ಕಾರ್ಯಾಂಗ, ಶಾಸಕಾಂಗಗಳು ರಜೆಯ ಮೇಲಿವೆಯೆ?

ಭಾರತದ ಸುಪ್ರೀಂಕೋರ್ಟ್ ಮಂಗಳವಾರ (ಆಗಸ್ಟ್ 4) ಡಿಜಿಟಲ್ ಅರೆಸ್ಟ್ ಕುರಿತಾದ ಸುಮೊಟೊ ಪ್ರಕರಣವೊಂದರಲ್ಲಿ [SMW(Crl) No. 3/2025] ಮಧ್ಯಂತರ ಆದೇಶ ನೀಡಿ, ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮುಂದಿನ ನಾಲ್ಕು ವಾರಗಳ ಒಳಗೆ ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಒಂದನ್ನು ರೂಪಿಸಬೇಕೆಂದು ತಾಕೀತು ಮಾಡಿದೆ.
2025ರ ಅಕ್ಟೋಬರ್‌ನಲ್ಲಿ ಹರ್ಯಾಣದಲ್ಲಿ ವೃದ್ಧ ದಂಪತಿಯನ್ನು ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿ ಅವರಿಂದ ಹಣ ದೋಚಿದ್ದ ಪ್ರಕರಣದ ಕುರಿತು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ. ಜಾಯಮಾಲ್ಯ ಬಾಗ್ಚಿ ಮತ್ತು ನ್ಯಾ.ಮೋಹನಾ ಅವರನ್ನೊಳಗೊಂಡ ನ್ಯಾಯಪೀಠವು ಇಂಡಿಯನ್ ಸೈಬರ್ ಕಾರ್ಡಿನೇಷನ್ ಸೆಂಟರ್ (14C)ನಿಂದ ಡಿಜಿಟಲ್ ಅರೆಸ್ಟ್ ಕುರಿತಂತೆ ನಾಲ್ಕನೇ ಬಾರಿಗೆ ವಸ್ತುಸ್ಥಿತಿ ವರದಿ ತರಿಸಿಕೊಂಡಿದ್ದು, ಅದರ ಅನ್ವಯ 13 ಸೂಚನೆಗಳನ್ನು ತನ್ನ ಮಧ್ಯಂತರ ಆದೇಶದಲ್ಲಿ ನೀಡಿದೆ.
ಎಲ್ಲ ರಾಜ್ಯಗಳು ತಮ್ಮಲ್ಲಿ ಸೈಬರ್ ಅಪರಾಧ ಸಮನ್ವಯ ಕೇಂದ್ರಗಳನ್ನು ಸ್ಥಾಪಿಸಬೇಕು, ಇ-ಝೀರೊ ಎಫ್‌ಐಆರ್ ವ್ಯವಸ್ಥೆ ಆಗಬೇಕು, ಡಿಜಿಟಲ್ ಅರೆಸ್ಟ್ ಅಪರಾಧಿಗಳಿಂದ ವಶಪಡಿಸಿಕೊಂಡ ಹಣವನ್ನು ತ್ವರಿತವಾಗಿ ಅದರ ಮಾಲಕರಿಗೆ ಹಿಂದಿರುಗಿಸಬೇಕು, ರಾಜ್ಯ ಸರಕಾರಗಳು ಡಿಜಿಟಲ್ ಅರೆಸ್ಟ್ ದೂರುಗಳನ್ನು ನಿಭಾಯಿಸಲು ರೂಪಿಸಿರುವ ವ್ಯವಸ್ಥೆಯ ಕುರಿತು ಎಲ್ಲ ಹೈಕೋರ್ಟ್‌ಗಳ ರೆಜಿಸ್ಟ್ರಾರ್‌ಗಳು ತಮ್ಮ ವ್ಯಾಪ್ತಿಯ ನ್ಯಾಯಾಲಯಗಳ ಗಮನಕ್ಕೆ ತರಬೇಕು, ಮುಂದಿನ ಬಾರಿ 14C ತನ್ನ ವಸ್ತುಸ್ಥಿತಿ ವರದಿ ಸಲ್ಲಿಸುವಾಗ, ಪ್ರತೀ ರಾಜ್ಯವಾರು, ಬ್ಯಾಂಕುವಾರು ದಾಖಲಿಸಿಕೊಂಡ, ವಿಲೇವಾರಿ ಮಾಡಿದ ಪ್ರಕರಣಗಳ ವಿವರ, ವಂಚನೆಯಾದ ಹಣ ಅದರ ಮಾಲಕರಿಗೆ ಹಿಂದಿರುಗಿಸಿದ ಪ್ರಕರಣ ಮತ್ತು ಮೊತ್ತಗಳ ವಿವರಗಳನ್ನೆಲ್ಲ ತನಗೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಇದು ಬಹುತೇಕ, ನ್ಯಾಯಾಂಗವು ಶಾಸಕಾಂಗ-ಕಾರ್ಯಾಂಗದ ಜವಾಬ್ದಾರಿಯನ್ನು ಹೊತ್ತು ನೇರ ಕಾರ್ಯಾಚರಣೆಗೆ ಇಳಿದಂತಾಗಿದೆ. ಇಂತಹ ಸೂಚನೆಗಳು, ಕಾರ್ಯಾಚರಣೆಯ ಮೇಲ್ವಿಚಾರಣೆಗಳನ್ನೆಲ್ಲ ಸುಪ್ರೀಂಕೋರ್ಟೇ ನಿರ್ವಹಿಸಬೇಕೆಂದಾದರೆ, ಇದನ್ನೆಲ್ಲ ನಿಜಕ್ಕೂ ಯೋಜಿಸಿ ಮೇಲೆ ನಿಗಾ ಇರಿಸಿಕೊಳ್ಳಬೇಕಿದ್ದ ಶಾಸಕಾಂಗವಾಗಲೀ ಅಥವಾ ಕಾರ್ಯಾಚರಣೆ ಮಾಡಬೇಕಾಗಿದ್ದ ಕಾರ್ಯಾಂಗವಾಗಲೀ ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ ಎಂದೇ ಅರ್ಥವಲ್ಲವೇ? ಹೋಗಲಿ, ಸಾಂವಿಧಾನಿಕ ಹೊಣೆಗಾರಿಕೆ ಇರುವ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಈ ನಿಟ್ಟಿನಲ್ಲಿ ಇನ್ನೂ ನಿಷ್ಕ್ರಿಯವಾಗಿದೆ, ಅದನ್ನೂ ಸುಪ್ರೀಂಕೋರ್ಟ್ ಬಡಿದೆಬ್ಬಿಸಬೇಕಾಗಿದೆ ಎಂಬುದು ದುರ್ದೈವದ ಸಂಗತಿ.
ವೃದ್ಧರು, ಆಧುನಿಕ ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನ ಅರಿವಿಲ್ಲದ ಮುಗ್ಧರು, ನಿವೃತ್ತ ನೌಕರರಂತಹ ಆಯ್ದ ಜನರನ್ನೇ ಗುರಿಮಾಡಿಕೊಂಡು ನಡೆಯುತ್ತಿರುವ ಈ ಡಿಜಿಟಲ್ ಅರೆಸ್ಟ್ ಎಂಬ ಸೈಬರ್ ಅಪರಾಧ ಸರಣಿ ಆರಂಭಗೊಂಡು ಈಗಾಗಲೇ ಮೂರು ನಾಲ್ಕು ವರ್ಷಗಳು ಕಳೆದಿವೆ. ಇಂತಹ ಜನರ ಆಧಾರ್ ಸಂಖ್ಯೆ, ಫೋನ್ ನಂಬರ್‌ನಂತಹ ಖಾಸಗಿ ಡೇಟಾಗಳು ಈ ಅಪರಾಧಿಗಳಿಗೆ ಹೇಗೆ ಸಿಕ್ಕವು? ಈ ಪ್ರಕರಣಗಳು ಸಾಲುಸಾಲಾಗಿ ನಡೆಯುತ್ತಿದ್ದರೂ, ಸರಕಾರ 2024ರ ತನಕ ಯಾಕೆ ಮೌನ ತಳೆದಿತ್ತು? ಸಂಪೂರ್ಣವಾಗಿ ಅಧಿಕೃತ ಚಾನೆಲ್‌ಗಳ ಮೂಲಕವೇ ನಡೆಯುವ ಈ ಅಪರಾಧವನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಭಾರತ ಸರಕಾರದ ಗೃಹ ಇಲಾಖೆಗೆ ಇನ್ನೂ ಯಾಕೆ ಸಾಧ್ಯ ಆಗಿಲ್ಲ? ಬಲಿಪಶುಗಳ ಖಾತೆಯ ಹಣ ಅಧಿಕೃತವಾಗಿ ಬ್ಯಾಂಕ್ ಖಾತೆಗಳಿಗೇ (ಮ್ಯೂಲ್ ಖಾತೆಗಳಿಗೆ) ವರ್ಗಾವಣೆ ಆಗಿ ಅಲ್ಲಿಂದ ದೇಶಾಂತರ ಆಗುತ್ತಿದೆ. ದೇಶಾಂತರ ಆಗಿರುವ ಮೊತ್ತ ತಲುಪಿದ ದೇಶಗಳ ಜೊತೆ ಭಾರತ ಸರಕಾರಕ್ಕೆ ಅಪರಾಧ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಒಪ್ಪಂದಗಳಿಲ್ಲವೆ? ಹಾಗಿದ್ದೂ ಪ್ರಕರಣದ ಮೂಲಕ್ಕೆ ತಲುಪಲು ಯಾಕೆ ಸಾಧ್ಯ ಆಗುತ್ತಿಲ್ಲ? ಡಿಜಿಟಲ್ ಆರ್ಥಿಕತೆ ಇಷ್ಟೊಂದು ವಲ್ನರೆಬಲ್ ಎಂದಾದರೆ, ಅದನ್ನು ಬಲಪಡಿಸದೇ ಪ್ರೋತ್ಸಾಹಿಸುವ ತುರ್ತು ಏನಿದೆ? ಬ್ಯಾಂಕುಗಳಲ್ಲಿ ವ್ಯವಹಾರವೇ ಇಲ್ಲದ ಖಾತೆಗಳಲ್ಲಿ ಏಕಾಏಕಿ ಲಕ್ಷಾಂತರ ರೂ.ಗಳ ವ್ಯವಹಾರ ನಡೆದರೆ, ಅದನ್ನು ಗುರುತಿಸುವ, ನಿಯಂತ್ರಿಸುವ ತಂತ್ರಜ್ಞಾನಕ್ಕೆ ಬ್ಯಾಂಕಿಗ್ ವ್ಯವಸ್ಥೆಯಲ್ಲಿ ಬರವಿದೆಯೆ?... ಇಂತಹ ನೂರಾರು ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ. ಆದರೆ ಉತ್ತರಿಸುವುದಕ್ಕೆ ಶಾಸಕಾಂಗವಾಗಲೀ, ಕಾರ್ಯಾಂಗವಾಗಲೀ ಮನಸ್ಸು ಮಾಡುತ್ತಿಲ್ಲ.
ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವಸ್ತುಸ್ಥಿತಿ ವರದಿಯಲ್ಲಿ 2024ರಲ್ಲಿ 1,23,672 ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಾಖಲಾಗಿದ್ದರೆ, 2025ರಲ್ಲಿ 58,239 ಪ್ರಕರಣಗಳು ಮತ್ತು 2026 ಜೂನ್ ಅಂತ್ಯಕ್ಕೆ 16,377 ಪ್ರಕರಣಗಳು ದಾಖಲಾಗಿವೆ ಅರ್ಥಾತ್, ಪ್ರಕರಣಗಳ ಪ್ರಮಾಣ ತಗ್ಗುತ್ತಿದೆ ಎಂದು ಹೇಳಲಾಗಿದೆ. ಇಲ್ಲಿಯ ತನಕ ಡಿಜಿಟಲ್ ಅರೆಸ್ಟ್‌ಗಳಲ್ಲಿ ಅಮಾಯಕರ 54,000ಕೋಟಿ ರೂ.ಗಳಿಗೂ ಮಿಕ್ಕಿ ಹಣ ದೋಚಲಾಗಿದ್ದು ಇದನ್ನು ನ್ಯಾಯಾಲಯವೇ ಹಗಲುದರೋಡೆ ಎಂದಿದೆ. ಈ ಪೈಕಿ ಸರಕಾರಕ್ಕೆ ಇಲ್ಲಿಯ ತನಕ ವಾಪಸ್ ವಸೂಲಿ ಮಾಡಿಕೊಳ್ಳಲು ಸಾಧ್ಯ ಆಗಿರುವುದು ಕೇವಲ ಜುಜುಬಿ 18.05 ಕೋಟಿ ರೂ. ಶಾಸಕಾಂಗ ಮತ್ತು ಕಾರ್ಯಾಂಗಗಳ ವೈಫಲ್ಯಕ್ಕೆ ಇದಕ್ಕಿಂತ ಜೀವಂತ ಉದಾಹರಣೆ ಬೇರೆ ಬೇಕಿಲ್ಲ.
ಗಮನಿಸಬೇಕಾದ ಸಂಗತಿ ಎಂದರೆ, ಇವೆಲ್ಲ ಸರಕಾರಿ ವ್ಯವಸ್ಥೆಗೆ ದೂರು ಸಲ್ಲಿಕೆ ಆಗಿರುವ ಅಧಿಕೃತ ಪ್ರಕರಣಗಳು. ಸರಕಾರಿ ವ್ಯವಸ್ಥೆಯ ಗಮನಕ್ಕೇ ಬರದ ಅಸಂಖ್ಯ ಪ್ರಕರಣಗಳೂ ದೇಶದಾದ್ಯಂತ ಇವೆ. ಒಂದಂತೂ ಸ್ಪಷ್ಟ. ಸರಕಾರದ ನಿಯಂತ್ರಣದಲ್ಲಿರುವ ವ್ಯವಸ್ಥೆಯ ಒಳಗೇ ಈ ಗಾತ್ರದಲ್ಲಿ ವಂಚನೆ ಅವ್ಯಾಹತವಾಗಿ ನಡೆಯುತ್ತಿದೆ ಎಂದರೆ, ಇದರಲ್ಲಿ ಒಳಗಿನವರ ಕೈವಾಡಗಳು ಇಲ್ಲ ಎಂಬುದನ್ನು ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ. ದೇಶದ ಶಾಸಕಾಂಗ ಮತ್ತು ಕಾರ್ಯಾಂಗಗಳಿಂದ ದೇಶದ ಜನತೆ ಉತ್ತರದಾಯಿತ್ವ ಬಯಸುತ್ತಿದೆ. ಅದನ್ನು ಒದಗಿಸಲಾಗದವರು ಆಡಳಿತಕ್ಕೆ ಅನರ್ಹರು.






