ಸರಕಾರ ತುರ್ತಾಗಿ ಮಧ್ಯ ಪ್ರವೇಶಿಸಿ ಆರ್ಥಿಕ ನೆರವನ್ನು ಒದಗಿಸಬೇಕು’’ ಎಂದು ವಿಮಾನ ಯಾನ ಸಂಸ್ಥೆಗಳು ಕೇಂದ್ರ ಸರಕಾರಕ್ಕೆ ಪತ್ರ ಬರೆದಿವೆ. ವಿಮಾನಇಂಧನದ ಮೇಲಿರುವ ಶೇ. 11 ಅಬಕಾರಿ ಸುಂಕವನ್ನು ರದ್ದುಗೊಳಿಸಬೇಕು, ವಿವಿಧ ರಾಜ್ಯಗಳಲ್ಲಿ ಇಂಧನದ ಮೇಲೆ ಶೇ. 25ರವರೆಗೆ ವಿಧಿಸಲಾಗುತ್ತಿರುವ ವ್ಯಾಟ್ ದರವನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ರಾಜ್ಯಗಳ ಮೇಲೆ ಒತ್ತಡ ಹೇರಬೇಕು, ಕಚ್ಚಾ ತೈಲ ಬೆಲೆ ಇಳಿಕೆಯಾದಾಗಲೂ ವಿಮಾನ ಇಂಧನ ದರ ಮಾತ್ರ ಏರಿಕೆಯಲ್ಲೇ ಇರುತ್ತದೆ. ಈ ಅಸಮಾನತೆಯನ್ನು ಹೋಗಲಾಡಿಸಲು ವೈಜ್ಞಾನಿಕ ಬೆಲೆ ನಿಗದಿ ಕ್ರಮ ಜಾರಿಗೆ ಬರಬೇಕು ಎಂದು ಅದು ತನ್ನ ಬೇಡಿಕೆಗಳ ಪಟ್ಟಿಯಲ್ಲಿ ಸೇರಿಸಿವೆ.
ತನ್ನ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟುಕೊಂಡು ವಿಮಾನ ಸಂಸ್ಥೆಗಳು ಸರಕಾರವನ್ನು ಬೆದರಿಸುವುದಕ್ಕೆ ಇದು ಖಂಡಿತಾ ಸರಿಯಾದ ಸಮಯವಲ್ಲ. ಯುದ್ಧದ ಕಾರಣದಿಂದ ಈಗಾಗಲೇ ಅಂತರ್ರಾಷ್ಟ್ರೀಯ ಪ್ರಯಾಣಕ್ಕೆ ಅಡೆತಡೆಗಳು ಎದುರಾಗುತ್ತಿವೆ. ದುಬಾರಿ ದರಗಳ ಮೂಲಕ ವಿಮಾನ ಯಾನ ಸಂಸ್ಥೆಗಳು ಪ್ರಯಾಣಿಕರನ್ನು ದೋಚುತ್ತಿವೆ. ಇದೀಗ ಹೊಸದಾಗಿ ಒಡ್ಡಿರುವ ಬೆದರಿಕೆ ಪ್ರಯಾಣಿಕರಲ್ಲಿ ಇನ್ನಷ್ಟು ಆತಂಕ, ಅಭದ್ರತೆಯನ್ನು ಸೃಷ್ಟಿಸಿವೆ. ಕಳೆದ ವರ್ಷವಷ್ಟೇ ಇಂಡಿಗೋ ಸಂಸ್ಥೆಯ ಅಘೋಷಿತ ಮುಷ್ಕರದಿಂದ ಆದ ಹಾನಿ, ನಷ್ಟದಿಂದ ಪ್ರಯಾಣಿಕರು ಇನ್ನೂ ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಇನ್ನೊಂದು ಅಧಿಕೃತ ಮುಷ್ಕರಕ್ಕೆ ವಿಮಾನ ಯಾನ ಸಂಸ್ಥೆಗಳು ಸಿದ್ಧತೆ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಜ್ಞಾವಂತರು ಪ್ರಶ್ನಿಸುವಂತಾಗಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಸುಮಾರು 7,000 ಇಂಡಿಗೋ ವಿಮಾನಯಾನಗಳು ರದ್ದುಗೊಂಡಿದ್ದವು. ಇದರಿಂದಾಗಿ 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಈ ರದ್ದು ದೇಶದ ಆರ್ಥಿಕ ಚಟುವಟಿಕೆಗಳ ಮೇಲೂ ಭಾರೀ ದುಷ್ಪರಿಣಾಮವನ್ನು ಬೀರಿತ್ತು. ಭಾರತದ ವಾಯು ಸಾರಿಗೆಯ ವರ್ಚಸ್ಸಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಧಕ್ಕೆಯುಂಟಾಗಿತ್ತು. ಡಿಜಿಸಿಎಯು ತಂದಿರುವ ಹೊಸ ನಿಯಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ಪೈಲಟ್ಗಳ ಕೊರತೆಯನ್ನು ಮುಂದೊಡ್ಡಿ ಇಂಡಿಗೋ ಏಕಾಏಕಿ ವಿಮಾನಯಾನಗಳನ್ನು ಸ್ಥಗಿತಗೊಳಿಸಿತ್ತು. ದೇಶದಲ್ಲಿ ಹಾಹಾಕಾರ ಸೃಷ್ಟಿಯಾದಾಗ ಸರಕಾರ ಅನಿವಾರ್ಯವಾಗಿ ಪೈಲಟ್ಗಳ ದೈಹಿಕ, ಮಾನಸಿಕ ಕ್ಷಮತೆಗೆ ಪೂರಕವಾಗಿದ್ದ ನಿಯಮಗಳನ್ನು ಹಿಂದೆಗೆದುಕೊಳ್ಳಬೇಕಾಯಿತು. ಇಂಡಿಗೋ ತನ್ನ ಪ್ರಾಬಲ್ಯವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಭಾರತದ ಸ್ಪರ್ಧಾ ಆಯೋಗ (ಸಿಸಿಐ)ವು ಸಂಶಯ ವ್ಯಕ್ತಪಡಿಸಿತ್ತು. ಈ ಬಗ್ಗೆ ಕಳೆದ ಫೆಬ್ರವರಿಯಲ್ಲಿ ತನಿಖೆಗೂ ಆದೇಶ ನೀಡಿತ್ತು. ದೇಶೀಯ ವಿಮಾನ ಯಾನ ಮಾರುಕಟ್ಟೆಯಲ್ಲಿ ಇಂಡಿಗೋ ಸುಮಾರು ಶೇ. 65ರಷ್ಟು ಪಾಲನ್ನು ಹೊಂದಿದ್ದು, ತನ್ನ ಸೇವೆಯನ್ನು ತಡೆಹಿಡಿಯುವ ಮೂಲಕ ಕೃತಕ ಕೊರತೆ ಸೃಷ್ಟಿಸಿತ್ತು ಎಂದು ಸಿಸಿಐ ಆರೋಪಿಸಿತ್ತು. ಇಂಡಿಗೋ ತುರ್ತು ಮುಷ್ಕರದಿಂದ ಹಲವು ಪಟ್ಟು ಹೆಚ್ಚುವರಿ ಹಣವನ್ನು ನೀಡಿ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಯನ್ನು ಮಾಡುವ ಸ್ಥಿತಿ ನಿರ್ಮಾಣವಾಯಿತು.
2024ರ ‘ಏರ್ ಹೆಲ್ಪ್ ಸ್ಕೋರ್ ವರದಿ’ಯು ಇಂಡಿಗೋ ವಿಶ್ವದ ಅತ್ಯಂತ ಕೆಟ್ಟ ವಿಮಾನ ಯಾನ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಆರೋಪಿಸಿತ್ತು. ಗ್ರಾಹಕರ ಅತೃಪ್ತಿ, ವಿಮಾನ ಯಾನದಲ್ಲಿನ ಅಡೆತಡೆಗಳು, ಕಳಪೆ ನಿರ್ವಹಣೆ ಇಂಡಿಗೋ ವಿಮಾನಯಾನವು ಏರ್ಹೆಲ್ಪ್ ಸಮೀಕ್ಷೆಯಲ್ಲಿ ಕಳಪೆ ಸ್ಥಾನವನ್ನು ಪಡೆಯಲು ಕಾರಣವಾಗಿವೆ. 2024ರ ಜನವರಿಯಿಂದ ಅಕ್ಟೋಬರ್ವರೆಗಿನ ದತ್ತಾಂಶ ಮತ್ತು ಗ್ರಾಹಕರ ಪ್ರತಿಕ್ರಿಯೆಯ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಿತ್ತು. ಇಂಡಿಗೋ ಸಂಸ್ಥೆಯು ಸಮೀಕ್ಷೆಯ ಪಾರದರ್ಶಕತೆಯನ್ನು ಪ್ರಶ್ನಿಸಿತ್ತಾದರೂ, ಡಿಸೆಂಬರ್ ತಿಂಗಳಲ್ಲಿ ತನ್ನೊಳಗಿನ ಅಕರಾಳ ವಿಕರಾಳ ರೂಪವನ್ನು ಸ್ವತಃ ಇಂಡಿಗೋ ಸಂಸ್ಥೆಯೇ ಜಗಜ್ಜಾಹೀರುಗೊಳಿಸಿತ್ತು.
ಇದೀಗ ಇಂಡಿಗೋ ಜೊತೆಗೆ ಇತರ ವಿಮಾನ ಸಂಸ್ಥೆಗಳೂ ಕೈ ಜೋಡಿಸಿ ಸರಕಾರಕ್ಕೆ ಬೆದರಿಕೆಯನ್ನು ಒಡ್ಡುತ್ತಿವೆ. ವಿಮಾನ ಯಾನ ಸಂಸ್ಥೆಗಳು ಮುಂದಿಟ್ಟಿರುವ ಕೆಲವು ಬೇಡಿಕೆಗಳು ನ್ಯಾಯಯುತವಾಗಿವೆ ಎನ್ನುವುದೇನೋ ನಿಜ. ಆದರೆ ಅವುಗಳ ಜೊತೆ ಜೊತೆಗೇ ತನ್ನ ಇತರ ಉದ್ದೇಶಗಳನ್ನೂ ಸಾಧಿಸಿಕೊಳ್ಳುವುದಕ್ಕೆ ಅವುಗಳು ಈ ಸಂದರ್ಭವನ್ನು ಬಳಸಲು ಮುಂದಾದಂತಿದೆ. ವಿಮಾನಯಾನವೂ ಸೇರಿದಂತೆ ಭಾರತದ ಉದ್ಯಮಗಳು ಬೆರಳೆಣಿಕೆಯ ಕಾರ್ಪೊರೇಟ್ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಬಲಿಯಾದರೆ ಭಾರತದ ಸ್ಥಿತಿ ಏನಾಗಬಹುದು ಎನ್ನುವುದಕ್ಕೆ ವಿಮಾನ ಯಾನ ಸಂಸ್ಥೆಗಳ ಈ ಬ್ಲ್ಯಾಕ್ಮೇಲ್ ಅತ್ಯುತ್ತಮ ಉದಾಹರಣೆಯಾಗಿದೆ. ಮೋದಿಯವರು ವಿಮಾನ ಯಾನ ಕ್ಷೇತ್ರದಲ್ಲಿ ಮಾಡಿರುವ ಸುಧಾರಣೆಗಳ ಅಸಲಿಯತ್ತು ಇದೀಗ ಬಟಾ ಬಯಲಾಗಿದೆ.






