ಅಮೆರಿಕ ಎನ್ನುವ ಭಸ್ಮಾಸುರ!

PC: x.com/BarronTNews_
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಶಾಂತಿ ನೊಬೆಲ್ಗಾಗಿ ರಶ್ಯ ಮತ್ತು ಅಮೆರಿಕ ನಡುವೆ ಪೈಪೋಟಿ ತೀವ್ರವಾಗಿದೆ. ಸರ್ವಾಧಿಕಾರಿಗಳು ತಮ್ಮ ರಕ್ತಸಿಕ್ತ ಕೈಗಳನ್ನು ಒರೆಸಿಕೊಳ್ಳಲು ಕರವಸ್ತ್ರದಂತೆ ಬಳಕೆಯಾಗುತ್ತಾ ಬಂದಿರುವ ನೊಬೆಲ್ ಶಾಂತಿ ಪ್ರಶಸ್ತಿಗೆ ಈ ಬಾರಿ ಪ್ರಮುಖ ಸ್ಪರ್ಧಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಹೊಮ್ಮಿದ್ದಾರೆ. ವಿಶೇಷವೆಂದರೆ, ಅವರಿಗೆ ನೊಬೆಲ್ ಶಾಂತಿಯನ್ನು ನೀಡಲು ನೆರೆಯ ಪಾಕಿಸ್ತಾನದ ಸೇನಾ ಮುಖ್ಯಸ್ಥರ ಶಿಫಾರಸು ಬೇರೆ. ಈ ಶಿಫಾರಸನ್ನು ನೀಡಲು ಪಹಲ್ಗಾಮ್ನ ಭಯೋತ್ಪಾದಕ ದಾಳಿಗೆ ನೀಡಿರುವ ಕುಮ್ಮಕ್ಕು ಅವರ ವಿಶೇಷ ಅರ್ಹತೆಯಾಗಿದೆ. ‘ಹಿಟ್ಲರ್ ನಡೆಸಿದ ಗ್ಯಾಸ್ಛೇಂಬರ್ ನರಮೇಧ’ಗಳ ಸಂತ್ರಸ್ತರೆಂಬ ಕಾರಣವನ್ನು ಮುಂದಿಟ್ಟುಕೊಂಡು ಅದನ್ನೂ ಮೀರಿಸಿದ ಹತ್ಯಾಕಾಂಡಗಳನ್ನು ನಡೆಸಲು ಪರವಾನಿಗೆಗಳನ್ನು ಪಡೆದುಕೊಂಡಿರುವ ಇಸ್ರೇಲ್ ಎನ್ನುವ ಹಿಟ್ಲರ್ನ ಅನೈತಿಕ ಕೂಸು ಕಳೆದ ಎರಡು ತಿಂಗಳಲ್ಲಿ ಸಹಸ್ರಾರು ಮಕ್ಕಳನ್ನು ತಿಂದು ತೇಗಿ ಟ್ರಂಪ್ನ ಶಾಂತಿಯ ಆಂದೋಲನಕ್ಕೆ ಬಿರುಸಿನ ಕೊಡುಗೆಗಳನ್ನು ನೀಡುತ್ತಿದೆ. ಇವುಗಳ ಮುಂದೆ ರಶ್ಯವು ಉಕ್ರೇನ್ನ ಮೇಲೆ ಕ್ಷಿಪಣಿಗಳನ್ನು ಹಾರಿಸುತ್ತಾ ಜಗತ್ತಿಗೆ ಸಾರುತ್ತಿರುವ ಶಾಂತಿಯ ಸಂದೇಶ ಮಂಕಾಗಿದೆ. ಇದೀಗ ಜಾಗತಿಕ ಶಾಂತಿಗಾಗಿ ನಡೆಯುತ್ತಿರುವ ಇರಾನ್-ಇಸ್ರೇಲ್ ನಡುವಿನ ಸಂಘರ್ಷಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಹೊಸ ತಿರುವನ್ನು ನೀಡಿದ್ದಾರೆ. ರವಿವಾರ ನಸುಕಿನ ವೇಳೆ ಅಮೆರಿಕ ಯುದ್ಧ ವಿಮಾನಗಳು ಇರಾನ್ನ ಮೂರು ಸ್ಥಳಗಳ ಮೇಲೆ ಬಾಂಬ್ ದಾಳಿಗಳನ್ನು ನಡೆಸಿವೆ. ಆ ಮೂಲಕ, ಈವರೆಗೆ ಕಾಪಾಡಿಕೊಂಡು ಬಂದ ತನ್ನ ‘ಇಸ್ರೇಲ್’ನ ಮುಖವಾಡವನ್ನು ಅಮೆರಿಕ ಹರಿದುಕೊಂಡಿದ್ದು, ಇರಾನ್ ವಿರುದ್ಧದ ಸಂಘರ್ಷದ ಹಿಂದಿರುವ ನಿಜವಾದ ಖಳ ನಾನೇ ಎನ್ನುವುದನ್ನು ಘೋಷಿಸಿಕೊಂಡಿದೆ.
ಅಮೆರಿಕದ ಯುದ್ಧ ವಿಮಾನಗಳು ಇರಾನ್ನ ಮೂರು ಪ್ರಮುಖ ಪರಮಾಣು ಸ್ಥಾವರಗಳ ಮೇಲೆ ಬಾಂಬ್ ದಾಳಿಗಳನ್ನು ನಡೆಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಇರಾನ್ ಅಣ್ವಸ್ತ್ರಗಳನ್ನು ಹೊಂದುವುದನ್ನು ತಡೆಯಲು ಈ ದಾಳಿಯನ್ನು ನಡೆಸಿರುವುದಾಗಿಯೂ ಅಮೆರಿಕ ಹೇಳಿಕೊಂಡಿದೆ. ಈ ಹಿಂದೆ ಇರಾಕ್ನ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲೂ, ‘ಇರಾಕ್ ರಾಸಾಯನಿಕ ಅಸ್ತ್ರಗಳನ್ನು ಹೊಂದಿದೆ’ ಎನ್ನುವ ಆರೋಪಗಳನ್ನು ಮಾಡಿ ತನ್ನ ದಾಳಿಯನ್ನು ಸಮರ್ಥಿಸಿಕೊಂಡಿದ್ದ ಅಮೆರಿಕ, ಇದೀಗ ಅದೇ ಹಳೆ ಹಾಡಿಗೆ ಹೊಸ ರಾಗವನ್ನು ಜೋಡಿಸಲು ಹೊರಟಿದೆ. ಈ ದಾಳಿಯು ಯುದ್ಧ ಸಮನ್ವಯದ ಭಾಗವಾಗಿದೆ ಎಂದು ಇಸ್ರೇಲ್ ಕೂಡ ಹೇಳಿಕೊಂಡಿದೆ. ಇಸ್ರೇಲ್ಗೆ ಸ್ವತಂತ್ರ ಅಸ್ತಿತ್ವವಿಲ್ಲ. ಅಮೆರಿಕವು ಮಧ್ಯಪ್ರಾಚ್ಯದಲ್ಲಿ ನರಮೇಧಗಳನ್ನು ನಡೆಸುವುದಕ್ಕಾಗಿ ಹಾಕಿಕೊಂಡಿರುವ ಮುಖವಾಡದ ಹೆಸರೇ ಇಸ್ರೇಲ್ ಎನ್ನುವುದು ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ. ಈ ಹಿಂದಿನ ಅಮೆರಿಕ ಅಧ್ಯಕ್ಷರೂ ಇಸ್ರೇಲ್ ನಡೆಸುತ್ತಿರುವ ನಾಗರಿಕರ ಮಾರಣ ಹೋಮಕ್ಕೆ ಪೂರ್ಣ ಪ್ರಮಾಣದ ಬೆಂಬಲವನ್ನು ಘೋಷಿಸಿದ್ದರು. ಇದೀಗ ಸಂಘರ್ಷವು ಇರಾನ್ ವಿರುದ್ಧದ ಪೂರ್ಣಪ್ರಮಾಣದ ದಾಳಿಯ ರೂಪವನ್ನು ಪಡೆದುಕೊಂಡಿದೆ. ಇಸ್ರೇಲ್-ಇರಾನ್ ನಡುವಿನ ದಾಳಿಯಲ್ಲಿ ಅಮೆರಿಕ ರಂಗ ಪ್ರವೇಶಿಸಿದೆ ಎನ್ನುವುದಕ್ಕಿಂತ, ‘ನಾನೇ ಇಸ್ರೇಲ್’ ಎನ್ನುವುದನ್ನು ಅದು ಈ ಮೂಲಕ ಜಗತ್ತಿಗೆ ಘೋಷಿಸಿಕೊಂಡಿದೆ ಎನ್ನುವುದೇ ಹೆಚ್ಚು ಸರಿಯಾದದ್ದು.
‘ಅಣ್ವಸ್ತ್ರ ಹೊಂದಲು ಪ್ರಯತ್ನಿಸುತ್ತಿರುವುದು’ ಅಮೆರಿಕದ ದಾಳಿಗೆ ಕಾರಣವೇ ಅಥವಾ ಇರಾನ್ ಅಣ್ವಸ್ತ್ರವನ್ನು ಹೊಂದದೇ ಇದ್ದುದೇ ದಾಳಿಗೆ ಕಾರಣವೇ ಎನ್ನುವುದನ್ನು ಚರ್ಚಿಸಲು ಇದು ಸರಿಯಾದ ಸಂದರ್ಭವಾಗಿದೆ. ಮೂರನೇ ಮಹಾಯುದ್ಧ ಅಣ್ವಸ್ತ್ರ ಪ್ರಯೋಗದೊಂದಿಗೆ ಮುಕ್ತಾಯವಾಗುತ್ತದೆ ಎನ್ನುವ ಆತಂಕ ಜಗತ್ತಿನ ಪ್ರಜ್ಞಾವಂತರೆಲ್ಲರದಾಗಿದೆ. ಇದೇ ಸಂದರ್ಭದಲ್ಲಿ ಮೂರನೇ ಮಹಾಯುದ್ಧವನ್ನು ತಡೆದಿರುವುದು ಕೂಡ ಈ ಅಣ್ವಸ್ತ್ರ ಪ್ರಯೋಗದ ಭಯ ಎನ್ನುವುದು ಕೂಡ ವಾಸ್ತವವಾಗಿದೆ. ಇರಾಕ್, ಲಿಬಿಯಾ ಸೇರಿದಂತೆ ಮಧ್ಯಪ್ರಾಚ್ಯದ ದೇಶಗಳು ಸರ್ವನಾಶವಾಗಲು, ಅಮೆರಿಕ ಅವುಗಳ ಮೇಲೆ ಅತ್ಯಂತ ಸುಲಭವಾಗಿ ಎರಗಲು ಮುಖ್ಯ ಕಾರಣಗಳಲ್ಲಿ ಒಂದು, ಅವುಗಳು ಮಾರಕ ರಾಸಾಯನಿಕ ಅಸ್ತ್ರಗಳು ಅಥವಾ ಅಣ್ವಸ್ತ್ರಗಳು ಹೊಂದಿಲ್ಲದೇ ಇದ್ದುದೇ ಆಗಿದೆ. ಸೋವಿಯತ್ ರಶ್ಯದಿಂದ ಬೇರ್ಪಟ್ಟಾಗ ಉಕ್ರೇನ್ ತನ್ನಲ್ಲಿದ್ದ ಅಣ್ವಸ್ತ್ರ ನೆಲೆಗಳನ್ನು ನಾಶ ಪಡಿಸಿತು. ಅದರ ಪರಿಣಾಮವಾಗಿಯೇ ಇಂದು ಅತ್ಯಂತ ಸುಲಭವಾಗಿ ರಶ್ಯದ ದಾಳಿಗೆ ತುತ್ತಾಯಿತು. ನಿಜಕ್ಕೂ ಉಕ್ರೇನ್ ಬಳಿ ಅಣ್ವಸ್ತ್ರ ಇದ್ದಿದ್ದರೆ ರಶ್ಯ ಅದರ ಮೇಲೆ ದಾಳಿ ನಡೆಸುತ್ತಿತ್ತೆ? ಇತರ ದೇಶಗಳು ಆ ಯುದ್ಧಕ್ಕೆ ಅವಕಾಶ ನೀಡುತ್ತಿತ್ತೆ? ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷ ಉಲ್ಬಣಗೊಳ್ಳುವ ಮೊದಲೇ ತಣ್ಣಗಾಗಿದ್ದು ಉಭಯ ದೇಶಗಳಲ್ಲೂ ಅಣ್ವಸ್ತ್ರಗಳಿರುವುದರಿಂದ. ಯಾವುದೇ ಒಂದು ದೇಶದ ಬಳಿ ಅಣ್ವಸ್ತ್ರ ಇಲ್ಲ ಎಂದಾಗಿದ್ದರೆ ಯುದ್ಧವನ್ನು ತಡೆಯುವ ಪ್ರಯತ್ನ ಯಶಸ್ವಿಯಾಗುತ್ತಿರಲಿಲ್ಲ. ಚೀನಾದಂತಹ ದೇಶಗಳು ಗಡಿಭಾಗದಲ್ಲಿ ತಕರಾರುಗಳನ್ನು ಮಾಡುತ್ತವೆಯಾದರೂ, ಪೂರ್ಣ ಪ್ರಮಾಣದ ಯುದ್ಧವನ್ನು ಘೋಷಿಸುವುದಕ್ಕೆ ಸಿದ್ಧವಿಲ್ಲ ಎಂದರೆ ಅದಕ್ಕೆ ಕಾರಣ ಭಾರತದ ಬಳಿಯಿರುವ ಅಣ್ವಸ್ತ್ರ. ಆದುದರಿಂದ, ಇರಾನ್ನ ವಿರುದ್ಧದ ದಾಳಿಗೆ ಅದರ ಬಳಿಯಿರುವ ಅಣ್ವಸ್ತ್ರವೇ ಕಾರಣ ಎಂದು ಅಮೆರಿಕ ಅದೆಷ್ಟು ಅರಚಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ಜಗತ್ತು ಇಲ್ಲ. ಅಣ್ವಸ್ತ್ರ ಇದ್ದಿದ್ದು ಅಮೆರಿಕಕ್ಕೆ ಸ್ಪಷ್ಟವಿದ್ದರೆ ಅದು ಖಂಡಿತವಾಗಿಯೂ ದಾಳಿ ಮಾಡುವ ಸಾಹಸಕ್ಕೆ ಇಳಿಯುತ್ತಿರಲಿಲ್ಲ. ವಿಪರ್ಯಾಸವೆಂದರೆ ಸ್ವತಃ ಅಪಾರ ಪ್ರಮಾಣದ ಅಣ್ವಸ್ತ್ರಗಳನ್ನು ಹೊಂದಿರುವ ಅಮೆರಿಕ ಈ ದಾಳಿಯನ್ನು ನಡೆಸಿದೆ. ಜಗತ್ತಿನ ಪುಂಡ, ಭಯೋತ್ಪಾದಕ ದೇಶವಾಗಿರುವ ಇಸ್ರೇಲ್ ಅನಧಿಕೃತವಾಗಿ ಅಪಾರ ಪ್ರಮಾಣದಲ್ಲಿ ಅಣ್ವಸ್ತ್ರಗಳನ್ನು ಹೊಂದಿದೆ ಮತ್ತು ಅದು ಫೆಲೆಸ್ತೀನ್ನಲ್ಲಿ ನಡೆಸಿರುವ ನಾಗರಿಕರು, ಮಕ್ಕಳು, ಮಹಿಳೆಯರ ಮಾರಣಹೋಮ ಆ ದೇಶವನ್ನು ಭಯೋತ್ಪಾದಕ ದೇಶವಾಗಿ ಗುರುತಿಸಲ್ಪಡುವಂತೆ ಮಾಡಿದೆ. ಹೀಗಿರುವಾಗ, ಇರಾನ್ ಅಣ್ವಸ್ತ್ರವನ್ನು ತಯಾರಿಸುತ್ತಿದೆ ಎನ್ನುವ ಕಾರಣವನ್ನು ಒಡ್ಡಿ ಅಮೆರಿಕ ದಾಳಿ ನಡೆಸಲು ಮುಂದಾಗಿರುವುದನ್ನು ಜಗತ್ತು ಸ್ವೀಕರಿಸುವುದಾದರೂ ಹೇಗೆ?
ಡಾಲರ್ ಕೇಂದ್ರಿತವಾದ ಜಗತ್ತಿನ ಆರ್ಥಿಕತೆಗೆ ಧಕ್ಕೆ ಬಂದಿರುವುದೇ ಅಮೆರಿಕದ ಈ ಹತಾಶೆಯ ನಡೆಗೆ ಮುಖ್ಯ ಕಾರಣವಾಗಿದೆ. ಅಮೆರಿಕ ಅಭದ್ರತೆಯನ್ನು ಅನುಭವಿಸುತ್ತಿದೆ. ಇರಾನ್ನ ತೈಲ ಅಮೆರಿಕತ ಆರ್ಥಿಕತೆಗೆ ಸವಾಲೊಡ್ಡುತ್ತಿದೆ. ಅಮೆರಿಕಕ್ಕೆ ಪರ್ಯಾಯವಾಗಿ ಚೀನಾ ಸೂಪರ್ ಪವರ್ ದೇಶವಾಗಿ ಹೊರಹೊಮ್ಮುತ್ತಿದ್ದು, ಚೀನಾ, ರಶ್ಯಗಳು ತೈಲಸಂಪನ್ಮೂಲದ ಹಿನ್ನೆಲೆಯಲ್ಲಿ ಇರಾನನ್ನು ಹತ್ತಿರ ಮಾಡಿಕೊಂಡದ್ದೇ ಆದರೆ ಅಮೆರಿಕಕ್ಕೆ ಭಾರೀ ಹಿನ್ನಡೆಯಾಗಲಿದೆ. ಭಾರತವೂ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಇರಾನ್ ಜೊತೆಗೆ ಆರ್ಥಿಕ ಒಪ್ಪಂದಗಳನ್ನು ಮಾಡಿಕೊಳ್ಳದಂತೆ ಗರಿಷ್ಠ ಪ್ರಯತ್ನವನ್ನು ಅಮೆರಿಕ ಮಾಡಿಕೊಂಡು ಬಂದಿದೆಯಾದರೂ, ಅವೆಲ್ಲವನ್ನೂ ಮೀರಿ ಭಾರತದಂತಹ ದೇಶಗಳು ಇರಾನನ್ನು ಮಿತ್ರದೇಶವಾಗಿಯೇ ಉಳಿಸಿಕೊಂಡಿವೆ. ಒಮ್ಮೆ ಪೂರ್ಣ ಪ್ರಮಾಣದಲ್ಲಿ ಅಣ್ವಸ್ತ್ರವನ್ನು ಇರಾನ್ ಹೊಂದಿದ್ದೇ ಆದಲ್ಲಿ ಅದರ ಮೇಲೆ ನಿಯಂತ್ರಣ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ, ಅಮೆರಿಕ ಆತುರಾತುರವಾಗಿ ಕಾರ್ಯಾಚರಣೆಗೆ ಇಳಿದಿದೆ. ಅಣ್ವಸ್ತ್ರ ನೆಲೆಗಳಿಗೆ ದಾಳಿ ಮಾಡಿದ್ದೇನೆ ಎಂದು ಅಮೆರಿಕ ಹೇಳುತ್ತಿದೆಯಾದರೂ, ಯಾವುದೇ ವಿಕಿರಣ ಸೋರಿಕೆಯಾಗಿಲ್ಲದೇ ಇರುವುದು ತನ್ನಲ್ಲಿ ಅಣ್ವಸ್ತ್ರವಿಲ್ಲ ಎನ್ನುವ ಇರಾನ್ ಹೇಳಿಕೆಯನ್ನು ಸಮರ್ಥಿಸಿಕೊಂಡಂತಾಗಿದೆ. ಇದೇ ಸಂದರ್ಭದಲ್ಲಿ ನಾಗರಿಕ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ದಾಳಿ ನಡೆಸಿದೆ ಎಂದು ಇರಾನ್ ಆರೋಪಿಸಿದೆ. ಸದ್ಯಕ್ಕೆ ಇರಾನ್ನ ಪ್ರಭುತ್ವವನ್ನು ತನ್ನ ಹಿತಾಸಕ್ತಿಗೆ ಪೂರಕವಾಗಿ ಬದಲಾಯಿಸುವುದು ಅಮೆರಿಕದ ಗುರಿ. ಇರಾನ್ ನಾಶವಾದರೆ ಅದು ಉಳಿದ ದೇಶಗಳ ಮೇಲೂ ಭಾರೀ ದುಷ್ಪರಿಣಾಮಗಳನ್ನು ಬೀರಲಿರುವುದರಿಂದ, ತಡವಾಗಿಯಾದರೂ ರಶ್ಯ, ಚೀನಾದಂತಹ ಪ್ರಬಲ ದೇಶಗಳು ಇರಾನ್ ನೆರವಿಗೆ ಧಾವಿಸುವುದು ಅನಿವಾರ್ಯವಾಗಿದೆ. ಅಮೆರಿಕದ ಇತ್ತೀಚಿನ ನಡೆಗಳ ಕುರಿತಂತೆ ಯುರೋಪಿಯನ್ ಒಕ್ಕೂಟ ಕೂಡ ಸದಭಿಪ್ರಾಯ ಹೊಂದಿಲ್ಲ. ಇಸ್ರೇಲ್ ಮತ್ತು ಅಮೆರಿಕ ಜೊತೆಯಾಗಿ ಮಧ್ಯಪ್ರಾಚ್ಯದಲ್ಲಿ ನಡೆಸುತ್ತಿರುವ ಅವಾಂತರಗಳಿಂದಾಗಿ ನಿಜಕ್ಕೂ ಅಪಾಯಕಾರಿ ಯಾರು ಎನ್ನುವುದು ಜಗತ್ತಿಗೆ ಸ್ಪಷ್ಟವಾಗುತ್ತಿದೆ. ಅಮೆರಿಕದ ನಡೆ, ಈ ಜಗತ್ತಿನಲ್ಲಿ ಅಣ್ವಸ್ತ್ರ ಹೊಂದುವ ಅನಿವಾರ್ಯತೆಗಳನ್ನು ಇತರ ಸಣ್ಣಪುಟ್ಟ ದೇಶಗಳಿಗೂ ಮನವರಿಕೆ ಮಾಡಿಕೊಡುತ್ತಿದೆ. ಇದು ನಿಜಕ್ಕೂ ಕಳವಳಕಾರಿಯಾಗಿದೆ ಅಮೆರಿಕ, ಇಸ್ರೇಲ್ನ ಯುದ್ಧದಾಹಿ ನಡೆಗಳು ಈ ಜಗತ್ತನ್ನು ಅನಿವಾರ್ಯವಾಗಿ ಪರಮಾಣು ಅಸ್ತ್ರಗಳ ಗೋದಾಮಾಗಿ ಪರಿವರ್ತಿಸಲಿದೆಯೇ ಎಂದು ಆತಂಕಪಡುವಂತಾಗಿದೆ. ಇನ್ನೊಂದು ದೇಶ ಅಣ್ವಸ್ತ್ರಗಳನ್ನು ಹೊಂದಬಾರದು ಎನ್ನುವ ಅರ್ಹತೆಯನ್ನು ಪಡೆಯಬೇಕಾದರೆ, ಮೊದಲು ಬಲಾಢ್ಯ ದೇಶಗಳು ಅಣ್ವಸ್ತ್ರಗಳನ್ನು ಪೂರ್ಣಪ್ರಮಾಣದಲ್ಲಿ ತ್ಯಜಿಸಲು ಮುಂದಾಗಬೇಕು. ಅಣ್ವಸ್ತ್ರವೆನ್ನುವ ವರಪಡೆದುಕೊಂಡ ಅಮೆರಿಕ ಎನ್ನುವ ಈ ಭಸ್ಮಾಸುರ ಒಂದಲ್ಲ ಒಂದು ದಿನ ತನ್ನ ತಲೆಯ ಮೇಲೆ ತಾನೇ ಕೈಯಿಟ್ಟು ನಾಶವಾಗುವ, ತನ್ನ ಜೊತೆಗೆ ಜಗತ್ತನ್ನು ನಾಶವಾಗಿಸುವ ದಿನಗಳು ದೂರವಿಲ್ಲ.