ಅಪ್ರಬುದ್ಧ ಹೇಳಿಕೆ ಅನರ್ಥಕ್ಕೆ ದಾರಿ

ಕೆ.ಎಂ.ಶಿವಲಿಂಗೇಗೌಡ
ಸರಕಾರಿ ಕಚೇರಿಗಳಲ್ಲಿ ಎಂತಹುದೇ ಕೆಲಸ ಆಗಿರಲಿ ಮತ್ತು ಅದು ಎಷ್ಟೇ ನಿಯಮಬದ್ಧ ಆಗಿರಲಿ ಲಂಚ ಕೊಡದಿದ್ದರೆ ಕೆಲಸ ಆಗುವುದಿಲ್ಲ ಎಂಬ ಮಾತು ಜನಜನಿತ. ಅಂತೆಯೇ, ಕಾಸು ಬಿಚ್ಚಿದರೆ ಅದು ಎಷ್ಟೇ ಜಟಿಲ ಕೆಲಸ ಆಗಿರಲಿ ಮತ್ತು ನಿಯಮಬಾಹಿರ ಆಗಿದ್ದರೂ ಅದಕ್ಕೆ ಅನುಮೋದನೆಯ ಮುದ್ರೆ ಬೀಳುತ್ತದೆ ಎಂಬುದು ಜಗಜ್ಜಾಹೀರು. ಇಂತಹ ಕೆಲಸಗಳನ್ನು ಆಗುಮಾಡುವಂತಹ ದಲ್ಲಾಳಿ ಸಮೂಹ, ದುಷ್ಟರಕೂಟಗಳು ಸರಕಾರಿ ಕಚೇರಿಗಳ ಸುತ್ತ ಹೊಂಚು ಹಾಕಿರುತ್ತವೆ. ಜನನ-ಮರಣ ಪ್ರಮಾಣಪತ್ರ ಕೂಡ ಸುಲಭವಾಗಿ ಸಿಗುವುದಿಲ್ಲ. ಅಂತಹ ದುಃಸ್ಥಿತಿ ಇದೆ. ನಮ್ಮ ನೌಕರರು ಮತ್ತು ಅಧಿಕಾರಿಗಳು ಕರ್ತವ್ಯಪ್ರಜ್ಞೆ ಮರೆತು ದಶಕಗಳೇ ಉರುಳಿವೆ. ಸರಕಾರಿ ನೌಕರಿ ಜನರನ್ನು ಪೀಡಿಸಲು ಮತ್ತು ದುಡ್ಡು ಬಾಚಿಕೊಳ್ಳಲು ಸಿಕ್ಕಿರುವ ಪರವಾನಿಗೆ ಎಂಬ ಮನಸ್ಥಿತಿ ಹೊಂದಿರುವವರ ಸಂತತಿ ದಿನೇ ದಿನೇ ಹೆಚ್ಚುತ್ತಿದೆ. ಅದಕ್ಕೆ ಮೌನ ಸಮ್ಮತಿ ಸೂಚಿಸುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲೇ ಇದೆ. ಭೂತಾಕಾರ ತಳೆದಿರುವ ಭ್ರಷ್ಟಾಚಾರದ ವಿರುದ್ಧದ ಧ್ವನಿ ಜೋರು ಪಡೆಯದೇ ಇರುವುದಕ್ಕೆ ಬಹುಶಃ ಇದೇ ಕಾರಣ ಇದ್ದಿರಬಹುದು.
ಅಬಕಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಆಡಿದ ಮಾತೊಂದು ಈಗ ಲಂಚಾವತಾರದ ಬಗೆಗೆ ಮಾತನಾಡಲು, ಚರ್ಚಿಸಲು ಅನುವು ಮಾಡಿಕೊಟ್ಟಿದೆ. ‘‘ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ನಿಮ್ಮ ಧರ್ಮ’’ ಎಂದು ಸಚಿವರು ಅಪ್ಪಣೆ ಕೊಡಿಸಿದ್ದಾರೆ. ಅದೂ ಪ್ರಜಾಸೇವಾ ಆಂದೋಲನದ ಭಾಗವಾಗಿ ಸಕಲೇಶಪುರದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ. ತಮ್ಮ ಮಾತಿಗೆ ಆಕ್ಷೇಪ, ಟೀಕೆಗಳು ವ್ಯಕ್ತವಾಗುತ್ತಲೇ ವರಸೆ ಬದಲಿಸಿರುವ ಸಚಿವರು, ‘‘ನಾನು ಲಂಚ ಕೊಡಿ, ದುಡ್ಡು ಕೊಡಿ ಎಂದು ಹೇಳಿಲ್ಲ. ಗೌರವ ಕೊಡಿ ಎಂದು ಹೇಳಿದ್ದೇನೆ. ಗೌರವ ಕೊಡಿ ಎಂಬುದರ ಬದಲಾಗಿ ಬಾಯಿತಪ್ಪಿನಿಂದ ಗೌರವಯುತವಾಗಿ ಕೊಡಿ ಎಂದಿದ್ದೇನೆ’’ ಎಂದು ಸಮರ್ಥನೆಯ ಧಾಟಿಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ಗೌರವ ಕೊಡಿ ಎನ್ನುವುದರ ಬದಲು ಗೌರವಯುತವಾಗಿ ಕೊಡಿ ಎಂದು ಹೇಳಿರುವುದು ಬಾಯಿ ತಪ್ಪಿನಿಂದ ಆಗಿರಬಹುದಾದ ಎಡವಟ್ಟು ಎಂದೇ ಭಾವಿಸೋಣ. ಆದರೆ, ಧರ್ಮಬೋಧನೆಯ ಜೊತೆಗೇ ‘‘ಆದರೆ, ಬಲವಂತವಾಗಿ ಹಣ ಕೇಳುವುದು ಸರಿಯಲ್ಲ’’ ಎಂಬ ಶರಾ ಕೂಡ ಸೇರಿಸಿದ್ದಾರೆ. ಅಂದಮೇಲೆ ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಇನಾಮು ನೀಡಿ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ ಎಂಬುದು ಎಂತಹವರಿಗೂ ಅರ್ಥವಾಗುವಂತಹ ಸಂಗತಿ. ಸ್ಪಷ್ಟೀಕರಣವು ರಾಜಕಾರಣಿಗಳ ಜಾರಿಕೊಳ್ಳುವಂತಹ ಜಾಣ ನಡೆ ಎಂಬುದನ್ನು ಅರಿಯಲಾರದಷ್ಟು ನಮ್ಮ ಜನ ಮುಗ್ಧರಲ್ಲ.
ಔದಾರ್ಯದ ನೆಲೆಯಲ್ಲಿ ಸಚಿವರು ಈ ರೀತಿ ಉಪದೇಶ ಮಾಡಿರಬಹುದು. ಆದರೆ ಅದು ರವಾನಿಸುವ ಸಂದೇಶ ಬೇರೆ ರೀತಿಯಲ್ಲಿ ಇರುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಮಾತನಾಡುವವರು ಇಂತಹ ಸೂಕ್ಷ್ಮಗಳನ್ನು ಅರಿಯಬೇಕು. ಇಲ್ಲವಾದಲ್ಲಿ ಅದು ಅನರ್ಥಗಳಿಗೆ ದಾರಿ ಮಾಡಿಕೊಡುತ್ತದೆ. ಅನಗತ್ಯ ವಿವಾದ, ಸರಕಾರದ ವಿರುದ್ಧ ಟೀಕಾಸ್ತ್ರಗಳಿಗೆ ಅವಕಾಶ ಕಲ್ಪಿಸುತ್ತವೆ. ‘ಸಚಿವರು ನೀಡಿರುವ ಹೇಳಿಕೆ ಲಂಚ ನೀಡಲು ಪ್ರಚೋದಿಸುವಂತಿದೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅನ್ವಯ ಸಚಿವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ವಕೀಲರ ತಂಡವೊಂದು ಹಾಸನದ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದೆ. ವಿರೋಧ ಪಕ್ಷಗಳ ಮುಖಂಡರು ಸರಕಾರದ ವಿರುದ್ಧ ಟೀಕಾಸ್ತ್ರಗಳನ್ನು ಬಿಡುತ್ತಿದ್ದಾರೆ. ಸೂಕ್ಷ್ಮ ಅರಿಯದೆ ಆಡಿದ ಮಾತೊಂದು ಇದಕ್ಕೆಲ್ಲ ಅವಕಾಶ ಮಾಡಿಕೊಟ್ಟಿದೆ. ಭ್ರಷ್ಟಾಚಾರದ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಂದೆಡೆ ಗುಡುಗುತ್ತಿರುವಾಗಲೇ ಅವರ ಸಂಪುಟದ ಸದಸ್ಯರೊಬ್ಬರಿಂದ ಲಂಚಕ್ಕೆ ಕುಮ್ಮಕ್ಕು ಕೊಡುವಂತಹ ಮಾತು ಕೇಳಿಬಂದಿರುವುದು ಸರಕಾರಕ್ಕೆ ಮುಜುಗರ ತರುವಂತಹದು. ನೌಕರರು ಇನ್ನಷ್ಟು ಪ್ರಜಾಪೀಡಕರಾಗಲು ನೆರವಾಗುವಂತಹದು.
ಭ್ರಷ್ಟಾಚಾರದ ಬೇರುಗಳು ದಿನೇ ದಿನೇ ಆಳಕ್ಕೆ ಇಳಿಯುತ್ತಲೇ ಇವೆ, ಕೊಂಬೆ-ರೆಂಬೆಗಳು ಎಲ್ಲೆಡೆಯೂ ಚಾಚಿಕೊಳ್ಳುತ್ತಿವೆ. ಸರಕಾರಿ ನೌಕರಿಯ ನೇಮಕಾತಿ ಪ್ರಕ್ರಿಯೆಯೇ ಮಲಿನಗೊಂಡಿದೆ. ದುಡ್ಡಿಗೆ ಮಣೆ, ಪ್ರತಿಭೆಗೆ ಕಿಮ್ಮತ್ತು ಇಲ್ಲ ಎಂಬ ಸ್ಥಿತಿ ಇದೆ. ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಕಾರ್ಯವೈಖರಿಯೇ ಇದಕ್ಕೆ ದೊಡ್ಡ ನಿದರ್ಶನವಾಗಿ ನಿಲ್ಲುತ್ತದೆ. ದುಡ್ಡು ಕೊಟ್ಟು ನೌಕರಿ ಪಡೆದ ವ್ಯಕ್ತಿಯಿಂದ ಪ್ರಾಮಾಣಿಕತೆ ಬಯಸಲಾದೀತೆ? ಅಷ್ಟೇ ಅಲ್ಲ, ವರ್ಗಾವಣೆ ಕೂಡ ದಂಧೆಯಾಗಿ ಪರಿವರ್ತನೆಯಾಗಿದೆ. ಆಯಕಟ್ಟಿನ ಜಾಗಗಳಿಗೆ ಲಕ್ಷಾಂತರ ರೂಪಾಯಿ ತೆರಬೇಕಾದ ಸ್ಥಿತಿ ಇದೆ ಎಂಬುದು ಗುಟ್ಟಿನ ಸಂಗತಿ ಅಲ್ಲ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಹ ನಮ್ಮ ಚುನಾವಣಾ ವ್ಯವಸ್ಥೆಯೂ ಕೆಟ್ಟು ನಾರುತ್ತಿದೆ. ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ದುಷ್ಟ ಮೈತ್ರಿಯು ಜನಸಮೂಹದ ಬದುಕನ್ನು ಮೂರಾಬಟ್ಟೆ ಆಗಿಸುತ್ತಿದೆ. ಜನಸಾಮಾನ್ಯರದು ಅಸಹಾಯಕ ಸ್ಥಿತಿ ಎಂಬಂತಾಗಿದೆ.
ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮತ್ತು ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಉದ್ದೇಶದಿಂದ ಕರ್ನಾಟಕ ಸರಕಾರ ಇತ್ತೀಚೆಗೆ ಹೊಸದಾಗಿ ಪ್ರಜಾಸೇವಾ ಇಲಾಖೆಯನ್ನು ಸ್ಥಾಪಿಸಿದೆ. ಸಣ್ಣಪುಟ್ಟ ಕೆಲಸಗಳಿಗಾಗಿ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ಮತ್ತು ಅರ್ಜಿಗಳ ತ್ವರಿತ ವಿಲೇವಾರಿಯನ್ನು ಖಾತರಿಪಡಿಸುವ ಮಹದುದ್ದೇಶ ಹೊಂದಿರುವ ಪ್ರಜಾಸೇವಾ ಆಂದೋಲನದ ಸಭೆಯಲ್ಲಿ ಸಚಿವರಾದವರು ಈ ರೀತಿ ಅಸಂಬದ್ಧವಾಗಿ ಮಾತನಾಡುವುದಾದರೆ ಅದರಿಂದ ಒಳಿತಾಗುವುದಕ್ಕಿಂತ ಕೆಡುಕೇ ಹೆಚ್ಚುತ್ತದೆ. ಉದ್ದೇಶ ಒಳ್ಳೆಯದಾದರೆ ಅಷ್ಟೇ ಸಾಲದು. ಅದನ್ನು ಮುಂದಕ್ಕೆ ಒಯ್ಯುವ ಪ್ರಯತ್ನಗಳು ಪ್ರಾಮಾಣಿಕವಾಗಿರಬೇಕು ಮತ್ತು ದೃಢವಾಗಿರಬೇಕು. ಇಲ್ಲವಾದಲ್ಲಿ ಜನರ ಕಣ್ಣಿಗೆ ಮಣ್ಣೆರಚುವ ಮತ್ತೊಂದು ಗಿಮಿಕ್ ಆಗುತ್ತದೆ. ಸರಕಾರದ ಚುಕ್ಕಾಣಿ ಹಿಡಿದವರು ಈ ದಿಸೆಯಲ್ಲಿ ಎಚ್ಚರ ವಹಿಸದಿದ್ದರೆ ಪ್ರಜಾಸೇವಾ ಇಲಾಖೆಯೂ ಹೊಳಪು ಕಳೆದುಕೊಂಡು, ಹತ್ತರ ಜೊತೆಗೆ ಹನ್ನೊಂದನೇ ಇಲಾಖೆಯಾಗಿ ಉಳಿಯುತ್ತದೆ.






