ಮಣಿಪುರದ ಜೀವಗಳಿಗೆ ಕಡಿಮೆ ಮೌಲ್ಯವೇ?

ಈಶಾನ್ಯದ ಮಣಿಪುರ ತಣ್ಣಗಾಗಲು ಕೇಳುತ್ತಿಲ್ಲ. ಅಲ್ಲಿ ಸೋಮವಾರ (ಅಕ್ಟೋಬರ್ 19) ಮತ್ತೆ ಮೂರು ಜೀವಗಳು ಜನಾಂಗೀಯ ಸಂಘರ್ಷಕ್ಕೆ ಬಲಿಯಾಗಿವೆ. ಸುನೊರೊಕ್ ಬೆಟ್ಟಕ್ಕೆ ಕಟ್ಟಿಗೆ ಸಂಗ್ರಹಿಸಲು ಹೋದ ಮೂವರನ್ನು ಉಗ್ರಗಾಮಿಗಳು ಕೊಂದಿದ್ದಾರೆ. ಅದರೊಂದಿಗೆ ಮಣಿಪುರ ಮಗದೊಮ್ಮೆ ಬೂದಿ ಮುಚ್ಚಿದ ಕೆಂಡದಂತಾಗಿದೆ. ಉದ್ರಿಕ್ತಗೊಂಡ ಸ್ಥಳೀಯರು ಈ ಶವಗಳನ್ನು ಬಾಬುಪಾರಾಕ್ಕೆ ತಂದು ಮುಖ್ಯಮಂತ್ರಿಯವರ ಮನೆಯ ಮುಂದಿರಿಸಿ, ಪ್ರತಿಭಟನೆ ನಡೆಸಿದ್ದಾರೆ; ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದ್ದಾರೆ. ಸ್ಥಳೀಯ ಸಂಘಟನೆಯೊಂದು 48 ಗಂಟೆಗಳ ಬಂದ್‌ಗೆ ಕರೆ ನೀಡಿತ್ತು. ಮಣಿಪುರದ ಮುಖ್ಯಮಂತ್ರಿ ವೈ. ಖೇಮ್‌ಚಂದ್ ಸಿಂಗ್ ಅವರು, ಮಂಗಳವಾರ ಪ್ರತಿಪಕ್ಷಗಳನ್ನು ಕರೆದು ಜೊತೆಗಿರಿಸಿಕೊಂಡು, ಕಾನೂನು ಮತ್ತು ವ್ಯವಸ್ಥೆಯ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಈ ನಡುವೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಭಾರತ ಸರಕಾರವು ಮಣಿಪುರದಲ್ಲಿ ಶಾಂತಿ ಸ್ಥಾಪಿಸುವುದರಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಆಪಾದಿಸಿದ್ದಾರೆ.
ಅಧಿಕೃತ ಲೆಕ್ಕಾಚಾರಗಳ ಪ್ರಕಾರ, ಮಣಿಪುರದಲ್ಲಿ 2023ರಿಂದೀಚೆಗೆ ನಡೆದ ಜನಾಂಗೀಯ ಸಂಘರ್ಷಗಳಿಗೆ ಕನಿಷ್ಠ 306 ಮಂದಿ ಜೀವ ತೆತ್ತಿದ್ದು, 49ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ, 60,000ಕ್ಕೂ ಹೆಚ್ಚು ಮಂದಿ ತಮ್ಮ ವಾಸಸ್ಥಳ ಬದಲಿಸಬೇಕಾಗಿ ಬಂದಿದೆ, ನಾಲ್ಕೈದು ಸಾವಿರ ಮನೆಗಳು ಸುಟ್ಟು ಭಸ್ಮವಾಗಿವೆ, ನೂರಾರು ಧಾರ್ಮಿಕ ನಂಬಿಕೆಯ ಸ್ಥಳಗಳು ಧ್ವಂಸಗೊಂಡಿವೆ, ಅಂದಾಜು 25 ಸಾವಿರ ಮಂದಿ ನಿರಾಶ್ರಿತರ ಶಿಬಿರಗಳಲ್ಲಿ ಜೀವ ಹಿಡಿದುಕೊಂಡಿದ್ದಾರೆ; ಆ ಶಿಬಿರಗಳಲ್ಲೂ ಅಸಹಜ ಸಾವುಗಳು ವರದಿ ಆಗುತ್ತಿವೆ.
ದೇಶದ ಗಡಿಯೊಳಗೆ ಈ ಪ್ರಮಾಣದಲ್ಲಿ ಅರಾಜಕ ಸನ್ನಿವೇಶ ಇರುವಾಗ, ಕೇಂದ್ರ ಸರಕಾರ ಏನು ಮಾಡುತ್ತಿದೆ? ಎಂಬ ಪ್ರಶ್ನೆ ಏಳುವುದು ಸಹಜ. ಈ ಬಗ್ಗೆ ಧ್ವನಿ ಎತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರು, 2023ರ ಜೂನ್ ತಿಂಗಳಿನಲ್ಲಿ ದೇಶದ ಗೃಹಸಚಿವರು ರಚಿಸಿದ್ದ ಶಾಂತಿ ಸಮಿತಿಯ ಕಥೆ ಏನಾಗಿದೆ? ಅಲ್ಲಿ ಆ ಸಮಿತಿ ಏನೇನು ಕ್ರಮಗಳನ್ನು ಕೈಗೊಂಡಿದೆ? ಸುಪ್ರೀಂಕೋರ್ಟ್ ನೇಮಿಸಿದ್ದ ನ್ಯಾ. ಗೀತಾ ಮಿತ್ತಲ್ ಸಮಿತಿಯ ಶಿಫಾರಸುಗಳ ಸ್ಥಿತಿ ಏನಾಗಿದೆ? ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ, ಆ ಬಳಿಕ ಹೊಸ ಮುಖ್ಯಮಂತ್ರಿ ನೇಮಕ ಎಲ್ಲವೂ ಆಗಿವೆ. ಅಷ್ಟಾದರೂ ಅಮಾಯಕ ಜೀವಗಳು ನಷ್ಟ ಆಗುತ್ತಿರುವುದು ನಿಂತಿಲ್ಲ. ಇದರ ಹೊಣೆ ಯಾರು ಹೊರಬೇಕು? ಎಂದು ಕೇಳಿರುವುದಲ್ಲದೇ, ತನ್ನ ರಾಜಕೀಯ ಲಾಭಕ್ಕಾಗಿ ಬಿಜೆಪಿಯು ಪ್ರಮುಖ ಗಡಿರಾಜ್ಯವಾಗಿರುವ ಮಣಿಪುರದ ಭದ್ರತೆ ಮತ್ತು ಸ್ಥಿರತೆಗಳನ್ನು ಒತ್ತೆ ಇಡುವುದು ಸಲ್ಲದು ಎಂದು ಕಟುವಾಗಿ ಹೇಳಿದ್ದಾರೆ. ದುರದೃಷ್ಟವಶಾತ್, ಭಾರತ ಸರಕಾರಕ್ಕೆ ಸಂಸತ್ತಿನ ಒಳಗೆ ಮತ್ತು ಹೊರಗೆ ಉತ್ತರದಾಯಿತ್ವದ ಕೊರತೆ ಇದ್ದಂತಿದೆ.
ಮ್ಯಾನ್ಮಾರ್ ಗಡಿಯಲ್ಲಿ ಬರುವ ಮಣಿಪುರದ ಇಂಫಾಲ ಕಣಿವೆಯಲ್ಲಿ ಬಹುಸಂಖ್ಯಾತ ‘ಮೈತೈ’ ಹಿಂದೂಗಳು, ಅಲ್ಪಸಂಖ್ಯಾತ ಮುಸ್ಲಿಮರು ವಾಸವಿದ್ದರೆ, ಸುತ್ತಲಿನ ಬೆಟ್ಟ ಪ್ರದೇಶಗಳಲ್ಲಿ ಕುಕಿ ಹಾಗೂ ನಾಗಾ ಬುಡಕಟ್ಟಿನವರು ವಾಸವಿದ್ದಾರೆ. ಅವರು ಬಹುತೇಕ ಕ್ರೈಸ್ತ ಧರ್ಮ ಅನುಸರಿಸುವವರು. ರಾಜ್ಯದ ಶೇ. 90 ಭಾಗ ಬೆಟ್ಟ ಪ್ರದೇಶಗಳಾಗಿದ್ದು, ಇಂಫಾಲ ಕಣಿವೆ ಭೌಗೋಳಿಕವಾಗಿ ಶೇ. 10 ಭಾಗವನ್ನು ಮಾತ್ರ ಹೊಂದಿದೆ. ಈ ಮೈತೈ ಮತ್ತು ಕುಕಿ ಜನಾಂಗಗಳ ನಡುವಣ ಸಂಘರ್ಷ ತುಂಬಾ ಹಳೆಯದು ಮತ್ತು ಸಂಕೀರ್ಣ ಸ್ವರೂಪದ್ದು. 2002ರ ತನಕ ಇಲ್ಲಿ ಸತತ ಮೂರು ಅವಧಿಗಳಿಗೆ ಕಾಂಗ್ರೆಸ್ ಆಳ್ವಿಕೆ ಇತ್ತು. 2017ರಲ್ಲಿ ಬಿಜೆಪಿಯ ಎನ್. ಬಿರೇನ್ ಸಿಂಗ್ ಅಧಿಕಾರಕ್ಕೆ ಬಂದ ಬಳಿಕ, ಅಲ್ಲಿ ಬಿಜೆಪಿ ಭದ್ರವಾಗಿ ತಳವೂರತೊಡಗಿತು ಮತ್ತು ಇದು ಹಿಂದುತ್ವ ರಾಜಕೀಯಕ್ಕೆ ಹಾದಿ ತೆರೆಯಿತು. ಅಲ್ಲಿಂದ ಮುಂದೆ ಸತತವಾಗಿ ನಡೆದಿರುವ ರಾಜಕೀಯ ಸಂಘರ್ಷಗಳು ಬಹುಸಂಖ್ಯಾತರಿಗೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಹಾದಿಯೂ, ಅಲ್ಪಸಂಖ್ಯಾತರಿಗೆ ಅಸ್ತಿತ್ವದ ಪ್ರಶ್ನೆಯೂ ಆಗಿ, ಸಂಘರ್ಷದ ರೂಪ ತಳೆದು, ಬೂದಿ ಮುಚ್ಚಿದ ಕೆಂಡದಂತೆಯೇ ಮುಂದುವರಿಯುತ್ತಾ ಬಂದಿದ್ದವು. 2023ರ ಎಪ್ರಿಲ್‌ನಲ್ಲಿ, ಬಹುಸಂಖ್ಯಾತ ಮೈತೈಗಳನ್ನು ಪರಿಶಿಷ್ಟವರ್ಗ ಎಂದು ಪರಿಗಣಿಸಬೇಕೆಂಬ ಮಣಿಪುರ ಹೈಕೋರ್ಟ್ ಆದೇಶವು ಕುಕಿಗಳಲ್ಲಿ ಆಕ್ರೋಶ ಹುಟ್ಟಿಸಿದ್ದು, ಜನಾಂಗೀಯ ಗಲಭೆಗಳಿಗೆ ನಾಂದಿ ಹಾಡಿತು. ಮುಂದೆ ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಯುಟರ್ನ್ ತೆಗೆಯಿತಾದರೂ ಸಮಯ ಮಿಂಚಿಹೋಗಿತ್ತು. ಈ ಜನಾಂಗೀಯ ಗಲಭೆಗಳು ಇಂದು ವಿಕೋಪಕ್ಕೆ ಹೋಗಿವೆ ಮತ್ತು ಸ್ವತಃ ಪ್ರಧಾನಮಂತ್ರಿಯವರು ಗಲಭೆಗಳು ಶುರುವಾಗಿ 29 ತಿಂಗಳ ಕಾಲ ಅಲ್ಲಿಗೆ ಹೋಗಲಿಲ್ಲ ಎಂಬ ಸಂಗತಿ ರಾಷ್ಟ್ರ ರಾಜಕೀಯ ಚರ್ಚೆಯ ಸಂಗತಿಯೂ ಆಯಿತು. ಪ್ರಧಾನಿ ಮೋದಿ ಅಲ್ಲಿಗೆ ಸೆಪ್ಟಂಬರ್ 2025ರಲ್ಲಿ ಭೇಟಿ ನೀಡಿ, 8,500 ಕೋಟಿ ರೂ.ಗಳ ಮೂಲಸೌಕರ್ಯ ಪ್ಯಾಕೇಜ್ ಮತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿ ಬಂದರು.
ಹಲವು ರಾಜಕೀಯ-ಸಾಮಾಜಿಕ-ಧಾರ್ಮಿಕ ಒಳಸುಳಿಗಳಿರುವ ಇಂತಹದೊಂದು ಸನ್ನಿವೇಶವನ್ನು ಆಡಳಿತಪಕ್ಷವು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಮತ್ತು ಸರಕಾರವು ನಡೆಯುತ್ತಿರುವ ಹಿಂಸೆಯನ್ನು ನೋಡಿಯೂ ಕುರುಡಾಗಿರುವುದು ದೇಶದ ಪ್ರಜೆಗಳ ಬದುಕುವ ಹಕ್ಕಿನ ಮೇಲೆ ನಡೆಯುತ್ತಿರುವ ಪ್ರಹಾರ. ಮಣಿಪುರದಲ್ಲಿರುವ ಜೀವಗಳು ಕಡಿಮೆ ಮೌಲ್ಯದವಲ್ಲ. ಇಂತಹ ವಿಭಜಕ, ಜನಾಂಗೀಯ/ಸೈದ್ಧಾಂತಿಕ ಹಿಂಸೆಗಳನ್ನು ಪ್ರೇರೇಪಿಸುವ, ಅದು ಉಂಟುಮಾಡುವ ವಿಭಜನೆಗಳಿಗೆ ಅವಕಾಶ ತೆರೆದುಕೊಡುವ, ಆ ಮೂಲಕ ರಾಜಕೀಯ ಲಾಭ ಪಡೆಯುವ ಹುನ್ನಾರಗಳನ್ನು ಬೇಕಾದೆಡೆ ಬಳಸಬಲ್ಲ ಒಂದು ಸಿದ್ಧ ವಿನ್ಯಾಸವಾಗಿ ಮಾರ್ಪಡಿಸಿಕೊಳ್ಳುವ ರಾಜಕೀಯ ತಂತ್ರಗಳು ಪ್ರಜಾತಂತ್ರ ವ್ಯವಸ್ಥೆಗೆ ಖಂಡಿತಕ್ಕೂ ಮಾರಕ.






